Budget 2021 | ಕೃಷಿಸಾಲ ಪ್ರಮಾಣದ ಮಿತಿ ಹೆಚ್ಚಳದ ನಿರೀಕ್ಷೆ
ಮನ್ನಾ ಆದ ಕೃಷಿ ಸಾಲದಿಂದಲೇ ಮನೆಯ ಮೇಲ್ಛಾವಣಿ ನಿರ್ಮಿಸಿದವರು, ಬೈಕ್ ಖರೀದಿಸಿದವರು, ಚಿಕ್ಕ, ಪುಟ್ಟ ಕೈಸಾಲ ತೀರಿಸಿದವರು, ಖುಷಿಗೊಂದು ಕಿವಿಯೋಲೆ ಮಾಡಿಸಿದವರು ಎಷ್ಟೆಲ್ಲ ಮಂದಿ.. ಇದನ್ನು ಕೃಷಿಕ ಮರೆಯಬಾರದಷ್ಟೇ.

ಕೃಷಿ ಎಂದಾಕ್ಷಣ ಈ ವರ್ಷ ನೆನಪಾಗುವುದು ಮೂರು ಕೃಷಿ ಕಾಯ್ದೆಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ನಡೆದ ಹೋರಾಟ. ದೇಶದ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳುತ್ತಲೇ ಬಂದಿರುವ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಘೋಷಿಸುವ ಯೋಜನೆಗಳ ಕುರಿತೂ ಭೂಮಿತೂಕದ ಕುತೂಹಲ ಹುಟ್ಟಿದೆ. ಇತ್ತ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದರೆ ಗಮನಾರ್ಹ ಬದಲಾವಣೆ ಸಾಧ್ಯವಾಗುತ್ತಿತ್ತು ಎಂದು ಹೇಳುತ್ತಲೇ, ಅವುಗಳ ಜಾರಿ ಸದ್ಯವಂತೂ ಸಾಧ್ಯವಾಗದಿರುವಾಗ ಬಜೆಟ್ನಲ್ಲಿ ಕೃಷಿಕರ ಪಾಲಿಗೆ ಏನೆಲ್ಲ ದೊರಕಲಿದೆ ಎಂದು ಕಾಯುತ್ತಿದೆ ದೇಶದ ಕೃಷಿ ಸಮುದಾಯ. ನಿಜಕ್ಕೂ ಸರ್ಕಾರದ ಪಾಲಿಗೆ ಇದು ಅತಿ ದೊಡ್ಡ ಜವಾಬ್ದಾರಿಯೇ ಸರಿ.
2022ರ ಹೊತ್ತಿಗೆ ಕೃಷಿಕರ ಆದಾಯ ದ್ವಿಗುಣಗೊಳಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಈ ನಿಟ್ಟಿನಲ್ಲಿ ಕೃಷಿ ಸಾಲದ ಮೊತ್ತವನ್ನು 19 ಲಕ್ಷ ಕೋಟಿಗೆ ಹೆಚ್ಚಿಸುವ ಎಲ್ಲ ನಿರೀಕ್ಷೆಗಳು ಈ ಬಜೆಟ್ನಲ್ಲಿವೆ. ಸದ್ಯದ ಆರ್ಥಿಕ ವರ್ಷದಲ್ಲಿ ಕೃಷಿ ಸಾಲದ ಗುರಿ 15 ಲಕ್ಷ ಕೋಟಿಯಷ್ಟಿತ್ತು. ಈ ಮೊತ್ತದಲ್ಲಿ 4 ಲಕ್ಷ ಕೋಟಿಯ ಹೆಚ್ಚಳವಾಗಲಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
ದೇಶದ ಕೃಷಿ ಕ್ಷೇತ್ರದಲ್ಲಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಸಹಕಾರಿ ಸಂಸ್ಥೆಗಳ ಪ್ರಭಾವ ಅಪಾರ. ಗ್ರಾಮೀಣ ಪ್ರದೇಶಗಳೇ ಹೆಚ್ಚಿರುವ ಭಾರತದಂತಹ ದೇಶದಲ್ಲಿ ಇಂತಹ ಸಂಸ್ಥೆಗಳೇ ಕೃಷಿ ಸಮುದಾಯ ಆರ್ಥಿಕ ವಹಿವಾಟಿನ ಮೂಲಗಳಾಗಿವೆ. ರಾಷ್ಟ್ರೀಕೃತ ಬ್ಯಾಂಕುಗಳ ಕೆಲ ಲಕ್ಷಣಗಳೇ ರೈತರನ್ನು ಇಂತಹ ಸಂಸ್ಥೆಗಳಿಂದ ದೂರವಿಟ್ಟಿವೆ. ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳ ಕೊರತೆಯೂ ಕೃಷಿ ಸಮುದಾಯ ಇಂತಹ ಹಣಕಾಸು ಸಂಸ್ಥೆಯಿಂದ ದೂರವುಳಿಯಲು ಕಾರಣವಾಗಿವೆ. ಈ ಎಲ್ಲ ಹಿನ್ನೆಲೆಗಳ ಜತೆಗೆ ಗ್ರಾಮಗಳಲ್ಲಿ ಆರ್ಥಿಕ ವಹಿವಾಟನ್ನು ಹೆಚ್ಚಿಸುವ ಉದ್ದೇಶಗಳಿಂದಲೇ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.
