Kannada News Live | ದೆಹಲಿಯಲ್ಲಿ ಬಾಂಬ್​ ಸ್ಫೋಟ 29-01-2021

shruti hegde
| Updated By: sandhya thejappa

Updated on:Jan 30, 2021 | 8:54 AM

Kannada News Live | ದೆಹಲಿಯಲ್ಲಿ ಬಾಂಬ್​ ಸ್ಫೋಟ 29-01-2021
ದೆಹಲಿಯಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರು

ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್​ಸೈಟ್​ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.

LIVE NEWS & UPDATES

The liveblog has ended.
  • 29 Jan 2021 07:19 PM (IST)

    ದೆಹಲಿಯಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸ್ಫೋಟ

    ರಾಷ್ಟ್ರ ರಾಜಧಾನಿಯಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸ್ಫೋಟ ಸಂಭವಿಸಿದೆ. ಸುಧಾರಿತ ಎಲೆಕ್ರಾನಿಕ್​ಸಾಧನದಿಂದ (IED) ಸ್ಫೋಟ ಸಂಭವಿಸಿದೆ ಎಂಬ ಪ್ರಾಥಮಿಕ ಮಾಹಿತಿ ಲಭಿಸಿದೆ. ಸ್ಫೋಟದಿಂದ 5ರಿಂದ 6 ವಾಹನಗಳು ಜಖಂಗೊಂಡಿದೆ. ದೆಹಲಿಯ ಔರಂಗಜೇಬ್ ರಸ್ತೆಯಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸ್ಫೋಟವಾಗಿರುವ ಮಾಹಿತಿ ಲಭ್ಯವಾಗಿದೆ. ಸಂಜೆ 5.45 ಸುಮಾರಿನಲ್ಲಿ ಸ್ಫೋಟವಾಗಿದೆ ಎಂದು ಹಿರಿಯ ಅಧಿಕಾರಿಗಳಿಂದ ಸ್ಪಷ್ಟನೆ ಸಿಕ್ಕಿದೆ.

  • 29 Jan 2021 05:36 PM (IST)

    ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಲೊಕೇಶ್ ತಾಳಿಕಟ್ಟೆ

    ಉಪನ್ಯಾಸಕರಿಗೆ ಸಂಬಳ ಕೊಡೋದು ಸ್ವಲ್ಪ ಕಷ್ಟ ಆಗುತ್ತದೆ. ಆದರೂ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಹಿನ್ನೆಲೆ ಸರ್ಕಾರದ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಪೋಷಕರಿಂದ ಕೇವಲ ಶೇ. 70 ರಷ್ಟು ಮಾತ್ರ ಶುಲ್ಕ ಪಡಿತಿವಿ ಎಂದು ರೂಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೊಕೇಶ್ ತಾಳಿಕಟ್ಟೆ ಅಭಿಪ್ರಾಯಪಟ್ಟರು.

  • 29 Jan 2021 05:32 PM (IST)

    ಚಂದ್ರಶೇಖರ ಕಂಬಾರರ ನಿವಾಸಕ್ಕೆ ಅರವಿಂದ ಲಿಂಬಾವಳಿ ಭೇಟಿ

    ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರವರ ಮನೆಗೆ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ  ಭೇಟಿ ನೀಡಿ ಗೌರವಿಸಿದರು. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸೋಮಶೇಖರ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಉಪಸ್ಥಿತಿಯಿದ್ದರು.

  • 29 Jan 2021 05:22 PM (IST)

    ಹೋರಾಟದಿಂದ ಹಿಂದೆ ಸರಿಯಬೇಡಿ: ರಾಹುಲ್ ಗಾಂಧಿ

    ಮೋದಿ ಸರ್ಕಾರ ದೇಶದ ರೈತರ ಜೀವನವನ್ನೇ ನಾಶ ಮಾಡುತ್ತಿದೆ. ಸರ್ಕಾರ ರೈತರಿಂದ ಎಲ್ಲವನ್ನೂ ಕಸಿದುಕೊಳ್ಳುತ್ತಿದೆ ಎಂದು ಮಾತನಾಡಿದ ರಾಹುಲ್ ಗಾಂಧಿ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಬೇಡಿ. ನಿಮ್ಮ ಜೊತೆಗೆ ನಾವಿದ್ದೇವೆ ಎಂದರು.

  • 29 Jan 2021 05:16 PM (IST)

    ಐದು ರಾಜ್ಯಗಳಿಗೆ ವಿಪತ್ತು ಪರಿಹಾರ ನಿಧಿಯಿಂದ ಅನುದಾನ ಬಿಡುಗಡೆ

    ಕೇಂದ್ರದ ಉನ್ನತ ಮಟ್ಟದ ಸಭೆಯಲ್ಲಿ ಐದು ರಾಜ್ಯಗಳಿಗೆ ವಿಪತ್ತು ಪರಿಹಾರ ನಿಧಿಯಿಂದ ಅನುದಾನ ಬಿಡುಗಡೆ ಮಾಡಲು ನಿರ್ಧಾರವಾಗಿದೆ. ಐದು ರಾಜ್ಯಗಳಿಗೆ ಸೇರಿ ಒಟ್ಟು 1,751 ಕೋಟಿ ರೂ ಅನುದಾನ ಬಿಡುಗಡೆಗೆ ನಿರ್ಧರಿಸಲಾಗಿದೆ.

  • 29 Jan 2021 05:09 PM (IST)

    ಅಕ್ರಮವಾಗಿ ಸಂಗ್ರಹಿಸಿದ್ದ 100 ಪ್ಯಾಕೇಟ್ ಅಕ್ಕಿ ಜಪ್ತಿ

    ಗದಗದ ಟ್ಯಾಗೋರ್ ರಸ್ತೆಯಲ್ಲಿರುವ ಮನೆ ಮೇಲೆ ಅಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿದ್ದ 50 ಕೆಜಿಯ 100 ಪ್ಯಾಕೇಟ್ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.

  • 29 Jan 2021 05:07 PM (IST)

    ರಾಮ ರಥದ ಮೇಲೆ ಕಲ್ಲು ತೂರಾಟ: ಎಫ್ಐಆರ್ ದಾಖಲು

    ರಾಮ ಮಂದಿರ ದೇಣಿಗೆ ವಾಹನ ಮೇಲೆ ಕಲ್ಲು ತೂರಾಟ ನಡೆಸಿದಕ್ಕಾಗಿ ಘಟನೆ ಸಂಬಂಧ ಕಿಡಿಗೇಡಿಗಳ ವಿರುದ್ದ ಸುದ್ದಗುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

  • 29 Jan 2021 05:04 PM (IST)

    ಮುಂದೆ ಬಂದು ಎಲ್ಲರೂ ವ್ಯಾಕ್ಸಿನ್ ಪಡೆಯಬೇಕು; ಡಾ.ಗಿರಿಧರ್​​

    ಲಸಿಕೆ ಪಡೆದ ಸಾರ್ವಜನಿಕ ಆರೋಗ್ಯ ತಜ್ಞ ಡಾ.ಗಿರಿಧರ್ ಆರ್ ಬಾಬು ನನಗೆ ಯಾವುದೇ ವ್ಯತ್ಯಾಸಗಳು ಕಾಣಿಸಿಲ್ಲ. ತುಂಬಾ ಆರಾಮಾಗಿ ಮೊದಲಿನಂತೆ ಇದ್ದೇನೆ. ವ್ಯಾಕ್ಸಿನ್ ಬಂದಿರುವುದು ಖುಷಿ ವಿಚಾರ. ಯಾರು ಭಯ ಪಡದೇ ಮುಂದೆ ಬಂದು ವ್ಯಾಕ್ಸಿನ್ ಪಡೆದುಕೊಳ್ಳಿ ಎಂದು ಹೇಳಿದರು.

  • 29 Jan 2021 05:01 PM (IST)

    ರಾಮಮಂದಿರ ದೇಣಿಗೆ ವಾಹನದ ಮೇಲೆ ಕಲ್ಲು ತೂರಾಟ

    ರಾಮಮಂದಿರ ದೇಣಿಗೆ ಸಂಗ್ರಹಿಸುತ್ತಿದ್ದ ವಾಹನದ ಮೇಲೆ ಬೆಂಗಳೂರಿನ ಗುರಪ್ಪನಪಾಳ್ಯದ ಬಿಸ್ಮಿಲ್ಲಾ ರಸ್ತೆ ಬಳಿ ಕಲ್ಲು ತೂರಾಟ ನಡೆದಿದೆ.

  • 29 Jan 2021 04:54 PM (IST)

    ಕೆಂಪು ಕೋಟೆಯಲ್ಲಿ ಜನರಿಗೆ ಏಕೆ ಅವಕಾಶ ನೀಡಲಾಯಿತು?: ರಾಹುಲ್​ ಗಾಂಧಿ

    ಕೆಂಪು ಕೋಟೆಯಲ್ಲಿ ಜನರಿಗೆ ಏಕೆ ಅವಕಾಶ ನೀಡಲಾಯಿತು? ಏಕೆ ನಿಲ್ಲಿಸಲಿಲ್ಲ? ಆ ಜನರನ್ನು ಆವರಣದೊಳಗೆ ಬಿಡುವುದರ ಉದ್ದೇಶ ಏನಾಗಿತ್ತು ಎಂದು ಗೃಹ ಸಚಿವರನ್ನು ಕೇಳಿ ಎಂದು ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಮಾತನಾಡಿದ್ದಾರೆ.

