ಕ್ರಿಕೆಟ್ ಪಂದ್ಯಾವಳಿ: ಬಹುಮಾನ ನೋಡಿ ಮುಗಿಬಿದ್ದ 400 ತಂಡಗಳು, ಬೇಸತ್ತ ಆಯೋಜಕರಿಂದ ಪಂದ್ಯಾವಳಿ ರದ್ದು.. ಅಷ್ಟಕ್ಕೂ ಯಾವುದು ಆ ಬಹುಮಾನ..!
ಆಯೋಜಕರು ನೀಡುವ ಬಹುಮಾನಗಳ ಲಿಸ್ಟ್ ನೋಡಿದ ರಾಜ್ಯದ 400 ಕ್ಕೂ ಹೆಚ್ಚು ಕ್ರಿಕೆಟ್ ತಂಡಗಳು, ತಾವು ಸಹ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವುದಾಗಿ ನೊಂದಣಿ ಮಾಡಿಕೊಳಲ್ಲು ಈಗ ಮುಗಿಬಿದ್ದಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯ ಕಡಬಗೆರೆಯಲ್ಲಿ ಕ್ರಿಕೆಟ್ ಟೂರ್ನಿ ಆಯೋಜನೆ ಮಾಡಲಾಗಿದ್ದು, ಆಯೋಜಕರು ಪಂದ್ಯಾವಳಿಯಲ್ಲಿ ಗೆದ್ದವರಿಗೆ ಭಾರೀ ಮೊತ್ತದ ಬಹುಮಾನ ಘೋಷಣೆ ಮಾಡಿದ್ದಾರೆ. ಆಯೋಜಕರು ಗೆದ್ದವರಿಗೆ ನೀಡುವ ಬಹುಮಾನದ ಮಾಹಿತಿ ಕೇಳಿದರೆ ನೀವೂ ಸಹ ಒಂದು ತಂಡ ಕಟ್ಟಿಕೊಂಡು ಚಿಕ್ಕಮಗಳೂರಿಗೆ ದೌಡಾಯಿಸುವುದರಲ್ಲಿ ಯಾವೂದೇ ಅನುಮಾನವಿಲ್ಲ. ಏನದು ಬಹುಮಾನ..? ಮುಂದೆ ಓದಿ.
ಹೌದು.. ಕಾಫಿ ನಾಡಿನ ಕ್ರಿಕೆಟ್ ಪ್ರೇಮಿಗಳು ಫೆಬ್ರವರಿಯಂದು ಜಿಲ್ಲೆಯ ಕಡಬಗೆರೆ ಗಾಂಧಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದ್ದು, ಪಂದ್ಯಾವಳಿಯಲ್ಲಿ ಗೆದ್ದವರಿಗೆ ಭಾರಿ ಮೊತ್ತದ ಹಾಗೂ ತುಂಬಾ ವಿಶಿಷ್ಟಕರವಾದ ಬಹುಮಾನ ನೀಡುವುದಾಗಿ ಪ್ರಚಾರ ನೀಡಿದ್ದಾರೆ.
ಆಯೋಜಕರು ನೀಡುವ ಬಹುಮಾನಗಳ ಲಿಸ್ಟ್ ನೋಡಿದ ರಾಜ್ಯದ 400 ಕ್ಕೂ ಹೆಚ್ಚು ಕ್ರಿಕೆಟ್ ತಂಡಗಳು, ತಾವು ಸಹ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವುದಾಗಿ ನೊಂದಣಿ ಮಾಡಿಕೊಳ್ಳಲು ಈಗ ಮುಗಿಬಿದ್ದಿದ್ದಾರೆ. ಹೀಗೆ ಸಂಚಲನ ಮೂಡಿಸಿರುವ ಕ್ರಿಕೆಟ್ ಪಂದ್ಯಾವಳಿಯ ಬಹುಮಾನಗಳ ವರದಿ ನೋಡುವುದಾದರೆ..
ಮೊದಲನೇ ಬಹುಮಾನ- 30 ಕೆ. ಜಿ ತೂಗುವ ಕುರಿ ಹಾಗೂ 1 ಕೇಸ್ ಬಿಯರ್ ಎರಡನೇ ಬಹುಮಾನ- 6 ನಾಟಿ ಕೋಳಿ, 1 ಫುಲ್ ಬಾಟಲ್ ದುಬಾರಿ ಮದ್ಯ ಹಾಗೂ 1 ಕೇಸ್ ಬಿಯರ್
ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ತಂಪು ಪಾನೀಯವನ್ನು ಬಹುಮಾನವನ್ನಾಗಿ ನೀಡುವುದಾಗಿ ಹೇಳಿದ್ದಾರೆ. ಇಷ್ಟೆ ಅಲ್ಲದೆ ಸರಣಿ ಶ್ರೇಷ್ಠ ಆಟಗಾರನಿಗೆ 5 ಕೆ.ಜಿ ಈರುಳ್ಳಿ, ಉತ್ತಮ ದಾಂಡಿಗನಿಗೆ 1 ಕೆ.ಜಿ ಖಾರದ ಪುಡಿ ಹಾಗೂ ಉತ್ತಮ ಬೌಲರ್ಗೆ 2 ಲೀಟರ್ ಅಡುಗೆ ಎಣ್ಣೆ ನೀಡುವುದಾಗಿ ಬಹುಮಾನ ಘೋಷಿಸಿದ್ದಾರೆ.
400 ತಂಡಗಳಿಂದ ಫೋನ್ ಕರೆ, ಪಂದ್ಯಾವಳಿ ರದ್ದು.. ಬಹುಮಾನದ ವರದಿ ನೋಡಿದ ರಾಜ್ಯದ ನಾನಾ ಕ್ರಿಕೆಟ್ ತಂಡಗಳ ಕ್ಯಾಪ್ಟನ್ಗಳು ಆಯೋಜಕರಿಗೆ ಫೋನ್ ಮಾಡಲು ಪ್ರಾರಂಭಿಸಿದ್ದಾರೆ. ಪ್ರಕಟಣೆ ಹೊರಡಿಸಿದ ಒಂದೇ ದಿನದಲ್ಲಿ ರಾಜ್ಯದ ನಾನಾ ಕಡೆಯಿಂದ 400 ಕ್ಕೂ ಹೆಚ್ಚು ತಂಡಗಳು ಕರೆ ಮಾಡಿದ್ದಾರೆ. ಹೀಗಾಗಿ ಅಪಾರ ಫೋನ್ ಕರೆಗಳಿಂದ ಹೆದರಿದ ಆಯೋಜಕರು ಸದ್ಯಕ್ಕೆ ಪಂದ್ಯಾವಳಿಯನ್ನು ರದ್ದುಗೊಳಿಸಿದ್ದಾರೆ! ಹೀಗಾಗಿ ವಿಭಿನ್ನ ಬಹುಮಾನಗಳನ್ನು ಪಡೆಯುವಲ್ಲಿ ವಂಚಿತರಾಗಿ ನಿರಾಶೆಗೊಳ್ಳುವ ಸರದಿ ಈಗ ನಿಮ್ಮದು..
ಇನ್ಮುಂದೆ ಕ್ರಿಕೆಟ್ನಲ್ಲಿ ಬೌನ್ಸರ್ ಬ್ಯಾನ್?: ಮಹತ್ವದ ವರದಿ ನೀಡಿದ ತಜ್ಞರ ತಂಡ
Published On - 4:05 pm, Thu, 28 January 21