Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2021 | ಬ್ರಿಟಿಷ್ ಭಾರತದ ಮೊದಲ ಬಜೆಟ್ 161 ವರ್ಷಗಳ ಹಿಂದೆ ಮಂಡನೆಯಾಗಿತ್ತು!

ಭಾರತದ ಆರ್ಥಿಕ ವ್ಯವಸ್ಥೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಜೇಮ್ಸ್ ವಿಲ್ಸನ್ ಆ ಕಾಲದಲ್ಲೇ ಆದಾಯ ತೆರಿಗೆ ಪರಿಕಲ್ಪನೆ ಮುಂದಿಟ್ಟ. ಈ ಕಲ್ಪನೆ ಆ ಕಾಲದ ಬೃಹತ್ ವ್ಯಾಪಾರಿಗಳ, ಜಮೀನ್ದಾರರ ನಿದ್ದೆಗೆಡಿಸಿತ್ತು!

Budget 2021 | ಬ್ರಿಟಿಷ್ ಭಾರತದ ಮೊದಲ ಬಜೆಟ್ 161 ವರ್ಷಗಳ ಹಿಂದೆ ಮಂಡನೆಯಾಗಿತ್ತು!
ಬ್ರಿಟಿಷ್ ಭಾರತದ ಮೊದಲ ಬಜೆಟ್ ಮಂಡಿಸಿದ ಜೇಮ್ಸ್ ವಿಲ್ಸನ್
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 28, 2021 | 9:25 PM

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂದು ಕವಿ ಹಾಡಿದಂತೆ ವರ್ಷ ವರ್ಷ ಕಳೆದರೂ ಬಜೆಟ್ಟು ಮರಳಿ ಬರುತಿದೆ ಎಂದೂ ಜನರು ಹಾಡಬಹುದೇನೋ.. ಕೊರೊನಾ ಇರಲಿ ಅದರಪ್ಪನಂತದ್ದೇ ಇರಲಿ ಬಜೆಟ್ ಮಾತ್ರ ನಿಲ್ಲದು. ದೇಶಕ್ಕೆ ವಿಷಮ ಕಾಲ ಬಂದಂತೆಲ್ಲ ಬಜೆಟ್​ ಮಹತ್ವ, ಜವಾಬ್ದಾರಿಗಳು ಹೆಚ್ಚುತ್ತಲೇ ಹೋಗುತ್ತವೆಯೇ ಹೊರತು ಕಡಿಮೆಯಾಗದು. ಹಗಲು ಇಳಿದು ರಾತ್ರಿ ಕಳೆದು ಮತ್ತೆ ಹಗಲು ಬರಲೇಬೇಕು, ಮೊಗ್ಗು ಹೂವಾಗಲೇಬೇಕು ಕಾಯಿ ಹಣ್ಣಾಗಲೇಬೇಕು. ಈ ವರ್ಷವೂ ಫೆಬ್ರವರಿ 1ರಂದು ಹಣಕಾಸು ಸಚಿವರು ಬಜೆಟ್ ಮಂಡಿಸಲೇಬೇಕು.

