ದೆಹಲಿ: ವಿವಿಧ ಧರ್ಮಗಳಿಗೆ ಸೇರಿದವರು ವಿವಾಹ ವಿಚ್ಛೇದನ ಮತ್ತು ಜೀವನಾಂಶ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಇರುವ ಕಾನೂನುಗಳಲ್ಲಿ ಏಕರೂಪತೆ ತರಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಿಚಾರಣೆಗೆ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ವಿವರಣೆ ನೀಡುವಂತೆ ಸೂಚಿಸಿದೆ.
ಈ ಕುರಿತು ಅತ್ಯಂತ ಎಚ್ಚರಿಕೆಯಿಂದ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುತ್ತಿದೆ ಎಂದು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಹೇಳಿದರು. ವಿವಾಹ ವಿಚ್ಛೇದನ ಮತ್ತು ಜೀವನಾಂಶಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಏಕರೂಪದ ಕಾನೂನು ಜಾರಿ ಮಾಡಬೇಕು ಎಂದು ಕೋರಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು. ಈ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ.
ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ವಾದಗಳನ್ನು ಆಲಿಸಲು ನ್ಯಾಯಾಲಯ ಅನುಮತಿ ನೀಡುತ್ತದೆ. ಆದರೆ ಹಿಂದೂ ಮತ್ತು ಮುಸ್ಲಿಂ ಸಮುದಾಯವನ್ನು ಈ ವಿಚಾರದಲ್ಲಿ ಏಕೆ ಒಂದೇ ರೀತಿ ನೋಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು. ‘ಹಿಂದೂ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳಲ್ಲಿರುವ ಯಾವುದನ್ನು ಈ ನಿಟ್ಟಿನಲ್ಲಿ ಅನ್ವಯಿಸಬೇಕು ಎಂಬುದನ್ನು ಹೇಗೆ ನಿರ್ಧರಿಸಲು ಸಾಧ್ಯ’ ಎಂದು ವಿವರಿಸುವಂತೆ ಅರ್ಜಿದಾರರಿಗೆ ಮುಖ್ಯ ನ್ಯಾಯಮೂರ್ತಿ ಸೂಚಿಸಿದರು.
ಯಾವುದೇ ಧರ್ಮವು ವ್ಯಕ್ತಿಯೊಬ್ಬನಿಗೆ ಒದಗಿಸುವ ಹಕ್ಕುಗಳು, ಸಂವಿಧಾನ ಖಾತ್ರಿಪಡಿಸಿರುವ ಮತ್ತೊಬ್ಬರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವಂತಿದ್ದರೆ, ಅಂಥದ್ದನ್ನು ಪರಿಗಣಿಸಬಾರದು ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು. ವಾದವನ್ನು ಪೂರ್ಣ ಆಲಿಸಿದ ನಂತರ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ‘ನಾವು ಅತ್ಯಂತ ಎಚ್ಚರದಿಂದ ನೊಟೀಸ್ ಜಾರಿ ಮಾಡುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.
(ವಿವಿಧ ಧರ್ಮಗಳ) ವೈಯಕ್ತಿಕ ಕಾನೂನುಗಳಲ್ಲಿ ಹಸ್ತಕ್ಷೇಪ ಮಾಡದೇ ತಾರತಮ್ಯ ಉಂಟು ಮಾಡುವಂಥ ಅಭ್ಯಾಸಗಳನ್ನು ನ್ಯಾಯಾಲಯ ಹೇಗೆ ನಿವಾರಿಸಲು ಸಾಧ್ಯ ಎಂಬ ಬಗ್ಗೆ ಪರಿಶೀಲಿಸುವಂತೆ ನ್ಯಾಯಪೀಠ ಅರ್ಜಿದಾರರು ಮತ್ತು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತು.
