ಥಿಂಪು ಮಾರ್ಚ್ 22: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಭೂತಾನ್‌ನ (Bhutan) ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋವನ್ನು (Order of the Druk Gyalpo) ಸ್ವೀಕರಿಸಿದ್ದು, ಈ ಗೌರವವನ್ನು ಪಡೆದ ಮೊದಲ ಭೂತನ್ ದೇಶದ ಹೊರಗಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ ಭೂತಾನ್‌ನ ಪ್ರತಿಷ್ಠಿತ ನಾಗರಿಕ ಗೌರವವನ್ನು ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಉಭಯ ನಾಯಕರು ರಾಜಧಾನಿಯಲ್ಲಿ ಭೇಟಿಯಾದ ನಂತರ ಭೂತಾನ್‌ನ ರಾಜ ಜಿಗ್ಮೆ ಅವರು ಪಿಎಂ ಮೋದಿಯವರಿಗೆ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ಪ್ರಶಸ್ತಿಯನ್ನು ನೀಡಿದರು. ಸ್ಥಾಪಿತವಾದ ಶ್ರೇಯಾಂಕ ಮತ್ತು ಪ್ರಾಶಸ್ತ್ಯದ ಪ್ರಕಾರ, ಆರ್ಡರ್ ಆಫ್ ದ ಡ್ರುಕ್ ಗ್ಯಾಲ್ಪೋ ಅನ್ನು ಜೀವಮಾನದ ಸಾಧನೆಗಾಗಿ ನೀಡುವ ಪ್ರಶಸ್ತಿಯಾಗಿ ಸ್ಥಾಪಿಸಲಾಯಿತು. ಇದು ಭೂತಾನ್‌ನಲ್ಲಿ ಅತ್ಯುನ್ನತ ಗೌರವವಾಗಿದೆ.
Honoured to be conferred with ‘Order of the Druk Gyalpo’ Award by Bhutan. I dedicate it to 140 crore Indians. https://t.co/gNa7YlcFfG
— Narendra Modi (@narendramodi) March 22, 2024
ಭೂತಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಭೂತಾನ್‌ನ ರಾಜ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರು ಮೋದಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಥಿಂಪುವಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮೋದಿ, “ಈ ಗೌರವ ನನ್ನ ವೈಯಕ್ತಿಕ ಸಾಧನೆಯಲ್ಲ, ಇದು ಭಾರತ ಮತ್ತು 140 ಕೋಟಿ ಭಾರತೀಯರ ಗೌರವ. ಭೂತಾನ್‌ನ ಈ ಮಹಾನ್ ಭೂಮಿಯಲ್ಲಿರುವ ಎಲ್ಲಾ ಭಾರತೀಯರ ಪರವಾಗಿ ನಾನು ಈ ಗೌರವವನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ ಮತ್ತು ಈ ಗೌರವಕ್ಕಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ”ಎಂದಿದ್ದಾರೆ.
“ಇಂದು ನನ್ನ ಜೀವನದಲ್ಲಿ ಬಹಳ ದೊಡ್ಡ ದಿನವಾಗಿದೆ, ನನಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವವನ್ನು ನೀಡಲಾಗಿದೆ. ಪ್ರತಿಯೊಂದು ಪ್ರಶಸ್ತಿಯು ವಿಶೇಷವಾಗಿದೆ, ಆದರೆ ನೀವು ಬೇರೆ ದೇಶದಿಂದ ಪ್ರಶಸ್ತಿಯನ್ನು ಸ್ವೀಕರಿಸಿದಾಗ, ಎರಡೂ ದೇಶಗಳು ಸರಿಯಾದ ಹಾದಿಯಲ್ಲಿ ಸಾಗುತ್ತಿವೆ ಎಂಬುದನ್ನು ಇದು ತೋರಿಸುತ್ತದೆ. ಪ್ರತಿಯೊಬ್ಬ ಭಾರತೀಯನ ಪರವಾಗಿ ನಾನು ಈ ಗೌರವವನ್ನು ಸ್ವೀಕರಿಸುತ್ತೇನೆ. ಇದಕ್ಕಾಗಿ ಧನ್ಯವಾದಗಳು”ಎಂದು ಅವರು ಹೇಳಿದರು.
ಮಾರ್ಚ್ 22-23 ರವರೆಗೆ ಭೂತಾನ್‌ಗೆ ರಾಜ್ಯ ಪ್ರವಾಸದಲ್ಲಿ ಮೋದಿ ಇಂದು (ಶುಕ್ರವಾರ) ಪಾರೋಗೆ ಆಗಮಿಸಿದರು. ಈ ಭೇಟಿಯು ಭಾರತ ಮತ್ತು ಭೂತಾನ್ ನಡುವಿನ ನಿಯಮಿತ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯಕ್ಕೆ ಅನುಗುಣವಾಗಿದ್ದು, ನೆರೆಹೊರೆಯ ಮೊದಲ ನೀತಿಗೆ ಸರ್ಕಾರವು ಒತ್ತು ನೀಡುತ್ತದೆ. ಪಾರೋ ವಿಮಾನ ನಿಲ್ದಾಣದಲ್ಲಿ ಪ್ರಧಾನ ಮಂತ್ರಿ ತ್ಶೆರಿಂಗ್ ಟೋಬ್ಗೇ ಅವರು ಪ್ರಧಾನಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ಭೇಟಿಯ ವೇಳೆ ಪ್ರಧಾನಿ ಮೋದಿ, ಪಿಎಂ ಟೊಬ್ಗೇ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಪ್ರಶಸ್ತಿಯನ್ನು ಇಲ್ಲಿಯವರೆಗೆ ಕೇವಲ ನಾಲ್ಕು ಗಣ್ಯ ವ್ಯಕ್ತಿಗಳಿಗೆ ಮಾತ್ರ ನೀಡಲಾಗಿದೆ. 2008 ರಲ್ಲಿ ಹರ್ ಮೆಜೆಸ್ಟಿ ರಾಯಲ್ ಕ್ವೀನ್ ಗ್ರ್ಯಾಂಡ್ ಮದರ್ ಆಶಿ ಕೆಸಾಂಗ್ ಚೋಡೆನ್ ವಾಂಗ್‌ಚುಕ್ ಪ್ರಶಸ್ತಿ ಸ್ವೀಕರಿಸಿದ್ದರು. 2008 ರಲ್ಲಿ ಜೆ ತ್ರಿಜೂರ್ ಟೆಂಜಿನ್ ಡೆಂಡಪ್ (68 ನೇ ಭೂತಾನ್ ನ ಜೆ ಖೆನ್ಪೋ) ಮತ್ತು 2018 ರಲ್ಲಿ ಅವರ ಜೆ ಖೆನ್ಪೋ ಟ್ರುಲ್ಕು ನ್ಗಾವಾಂಗ್ ಜಿಗ್ಮೆ ಚೋಡ್ರಾ ಸ್ವೀಕರಿಸಿದ್ದಾರೆ. ಜೆ ಖೆನ್ಪೋ ಭೂತಾನ್ ನ ಕೇಂದ್ರ ಸನ್ಯಾಸಿಗಳ ಮುಖ್ಯ ನಾಯಕರಾಗಿದ್ದಾರೆ.
Published On - 4:19 pm, Fri, 22 March 24