ಈ ವರ್ಷ ಬಜೆಟ್ ಚೆನ್ನಾಗಿತ್ತು, ಚೆನ್ನಾಗಿರಲಿಲ್ಲ ಎಂದು ನಾಲ್ಕು ಹುಡುಗರು ಕುಳಿತು ಹರಟೆ ಹೊಡೆಯುತ್ತಿದ್ದರಂತೆ. ಪಕ್ಕದಲ್ಲೇ ಜಗದ ಚಿಂತೆ ಬಿಟ್ಟು ಅವಧೂತನಾಗಿ ಕುಳಿತಿದ್ದ ಮುದಿ ಪ್ರಾಯದ ಅಜ್ಜನೊಬ್ಬ ‘ಇದೆಲ್ಲ ನಾನು ಕಂಡದ್ದೇ, ನನ್ನ ಕಾಲದಲ್ಲಿ ನೋಡಿದ್ದೇ..’ ಅಂದನಂತೆ. ಒಂದು ಲೆಕ್ಕದಲ್ಲಿ ಬಜೆಟ್ ನಮಗೆ ಹೊಸತಲ್ಲ. ಬಜೆಟ್​ನ ಇತಿಹಾಸ ಹೇಳುತ್ತ ಬ್ರಿಟೀಷರ ಕಾಲದಿಂದಲೇ ಬಜೆಟ್ ಇತ್ತು ಎಂದು ಹೇಳಿದರು ತಪ್ಪೇನಿಲ್ಲ. ಏಕೆಂದರೆ ಈ ಬಜೆಟ್ ಅನ್ನತಕ್ಕಂಥದ್ದೇನಿದೆ ಅದು ನಿಜಕ್ಕೂ ಬ್ರಿಟೀಷರ ಕಾಲದಿಂದಲೇ ಇತ್ತು!

ಭಾರತದಲ್ಲಿ ಬಜೆಟ್ ಮಂಡನೆ ಶುರುವಾದ 161ನೇ ವರ್ಷವಿದು. ನಮ್ಮ ಮುತ್ತಜ್ಜನ ಕಾಲದಿಂದಲೂ ಬಜೆಟ್ ಮಂಡನೆ ಇದೆ ಎಂದರೆ ಆಶ್ಚರ್ಯಚಕಿತರಾಗಬೇಡಿ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದದ್ದು 1857. ಬ್ರಿಟಿಷರು ಈ ಹೋರಾಟವನ್ನು ಸಿಪಾಯಿ ದಂಗೆ ಎಂದು ಕರೆದು ಅದರ ಪರಿಣಾಮಗಳ ತೀವ್ರತೆ ಕಡಿಮೆ ಮಾಡಲು ಯತ್ನಿಸಿದರಾದರೂ, ಭಾರತವನ್ನು ಇನ್ನಷ್ಟು ವರ್ಷಗಳ ಹಿಡಿತದಲ್ಲಿರಿಸಿಕೊಳ್ಳಬೇಕೆಂದರೆ ಆಡಳಿತ ಸುಧಾರಣೆ ಅನಿವಾರ್ಯ ಎಂದು ಬ್ರಿಟಿಷರಿಗೆ ಮನವರಿಕೆಯಾಯಿತು. ಭಾರತದ ಆಡಳಿತ ಚುಕ್ಕಾಣಿಯು ಈಸ್ಟ್ ಇಂಡಿಯಾ ಕಂಪನಿಯಿಂದ ನೇರವಾಗಿ ಬ್ರಿಟನ್ ಸರ್ಕಾರದ ಸುಪರ್ದಿಗೆ ಬಂತು. ಇಂಗ್ಲೆಂಡ್ ರಾಣಿಯ ಮುಕುಟಮಣಿಗೆ ಭಾರತದ ಆಡಳಿತ ವರ್ಗಾವಣೆಯಾದ ಎರಡು ವರ್ಷಕ್ಕೆಲ್ಲ, ಅಂದರೆ 1860ರಲ್ಲೇ ಮೊದಲ ಬಜೆಟ್ ಮಂಡನೆಯಾಗಿತ್ತು.