ಸಂವಿಧಾನದ 14ನೇ ಪರಿಚ್ಛೇದವು (ಕಾನೂನಿನ ಎದುರು ಎಲ್ಲರೂ ಸಮಾನರು) ಸರ್ಕಾರದ ಅಧಿಕಾರ ವ್ಯಾಪ್ತಿಯನ್ನು ಮಿತಗೊಳಿಸುತ್ತದೆಯೇ? ಮತ್ತು ಸಂವಿಧಾನದ 14 ಮತ್ತು 15ನೇ ಪರಿಚ್ಛೇದದ (15ನೇ ಪರಿಚ್ಛೇದ- ಧರ್ಮದ ಆಧಾರದ ಮೇಲೆ ತಾರತಮ್ಯ ಭಾವನೆಯಿಂದ ನೋಡುವಂತಿಲ್ಲ) ಆಧಾರದ ಮೇಲೆ ವಿವಾಹ ವಿಚ್ಛೇದನ ಮಂಜೂರು ಮಾಡಲು ಇರುವ ಕಾರಣಗಳನ್ನು ಹೆಚ್ಚಿಸಬೇಕೆ ಎಂಬ ಬಗ್ಗೆಯೂ ನ್ಯಾಯಪೀಠ ವಿವರಣೆ ಕೋರಿತು.
ಅರ್ಜಿದಾರರ ಪರವಾಗಿ ವಾದಿಸಿದ ಮೀನಾಕ್ಷಿ ಅರೋರ, ಸಂವಿಧಾನಾತ್ಮಕವಾದ ಕೆಲ ಹಕ್ಕುಗಳು ಮತ್ತು (ವ್ಯಕ್ತಿಯ) ಘನತೆಯನ್ನು ಸರ್ಕಾರ ಖಾತ್ರಿಪಡಿಸಬೇಕು. ಧಾರ್ಮಿಕ ಹಕ್ಕುಗಳು ಸಂವಿಧಾನಾತ್ಮಕ ಹಕ್ಕುಗಳ ಮೇಲೆ ಸವಾರಿ ಮಾಡುವಂಥ ಪರಿಸ್ಥಿತಿ ಉದ್ಭವಿಸಿದರೆ ಸರ್ಕಾರ ಮಧ್ಯಪ್ರವೇಶಿಸಿ, ಸಂವಿಧಾನಾತ್ಮಕ ಹಕ್ಕುಗಳಿಗೆ ಬಾಧಕವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಹಿಂದೂ ವೈಯಕ್ತಿಕ ಕಾನೂನನ್ನು ವ್ಯವಸ್ಥಿತವಾಗಿ ದಾಖಲು ಮಾಡಲಾಗಿದೆ. ಆದರೆ ಮುಸ್ಲಿಂ ಕಾನೂನು ಇನ್ನೂ ದಾಖಲಾಗಬೇಕಿದೆ ಎಂದು ಅವರು ವಿವರಿಸಿದರು.
ಈ ಕುರಿತು ಕೇಂದ್ರ ಗೃಹ ಇಲಾಖೆ, ಕಾನೂನು ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ನಾಯಕಿ ಮತ್ತು ವಕೀಲರಾದ ಅಶ್ವಿನಿ ಉಪಾಧ್ಯಾಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸಂವಿಧಾನದ 14 ಮತ್ತು 15ನೇ ಪರಿಚ್ಛೇದಗಳು ಹಾಗೂ ಅಂತರರಾಷ್ಟ್ರೀಯ ಒಪ್ಪಂದಗಳಿಗೆ ವ್ಯತಿರಿಕ್ತವಾಗಿರುವ (ಧಾರ್ಮಿಕ) ವೈಯಕ್ತಿಕ ಕಾನೂನುಗಳನ್ನು ಅನೂರ್ಜಿತಗೊಳಿಸಬೇಕು ಎಂದು ಅವರು ವಿನಂತಿಸಿದ್ದಾರೆ.
Published On - 5:17 pm, Wed, 16 December 20