  • 29 Jan 2021 04:44 PM (IST)

    ಶುಲ್ಕ ನಿಯಂತ್ರಣ ಕಾಯ್ದೆ ಬಗ್ಗೆ ಹೈಕೋರ್ಟ್​ ಒಪ್ಪಿದೆ

    ಎರಡನೇ ಕಂತಿನ ಶುಲ್ಕದ ಬಗ್ಗೆ ಚರ್ಚೆಯಾಗುತ್ತಿದೆ. ನಾನು ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದಿಲ್ಲ.ಈ ವರ್ಷ ಯಾವ ಶಾಲೆಯೂ ಶುಲ್ಕ ಹೆಚ್ಚಳ ಮಾಡಬಾರದು. ಶುಲ್ಕ ನಿಯಂತ್ರಣ ಕಾಯ್ದೆ ಬಗ್ಗೆ ಹೈಕೋರ್ಟ್​ ಒಪ್ಪಿದೆ. ಸರ್ಕಾರ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಿಸಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​. ಸುರೇಶ್​ಕುಮಾರ್​ ಹೇಳಿದ್ದಾರೆ.

  • 29 Jan 2021 04:38 PM (IST)

    ಖಾಸಗಿ ಶಾಲೆಗಳ ಶುಲ್ಕ ನಿಗದಿ ವಿಚಾರ: ಸುರೇಶ್ ಕುಮಾರ್ ಸುದ್ದಿಗೋಷ್ಠಿ

    ಖಾಸಗಿ ಶಾಲೆಗಳ ಶುಲ್ಕ ನಿಗದಿ ವಿಚಾರಕ್ಕೆ ಸಂಬಂಧಿಸಿ, ಕೊವಿಡ್ ಕಾರಣದಿಂದ ಎಲ್ಲರಿಗೂ ಆರ್ಥಿಕವಾಗಿ ಸಂಕಷ್ಟ ಉಂಟಾಗಿದೆ. ಪೋಷಕರು ಶುಲ್ಕ ಪಾವತಿಸದಿರುವ ಸ್ಥಿತಿಯಲ್ಲಿ ಇದ್ದರೆ, ಶಾಲೆಯಲ್ಲಿ ಶಿಕ್ಷಕರಿಗೆ ವೇತನ ಕೊಡಲಾಗದ ಸ್ಥಿತಿ ಇದೆ. 2019ರ ಬೋಧನಾ ಶುಲ್ಕದ ಶೇ.70ರಷ್ಟು ಪಡೆಯಬೇಕು. ಶಾಲೆಗಳು ಯಾವುದೇ ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ. ರಾಜ್ಯದ ಎಲ್ಲ ಮಾದರಿ ಶಾಲೆಗಳಿಗೂ ಈ ಶುಲ್ಕ ಅನ್ವಯವಾಗುತ್ತದೆ. ಟ್ರಸ್ಟ್​ಗಳ ಅಭಿವೃದ್ಧಿಗೆ ಹಣ ತೆಗೆದುಕೊಳ್ಳುವಂತಿಲ್ಲ. 1, 2 ಅಥವಾ 3 ಕಂತುಗಳಲ್ಲೂ ಶುಲ್ಕ ಪಡೆಯಬಹುದು. ಹೆಚ್ಚುವರಿ ಶುಲ್ಕ ಪಡೆದಿದ್ದರೆ ಮುಂದಿನ ವರ್ಷಕ್ಕೆ ಹೊಂದಾಣಿಕೆ ಮಾಡಲಾಗುವುದು ಎಂದು ಬೆಂಗಳೂರಿನಲ್ಲಿ ಸಚಿವ ಸುರೇಶ್​ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

  • 29 Jan 2021 04:28 PM (IST)

    ಮೇ 24ರಿಂದ ಜೂ.10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ

    ಮೇ 24ರಿಂದ ಜೂ.10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿ ಮಾಡಲಾಗಿದೆ. ಪಿಯು ಪರೀಕ್ಷೆಗೆ ಪಠ್ಯಕ್ರಮ ನಿಗದಿ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಸಚಿವ ಸುರೇಶ್​ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

  • 29 Jan 2021 04:27 PM (IST)

    ಸಿಂಘು ಗಡಿಯಲ್ಲಿ ಇನ್ಸ್‌ಪೆಕ್ಟರ್‌ ಮೇಲೆ ತಲ್ವಾರ್‌ನಿಂದ ದಾಳಿ

    ಸಿಂಘು ಗಡಿಯಲ್ಲಿ ಇನ್ಸ್‌ಪೆಕ್ಟರ್‌ ಮೇಲೆ ತಲ್ವಾರ್‌ನಿಂದ ದಾಳಿ ನಡೆದಿದೆ. ರೈತರ ಪ್ರತಿಭಟನೆ ಸ್ಥಳ ದೆಹಲಿಯ ಸಿಂಘು ಗಡಿಯಲ್ಲಿ ಘಟನೆ ನಡೆದಿದೆ. ಅಲಿಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ಗಂಭೀರ ಗಾಯಗೊಂಡಿದ್ದಾರೆ. ತಲ್ವಾರ್‌ನಿಂದ ದಾಳಿ ಮಾಡಿದವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • 29 Jan 2021 04:17 PM (IST)

    ಲಾಕ್​ಡೌನ್​ನಿಂದಾಗ ಜನರ ಪ್ರಾಣ ಉಳಿಯುವಂತಾಯಿತು

    ಲಾಕ್ ಡೌನ್ ಮಾಡದೇ ಇದ್ದರೆ ಕೊವಿಡ್​ನಿಂದಾಗಿ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಉಂಟಾಗುತ್ತಿತ್ತು. ಲಾಕ್​ಡೌನ್​ನಿಂದಾಗ ಜನರ ಪ್ರಾಣ ಉಳಿಯುವಂತಾಯಿತು ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಮಾತನಾಡಿದರು.

  • 29 Jan 2021 04:15 PM (IST)

    ಕೊವಿಡ್ ವಿರುದ್ಧದ ಹೋರಾಟಕ್ಕೆ ದೇಶ ಕೈಗೊಂಡಿರುವ ನೀತಿಗಳು ಪ್ರಬುದ್ಧ

    ಕೊವಿಡ್ ವಿರುದ್ಧದ ಹೋರಾಟಕ್ಕೆ ದೇಶ ಕೈಗೊಂಡಿರುವ ನೀತಿಗಳು ಪ್ರಬುದ್ಧ ಮತ್ತು ದೂರದೃಷ್ಟಿಯುಳ್ಳದ್ದಾಗಿತ್ತು. ದೀರ್ಘಾವಧಿಯ ಪ್ರಯೋಜನಕ್ಕಾಗಿ ಅಲ್ಪಾವಧಿಯ ನೋವನ್ನು ಭಾರತ ಸಹಿಸಿದೆ. ವಿ ಶೇಪ್ ಚೇತರಿಕೆ ಭಾರತದ ಪ್ರಬುದ್ಧ ನೀತಿಗೆ ಉದಾಹರಣೆಯಾಗಿದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

  • 29 Jan 2021 04:13 PM (IST)

    ಕೊರೊನಾ ಪ್ರಕರಣಗಳು ಕಡಿಮೆಯಾಗಲು ಲಾಕ್ ಡೌನ್ ಕಾರಣ: ಕೃಷ್ಣಮೂರ್ತಿ ಸುಬ್ರಮಣಿಯನ್

    ಕೆಲವು ರಾಜ್ಯಗಳಲ್ಲಿ ಮಾತ್ರವಲ್ಲ ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಲು ಲಾಕ್ ಡೌನ್ ಕಾರಣವಾಗಿದೆ. ಜನರ ಪ್ರಾಣ ಮತ್ತು ಬದುಕನ್ನು ಉಳಿಸಲು ಲಾಕ್ ಡೌನ್ ಸಹಕಾರಿಯಾಗಿದೆ. ಎಂದು ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

  • 29 Jan 2021 04:02 PM (IST)

    ಕೃಷ್ಣಮೂರ್ತಿ ಸುಬ್ರಮಣಿಯನ್ :ಕೊವಿಡ್​ನಿಂದಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ

    ಕೊವಿಡ್​ನಿಂದಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಅನಿಶ್ಚಿತತೆ ಉಂಟಾಗಿದ್ದರೂ ಜಿಡಿಪಿ ಮತ್ತೆ ಪುಟಿದೇಳುವ ನಿರೀಕ್ಷೆ ಇದೆ. ಆದರೆ ಹೋದ ಜೀವ ಮರಳಿ ಬಾರದು. ಕೊವಿಡ್ ಸಾಂಕ್ರಾಮಿಕ ಹರಡುತ್ತಿದ್ದಂತೆಯೇ ಲಾಕ್ ಡೌನ್ ಘೋಷಣೆ ಆದ ಕಾರಣ ಹಲವರ ಪ್ರಾಣ ಉಳಿಯಿತು. ಅಷ್ಟೇ ಅಲ್ಲದೆ ಬೇಗನೆ ಚೇತರಿಕೆ ಕಂಡುಕೊಳ್ಳಲೂ ಕಾರಣವಾಯಿತು.