ಈವರೆಗೂ ದೇಶದಲ್ಲಿ ಕೃಷಿ ಸಾಲದ ಗುರಿ ಪ್ರತಿವರ್ಷ ಏರುತ್ತಲೇ ಬಂದಿದೆ. 2017-18ನೇ ಆರ್ಥಿಕ ವರ್ಷದಲ್ಲಿ ಕೃಷಿ ಸಾಲದ ಪ್ರಮಾಣ 11.68 ಲಕ್ಷ ಕೋಟಿಯಿತ್ತು. 2016-17ರ ಕೃಷಿ ಸಾಲದ ಪ್ರಮಾಣವನ್ನು ಇಲ್ಲಿ ಉಲ್ಲೇಖಿಸಲೇಬೇಕು. 9 ಲಕ್ಷ ಕೋಟಿ ಗುರಿ ಇಟ್ಟುಕೊಂಡಿದ್ದರೂ 10.66 ಲಕ್ಷ ಕೋಟಿಯಷ್ಟು ಕೃಷಿ ಸಾಲವನ್ನು ವಿತರಿಸಲಾಗಿತ್ತು.
ಇದನ್ನೂ ಓದಿ: ಬಜೆಟ್ 2021: ದೇಶದ ಮಹಿಳೆಯರು ಏನು ನಿರೀಕ್ಷಿಸುತ್ತಿದ್ದಾರೆ?
ಕೃಷಿಸಾಲದ ಬಡ್ಡಿದರವೆಷ್ಟು? ಸಾಮಾನ್ಯವಾಗಿ ಶೇ 9ಬಡ್ಡಿದರದಲ್ಲಿ ₹ 3 ಲಕ್ಷದವರೆಗೆ ಕೃಷಿಸಾಲ ವಿತರಿಸಲಾಗುತ್ತದೆ. ಈ ಬಡ್ಡಿದರಕ್ಕೆ ಶೇ 2 ರಷ್ಟು ಸಬ್ಸಿಡಿಯನ್ನು ಸರ್ಕಾರ ಒದಗಿಸುತ್ತದೆ. ಜತೆಗೆ, ಪಡೆದ ಕೃಷಿಸಾಲವನ್ನು ಪ್ರತಿವರ್ಷ ನಿಯಮಿತವಾಗಿ ನಿಗದಿತ ಸಮಯದೊಳಗೆ ಕಟ್ಟಿದರೆ ಶೇ 3ರಷ್ಟು ಬಡ್ಡಿದರ ಕಡಿತವಾಗುತ್ತದೆ. ಹೀಗಾಗಿ, ಒಟ್ಟು ಶೇ 4ರ ಬಡ್ಡಿದರಕ್ಕೆ ರೈತ ಫಲಾನುಭವಿ ₹ 3 ಲಕ್ಷದವರೆಗೆ ಕೃಷಿಸಾಲ ಪಡೆಯಬಹುದು.
ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಿಸಲು ಕೃಷಿಸಾಲದ ಪ್ರಮಾಣ ಹೆಚ್ಚಿಸುವುದು ಅವಶ್ಯಕವಾಗಿದೆ. ಇತರ ವಿಧಾನದ ಸಾಲಕ್ಕಿಂತಲೂ ಕೃಷಿಸಾಲ ಪಡೆಯುವುದು ರೈತನಿಗೆ ಸಹಕಾರಿ. ಇಲ್ಲದ ಬಡ್ಡಿದರಕ್ಕೆ ಜೋತುಬೀಳುವುದಕ್ಕಿಂತ ಸಹಕಾರಿ ಸಂಸ್ಥೆಗಳ ಮೂಲಕ ಕೃಷಿಸಾಲದ ನೆರವನ್ನು ಪಡೆಯುವುದು ಆರೋಗ್ಯಕ್ಕೆ ಹಿತಕರ. ಕೃಷಿ ಸಾಲವನ್ನು ಜಾಗ್ರತೆಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಜತೆಗೆ, ರಾಜಕೀಯ ಮೇಲಾಟಗಳ ಕಾರಣಗಳಿಂದ ಒಮ್ಮೊಮ್ಮೆ ಕೃಷಿಸಾಲ ಮನ್ನಾ ಆಗುವ ಸಂದರ್ಭಗಳೂ ಇವೆ! ಮನ್ನಾ ಆದ ಕೃಷಿ ಸಾಲದಿಂದಲೇ ಮನೆಯ ಮೇಲ್ಛಾವಣಿ ನಿರ್ಮಿಸಿದವರು, ಬೈಕ್ ಖರೀದಿಸಿದವರು, ಚಿಕ್ಕ, ಪುಟ್ಟ ಕೈಸಾಲ ತೀರಿಸಿದವರು, ಖುಷಿಗೊಂದು ಕಿವಿಯೋಲೆ ಮಾಡಿಸಿದವರು ಎಷ್ಟೆಲ್ಲ ಮಂದಿ.. ಇದನ್ನು ಕೃಷಿಕರು ಮರೆಯಬಾರದಷ್ಟೇ.
ಕೇಂದ್ರ ಬಜೆಟ್ 2021-22: ಚೇತರಿಸಿಕೊಳ್ಳುತ್ತಾ ಆರ್ಥಿಕತೆ? ದೇಶದ ಜನರ ನಿರೀಕ್ಷೆಗಳೇನು?