
ನವದೆಹಲಿ, ಅಕ್ಟೋಬರ್ 24: ದೆಹಲಿಯ ಪ್ರಸಿದ್ಧ ಭಾರತ್ ಮಂಟಪದಲ್ಲಿ ನಡೆದ ‘ಚಿನ್ಮಯ ಅಮೃತ ಮಹೋತ್ಸವ’ ಜಾಗತಿಕ ಶೃಂಗಸಭೆಯಲ್ಲಿ ಅತ್ಯಂತ ಅಪರೂಪದ ಹಾಗೂ ಭಾವನಾತ್ಮಕ ಸನ್ನಿವೇಶವೊಂದು ಸಾಕ್ಷಿಯಾಯಿತು. 33 ವರ್ಷಗಳ ಹಿಂದೆಯೇ (1993 ರಲ್ಲಿ) ದೈವಾಧೀನರಾದ ಖ್ಯಾತ ಆಧ್ಯಾತ್ಮಿಕ ಗುರು ಪೂಜ್ಯ ಸ್ವಾಮಿ ಚಿನ್ಮಯಾನಂದ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಸಂವಾದ ನಡೆಸಿದರು.
ಇದು ಯಾವುದೇ ಪವಾಡವಲ್ಲ, ಬದಲಾಗಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಅತ್ಯಾಧುನಿಕ 3D ಹೊಲೊಗ್ರಾಮ್ (Hologram / Holobot) ತಂತ್ರಜ್ಞಾನದ ಮೂಲಕ ಸಾಧ್ಯವಾದ ಅದ್ಭುತ ದೃಶ್ಯ ವೈಭವ. ವೇದಿಕೆಯಲ್ಲಿದ್ದ 9,000ಕ್ಕೂ ಹೆಚ್ಚು ಭಕ್ತರು ಮತ್ತು ಗಣ್ಯರ ಸಮ್ಮುಖದಲ್ಲಿ ಸ್ವಾಮೀಜಿಯವರ ಜೀವಂತ ಆಕೃತಿ ಪ್ರತ್ಯಕ್ಷವಾಗಿ ಪ್ರಧಾನಿಯವರೊಂದಿಗೆ ಮಾತನಾಡುತ್ತಿದ್ದಂತೆ ಇಡೀ ಸಭಾಂಗಣ ಮೂಕವಿಸ್ಮಿತವಾಯಿತು.
1993ರ ಐತಿಹಾಸಿಕ ಭೇಟಿಯನ್ನು ನೆನಪಿಸಿಕೊಂಡ ಗುರುದೇವ್
ಸಂವಾದದ ವೇಳೆ ಪ್ರಧಾನಿ ಮೋದಿ ಸ್ವಾಮೀಜಿಯವರಲ್ಲಿ ಆಶೀರ್ವಾದ ಕೋರಿದಾಗ, ಹೊಲೊಗ್ರಾಫಿಕ್ ಅವತಾರವು 33 ವರ್ಷಗಳ ಹಿಂದಿನ ನೈಜ ಘಟನೆಯನ್ನು ಮೆಲುಕು ಹಾಕಿತು.
