ನವದೆಹಲಿ: ಹೊಸ ಶಿಕ್ಷಣ ನೀತಿಯಲ್ಲಿ How to think ಬಗ್ಗೆ ಒತ್ತು ನೀಡಲಾಗಿದೆ, ವಿದ್ಯಾರ್ಥಿಗಳಿಗೆ ರಿ-ಸ್ಕಿಲ್, ಅಪ್-ಸ್ಕಿಲ್‌ನ ಅವಶ್ಯಕತೆ ಇದ್ದು, ದೇಶಕ್ಕೆ ಉತ್ತಮ ವಿದ್ಯಾರ್ಥಿಗಳು, ಕೌಶಲ್ಯವುಳ್ಳವರು ಹಾಗೂ ಉತ್ತಮ ವ್ಯಕ್ತಿಗಳನ್ನು ಕೊಡುವ ಸಾಮರ್ಥ್ಯ ಶಿಕ್ಷಕರಿಗೆ ಇದೆ. ಹೀಗಾಗಿ ಹೊಸ ಶಿಕ್ಷಣ ನೀತಿ ಜಾರಿಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವಾಸಿಗಳಿಗೆ ಆಹ್ವಾನ ನೀಡಿದ್ದಾರೆ.
ಹೊಸ ಶಿಕ್ಷಣ ನೀತಿಯಿಂದ ಬಲಿಷ್ಠ ಭಾರತ
ಹೊಸದಾಗಿ ಜಾರಿಗೊಳಿಸಲಾಗುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಮಾಜದಲ್ಲಿ ಯಾರೂ ಸಣ್ಣವರು, ದೊಡ್ಡವರು ಭೇದಭಾವ ಇಲ್ಲ ಹಾಗೇನೆ ಹೊಸ ಶಿಕ್ಷಣ ನೀತಿಯಲ್ಲಿ ಯಾವುದೇ ಭೇದಭಾವ ಇಲ್ಲ. ಈ ಹೊಸ ಶಿಕ್ಷಣ ನೀತಿ ಭಾರತವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ. ಆದರೆ ಇದನ್ನು ಜಾರಿಗೊಳಿಸುವುದು ಈಗ ನಮಗಿರುವ ಸವಾಲಾಗಿದ್ದು, ಇದನ್ನು ಜಾರಿಗೆ ತರುವಲ್ಲಿ ಎಲ್ಲರೂ ಇಚ್ಛಾಶಕ್ತಿ ತೋರಿಸಬೇಕು ಎಂದು ದೇಶವಾಸಿಗಳಿಗೆ ಮೋದಿ ಮನವಿ ಮಾಡಿದ್ದಾರೆ.
ಉನ್ನತ ಶಿಕ್ಷಣಕ್ಕೆ ಒತ್ತು
ರಾಷ್ಟ್ರೀಯ ಶಿಕ್ಷಣ ನೀತಿಯಡಿ ಉನ್ನತ ಶಿಕ್ಷಣದಲ್ಲಿ ಸುಧಾರಣೆಗೆ ಒತ್ತು ನೀಡಲಾಗಿದೆ. ಬೇರೆ ಬೇರೆ ಕೋರ್ಸ್ಗಳಿಗೆ ಸೇರಲು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ತಮ್ಮ ಆಸಕ್ತಿಕರ ಕೋರ್ಸ್ ಅರಿತು ಅವರು ಬದಲಾವಣೆ ಮಾಡಿಕೊಳ್ಳಬಹುದು. ಹೊಸ ಶಿಕ್ಷಣ ನೀತಿಯಲ್ಲಿ ಟ್ಯಾಲೆಂಟ್, ಟೆಕ್ನಾಲಜಿಗೆ ಆದ್ಯತೆ ನೀಡಲಾಗಿದೆ. ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರಧಾನಿ, ವಿದ್ಯಾರ್ಥಿಗಳು ಸಂಶೋಧನೆಗಳತ್ತ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಸಲಹೆ ನೀಡಿದ್ದಾರೆ.
ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ
ಕಾಲೇಜುಗಳ ಸ್ವಾಯತ್ತತೆ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಾಕಷ್ಟು ಬದಲಾವಣೆ ಅಗತ್ಯವಿದೆ. ಆದರೂ ದೇಶದ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆಗೆ ಅನುಮತಿ ನೀಡಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಿಕೆ ಒಂದು ಕ್ರಾಂತಿಕಾರಕ ನಿರ್ಧಾರ. ಉತ್ತಮ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದಿಂದ ವಿಶೇಷ ಗೌರವ ಸಿಗಲಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಹಳ ದೊಡ್ಡ ಬದಲಾವಣೆ ತರಲಿದೆ ಎಂದು ಮೋದಿ ನೂತನ ಶಿಕ್ಷಣ ನೀತಿಯ ಬಗ್ಗೆ ಭಾರೀ ಭರವಸೆ ವ್ಯಕ್ತಪಡಿಸಿದ್ದಾರೆ.
ಮಾತೃಭಾಷೆಯಲ್ಲಿಯೇ ಶಿಕ್ಷಣಕ್ಕೆ ಅವಕಾಶ
ಈ ನಿಟ್ಟಿನಲ್ಲಿ ಆರಂಭದಿಂದ5ನೇ ತರಗತಿಯವರೆಗೆ ಮಾತೃಭಾಷೆಯಲ್ಲಿಯೇ ಶಿಕ್ಷಣಕ್ಕೆ ಅವಕಾಶ ಮಾಡಲಾಗಿದೆ. ಎಲ್ಲಿ ಸುಧಾರಣೆ ಅಗತ್ಯವಿದೆಯೋ ಅಲ್ಲಿ ಸುಧಾರಣೆ ಮಾಡುತ್ತೇವೆ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನೇ ಓದಬಹುದು. ಅವರಿಗೆ ಆಸಕ್ತಿ ಇರುವ ವಿಚಾರದಲ್ಲೇ ಕೆಲಸ ಮಾಡಬಹುದು. ಅಷ್ಟೇ ಅಲ್ಲ ಹೊಸ ಶಿಕ್ಷಣ ನೀತಿಯಲ್ಲಿ ಪುಸ್ತಕದ ಹೊರೆ ಕಡಿಮೆಯಾಗಲಿದೆ. ಜೊತೆಗೆ ವ್ಯವಹಾರಿಕ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶಿಕ್ಷಣ ನೀತಿಯೊಂದಿಗೆ ದೇಶ ಬೆಳೆಯುತ್ತದೆ
ಪ್ರತಿಯೊಂದು ದೇಶ ತನ್ನ ಶಿಕ್ಷಣ ನೀತಿಯೊಂದಿಗೆ ಬೆಳೆಯುತ್ತದೆ. ನಮ್ಮ ಯುವಜನತೆಗೆ ಅಗತ್ಯವಿರುವ ಕೌಶಲ್ಯದತ್ತ ಗಮನ ಹರಿಸುವತ್ತ ರಾಷ್ಟ್ರೀಯ ಶಿಕ್ಷಣ ನೀತಿ ಒತ್ತು ಕೊಡಲಿದೆ. ಈ ನಿಟ್ಟಿನಲ್ಲಿ ಸುಮಾರು 3-4 ವರ್ಷಗಳ ಸುದೀರ್ಘ ಚರ್ಚೆ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸ್ವೀಕರಿಸಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ 21ನೇ ಶತಮಾನಕ್ಕೆ ನಾಂದಿ
ವಿವಿಧ ಕ್ಷೇತ್ರಗಳ, ವಿವಿಧ ವಿಚಾರಧಾರೆಯ ಜನರಿಂದ ವಿಮರ್ಷೆ ಮತ್ತು ಆರೋಗ್ಯಕರ ಚರ್ಚೆ ಹೆಚ್ಚೆಚ್ಚು ನಡೆದಷ್ಟೂ ಉತ್ತಮ. ಯಾಕಂದ್ರೆ ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 21ನೇ ಶತಮಾನಕ್ಕೆ ಭಾರತದ ಫೌಂಡೇಷನ್ ಅನ್ನು ಸಿದ್ಧಪಡಿಸಲಿದೆ. ಹೀಗಾಗಿ ಈ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಎಲ್ಲರೂ ಶ್ರಮಿಸಬೇಕು ಎಂದು ಪ್ರಧಾನಿ ಮೋದಿ ದೇಶವಾಸಿಗಳಿಗೆ ಕರೆ ನೀಡಿದ್ದಾರೆ.