  • 29 Jan 2021 03:55 PM (IST)

    ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಸುದ್ದಿಗೋಷ್ಠಿ

    ಆರ್ಥಿಕ ಸಮೀಕ್ಷೆ ಮಂಡನೆಯಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಬ್ರಮಣಿಯನ್, ಆರ್ಥಿಕ ಸಮೀಕ್ಷೆಯಲ್ಲಿನ ಮುಖ್ಯಾಂಶಗಳ ವಿವರಣೆಯನ್ನು ನೀಡಿದ್ದಾರೆ. ಆರ್ಥಿಕ ಸಮೀಕ್ಷೆಯ ಮೊದಲ ಅಧ್ಯಾಯದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ಭಾರತ ಯಾವ ಕ್ರಮಗಳನ್ನು ಅನುಸರಿಸಿದೆ ಎಂಬುದಿದೆ.

  • 29 Jan 2021 03:53 PM (IST)

    ಇಂದು ಮಂಡನೆಯಾದ ಆರ್ಥಿಕ ಸಮೀಕ್ಷೆ 2020 -21ರ ಇಬುಕ್ ಬಿಡುಗಡೆ

    ಲೋಕಸಭೆಯಲ್ಲಿ ಇಂದು ಮಂಡನೆಯಾದ ಆರ್ಥಿಕ ಸಮೀಕ್ಷೆ 2020 -21ರ ಇಬುಕ್ ಆವೃತ್ತಿಯನ್ನು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಬಿಡುಗಡೆ ಮಾಡಿದ್ದಾರೆ.

  • 29 Jan 2021 03:38 PM (IST)

    ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಸುದ್ದಿಗೋಷ್ಠಿ

    ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಸುದ್ದಿಗೋಷ್ಠಿ ಪ್ರಾರಂಭಗೊಂಡಿದೆ.

  • 29 Jan 2021 03:30 PM (IST)

    ಭಾರತ ಆರ್ಥಿಕ ಸಮೀಕ್ಷೆ: ಎರಡಂಕಿ ಜಿಡಿಪಿ ಸಾಧಿಸಲಿರುವ ಏಕೈಕ ದೇಶ ಭಾರತ

    ಕೊರೊನಾದಿಂದ ಇಡೀ ವಿಶ್ವದ ಆರ್ಥಿಕ ಸ್ಥಿತಿಯೇ ಸಂಕುಚಿತಗೊಂಡಿರುವಾಗ ಎರಡಂಕಿ ಜಿಡಿಪಿ ಸಾಧಿಸಲಿರುವ ಏಕೈಕ ದೇಶ ಭಾರತ ಎಂದು ಆರ್ಥಿಕ ಸಮೀಕ್ಷೆ ವಿವರಿಸುತ್ತದೆ.

  • 29 Jan 2021 03:24 PM (IST)

    ಸಂಸತ್ ನಲ್ಲಿ 2020-21 ರ ಆರ್ಥಿಕ ಸಮೀಕ್ಷಾ ವರದಿ ಮಂಡನೆ

    ಸಂಸತ್​ನಲ್ಲಿ 2020-21 ರ ಆರ್ಥಿಕ ಸಮೀಕ್ಷಾ ವರದಿ ಮಂಡನೆ. 2020-21ರಲ್ಲಿ V ಶೇಪ್ ಆರ್ಥಿಕ ಚೇತರಿಕೆ ಆಗುವ ಮುನ್ಸೂಚನೆ ಇದೆ. ಆರ್ಥಿಕತೆಯು ಕುಸಿತದ ಬಳಿಕ ಚೇತರಿಕೆಯಾಗುವ ಮುನ್ಸೂಚನೆ ಇದೆ. ದೇಶದಲ್ಲಿ 2023-24 ರಲ್ಲಿ ಖಾಸಗಿ ಟ್ರೇನ್ ಸಂಚಾರ, 2021 ರ ಮೇ ತಿಂಗಳಲ್ಲಿ ಖಾಸಗಿ ಟ್ರೇನ್ ಬಿಡ್ಡಿಂಗ್ ಮುಕ್ತಾಯ. 2021 ರ ಪ್ರಾರಂಭದಲ್ಲಿ ವಾಯುಮಾರ್ಗ ಪ್ರಯಾಣ ಮೊದಲಿನ ಸ್ಥಿತಿಗೆ ಬರಲಿದೆ. 2021 ರಲ್ಲಿ ದೇಶದ ಜಿಡಿಪಿ ಮೈನಸ್ ಶೇಕಡಾ 7.7 ರಷ್ಟು ಬೆಳವಣಿಗೆ ಸಾಧ್ಯತೆ ಇದೆ. ದೇಶದಲ್ಲಿ ಕೃಷಿ ಕ್ಷೇತ್ರ ಮಾತ್ರ ಬೆಳ್ಳಿ ರೇಖೆ ಇದ್ದಂತೆ, ಮುಂದಿನ‌ ಎರಡು ವರ್ಷದಲ್ಲಿ ಆರ್ಥಿಕತೆ ಸಂಪೂರ್ಣ ಚೇತರಿಕೆ ಆಗಲಿದೆ. 2021- 22 ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇಕಡಾ 11 ರ ದರದಲ್ಲಿ ಬೆಳವಣಿಗೆ ನಿರೀಕ್ಷೆ ಇದೆ.

  • 29 Jan 2021 02:31 PM (IST)

    ಆರ್ಥಿಕ ಸಮೀಕ್ಷೆ 2021- ನಿರ್ಮಲಾ ಸೀತಾರಾಮನ್ ಮಂಡನೆ

    ಆರ್ಥಿಕ ಸಮೀಕ್ಷೆ 2021ನ್ನು ನಿರ್ಮಲಾ ಸೀತಾರಾಮನ್​ ಕೆಲವೇ ಕ್ಷಣಗಳಲ್ಲಿ ಮಂಡಿಸಲಿದ್ದಾರೆ.

  • 29 Jan 2021 02:23 PM (IST)

    ದರ್ಶನ್ ಮಾತ್ರವಲ್ಲ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು: ಟಿ.ಎಸ್ ನಾಗಾಭರಣ

    ಟಾಲಿವುಡ್ ವಿರುದ್ಧ ನಟ ದರ್ಶನ್ ದೂರು ವಿಚಾರಕ್ಕೆ ಸಂಬಂಧಿಸಿ, ಈ ವಿಚಾರದಲ್ಲಿ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು. ದರ್ಶನ್ ಮಾತ್ರವಲ್ಲ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು.ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಹೇಳಿಕೆ ನೀಡಿದ್ದಾರೆ.

  • 29 Jan 2021 02:19 PM (IST)

    ರಾಬರ್ಟ್ ರಿಲೀಸ್​ಗೆ ಒಂದು ಪರಿಹಾರ ಸಿಗುತ್ತದೆ: ಉಮೇಶ್ ಬಣಕಾರ್

    ಜನವರಿ 31 ಕ್ಕೆ ಸೌತ್ ಇಂಡಿಯನ್ ಫಿಲಂ ಚೇಂಬರ್ ಸಭೆ ಇದೆ. ಅಲ್ಲಿ ಇದರ ಬಗ್ಗೆ ಮಾತುಕತೆ ನಡೆಸಲಾಗುತ್ತದೆ. ರಾಬರ್ಟ್ ರಿಲೀಸ್​ಗೆ ಒಂದು ಪರಿಹಾರ ಸಿಗುತ್ತದೆ ಎಂದು ಚಲನ ಚಿತ್ರ‌ವಾಣಿಜ್ಯ ಮಂಡಳಿ ಉಪಾದ್ಯಕ್ಷ ಉಮೇಶ್ ಬಣಕಾರ್ ಹೇಳಿಕೆ ನೀಡಿದ್ದಾರೆ.

  • 29 Jan 2021 02:16 PM (IST)

    ಮೆಹಬೂಬಾಬಾದ್​ ಅಪಘಾತ: 6 ಜನ ಸ್ಥಳದಲ್ಲೇ ಸಾವು

    ತೆಲಂಗಾಣದ ಮಹಬೂಬಾಬಾದ್​ ಬಳಿ ಭಾರಿ ರಸ್ತೆ ಅವಗಡ ಸಂಭವಿಸಿದೆ. ಗೂಡೂರು ಮಂಡಲಂ ಮರ್ರಿಮಿಟ್ಟ ಗ್ರಾಮದ‌ ಬಳಿ‌ ಆಟೋ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಆಟೋದಲ್ಲಿದ್ದ 6 ಪ್ರಯಾಣಿಕರು ಸ್ಥಳದಲ್ಲಿಯೇ ಮರಣ ಹೊಂದಿದ್ದಾರೆ. ಮೃತರಲ್ಲಿ‌ ಮೂವರು‌ ಮಹಿಳೆಯರಾಗಿದ್ದಾರೆ.

