ಸಿಡಿಎಸ್​ ರಾವತ್​ ಹೆಲಿಕಾಪ್ಟರ್​ ಪತನಕ್ಕೆ ಕಾರಣ ಮೋಡ; ಕೊನೇ ಕ್ಷಣದಲ್ಲಿ ಪೈಲಟ್​​ಗಳು ಮಾಡಿಲ್ಲ ತುರ್ತುಕರೆ, ಇಂದು ವರದಿ ಸಲ್ಲಿಸುವ ಸಾಧ್ಯತೆ

| Updated By: Lakshmi Hegde

Updated on: Jan 05, 2022 | 8:02 AM

ಚಾಪರ್​ ಪತನಕ್ಕೆ ಕಾರಣವೇನು ಎಂಬ ಬಗ್ಗೆ ಸೇನೆಯ ಮೂರೂ ವಿಭಾಗಗಳಿಂದ ತನಿಖಾ ತಂಡ ನಿಯೋಜಿಸಲಾಗಿದ್ದು, ಅವರು ತಮ್ಮ ತನಿಖಾ ವರದಿಯನ್ನು ಇಂದು ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಸಿಡಿಎಸ್​ ರಾವತ್​ ಹೆಲಿಕಾಪ್ಟರ್​ ಪತನಕ್ಕೆ ಕಾರಣ ಮೋಡ; ಕೊನೇ ಕ್ಷಣದಲ್ಲಿ ಪೈಲಟ್​​ಗಳು ಮಾಡಿಲ್ಲ ತುರ್ತುಕರೆ, ಇಂದು ವರದಿ ಸಲ್ಲಿಸುವ ಸಾಧ್ಯತೆ
ಹೆಲಿಕಾಪ್ಟರ್​ ಪತನ
Follow us on

ದೆಹಲಿ: ಡಿಸೆಂಬರ್​  8 ರಂದು ತಮಿಳುನಾಡಿವ ಕೂನೂರ್​ ಬಳಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್​, ಅವರ ಪತ್ನಿ ಮತ್ತು ಇತರ 12 ಸೇನಾ ಅಧಿಕಾರಿಗಳು ಮೃತಪಟ್ಟ ಪ್ರಕರಣದ ತನಿಖಾ ವರದಿಯನ್ನು ಇಂದು ಮೂರೂ ಸೇವೆಗಳ (ಭೂಸೇನೆ, ವಾಯುಸೇನೆ, ನೌಕಾಪಡೆ) ತನಿಖಾ ತಂಡ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ರಿಗೆ ಸಲ್ಲಿಸಲಿದೆ ಎಂದು ಹೇಳಲಾಗಿದೆ. ಡಿ.8ರಂದು ನಡೆದ ಈ ದುರ್ಘಟನೆಯಿಂದ ರಾಷ್ಟ್ರಕ್ಕೆ ಶಾಕ್​ ಆಗಿತ್ತು. ಅಂದು ಪತನವಾಗಿದ್ದು Mi-17V5 ಸೇನಾ ಚಾಪರ್​. ಇದು ವಿವಿಐಪಿ ಹೆಲಿಕಾಪ್ಟರ್ ಆಗಿದ್ದು, ಪ್ರಮುಖ ವ್ಯಕ್ತಿಗಳು ಪ್ರಯಾಣ ಮಾಡುವಾಗ ಎಲ್ಲ ರೀತಿಯ ಪರಿಶೀಲನೆ ಮಾಡಿಯೇ ಕಳಿಸಲಾಗುತ್ತದೆ. ಹಾಗಿದ್ದಾಗ್ಯೂ ಕೂಡ ತಮಿಳುನಾಡಿನ ಬಳಿ ಪತನಗೊಂಡು ಪ್ರಮುಖ ಅಧಿಕಾರಿಗಳು ಮೃತಪಟ್ಟಿದ್ದರು.

