ಮತ್ತೊಂದು ವಿಭಿನ್ನ ಕ್ರಿಕೆಟ್! ಈ ಬಾರಿ ಹಾಸನದಲ್ಲಿ: ಗೆದ್ದವರಿಗೆ ಜೋಡಿ ಟಗರು, 2 ಬಾಟಲಿ ವಿಸ್ಕಿ.. ಬೇಗ ನೀವೂ ತಂಡ ಕಟ್ಟಿ
cricket tournament: ಪಂದ್ಯಾವಳಿಯಲ್ಲಿ ಗೆದ್ದವರಿಗೆ ಮೊದಲ ಬಹುಮಾನವಾಗಿ ಜೋಡಿ ಟಗರು, ಎರಡು ಫುಲ್ ಬಾಟಲ್ ವಿಸ್ಕಿ. ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಒಂದು ಟಗರು ಮತ್ತು ಒಂದು ಫುಲ್ ಬಾಟಲ್ ವಿಸ್ಕಿಯನ್ನು ಬಹುಮಾನವಾಗಿ ನೀಡಲಾಗುತ್ತಿದೆ.
ಹಾಸನ: ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಆಲದಹಳ್ಳಿಯಲ್ಲಿ ವಿಶೇಷ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು, ಗೆದ್ದವರಿಗೆ ವಿಶಿಷ್ಟ ಬಹುಮಾನಗಳನ್ನು ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿದ ಜಿಲ್ಲೆಗಳ ಯುವಕರು ಕ್ರಿಕೆಟ್ ಪಂದ್ಯಾವಳಿಯ ಆಯೋಜನೆ ಜೊತೆಗೆ, ಪಂದ್ಯಾವಳಿಯಲ್ಲಿ ಗೆದ್ದವರಿಗೆ ವಿಭಿನ್ನ ರೀತಿಯ ಬಹುಮಾನಗಳನ್ನು ನೀಡುವುದಾಗಿ ಪ್ರಕಟಣೆ ಹೊರಡಿಸಿ ಭಾರಿ ಜನಪ್ರಿಯತೆ ಗಳಿಸುತ್ತಿದ್ದಾರೆ.
ಹೌದು.. ಅರಸೀಕೆರೆ ತಾಲ್ಲೂಕಿನ ಆಲದಹಳ್ಳಿಯಲ್ಲಿ ಶಿವರಾತ್ರಿ ಪ್ರಯುಕ್ತ ಗ್ರಾಮದ ಯುವಕರು ಕ್ರಿಕೆಟ್ ಟೂರ್ನಿಮೆಂಟ್ ಆಯೋಜಿಸಿದ್ದಾರೆ. ಮೂರು ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, ಈ ಪಂದ್ಯಾವಳಿಯಲ್ಲಿ ಗೆದ್ದವರಿಗೆ ನೀಡುವ ಬಹುಮಾನದ ಪಟ್ಟಿ ನೋಡಿದರೆ ನೀವು ಖಂಡಿತ ಈಗಲೇ ತಂಡ ಕಟ್ಟಿಕೊಂಡು ಸಿದ್ಧರಾಗುತ್ತೀರಿ. ಪಂದ್ಯಾವಳಿಯಲ್ಲಿ ಗೆದ್ದವರಿಗೆ ಮೊದಲ ಬಹುಮಾನವಾಗಿ ಜೋಡಿ ಟಗರು, ಎರಡು ಫುಲ್ ಬಾಟಲ್ ವಿಸ್ಕಿ ನೀಡಲಾಗುತ್ತಿದೆ. ಜೊತೆಗೆ ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಒಂದು ಟಗರು ಮತ್ತು ಒಂದು ಫುಲ್ ಬಾಟಲ್ ವಿಸ್ಕಿಯನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಇದು ಸಾಲದೆಂಬಂತೆ ನಾಲ್ಕನೇ ಬಹುಮಾನವಾಗಿ ಮೂರು ನಾಟಿಕೋಳಿ ನೀಡುವುದಾಗಿ ಆಯೋಜಕರು ಪ್ರಕಟಣೆ ಹೊರಡಿಸಿದ್ದಾರೆ.
1200 ರೂ ಎಂಟ್ರಿ ಫೀಸ್ ಫಿಕ್ಸ್.. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಂದು ತಂಡಕ್ಕೆ 1200 ರೂ ಎಂಟ್ರಿ ಫೀಸ್ ಫಿಕ್ಸ್ ಮಾಡಲಾಗಿದೆ. ಹೀಗಾಗಿ ಜಿಲ್ಲೆಯಾದ್ಯಂತ ಜೋಡಿ ಟಗರು ಕ್ರಿಕೆಟ್ ಟೂರ್ನಮೆಂಟ್ ಗಮನ ಸೆಳೆಯುತ್ತಿದೆ. ಗೆದ್ದರೆ ಟಗರಿನ ಜೊತೆಗೆ ಫುಲ್ ಬಾಟಲ್ ವಿಸ್ಕಿ ಬಹುಮಾನ ಇಟ್ಟಿರುವುದು ಇದೇ ಮೊದಲಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಈ ರೀತಿಯ ಪಂದ್ಯಾವಳಿ ಆಯೋಜಿಸಲಾಗಿತ್ತು. ಆದರೆ ಮುಂದೆ ನಡೆದದ್ದೆ ಬೇರೆಯದ್ದಾಗಿತ್ತು.
ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯಲ್ಲೂ ಈ ರೀತಿಯ ಪಂದ್ಯಾವಳಿ ಆಯೋಜಿಸಿ ಗೆದ್ದವರಿಗೆ ಕುರಿ ಮತ್ತು ಮದ್ಯವನ್ನು ಬಹುಮಾನವಾಗಿ ನೀಡುವುದಾಗಿ ಪ್ರಕಟಣೆ ಹೊರಡಿಸಿದ್ದರು. ಆದರೆ ಪಂದ್ಯಾವಳಿಯ ಬಹುಮಾನ ಕಂಡು ರಾಜ್ಯದ ಹಲವಾರು ಜಿಲ್ಲೆಗಳಿಂದ ಸಾವಿರಾರು ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದನ್ನು ಕಂಡ ಆಯೋಜಕರು, ಪಂದ್ಯಾವಳಿಯನ್ನ ರದ್ದುಗೊಳಿಸಿದ್ದರು. ಈಗ ಪಕ್ಕದ ಜಿಲ್ಲೆ ಹಾಸನದಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿದ್ದು, ಪಂದ್ಯಾವಳಿ ಏನಾಗಲಿದೆ ಎಂಬುದನ್ನು ಕಾದು ನೋದಬೇಕಿದೆ. ಆದರೆ ಪಂದ್ಯಾವಳಿಯನ್ನು ನಡೆಸುವಲ್ಲಿ ಈ ಯುವಕರು ಯಶಸ್ವಿಯಾದಲ್ಲಿ ನೀವೂ ಸಹ ಒಂದು ತಂಡ ಕಟ್ಟಿಕೊಂಡು ಹಾಸನಕ್ಕೆ ತೆರಳುವುದರಲ್ಲಿ ಯಾವುದೇ ಅನುಮಾನವಿಲ್ಲ.
Published On - 12:47 pm, Fri, 26 February 21