  • 29 Jan 2021 02:06 PM (IST)

    ಡಬ್ಬಿಂಗ್ ಸಿನಿಮಾಗೆ ಆದ್ಯತೆ ನೀಡ ಬೇಡಿ: ಆಂಧ್ರದಲ್ಲಿ ಸ್ಥಳೀಯರ ಒತ್ತಾಯ

    ತೆಲಂಗಾಣದಲ್ಲಿ ಸುನೀಲ್, ಆಂಧ್ರದಲ್ಲಿ ಜಗದೀಶ್ ರಾಬರ್ಟ್ ಸಿನಿಮಾವನ್ನ ತೆಲುಗು ಭಾಷೆಯಲ್ಲಿ ರಿಲೀಸ್​ಗೆ ಒಪ್ಪಿದ್ದರು. ಆದರೆ, ಒಪ್ಪಿಗೆಯಾದ 3ರಿಂದ4 ದಿನದ ನಂತರ ಅವರಿಂದ ಕರೆ ಬಂದಿದೆ. ಮಾರ್ಚ್.11ಕ್ಕೆ ಸಿನಿಮಾ ರಿಲೀಸ್ ಮಾಡಲು ಸಾಧ್ಯವಿಲ್ಲ ಎಂದರು. ಈಗಾಗಲೇ ಅಲ್ಲಿನ ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿದೆ. ಸ್ಥಳೀಯರು ಡಬ್ಬಿಂಗ್ ಸಿನಿಮಾಗೆ ಆಧ್ಯತೆ ನೀಡದಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಅಲ್ಲಿ ತೆಲುಗು ಸಿನಿಮಾ ರಿಲೀಸ್​ಗೆ ಅನುಮತಿ ನೀಡಬೇಕು.ಈ ಹಿನ್ನೆಲೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ರಾಬರ್ಟ್ ನಿರ್ಮಾಪಕ ಉಮಾಪತಿ ದೂರು ನೀಡಿದ್ದಾರೆ.

  • 29 Jan 2021 02:05 PM (IST)

    ಛತ್ತೀಸಗಡದಲ್ಲಿ ಯೋಧರ ಮಧ್ಯೆ‌ ಘರ್ಷಣೆ: ಓರ್ವ ಯೋಧನ ಸಾವು

    ಛತ್ತೀಸಗಡದಲ್ಲಿ ‌ಯೋಧರ ಮಧ್ಯೆ‌ ಘರ್ಷಣೆ ನಡೆದಿದ್ದು ಒಬ್ಬರ ಮೇಲೊಬ್ಬರು ಗುಂಡು‌ ಹಾರಿಸಿಕೊಂಡಿದ್ದಾರೆ. ಈ ಮಧ್ಯೆ ಓರ್ವ ಯೋಧನ ಸಾವು ಸಂಭವಿಸಿದೆ. ಇಬ್ಬರು ತೀವ್ರ ಗಾಯಗೊಂಡಿದ್ದು, ಗಾಯಾಳುಗಳು ರಾಯಪೂರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ಯೋಧ ಪ್ರಮೋದಕುಮಾರ ಎಂದು ತಿಳಿದುಬಂದಿದೆ.ಗುಂಡು ಹಾರಿಸಿದವನು ಗಿರೀಶಕುಮಾರ ಎಂದು ಗುರುತಿಸಲಾಗಿದ್ದು, ಕ್ಷುಲ್ಲಕನ ಕಾರಣಕ್ಕಾಗಿ ಘಟನೆ‌ ಜರುಗಿದೆ ಎಂದು ಮೂಲಗಳು ತಿಳಿಸಿವೆ.

  • 29 Jan 2021 01:47 PM (IST)

    ನಮ್ಮಲ್ಲಿ ಯಾರಲ್ಲೂ ಭಾಷಾಭಿಮಾನ ಇಲ್ಲ ನಟ ದರ್ಶನ್​ ಹೇಳಿಕೆ

    ನಮ್ಮಲ್ಲಿ ಯಾರಲ್ಲೂ ಭಾಷಾಭಿಮಾನ ಇಲ್ಲ.ನಾನು ಇದನ್ನು ಓಪನ್​ ಆಗಿ ಹೇಳುತ್ತಿದ್ದೇನೆ. ತಮಿಳುನಾಡಿಗೋ, ಆಂಧ್ರಕ್ಕೆ ಹೋದರೆ ಅವರು ಅಲ್ಲಿಯ ಭಾಷೆ ಬಳಸುತ್ತಾರೆ. ಅವರು ನಮ್ಮ ಭಾಷೆಯನ್ನೇ ಮಾತನಾಡುವುದಿಲ್ಲ ಎಂದು ಬೆಂಗಳೂರಿನ ಫಿಲ್ಮ್ ಚೇಂಬರ್​ನಲ್ಲಿ​ ನಟ ದರ್ಶನ್​ ಹೇಳಿಕೆ ನೀಡಿದ್ದಾರೆ.

  • 29 Jan 2021 01:32 PM (IST)

    ಸೌಹಾರ್ದಯುತವಾಗಿ ಚರ್ಚೆ ನಡೆಸುತ್ತೇವೆ: ಅಧ್ಯಕ್ಷ ಜೈರಾಜ್

    ಭಾನುವಾರ ನಡೆಸುವ ಸೌತ್​ ಇಂಡಿಯಾ ಫಿಲ್ಮ್​ ಚೇಂಬರ್ ಜತೆ ಸಭೆಯಲ್ಲಿ ಸೌಹಾರ್ದಯುತವಾಗಿ ಬಗೆಹರಿಸುವ ಬಗ್ಗೆ ಚರ್ಚೆ ನಡೆಸುತ್ತೇವೆ. ತೆಲುಗು ಚಿತ್ರರಂಗದವರು ರಿಲೀಸ್​ಗೆ ವಿರೋಧ ಮಾಡಿಲ್ಲ. ಅದೇ ದಿನ ಅಲ್ಲಿಯೂ ಚಿತ್ರಗಳ ರಿಲೀಸ್​ ಹಿನ್ನೆಲೆ ಸಮಸ್ಯೆ ಉಂಟಾಗಿದೆ. ಥಿಯೇಟರ್​ಗಳ ಸಮಸ್ಯೆಯಾಗುವ ಬಗ್ಗೆ ಹೇಳಿದ್ದಾರೆ ಎಂದು ಫಿಲ್ಮ್​ ಚೇಂಬರ್​ ಅಧ್ಯಕ್ಷ ಜೈರಾಜ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

  • 29 Jan 2021 01:29 PM (IST)

    ಫಿಲ್ಮ್​ ಚೇಂಬರ್​ ಅಧ್ಯಕ್ಷ ಜೈರಾಜ್​ ಸುದ್ದಿಗೋಷ್ಠಿ

    ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ದೂರಿಗೆ ಸಂಬಂಧಿಸಿದಂತೆ ಫಿಲ್ಮ್​ ಚೇಂಬರ್​ ಅಧ್ಯಕ್ಷ ಜೈರಾಜ್​ ಸುದ್ದಿಗೋಷ್ಠಿ ನಡೆಸಿದ್ದಾರೆ.ನಮ್ಮ ನಿರ್ಮಾಪಕರು ನಮಗೆ ದೂರು ನೀಡಿದ್ದಾರೆ.ಈ ಬಗ್ಗೆ ಭಾನುವಾರ ಸೌತ್​ ಇಂಡಿಯಾ ಫಿಲ್ಮ್​ ಚೇಂಬರ್ ಜತೆ ಸಭೆ ನಡೆಸುತ್ತೇವೆ. ಸಭೆಯಲ್ಲಿ ಸೌಹಾರ್ದಯುತವಾಗಿ ಬಗೆಹರಿಸುವ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

  • 29 Jan 2021 01:22 PM (IST)

    ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ದರ್ಶನ್ ದೂರು

    ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ದರ್ಶನ್ ದೂರು ದಾಖಲಿಸಿದ್ದಾರೆ. ಫಿಲ್ಮ್‌ ಚೇಂಬರ್​ಗೆ ನಟ ದರ್ಶನ್‌ ದೂರು ನೀಡಿದ್ದಾರೆ.

  • 29 Jan 2021 01:11 PM (IST)

    ಸಂಸತ್ತಿನಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ

    ಸಂಸತ್ತಿನಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ. ಗೃಹ ಸಚಿವ ಅಮಿತ್​ ಶಾ ಉಪಸ್ಥಿತಿಯಲ್ಲಿ ಸಭೆ.