ಚಾಪರ್​ ಪತನಕ್ಕೆ ಕಾರಣವೇನು ಎಂಬ ಬಗ್ಗೆ ಸೇನೆಯ ಮೂರೂ ವಿಭಾಗಗಳಿಂದ ತನಿಖಾ ತಂಡ ನಿಯೋಜಿಸಲಾಗಿದ್ದು, ಅವರು ತಮ್ಮ ತನಿಖಾ ವರದಿಯನ್ನು ಇಂದು ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಇನ್ನು ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಮತ್ತು ಇತರ ಸೇನಾಧಿಕಾರಿಗಳು ಪ್ರಯಾಣ ಮಾಡುತ್ತಿದ್ದ ಈ ಚಾಪರ್​ ತುಂಬ ಕೆಳಗೆ ಹೋಗುತ್ತಿತ್ತು. ಅಲ್ಲಿಯೇ ಇದ್ದ ರೈಲ್ವೆ ಹಳಿಯನ್ನು ಅನುಸರಿಸಿ ಮೇಲೆ ಹಾರುತ್ತಿತ್ತು. ಆದರೆ ಅವರು ಹೋಗುತ್ತಿದ್ದ ದಾರಿಯಲ್ಲಿ ಒಮ್ಮೆಲೇ ಮೋಡದ ಹೊದಿಕೆ ಎದುರು ಬಂದಿದ್ದರಿಂದ, ಅದನ್ನು ತಪ್ಪಿಸಲು ಹೆಲಿಕಾಪ್ಟರ್​ ಪೈಲಟ್​​ಗಳು ಪ್ರಯತ್ನ ಪಟ್ಟರು ಇದೇ ಅಪಘಾತಕ್ಕೆ ಕಾರಣ ಎಂದು ಮೂಲಗಳಿಂದ ತಿಳಿದುಬಂದಿದ್ದಾಗಿ ಎಎನ್​​ಐ ವರದಿ ಮಾಡಿದೆ. ಅಷ್ಟೇ ಅಲ್ಲ, ಈ ಹೆಲಿಕಾಪ್ಟರ್​​ನಲ್ಲಿ ಇದ್ದವರೆಲ್ಲ ಮಾಸ್ಟರ್​ ಗ್ರೀನ್​ ವರ್ಗಕ್ಕೆ ಸೇರಿದವರು. ಹೆಲಿಕಾಪ್ಟರ್​, ವಿಮಾನ ಸಾರಿಗೆಯಲ್ಲಿ ಅತ್ಯಂತ ಉತ್ತಮ ಪೈಲಟ್​ಗಳು ಎಂದು ಗುರುತಿಸಿಕೊಂಡವರು. ಕಡಿಮೆ ಗೋಚರತೆಯ ಸಂದರ್ಭದಲ್ಲೂ ಇವರು ಹೆಲಿಕಾಪ್ಟರ್​​ನ್ನು ಕೆಳಗೆ ಇಳಿಸುವಷ್ಟು ನುರಿತರು ಆಗಿದ್ದರೂ. ಅವರು ಸಾಗುತ್ತಿದ್ದ ಮಾರ್ಗದಲ್ಲಿಯೇ ಹೆಲಿಕಾಪ್ಟರ್ ಕೆಳಗೆ ಇಳಿಸಬಹುದಿತ್ತು. ಆದರೆ ಮೋಡದಿಂದ ಹೊರಗೆ ಹೋಗುವ ಪ್ರಯತ್ನ ಮಾಡಿದರು. ಇದೇ ಕಾರಣಕ್ಕೆ ಕೆಳಗೆ ಬಿದ್ದು, ಬಂಡೆಗೆ ಅಪ್ಪಳಿಸಿದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ ಎಂದೂ ಎಎನ್​ಐ ತಿಳಿಸಿದೆ.

ತುರ್ತು ಕರೆ ಮಾಡಿಲ್ಲ
ಚಾಪರ್​ ಅಪಘಾತದ ಕೊನೇ ಹಂತದಲ್ಲಿ ಅದರಲ್ಲಿ ಇದ್ದ ಪೈಲಟ್​​ಗಳು ಸಮೀಪದ ಏರ್​ಸ್ಟೇಶನ್​​ಗಳಿಗೆ ಯಾವುದೇ ಕರೆ ಮಾಡಿಲ್ಲ. ಹೀಗಾಗಿ ಅವರಿಗೆ ಕೊನೇ ಕ್ಷಣದವರೆಗೂ ಎಮರ್ಜನ್ಸಿ ಇದೆ ಎಂದು ಅನ್ನಿಸಲಿಲ್ಲ ಎನ್ನಿಸುತ್ತದೆ. ಎಲ್ಲವೂ ಒಂದೇ ಬಾರಿಗೆ ಆಗಿಹೋಯಿತು ಎಂದೂ ತನಿಖಾ ತಂಡಗಳ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಎಎನ್​ಐ ತಿಳಿಸಿದೆ. ಇನ್ನು ಪ್ರಕರಣದ ತನಿಖೆಯ ನೇತೃತ್ವವನ್ನು ಭಾರತೀಯ ವಾಯು ಸೇನೆ (IAF) ಅಧಿಕಾರಿ ವಹಿಸಿದ್ದರು. ಹಾಗೇ, ಈ ತಂಡದಲ್ಲಿ ನೇವಿ ಚಾಪರ್ ಪೈಲಟ್​ ಮತ್ತು ಸೇನಾ ಅಧಿಕಾರಿಯೊಬ್ಬರು ಇದ್ದಾರೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: Petrol Rate: ಇಂದು ಸಹ ಇಂಧನ ದರ ಸ್ಥಿರ; ನಿಮ್ಮೂರಿನಲ್ಲಿ ಲೀಟರ್​ ಪೆಟ್ರೋಲ್​ ಬೆಲೆ ಎಷ್ಟಿದೆ? ಇಲ್ಲಿದೆ ವಿವರ

Published On - 8:02 am, Wed, 5 January 22