ಟೀಂ ಇಂಡಿಯಾದಲ್ಲಿ ಸಿಗದ ಮನ್ನಣೆ ಆರ್‌ಸಿಬಿ ಸೇರಿದ ಬಳಿಕ ಸಿಕ್ತು! ಜಿತೇಶ್ ಶಾಕಿಂಗ್ ಹೇಳಿಕೆ; ವಿಡಿಯೋ
Jitesh Sharma: ಜಿತೇಶ್ ಶರ್ಮಾ ಅವರು ಭಾರತ ತಂಡದಲ್ಲಿ ಆಡಿದ್ದರೂ, ಆರ್‌ಸಿಬಿ ಸೇರಿದ ಬಳಿಕ ಅಭಿಮಾನಿಗಳ ಬೆಂಬಲದಲ್ಲಿ ಭಾರಿ ವ್ಯತ್ಯಾಸ ಕಂಡಿದ್ದಾರೆ ಎಂದು ಹೇಳಿದ್ದಾರೆ. ಟೀಂ ಇಂಡಿಯಾದಲ್ಲಿ ಕೇವಲ ಕೆಲವೇ ಅಭಿಮಾನಿಗಳು ಆಟೋಗ್ರಾಫ್ ಕೇಳುತ್ತಿದ್ದರೆ, ಆರ್‌ಸಿಬಿಯಲ್ಲಿ ನೂರಾರು ಅಭಿಮಾನಿಗಳು ಸಾಲುಗಟ್ಟಿ ನಿಲ್ಲುತ್ತಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಭಾರತದಲ್ಲಿ ಕ್ರಿಕೆಟಿಗನೊಬ್ಬ ಟೀಂ ಇಂಡಿಯಾಗೆ ಆಯ್ಕೆಯಾಗಬೇಕೆಂದರೆ ಪ್ರತಿಭೆಯ ಜೊತೆಗೆ ಅದೃಷ್ಟವನ್ನು ಹೊಂದಿರಬೇಕು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಆಡುವುದು ಮತ್ತು ಪ್ರದರ್ಶನ ನೀಡುವುದು ಪ್ರತಿಯೊಬ್ಬರ ಕನಸಗಿರುತ್ತದೆ. ಆದರೆ ಆರ್‌ಸಿಬಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಆಡಿದ್ದರೂ, ಆರ್‌ಸಿಬಿ ಸೇರಿದ ನಂತರ ಸಿಕ್ಕಷ್ಟು ಮನ್ನಣೆ ಭಾರತ ತಂಡದಲ್ಲಿ ಸಿಗಲಿಲ್ಲ. ಆರ್‌ಸಿಬಿ ಸೇರಿದ ಬಳಿಕ ಅಭಿಮಾನಿಗಳು ಆಟೋಗ್ರಾಫ್‌ಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೆ ಟೀಂ ಇಂಡಿಯಾ ಪರ ಆಡುತ್ತಿದ್ದಾಗ ಕೇವಲ ಮೂರ್ನಾಲ್ಕು ಅಭಿಮಾನಿಗಳು ಆಟೋಗ್ರಾಫ್ ಕೇಳುತ್ತಿದ್ದರು ಎಂದಿದ್ದಾರೆ.
ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ವಾಸ್ತವವಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಜಿತೇಶ್ ಶರ್ಮಾ ತಮ್ಮ ಕ್ರಿಕೆಟ್ ಪ್ರಯಾಣದ ಬಗ್ಗೆ ಮಾತನಾಡಿದ್ದು, ‘ನಾನು ಆರ್‌ಸಿಬಿ ಸೇರಿದ ಬಳಿಕ ಐಪಿಎಲ್ಗೂ ಮುನ್ನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಿದ್ದೆ. ಆ ವೇಳೆ ಅಭಿಮಾನಿಗಳು ಜಿತೇಶ್, ಜಿತೇಶ್, ಆರ್‌ಸಿಬಿ, ಆರ್‌ಸಿಬಿ ಎಂದು ಕೂಗುತ್ತಿದ್ದರು. ಆಗ ನಾನು ಯಾವುದೇ ಸಣ್ಣ ತಂಡಕ್ಕೆ ಹೋಗಿಲ್ಲ ಎಂದು ಅರಿತುಕೊಂಡೆ. ಆರ್‌ಸಿಬಿ ಪರ ಆಡುವುದು ಸಣ್ಣ ವಿಷಯವಲ್ಲ. ಈ ತಂಡದಲ್ಲಿ ವಿಭಿನ್ನ ಭಾವನೆ ಇದೆ. ಇದೀಗ 100-150 ಜನರು ಆಟೋಗ್ರಾಫ್ ಕೇಳುತ್ತಾತೆ. ಇದಕ್ಕೂ ಮೊದಲು, ನಾನು ಭಾರತಕ್ಕಾಗಿ ಆಡಿದಾಗ, 2 ಜನರು ಸಹ ಬಂದಿರಲಿಲ್ಲ. ಆಗ ನನಗೆ ಈ ಫ್ರಾಂಚೈಸಿ ವಿಭಿನ್ನವಾಗಿದೆ ಎಂದು ಅನಿಸಿತು ಎಂದಿದ್ದಾರೆ.
ಜಿತೇಶ್ ಪ್ರದರ್ಶನ
ಜಿತೇಶ್ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಅವರು ಭಾರತ ಪರ 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 14.28 ರ ಸರಾಸರಿಯಲ್ಲಿ ಕೇವಲ 100 ರನ್ ಕಲೆಹಾಕಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಆರ್‌ಸಿಬಿ ಪರ 4 ಇನ್ನಿಂಗ್ಸ್‌ಗಳಲ್ಲಿ 29 ಸರಾಸರಿ ಮತ್ತು 157 ಸ್ಟ್ರೈಕ್ ರೇಟ್‌ನೊಂದಿಗೆ 88 ರನ್ ಗಳಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಒಟ್ಟಾರೆ ದಾಖಲೆಯ ಬಗ್ಗೆ ಹೇಳುವುದಾದರೆ, ಜಿತೇಶ್ 46 ಪಂದ್ಯಗಳಲ್ಲಿ 23 ಸರಾಸರಿ ಮತ್ತು 151 ಸ್ಟ್ರೈಕ್ ರೇಟ್‌ನೊಂದಿಗೆ 818 ರನ್ ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