  • 29 Jan 2021 01:05 PM (IST)

    ರಾಬರ್ಟ್ ಸಿನಿಮಾ ತೆಲುಗಿನಲ್ಲಿ ರಿಲೀಸ್​ಗೆ ಸಮಸ್ಯೆಯಾಗಬಾರದು: ನಟ ದರ್ಶನ್ ಹೇಳಿಕೆ

    ರಾಬರ್ಟ್ ಸಿನಿಮಾ ತೆಲುಗಿನಲ್ಲಿ ರಿಲೀಸ್​ಗೆ ಸಮಸ್ಯೆಯಾಗಬಾರದು. ಸಮಸ್ಯೆ ಉಂಟಾಗದಂತೆ ರಿಲೀಸ್​ಗೆ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಗೂ ತಿಳಿಸಿ, ಈಗಲೇ ಸಮಸ್ಯೆಗಳನ್ನ ಬಗೆಹರಿಸಬೇಕು ಇಲ್ಲದಿದ್ದರೆ, ಮುಂದೆ ಮತ್ತಷ್ಟು ತೊಂದರೆಯಾಗುತ್ತದೆ. ಯುವ ಪ್ರತಿಭೆಗಳ ಸಿನಿಮಾಗಳಿಗೂ ತೊಂದರೆಯಾಗಲಿದೆ ಎಂದು ದರ್ಶನ್ ಹೇಳಿದ್ದಾರೆ.

  • 29 Jan 2021 12:57 PM (IST)

    ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ದೂರಿನ ಬಗ್ಗೆ ಚರ್ಚೆ

    ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಟ ದರ್ಶನ್ ಆಗಮಿಸಿದ್ದು, ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ದೂರಿನ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

  • 29 Jan 2021 12:40 PM (IST)

    ದೆಹಲಿ ಹಿಂಸಾಚಾರ: ಪೊಲೀಸರಿಂದ ವಾಕಿಟಾಕಿ ಕಿತ್ತುಕೊಂಡಿದ್ದವರ ಸೆರೆ

    ಜನವರಿ 26ರಂದು ಕೆಂಪುಕೋಟೆಯಲ್ಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆ ವೇಳೆ ಪೊಲೀಸರಿಂದ ವಾಕಿಟಾಕಿ ಕಿತ್ತುಕೊಂಡಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • 29 Jan 2021 12:18 PM (IST)

    ಪರಿಷತ್ ಉಪಸಭಾಪತಿಯಾಗಿ ಪ್ರಾಣೇಶ್ ಅಧಿಕೃತ ಆಯ್ಕೆ

    ಪರಿಷತ್​ ಉಪಸಭಾಪತಿಯಾಗಿ ಎಂ.ಕೆ.ಪ್ರಾಣೇಶ್ ಆಯ್ಕೆಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಪರ 41 ಮತಗಳು ಸಿಕ್ಕಿದ್ದು, ವಿರುದ್ಧ 24 ಮತಗಳು ಸಿಕ್ಕಿವೆ. ಎಂ.ಕೆ.ಪ್ರಾಣೇಶ್​ಗೆ ಆಡಳಿತ ಪಕ್ಷದ ಸದಸ್ಯರಿಂದ ಅಭಿನಂದನೆ ಸಲ್ಲಿಸಲಾಗಿದೆ. ಉಪಸಭಾಪತಿ ಕುರ್ಚಿಯಲ್ಲಿ ಪ್ರಾಣೇಶ್​ರನ್ನು ಸದಸ್ಯರು ಕೂರಿಸಿದ್ದಾರೆ.

  • 29 Jan 2021 12:13 PM (IST)

    ರಾಷ್ಟ್ರಪತಿ: ಸರ್ಕಾರ ಜನರ ಹಿತದೃಷ್ಟಿಯಿಂದ ಕಾನೂನು ರೂಪಿಸುತ್ತಿದೆ

    ಸರ್ಕಾರ ಜನರ ಹಿತದೃಷ್ಟಿಯಿಂದ ಕಾನೂನು ರೂಪಿಸುತ್ತಿದೆ. 41 ಕೋಟಿಗೂ ಹೆಚ್ಚು ಜನ್‌ಧನ್ ಖಾತೆಗಳನ್ನು ತೆರೆಯಲಾಗಿದೆ ಎಂದು ಸಂಸತ್ ಭವನ ಬಜೆಟ್ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್ ಮಾತನಾಡಿದರು.

  • 29 Jan 2021 12:00 PM (IST)

    ಜಮ್ಮು-ಕಾಶ್ಮೀರ ಈಗ ಅಭಿವೃದ್ಧಿಯತ್ತ ಸಾಗುತ್ತಿದೆ: ರಾಷ್ಟ್ರಪತಿ

    ಜಮ್ಮು-ಕಾಶ್ಮೀರ ಈಗ ಅಭಿವೃದ್ಧಿಯತ್ತ ಸಾಗುತ್ತಿದೆ. ದೇಶದ ಗಡಿಯಲ್ಲಿ ಶಾಂತಿ ಕದಡುವ ಯತ್ನಗಳು ನಡೆಯುತ್ತಿದೆ. ರಕ್ಷಣಾ ಕ್ಷೇತ್ರ ಆತ್ಮನಿರ್ಭರಗೊಳಿಸಲು ಒತ್ತು ನೀಡಲಾಗಿದೆ. ರಕ್ಷಣಾ ಕ್ಷೇತ್ರದ ಹಲವು ಸಾಮಗ್ರಿ ದೇಶದಲ್ಲೇ ಸಿದ್ಧವಾಗುತ್ತಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಹಲವು ಅನಗತ್ಯ ಕಾನೂನುಗಳನ್ನು ತೆಗೆದು ಹಾಕಲಾಗಿದೆ ಎಂದು ರಾಷ್ಟ್ರಪತಿ ಮಾತನಾಡಿದರು.

  • 29 Jan 2021 11:44 AM (IST)

    ಭಾರತದ ಭವಿಷ್ಯದ ದೃಷ್ಟಿಯಿಂದ ಅಧಿವೇಶನ ಅವಶ್ಯ: ಪ್ರಧಾನಿ ನರೇಂದ್ರ ಮೋದಿ

    ದಶಕದ ಮೊದಲ ಅಧಿವೇಶನ ಆರಂಭವಾಗುತ್ತಿದೆ. ಭಾರತದ ಭವಿಷ್ಯದ ದೃಷ್ಟಿಯಿಂದ ಅಧಿವೇಶನ ಅವಶ್ಯ ಎಂದು ಸಂಸತ್‌ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದರು. ಬಜೆಟ್ ಅಧಿವೇಶನಕ್ಕೆ ಆಗಮಿಸಿದ ಅವರು ಮಾಧ್ಯಮಗಳ ಎದುರು ಪ್ರತಿಕ್ರಿಯೆ ನೀಡಿದರು.

  • 29 Jan 2021 11:43 AM (IST)

    ಸಂಸತ್‌ನ ಬಜೆಟ್ ಅಧಿವೇಶನ: ಜಲ ಸಂರಕ್ಷಣೆ ಬಗ್ಗೆಯೂ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ

    ಏಕಲವ್ಯ ಮಾದರಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಜಲ ಸಂರಕ್ಷಣೆ ಬಗ್ಗೆಯೂ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಎಲ್ಲ ಮನೆಗಳಿಗೂ ನೀರು ಪೂರೈಸುವ ಕೆಲಸ ಸರ್ಕಾರ ಮಾಡುತ್ತಿದೆ. ಉಮಂಗ್ ಆ್ಯಪ್ ಮೂಲಕ ಹಲವು ಸೇವೆ ಒದಗಿಸಲಾಗುತ್ತಿದೆ ಎಂದು ಸಂಸತ್‌ನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಿದರು.

  • 29 Jan 2021 11:30 AM (IST)

    ‘ಕೃಷಿ ಕ್ಷೇತ್ರವನ್ನು ಲಾಭದಾಯಕಗೊಳಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ’: ರಾಷ್ಟ್ರಪತಿ

    ಕೃಷಿ ಕ್ಷೇತ್ರವನ್ನು ಲಾಭದಾಯಕಗೊಳಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಗ್ರಾಮಗಳಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ದೇಶದ ಕಾನೂನನ್ನು ಗಂಭೀರವಾಗಿ ಪಾಲಿಸುವ ಅಗತ್ಯವಿದೆ. ಕೃಷಿ ತಿದ್ದುಪಡಿ ಕಾಯ್ದೆಗಳ ಬಗ್ಗೆ ವದಂತಿ ಹಬ್ಬಿಸಲಾಗುತ್ತಿದೆ. ಕೆಂಪುಕೋಟೆಯಲ್ಲಿ ಧ್ವಜಕ್ಕೆ ಅಪಮಾನ ದೌರ್ಭಾಗ್ಯಪೂರ್ಣ. ಸಣ್ಣ ಉದ್ಯಮಗಳನ್ನು ಸಶಕ್ತಗೊಳಿಸಲಾಗುತ್ತಿದೆ. 1 ರೂಪಾಯಿಗೆ ಸ್ಯಾನಿಟರಿ ಪ್ಯಾಡ್ ನೀಡಲು ಯೋಜನೆ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದು ರಾಷ್ಟ್ರಪತಿ ಮಾತನಾಡಿದರು.