ಇದನ್ನೂ ಓದಿ: Budget ನಿರೀಕ್ಷೆ | ಸಣ್ಣ ಉದ್ಯಮ ಬೆಳೆಯಲು ಕಚ್ಚಾವಸ್ತುಗಳ ಬೆಲೆ ಇಳಿಯಬೇಕು

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಉಬ್ಬುಶಿಲ್ಪ

ಮೊದಲ ಬಜೆಟ್ ಮಂಡಿಸಿದ್ದು ಯಾರು? ಬ್ರಿಟಿಷ್ ಆಡಳಿತದಲ್ಲಿ ಮೊದಲ ಬಾರಿಗೆ ಬಜೆಟ್ ಮಂಡನೆಯ ಹಿಂದೆ ಓರ್ವ ಟೋಪಿ ತಯಾರಕರೋರ್ವರು ಇದ್ದರೆಂದರೆ ಎಂಥವರೂ ಆಶ್ಚರ್ಯಪಡಲೇಬೇಕು. ಸ್ವಾತಂತ್ರ್ಯಾಪೂರ್ವದಲ್ಲೇ ಮಂಡನೆಯಾದ ಮೊದಲ ಬಜೆಟ್​ನ ಹಿಂದಿನ ತಲೆ ಸ್ಕಾಟ್​ಲ್ಯಾಂಡ್​ನ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲ್ಸನ್ . ಟೋಪಿ ತಯಾರಿಕೆಯ ಮೂಲಕ ವೃತ್ತಿ ಜೀವನ ಆರಂಭಿಸಿದ ಜೇಮ್ಸ್ ವಿಲ್ಸನ್​ ಬ್ರಿಟನ್ ಸಂಸತ್​ನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.  ಭಾರತದಲ್ಲಿ ವೈಸ್​ರಾಯ್ ಲಾರ್ಡ್​ ಕನ್ನಿಂಗ್​ಹ್ಯಾಮ್​ ರಚಿಸಿದ ಆರ್ಥಿಕ ಸಮಿತಿಯ ಸದಸ್ಯನಾಗಿಯೂ ಕಾರ್ಯನಿರ್ವಹಿಸಿದ್ದರು.

ಅದು 1857ನೇ ಇಸವಿ. ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಕೆಲಮಟ್ಟಿಗೆ ಬ್ರಿಟಿಷ್ ಆಡಳಿತ ಹೈರಾಣಾಗಿತ್ತು. ಸೇನೆ ಸುಧಾರಣೆಗೆ ಹೆಚ್ಚು ಹಣ ಸುರಿಯಲು ಆರ್ಥಿಕ ಸ್ಥಿತಿಯೂ ಹೇಳಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಇಂತಹ ದುಸ್ಥಿತಿಯಲ್ಲಿ ಭಾರತಕ್ಕೆ ಕಾಲಿಟ್ಟವರು ಜೇಮ್ಸ್ ವಿಲ್ಸನ್.

ಭಾರತದ ಆರ್ಥಿಕ ವ್ಯವಸ್ಥೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಜೇಮ್ಸ್ ವಿಲ್ಸನ್ ಕಾಲದಲ್ಲೇ ಆದಾಯ ತೆರಿಗೆ ಪರಿಕಲ್ಪನೆ ಮುಂದಿಟ್ಟ. ಅವರ ಈ ಕಲ್ಪನೆ ಆ ಕಾಲದ ಬೃಹತ್ ವ್ಯಾಪಾರಿಗಳ, ಜಮೀನ್ದಾರರ ನಿದ್ದೆಗೆಡಿಸಿತ್ತು! ಭಾರತದ ಸರ್ಕಾರಿ ಆರ್ಥಿಕ ವ್ಯವಸ್ಥೆಯಲ್ಲಿ ಬ್ರಿಟಿಷ್ ಮಾದರಿಯ ಅಡಿಪಾಯ ಹಾಕಿದವರ ಸಾಲಲ್ಲಿ ಜೇಮ್ಸ್ ವಿಲ್ಸನ್  ಹೆಸರು ಮೊದಲ ಸಾಲಲ್ಲಿ ನಿಲ್ಲುತ್ತದೆ ಎಂದು ಸರ್ ರಿಚರ್ಡ್ ಟೆಂಪಲ್ ತಮ್ಮ ಫೈನಾನ್ಶಿಯಲ್ ಫೌಂಡೇಶನ್ ಆಫ್​ ದಿ ಬ್ರಿಟಿಷ್ ರಾಜ್ ಎಂಬ ಕೃತಿಯಲ್ಲಿ ಉಲ್ಲೇಖಿಸುತ್ತಾರೆ.