ವಡೋದರಾ ಭೇಟಿಯ ನೆನಪು: ನೀವು ಫೆಬ್ರವರಿ 1993 ರಲ್ಲಿ ಚಿಕಾಗೋದ ವಿಶ್ವ ಧರ್ಮ ಸಂಸತ್ತಿನ ಶತಮಾನೋತ್ಸವಕ್ಕೆ ನನ್ನನ್ನು ಆಹ್ವಾನಿಸಲು ವಡೋದರಾಕ್ಕೆ ಬಂದಿದ್ದ ಘಟನೆ ನನಗೆ ನೆನಪಿದೆ. ಆಗ ನಾನು ನಿಮಗೆ ಹೇಳಿದ್ದೆ ನನಗೀಗ ವಯಸ್ಸಾಗಿದೆ. ಈ ವೃದ್ಧ ದೇಹದಿಂದ ಅಷ್ಟು ದೊಡ್ಡ ಜವಾಬ್ದಾರಿ ಹೊರಲು ಸಾಧ್ಯವಿಲ್ಲ, ಇನ್ನು ಮುಂದೆ ಹಿಂದೂ ಯುವಕರು ಈ ದೇಶದ ಹೊಣೆ ಹೊರಬೇಕು ಎಂದು. ಇಂದು ನೋಡಿದರೆ, 1993 ರಲ್ಲಿ ನನ್ನನ್ನು ಭೇಟಿಯಾಗಿದ್ದ ಆ ವ್ಯಕ್ತಿಯೇ ಭಾರತದ ಪ್ರಧಾನಿಯಾಗಿರುವುದು ನನಗೆ ಅಪಾರ ಸಂತಸ ತಂದಿದೆ ಎಂದು ಹೊಲೊಬೋಟ್ ನುಡಿಯಿತು.
ಇದನ್ನೂ ಓದಿ: ‘ಉತ್ತಮ ಆಡಳಿತಕ್ಕೆ ರಾಮರಾಜ್ಯವೇ ಮಾನದಂಡ’; ಪ್ರಧಾನಿ ಮೋದಿ ದಸರಾ ಸಂದೇಶ
ಸನಾತನ ಧರ್ಮದ ಪುನರ್ನಿರ್ಮಾಣ: ಸನಾತನ ಧರ್ಮವು ಭವ್ಯ ಪ್ರಾಚೀನ ದೇವಾಲಯದಂತಿದೆ. ಶತಮಾನಗಳ ನಿರ್ಲಕ್ಷ್ಯದಿಂದ ಕುಸಿದಿರುವ ಅದರ ಕಂಬಗಳನ್ನು ಪುನರ್ನಿರ್ಮಿಸುವುದು ಇಂದಿನ ಯುವಜನತೆಯ ಕರ್ತವ್ಯ. ಪ್ರತಿಯೊಂದು ಜಿಲ್ಲೆಯಲ್ಲೂ ಉತ್ಸಾಹಿ ಯುವಕರು ಒಟ್ಟಾಗಿ ಶ್ರಮಿಸಬೇಕು ಎಂದು ಸ್ವಾಮೀಜಿ ಸಂದೇಶ ನೀಡಿದರು.
ಮೇಲ್ಮಟ್ಟದಲ್ಲಿ ದೇಶ ಮುನ್ನಡೆಸುವ ವ್ಯಕ್ತಿ ಯಾವಾಗಲೂ ಒಂಟಿ ಎಂಬುದನ್ನು ನೆನಪಿಡಿ. ಇಡೀ ಭಾರತ ನಿಮ್ಮೊಂದಿಗಿದೆ. ಭಕ್ತರಿಗೆ ಶ್ರೀಖಂಡ ಪ್ರಸಾದ ನೀಡಲು ಹೇಳಿದ್ದೇನೆ, ಇಂದು ಉಪವಾಸವೆಂದು ಹೇಳದೆ ನೀವು ಅದನ್ನು ಸೇವಿಸಬೇಕು” ಎಂದು ಹೊಲೊಬೋಟ್ ಪ್ರಧಾನಿಗೆ ಆಶೀರ್ವಾದ ಮಾಡಿತು.