  • 29 Jan 2021 11:24 AM (IST)

    ರಾಷ್ಟ್ರಪತಿ: ಸಣ್ಣ ರೈತರಿಗೆ ದೊಡ್ಡ ರೈತರಷ್ಟೇ ಆದಾಯ ಸಿಗುವಂತಾಗಬೇಕು

    ಗಣರಾಜ್ಯೋತ್ಸವ ದಿನದ ಅಪಮಾನ ದೌರ್ಭಾಗ್ಯಪೂರ್ಣ. ಸಣ್ಣ ರೈತರಿಗೆ ದೊಡ್ಡ ರೈತರಷ್ಟೇ ಆದಾಯ ಸಿಗುವಂತಾಗಬೇಕು. ಕೃಷಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. 100ಕ್ಕೂ ಹೆಚ್ಚು ಕೃಷಿ ರೈಲುಗಳನ್ನು ಓಡಿಸಲಾಗುತ್ತಿದೆ. ಡೇರಿ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಅನ್ನದಾತರನ್ನು ಇಂಧನದಾತರನ್ನಾಗಿಯೂ ಮಾಡಲಾಗುತ್ತಿದೆ. ಇಥೆನಾಲ್ ಉತ್ಪಾದನೆಯಿಂದ ರೈತರ ಆದಾಯ ಹೆಚ್ಚಾಗಲಿದೆ ಎಂದು ಸಂಸತ್‌ನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಮಾತನಾಡಿದರು.

  • 29 Jan 2021 11:20 AM (IST)

    ಸಂಸತ್‌ನ ಬಜೆಟ್ ಅಧಿವೇಶ: ಆತ್ಮನಿರ್ಭರತೆ ಯೋಜನೆಯಿಂದ ಸಕಾರಾತ್ಮಕ ಬದಲಾವಣೆ ಸಾಧ್ಯ

    ಆತ್ಮನಿರ್ಭರತೆ ಯೋಜನೆಯಿಂದ ಸಕಾರಾತ್ಮಕ ಬದಲಾವಣೆ ಸಾಧ್ಯ. ದೇಶದಲ್ಲಿ ಶೇಕಡಾ 80ರಷ್ಟು ಸಣ್ಣರೈತರಿದ್ದಾರೆ. ಸರ್ಕಾರ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತಂದಿದೆ.3 ಕೃಷಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಜಾರಿಗೆ ತರಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ.ಹಲವು ರಾಜಕೀಯ ಪಕ್ಷಗಳು ಈ ಕಾಯ್ದೆಗಳನ್ನು ಬೆಂಬಲಿಸಿವೆ. ಈ ಕಾಯ್ದೆಗಳನ್ನು ಸದ್ಯ ಸುಪ್ರೀಂಕೋರ್ಟ್ ಸ್ಥಗಿತಗೊಳಿಸಿದೆ. ಸುಪ್ರೀಂಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ ಎಂದು ರಾಷ್ಟ್ರಪತಿ ಮಾತನಾಡಿದರು.

  • 29 Jan 2021 11:16 AM (IST)

    ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತ ಮಾನವೀಯತೆ ತೋರಿದೆ: ರಾಷ್ಟ್ರಪತಿ ರಾಮನಾಥ್​ ಕೋವಿಂದ್

    ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತ ಮಾನವೀಯತೆ ತೋರಿದೆ. ಜನೌಷಧ ಕೇಂದ್ರಗಳ ಮೂಲಕ ಕಡಿಮೆ ದರದಲ್ಲಿ ಔಷಧ ನೀಡಲಾಗಿದೆ. ದೇಶದಲ್ಲಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ಸಿಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರಿಗೆ ಸಹಾಯವಾಗುತ್ತಿದೆ. ಬಡವರಿಗೆ 5 ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆ ಸಿಗುತ್ತಿದೆ. ದೇಶದಲ್ಲಿ ಈಗ 562 ಮೆಡಿಕಲ್ ಕಾಲೇಜುಗಳಿವೆ.ರೈತರ ಉತ್ಪನ್ನಕ್ಕೆ ಒಂದೂವರೆ ಪಟ್ಟು MSP ನೀಡಲು ನಿರ್ಧಾರ ಹಾಗೂ ನೀರಾವರಿ ಯೋಜನೆಗಳಲ್ಲಿ ಸುಧಾರಣೆ ಮಾಡಲಾಗಿದೆ ಎಂದು ಸಂಸತ್‌ನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಮಾತನಾಡಿದರು.

  • 29 Jan 2021 11:12 AM (IST)

    ರಾಷ್ಟ್ರಪತಿ: ಆತ್ಮ ನಿರ್ಭರತೆಯತ್ತ ನಾವು ವೇಗವಾಗಿ ಮುನ್ನಡೆಯಬೇಕು

    ಕೇಂದ್ರ ಸರ್ಕಾರ ಎಲ್ಲ ವರ್ಗಗಳ ಕಲ್ಯಾಣಕ್ಕೆ ಕೆಲಸ ಮಾಡುತ್ತಿದೆ. ಆತ್ಮ ನಿರ್ಭರತೆಯತ್ತ ನಾವು ವೇಗವಾಗಿ ಮುನ್ನಡೆಯಬೇಕು. ಕೊವಿಡ್ ಸಂದರ್ಭದಲ್ಲಿ ಸರ್ಕಾರ ಹಲವು ಯೋಜನೆ ನೀಡಿದೆ.ನಮ್ಮ ಒಂದು ಕೈಯಲ್ಲಿ ಕರ್ತವ್ಯ, ಮತ್ತೊಂದು ಕೈಯಲ್ಲಿ ಯಶಸ್ಸಿದೆ. ಕೊವಿಡ್ ಸಂದರ್ಭದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಿಸಲಾಗಿದೆ. ಕೊರೊನಾ ಲಸಿಕೆ ವಿಷಯದಲ್ಲಿ ಭಾರತ ಆತ್ಮನಿರ್ಭರವಾಗಿದೆ. ಈಗ ಭಾರತ ವಿದೇಶಗಳಿಗೆ ಕೊವಿಡ್ ಲಸಿಕೆ ಪೂರೈಸುತ್ತಿದೆ ಎಂದು ರಾಷ್ಟ್ರಪತಿ ಮಾತನಾಡಿದರು.

  • 29 Jan 2021 11:09 AM (IST)

    ಸಂಸತ್‌ನ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ: ಕೇಂದ್ರ ಸರ್ಕಾರ ಎಲ್ಲ ವರ್ಗಗಳ ಕಲ್ಯಾಣಕ್ಕೆ ಕೆಲಸ ಮಾಡುತ್ತಿದೆ

    ಸಂಸತ್‌ನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಮಾಡುತ್ತಿದ್ದಾರೆ. 6 ರಾಜ್ಯಗಳಲ್ಲಿ ಗರೀಬ್ ಕಲ್ಯಾಣ್ ರೋಜ್‌ಗಾರ್ ಯೋಜನೆ ಜಾರಿ. ಕೊವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಕೇಂದ್ರ ಸರ್ಕಾರ ಎಲ್ಲ ವರ್ಗಗಳ ಕಲ್ಯಾಣಕ್ಕೆ ಕೆಲಸ ಮಾಡುತ್ತಿದೆ ಎಂದು ಮಾತನಾಡಿದರು.

  • 29 Jan 2021 11:06 AM (IST)

    ಸಂಸತ್ ಬಜೆಟ್ ಅಧಿವೇಶನ: ರಾಷ್ಟ್ರಪತಿಗಳ ಮಾತು

    ಸಂಸತ್‌ನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಪ್ರಾರಂಭಗೊಂಡಿದೆ. ಹೊಸ ವರ್ಷ, ಹೊಸ ದಶಕದ ಮೊದಲ ಅಧಿವೇಶನ ಆರಂಭ. ಸಂಸತ್‌ನ ಈ ಅಧಿವೇಶನ ಅತ್ಯಂತ ಮಹತ್ವಪೂರ್ಣವಾಗಿದೆ. ಸವಾಲುಗಳನ್ನು ಎದುರಿಸಿ ಭಾರತ ಮುನ್ನಡೆಯುತ್ತಿದೆ. ಭಾರತ ಅಸಾಧ್ಯವಾದುದನ್ನೂ ಸಾಧ್ಯ ಮಾಡಿ ತೋರಿಸಿದೆ. ಎಲ್ಲ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ ಎಂದು ಮಾತನಾಡಿದರು.

  • 29 Jan 2021 10:57 AM (IST)

    ಉಪಸಭಾಪತಿ ಸ್ಥಾ‌ನಕ್ಕೆ ಇಂದು ಚುನಾವಣೆ

    ಉಪಸಭಾಪತಿ ಸ್ಥಾ‌ನಕ್ಕೆ ಇಂದು ಚುನಾವಣೆ ನಡೆಯಲಿದೆ. ಪರಿಷತ್​ನಲ್ಲಿ ಬಿಜೆಪಿಗೆ ಜೆಡಿಎಸ್​ಗೆ ಬೆಂಬಲ ನೀಡಲಿದೆ. ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯಿಂದ ಪ್ರಾಣೇಶ್ ಹಾಗೂ ಕಾಂಗ್ರೆಸ್​ ಪಕ್ಷದಿಂದ ಕೆ.ಸಿ.ಕೊಂಡಯ್ಯ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಲಾಪ ಆರಂಭವಾದ ಕೂಡಲೇ ಚುನಾವಣೆ ನಡೆಯಲಿದೆ

  • 29 Jan 2021 10:12 AM (IST)

    ಭ್ರಷ್ಟಾಚಾರ ಸೂಚ್ಯಾಂಕದಲ್ಲಿ ಭಾರತಕ್ಕೆ 86ನೇ ಸ್ಥಾನ

    2020 ರಲ್ಲಿ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ (CPI) 180 ಸ್ಥಾನಗಳಲ್ಲಿ ಭಾರತದ ಶ್ರೇಣಿ ಆರು ಸ್ಥಾನ ಕುಸಿದಿದೆ. ಭಾರತ 86ನೇ ಸ್ಥಾನ ಸಿಕ್ಕಿದೆ. 2020ರ ಅಂತರರಾಷ್ಟ್ರೀಯ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕವನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.