ಇದನ್ನೂ ಓದಿ: Budget 2021 ನಿರೀಕ್ಷೆ | ಸಿಗಬಹುದೇ ಆದಾಯ ತೆರಿಗೆ ವಿನಾಯ್ತಿ?

ವ್ಯಾಪಾರ ವಹಿವಾಟುಗಳಿಗೆ ಸರ್ಕಾರ ಭದ್ರತೆ ನೀಡುತ್ತದೆ. ಹೀಗಾಗಿ, ಸರ್ಕಾರಕ್ಕೆ ತೆರಿಗೆ ನೀಡಬೇಕೆಂದು ಬಹುವಾಗಿ ಜೇಮ್ಸ್ ವಿಲ್ಸನ್ಸ್ ಪ್ರತಿಪಾದಿಸಿದ್ದರು.  ಪ್ರಸಿದ್ಧ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್​ ಸ್ಥಾಪಿಸಿದವರೂ ಇವರೇ. ಪತ್ರಿಕೋದ್ಯಮದಲ್ಲೂ ಹೆಸರೊತ್ತಿದ್ದ ಅವರು ಈಗ ಜಗತ್ತಿನಾದ್ಯಂತ ಹೆಸರುವಾಸಿಯಾಗಿರುವ ‘ದಿ ಎಕನಾಮಿಸ್ಟ್’​ ನಿಯತಕಾಲಿಕೆಯ ಸ್ಥಾಪಕ ಸಂಪಾದಕರಾಗಿ 16 ವರ್ಷ ಸೇವೆ ಸಲ್ಲಿಸಿದ್ದರು.

ಇತಿಹಾಸದ ಹಾಳೆಗಳಲ್ಲಿ ಬಜೆಟ್​ನ ಹಿಂದಿನ ಕಥೆಗಳನ್ನು ಹುಡುಕುತ್ತಾ ಸಾಗಿದರೆ ತೆರೆದುಕೊಳ್ಳುವ ದಾರಿ ವಿಸ್ಮಯಕಾರಿ. ಟೋಪಿ ತಯಾರಿಕೆಯಿಂದ ವೃತ್ತಿ ಜೀವನ ಆರಂಭಿಸಿ, ವಸಾಹತುವಾಗಿದ್ದ ಭಾರತದ ಬಜೆಟ್ ರೂಪಿಸುವವರೆಗೆ ಬೆಳೆದ  ಜೇಮ್ಸ್ ವಿಲ್ಸನ್ ನಮಗೆ ನೆನಪಾಗಬೇಕು. ಏಕೆಂದರೆ  ಯಾವುದೇ ಸರ್ಕಾರವಿರಲಿ, ಅಥವಾ ಎಂಥದ್ದೇ ಬಜೆಟ್ ಇರಲಿ, ಬಜೆಟ್ ರೂಪಿಸಲು ಹಣಕಾಸು ಇಲಾಖೆ ಪಡುವ ಶ್ರಮ ನಿಜಕ್ಕೂ ಅನನ್ಯ

ಸ್ವಾತಂತ್ರ್ಯಾನಂತರ ಮೊದಲ ಬಜೆಟ್ ಯಾವುದು? ಇಲ್ಲಿದೆ ಕೆಳಗಿನ ಬರಹದಲ್ಲಿದೆ ಉತ್ತರ..

Budget 2021 | ದೇಶದ ಮೊದಲ ಬಜೆಟ್​ಗಿದ್ದ ಆದಾಯ ನಿರೀಕ್ಷೆ ₹ 171 ಕೋಟಿ

Budget 2021 ನಿರೀಕ್ಷೆ | ಈ ವರ್ಷದ ಬಜೆಟ್​ನಿಂದ ಮಹಿಳೆಯರು ಬಯಸುತ್ತಿರುವುದೇನು?

Published On - 9:16 pm, Thu, 28 January 21