ನಾನು ಕಾಲದ ಹಿಂದಕ್ಕೆ ಮರಳಿದೆ: ಪ್ರಧಾನಿ ಮೋದಿ ಭಾವುಕ
ಈ ಅಪರೂಪದ ಸಂವಾದದಿಂದ ಭಾವುಕರಾದ ಪ್ರಧಾನಿ ನರೇಂದ್ರ ಮೋದಿ, ಪೂಜ್ಯ ಗುರುದೇವರನ್ನು ಈ ರೂಪದಲ್ಲಿ ನೋಡಿ ಮಾತನಾಡಿಸಿದ್ದು ನನಗೆ 33 ವರ್ಷಗಳ ಹಿಂದಕ್ಕೆ ಮರಳಿ ಹೋದ ಅನುಭವ ನೀಡಿತು. 1993 ರಲ್ಲಿ ನಾನು ವಡೋದರಾದಲ್ಲಿ ಅವರನ್ನು ಭೇಟಿಯಾಗಿ ಚಿಕಾಗೋ ಧರ್ಮ ಸಂಸತ್ತಿಗೆ ಆಹ್ವಾನಿಸಿದ್ದೆ. ಅವರು ಒಪ್ಪಿಕೊಂಡಿದ್ದರೂ, ದುರದೃಷ್ಟವಶಾತ್ ಕಾರ್ಯಕ್ರಮಕ್ಕೆ ಕೆಲವೇ ವಾರಗಳ ಮೊದಲು (ಆಗಸ್ಟ್ 3, 1993) ಅವರು ನಮ್ಮನ್ನು ಅಗಲಿದರು. ಇಂದು ತಂತ್ರಜ್ಞಾನದ ಮೂಲಕ ಅವರ ಆಶೀರ್ವಾದ ಪಡೆದದ್ದು ನನ್ನ ಜೀವನದ ವಿಶಿಷ್ಟ ಆಧ್ಯಾತ್ಮಿಕ ಕ್ಷಣ ಎಂದು ಚಿನ್ಮಯ ಮಿಷನ್‌ನ ಕಾರ್ಯವನ್ನು ಶ್ಲಾಘಿಸಿದರು.
ಏನಿದು ಹೊಲೊಗ್ರಾಮ್ ಹಾಗೂ ಹೊಲೊಬೋಟ್ ತಂತ್ರಜ್ಞಾನ?
3D ಪ್ರೊಜೆಕ್ಷನ್: ಹೊಲೊಗ್ರಾಮ್ ತಂತ್ರಜ್ಞಾನವು ವಿಶೇಷ ಲೇಸರ್ ಕಿರಣಗಳು, ಹೈ-ಡೆಫಿನಿಷನ್ ಕ್ಯಾಮೆರಾಗಳು ಮತ್ತು ಡಿಜಿಟಲ್ ಪ್ರೊಜೆಕ್ಟರ್‌ಗಳ ಮೂಲಕ ವ್ಯಕ್ತಿಯೊಬ್ಬರ ತ್ರಿಪರಿಮಾಣ (3D) ಆಕೃತಿಯನ್ನು ಗಾಳಿಯಲ್ಲೇ ನೈಜವಾಗಿ ತೇಲಾಡುವಂತೆ ಸೃಷ್ಟಿಸುತ್ತದೆ.
ಎಐ ಸಂಯೋಜನೆ (Holobot): ಸ್ವಾಮಿ ಚಿನ್ಮಯಾನಂದರ ಹಳೆಯ ಭಾಷಣಗಳು, ವೀಡಿಯೊಗಳು, ಧ್ವನಿ ಮಾದರಿಗಳು ಮತ್ತು ಹಾವಭಾವಗಳನ್ನು ಕೃತಕ ಬುದ್ಧಿಮತ್ತೆಗೆ (AI) ಅಳವಡಿಸಿ ಈ ‘ಹೋಲೋಬೋಟ್’ ರೂಪಿಸಲಾಗಿತ್ತು. ಎದುರಿನ ವ್ಯಕ್ತಿಯ ಧ್ವನಿಗೆ ತಕ್ಕಂತೆ ನೈಜ ವ್ಯಕ್ತಿಯಂತೆಯೇ ಪ್ರತಿಕ್ರಿಯಿಸುವಂತೆ ಇದನ್ನು ಪ್ರೋಗ್ರಾಂ ಮಾಡಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