  • 29 Jan 2021 10:11 AM (IST)

    5G ನೆಟ್​ವರ್ಕ್ ಟೆಸ್ಟ್​ನಲ್ಲಿ ಏರ್​ಟೆಲ್​ ಯಶಸ್ವಿ ಕಂಡಿದೆ

    ಗುರವಾರ ಏರ್​ಟೆಲ್​ ನೆಟ್​ವರ್ಕ್​ ಟೆಸ್ಟ್​ ಮಾಡಿದ್ದು, 5G ನೆಟ್​ವರ್ಕ್​ ಟೆಸ್ಟ್​ನಲ್ಲಿ ಏರ್​ಟೆಲ್​ ಯಶಸ್ವಿ ಕಂಡಿದೆ. ಹೈದರಾಬಾದ್​ನಲ್ಲಿ ಭಾರ್ತಿ ಏರ್​ಟೆಲ್​ 5G ನೆಟ್ವರ್ಕ್​ಅನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. ಏರ್​ಟೆಲ್​ ಭಾರತ ಪ್ರಮುಖ 5G ಟೆಲಿಕಾಂ ಆಪರೇಟರ್​ ಆಗಿ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

  • 29 Jan 2021 09:37 AM (IST)

    ಬೆಂಗಳೂರಿನಲ್ಲಿ ಅನಧಿಕೃತ ಧಾರ್ಮಿಕ ಕಟ್ಟಗಳಿಗೆ ಕುತ್ತು!

    ಬೆಂಗಳೂರಿನಲ್ಲಿ ಅನಧಿಕೃತ ಧಾರ್ಮಿಕ ಕಟ್ಟಗಳಿಗೆ ಕುತ್ತು ಬಿದ್ದಿದೆ. ಸುಪ್ರೀಂಕೋರ್ಟ್ ಆದೇಶದಂತೆ ಬಿಬಿಎಂಪಿ ಅನಧಿಕೃತ ಕಟ್ಟಡಗಳ ಸರ್ವೆ ನಡೆಸಿ ಮಾಹಿತಿ ಕಲೆಹಾಕಿದೆ. ನಗರದೊಳಗೆ ಒಟ್ಟು 1,509 ಅನಧಿಕೃತ ಧಾರ್ಮಿಕ ಕಟ್ಟಡಗಳಿದ್ದು, 2009ರ ಸಪ್ಟೆಂಬರ್ 29ರ ನಂತರ ನಿರ್ಮಾಣ ಆಗಿರುವ 214 ಧಾರ್ಮಿಕ ಕಟ್ಟಡಗಳನ್ನ ಕೆಡವಲು ಬಿಬಿಎಂಪಿ ನಿರ್ಧಾರಗೊಳೀಸಿದೆ.

  • 29 Jan 2021 09:32 AM (IST)

    ಮತ್ತೆ ಗಡಿವಿವಾದ ಕೆದಕಿ ಮಹಾರಾಷ್ಟ್ರ ಸರ್ಕಾರದಿಂದ ಕ್ಯಾತೆ!

    50 ವರ್ಷದ ಹಿಂದಿನ ಸಾಕ್ಷ್ಯಚಿತ್ರದ ವಿಡಿಯೋ ರೀ ರಿಲೀಸ್ ಮಾಡುವ ಮೂಲಕ ಮತ್ತೆ ಗಡಿವಿವಾದ ಕೆದಕಿ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆದಿದೆ. ‘ಬೆಳಗಾವಿ ಸೇರಿ ಮರಾಠಿ ಭಾಷಿಕ ಪ್ರದೇಶ ಮಹಾರಾಷ್ಟ್ರದ್ದು‘ ಎಂದು ಬಿಂಬಿಸಲು ಯತ್ನಕ್ಕೆ ಕೈ ಹಾಕಿದೆ. ಸಿಎಂ ಉದ್ಧವ್ ಠಾಕ್ರೆ ಸೂಚನೆಯಂತೆ 35 ನಿಮಿಷದ ‘ಎ ಕೇಸ್ ಫಾರ್ ಜಸ್ಟೀಸ್’ ಹೆಸರಿನ ವಿಡಿಯೋವನ್ನು ಯುಟ್ಯೂಬ್​ಗೆ ಅಪ್‌ಲೋಡ್ ಮಾಡಿದೆ.

  • 29 Jan 2021 09:29 AM (IST)

    ದೆಹಲಿಯಲ್ಲಿ ರೈತರ ಧರಣಿ: ಗಾಜೀಪುರ ಗಡಿಯತ್ತ ಹೊರಟಿರುವ ಹರಿಯಾಣ ರೈತರು

    ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಗಾಜೀಪುರ ಗಡಿಯತ್ತ ಹರಿಯಾಣ ರೈತರು ಧರಣಿಗೆ ಹೊರಟಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಕರೆಗೆ ಬೆಂಬಲಿಸಿ ರೈತರ ಆಗಮಿಸಿದ್ದಾರೆ. ಪ್ರತಿಭಟನೆ ತೀವ್ರಗೊಳಿಸಲು ರೈತ ನಾಯಕರು ನಿರ್ಧಾರ ಮಾಡಿದ್ದಾರೆ. ಹೆದ್ದಾರಿ ತೆರವುಗೊಳಿಸುವಂತೆ ಸರಕಾರ ಸೂಚಿಸಿತ್ತು, ರಾತ್ರಿ ಹೆದ್ದಾರಿ ಖಾಲಿ ಮಾಡುವಂತೆ ಪೊಲೀಸರು ಸೂಚನೆ ನೀಡಿದ್ದರು. ಪೊಲೀಸರ ಸೂಚನೆಗೆ ಬಗ್ಗದೆ ರೈತರ ಹೋರಾಟ ಮುಂದುವರೆಯುತ್ತಿದೆ.

  • 29 Jan 2021 09:21 AM (IST)

    ಉತ್ತರಪ್ರದೇಶ: ಗ್ಯಾಂಗ್​ ರೇಪ್​ ಮಾಡಿದ್ದ ಆರೋಪಿಗಳ ಮೇಲೆ FIR ದಾಖಲು

    ಉತ್ತರಪ್ರದೇಶದಲ್ಲಿ ಗ್ಯಾಂಗ್​ ರೇಪ್ ಮಾಡಿದ್ದ 6 ಆರೋಪಿಗಳನ್ನು ಫೈಜ್​ಗಂಜ್ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ FIR ದಾಖಲಿಸಲಾಗಿದೆ. ಎಲ್ಲಾ 6 ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ. ತನಿಖೆಯ ಸಮಯದಲ್ಲಿ ಬರುವ ಸಂಗತಿಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಎಸ್‌ಪಿ ಸಂಕಲ್ಪ ಶರ್ಮಾ ಹೇಳಿದ್ದಾರೆ.

  • 29 Jan 2021 08:47 AM (IST)

    ದೆಹಲಿ: ಪೊಲೀಸರ ಬಿಗಿ ಬಂದೋಬಸ್ತ್

    ದೆಹಲಿಯಲ್ಲಿ ರೈತರ ಪ್ರತಿಭಟನೆ ವೇಳೆ ಹಿಂಸಾಚಾರ ಹಿನ್ನೆಲೆಯಲ್ಲಿ, ಟಿಕ್ರಿ ಗಡಿಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಗಿದೆ.

  • 29 Jan 2021 08:44 AM (IST)

    ಹೋರಾಟ ಹಿನ್ನೆಲೆ ದೆಹಲಿ ಗಡಿ ಭಾಗಗಳು ಬಂದ್

    ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ ಹಿನ್ನೆಲೆಯಲ್ಲಿ, ದೆಹಲಿಯ ಗಾಜೀಪುರ, ಸಿಂಘು, ಮಂಗೇಶ್, ಸಬೋಲಿ, ಔಚಂಡಿ, ಪಿಯೌ ಮನಿಯಾರಿ ಗಡಿಗಳು ಬಂದ್ ಆಗಿವೆ.

  • 29 Jan 2021 08:39 AM (IST)

    ಇಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

    ಇಂದಿನಿಂದ ಸಂಸತ್‌ನ ಬಜೆಟ್ ಅಧಿವೇಶನವು ಆರಂಭವಾಗಲಿದೆ. ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್‌ನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆದ್ರೆ ಕಾಂಗ್ರೆಸ್, ಎನ್‌ಸಿಪಿ, ನ್ಯಾಷನಲ್ ಕಾನ್ಪರೆನ್ಸ್, ಆಪ್ ಸೇರಿದಂತೆ 16 ಪ್ರತಿಪಕ್ಷಗಳು ರಾಷ್ಟ್ರಪತಿಗಳ ಭಾಷಣದ ಜಂಟಿ ಅಧಿವೇಶನವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸದೇ ಇರೋದನ್ನ ಖಂಡಿಸಿ ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಲು ನಿರ್ಧರಿಸಿವೆ.

  • 29 Jan 2021 08:31 AM (IST)

    ಸಿಲಿಕಾನ್ ಸಿಟಿಯಲ್ಲಿ ಹನಿ ಟ್ರಾಪ್ ಜಾಲ ಪತ್ತೆ

    ಸಿಲಿಕಾನ್ ಸಿಟಿಯಲ್ಲಿ ಹನಿ ಟ್ರಾಪ್ ಜಾಲ ಪತ್ತೆಯಾಗಿದೆ. ಚೆನ್ನೈ ಮೂಲದ ಉದ್ಯಮಿ ಬಳಿ ಹಣ ಮೀಕಲು ಹೋಗಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈಗಾಗಲೇ 34 ಲಕ್ಷ ಹಣ ಸುಲಿಗೆ ಮಾಡಿದ್ದಾರೆ. ಮತ್ತಷ್ಟು ಹಣದ ಬೇಡಿಕೆ ಇಟ್ಟಾಗ ಉದ್ಯಮಿ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ಪೊಲೀಸರು ತನಿಖೆ ನಡೆಸಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ವಿರೇಶ್ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

  • 29 Jan 2021 08:28 AM (IST)

    ಸಿಲಿಕಾನ್ ಸಿಟಿ ಮಂದಿಯನ್ನ ಕಾಡುತ್ತಿದೆ ಶ್ವಾಸಕೋಶದ ಕ್ಯಾನ್ಸರ್!

    ನೀವೆಲ್ಲಾ ಫಾಸ್ಟ್ ಫುಡ್ ಪ್ರಿಯರಾ? ಬಾಯಿ ಚಪ್ಪರಿಸಿಕೊಂಡು ಗೋಬಿ, ನೂಡಲ್ಸ್ ಸೇರಿದಂತೆ ಫ್ರೈಡ್ ಫುಡ್ ಸೇವನೆ ಮಾಡುತ್ತಿದ್ದೀರಾ? ಹಾಗಿದ್ರೆ ಒಮ್ಮೆ ನಿಮ್ಮ ಆರೋಗ್ಯ ಹೇಗಿದೆ ಅಂತ ಪರೀಕ್ಷೆ ಮಾಡ್ಕೊಳ್ಳಿ. ಏಕೆಂದರೆ, ಸಿಲಿಕಾನ್ ಸಿಟಿ ಮಂದಿಯನ್ನ ಕಾಡ್ತಿದೆ ಶ್ವಾಸಕೋಶದ ಕ್ಯಾನ್ಸರ್. ರಾಜ್ಯದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಿದೆ. ಇದಕ್ಕೆ ಮೂಲ ಕಾರಣ ಫ್ರೈಡ್ ಮಾಡಿರೋ ರೆಸಿಪಿಗಳು. ರಾಜ್ಯದಲ್ಲಿ ಬೆಂಗಳೂರಿನ ಮಂದಿಗೆ ಹೆಚ್ಚು ಶ್ವಾಸಕೋಶದ ಸಮಸ್ಯೆಯಿಂದ ಬಳುತ್ತಿದ್ದಾರೆ ಎಂದು ಕಿದ್ವಯಿ ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

  • 29 Jan 2021 08:24 AM (IST)

    ಟಾಲಿವುಡ್ ಸಿನಿಮಾ ಪ್ರದರ್ಶನ ನೀತಿ ನಟ ದರ್ಶನ್​ಗೆ ಬೇಸರ ತರಿಸುತ್ತಿದೆಯಾ?

    ಟಾಲಿವುಡ್​ನ ಹೊಸ ನೀತಿಗಳಿಂದ ಕನ್ನಡ ಚಿತ್ರಗಳಿಗೆ ತೊಂದರೆಯಾಗುತ್ತಿದೆ. ತೆಲುಗು ಚಿತ್ರಗಳು ರಿಲೀಸ್ ಆಗುವಾಗ ಬೇರೆ ಚಿತ್ರಗಳಿಗೆ ಅಲ್ಲಿ ಅವಕಾಶ ಇಲ್ಲ. ಇದರಿಂದ ರಾಬರ್ಟ್ ಸಿನಿಮಾಗೆ ಸಂಕಷ್ಟ ಎದುರಾಗಿದೆ. ಮಾರ್ಚ್‌ 11 ರಂದು ಕನ್ನಡ, ತೆಲುಗಿನಲ್ಲಿ ನಟ ದರ್ಶನ್​ರ ರಾಬರ್ಟ್ ರಿಲೀಸ್​ಗೆ ಸಜ್ಜಾಗಿದೆ. ಆದರೆ ತೆಲುಗಿನಲ್ಲಿ ರಾಬರ್ಟ್ ರಿಲೀಸ್​ಗೆ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಅಲ್ಲಿ ಕನ್ನಡಕ್ಕೆ ಅವಕಾಶ ಸಿಗಲಿಲ್ಲ ಅಂದ್ರೆ, ಕರ್ನಾಟಕದಲ್ಲೂ ತೆಲುಗು ಸಿನಿಮಾಗಳನ್ನ ನಿಯಂತ್ರಿಸಬೇಕೆಂದು ವಾಣಿಜ್ಯ ‌ಮಂಡಳಿಗೆ ಮನವಿ ಮಾಡೋ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಬೆಳಗ್ಗೆ 11 ಗಂಟೆಗೆ ರಾಬರ್ಟ್ ಚಿತ್ರತಂಡ ವಾಣಿಜ್ಯ ‌ಮಂಡಳಿ‌ ಮೆಟ್ಟಿಲೇರಲಿರೋ ಸಾಧ್ಯತೆ ಇದೆ. ಸ್ವತಃ ನಟ ದರ್ಶನ್ ಕೂಡ ಪಾಲ್ಗೊಂಡು ಮನವಿ ಸಲ್ಲಿಸಲಿದ್ದಾರೆ ಎನ್ನುವ ಮಾಹಿತಿಗಳು ತಿಳಿದು ಬಂದಿದೆ.

  • 29 Jan 2021 08:16 AM (IST)

    ಎಂ.ಸಿ ಮನಗೂಳಿ ವಿಧಿವಶ: ಸಿಂದಗಿ ಪಟ್ಟಣದಲ್ಲಿ ಇಂದು ಅಂತ್ಯಕ್ರಿಯೆ

    ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಶಾಸಕ ಎಂ.ಸಿ.ಮನಗೂಳಿರವರ ಅಂತ್ಯಕ್ರಿಯೆಯನ್ನು ಇಂದು ನಡೆಸಲಾಗುತ್ತದೆ. ತಾಲೂಕು ಶಿಕ್ಷಣ ಪ್ರಸಾರ ಮಂಡಳಿ ಆವರಣದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮನಗೂಳಿ ನಿವಾಸದಿಂದ ಅಂತ್ಯಕ್ರಿಯೆ ಸ್ಥಳದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬಳಿಕ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಅಂತ್ಯಕ್ರಿಯೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಭಾಗಿಯಾಗುವ ಸಾಧ್ಯತೆ ಇದೆ.

  • 29 Jan 2021 08:11 AM (IST)

    ಫೆ. 2ರಂದು CBSE ಪರೀಕ್ಷೆ ವೇಳಾಪಟ್ಟಿ ಪ್ರಕಟ

    ಫೆಬ್ರವರಿ 2ರಂದು ಸಿಬಿಎಸ್‌ಇ ಪರೀಕ್ಷೆಯ 10 ಮತ್ತು 12ನೇ ತರಗತಿಗಳ ವೇಳಾಪಟ್ಟಿ ಪ್ರಕಟಗೊಳ್ಳಲಿದೆ. ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯಿಂದ ವೇಳಾಪಟ್ಟಿ ಪ್ರಕಟಗೊಳ್ಳಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್‌ ಹೇಳಿಕೆ ನೀಡಿದ್ದಾರೆ.

  • 29 Jan 2021 08:08 AM (IST)

    ದಾವಣಗೆರೆ: ಫೆ. 15ರಂದು ವಿಧಾನಸೌಧ ಮುತ್ತಿಗೆಗೆ ತೀರ್ಮಾನ

    ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಕುರಿತಂತೆ, ಫೆಬ್ರವರಿ 15ರಂದು ವಿಧಾನಸೌಧ ಮುತ್ತಿಗೆಗೆ ತೀರ್ಮಾನ ಕೈಗೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರದ ಸಮಾವೇಶದಲ್ಲಿ, 10 ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸಿ ಹೋರಾಟಕ್ಕೆ ನಿರ್ಧಾರ ಮಾಡಲಾಗಿದೆ.

  • Published On - Jan 29,2021 7:19 PM

    Follow us
    Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
    Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
    ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
    ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
    ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
    ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
    ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
    ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
    ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
    ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
    ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
    ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
    ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
    ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
    29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
    29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
    ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
    ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
    ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
    ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