ಡೆಹ್ರಾಡೂನ್​​ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ; 18 ಸಾವಿರ ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

| Updated By: Lakshmi Hegde

Updated on: Dec 04, 2021 | 9:15 AM

ಈ ಆರ್ಥಿಕ ಕಾರಿಡಾರ್​ ಹೊರತುಪಡಿಸಿ ಉಳಿದಂತೆ 10 ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕು ಸ್ಥಾಪನೆ ನೆರವೇರಿಸಲಿದ್ದು, ಉಳಿದ ಏಳು ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ.

ಡೆಹ್ರಾಡೂನ್​​ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ; 18 ಸಾವಿರ ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಪ್ರಧಾನಿ ನರೇಂದ್ರ ಮೋದಿ
Follow us on

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಉತ್ತರಾಖಂಡ್​​ನ ಡೆಹ್ರಾಡೂನ್​​ಗೆ ಭೇಟಿ ಕೊಡಲಿದ್ದು, ಅಲ್ಲಿ ಒಟ್ಟಾರೆ 18 ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅದರಲ್ಲಿ ಬಹುಮುಖ್ಯವಾಗಿ 8300 ಕೋಟಿ ರೂಪಾಯಿ ವೆಚ್ಚದ ದೆಹಲಿ-ಡೆಹ್ರಾಡೂನ್​ ಆರ್ಥಿಕ ಕಾರಿಡಾರ್​​ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪನೆ ಮಾಡಲಿದ್ದಾರೆ.  ಈ ದೆಹಲಿ-ಡೆಹ್ರಾಡೂನ್​ ಆರ್ಥಿಕ ಕಾರಿಡಾರ್​ ಪೂರ್ವ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ಜಂಕ್ಷನ್‌ನಿಂದ ಡೆಹ್ರಾಡೂನ್‌ಗೆ ಸಂಪರ್ಕ ಕಲ್ಪಿಸಲಿದೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ. 

ಈ ಆರ್ಥಿಕ ಕಾರಿಡಾರ್​ ಹೊರತುಪಡಿಸಿ ಉಳಿದಂತೆ 10 ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕು ಸ್ಥಾಪನೆ ನೆರವೇರಿಸಲಿದ್ದು, ಉಳಿದ ಏಳು ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಇದೀಗ ಪ್ರಧಾನಿ ಮೋದಿಯವರು ಚಾಲನೆ ನೀಡುತ್ತಿರುವ ಬಹುತೇಕ ಯೋಜನೆಗಳು ಡೆಹ್ರಾಡೂನ್​​ನ ರಸ್ತೆ ಮೂಲಸೌಕರ್ಯ ಸುಧಾರಣೆ ಮಾಡುವಂಥದ್ದಾಗಿದೆ. ಈ ಡೆಹ್ರಾಡೂನ್​ ಹಿಮಾಲಯದ ಪ್ರದೇಶಗಳಲ್ಲಿ ಒಂದಾಗಿದ್ದು, ಗುಡ್ಡಗಾಡು ಪ್ರದೇಶ. ಈ ನಗರಕ್ಕೆ ಉತ್ತಮ ರಸ್ತೆ ಸೌಕರ್ಯ ಕಲ್ಪಿಸಿ ಜನರಿಗೆ ಅನುಕೂಲ ಮಾಡಿಕೊಡುವುದು ಕೇಂದ್ರ ಸರ್ಕಾರದ ಪ್ರಮುಖ ಉದ್ದೇಶವಾಗಿದೆ.

ಅದರಲ್ಲೂ ಮುಖ್ಯವಾಗಿ ಆರ್ಥಿಕ ಕಾರಿಡಾರ್ ಹರಿದ್ವಾರ, ಮುಜಾಫರ್‌ನಗರ, ಶಾಮ್ಲಿ, ಯಮುನಾನಗರ, ಬಾಗ್‌ಪತ್, ಮೀರತ್ ಮತ್ತು ಬರೌತ್‌ಗೆ ಸಂಪರ್ಕ ಕಲ್ಪಿಸಲು 7 ಪ್ರಮುಖ ಇಂಟರ್‌ಚೇಂಜ್‌ಗಳನ್ನು ಹೊಂದಿರುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಬುಧವಾರ ಹೇಳಿದೆ. “ಇದು ಅನಿಯಂತ್ರಿತ ವನ್ಯಜೀವಿ ಚಲನೆಗಾಗಿ ಏಷ್ಯಾದ ಅತಿದೊಡ್ಡ ವನ್ಯಜೀವಿ ಎಲಿವೇಟೆಡ್ ಕಾರಿಡಾರ್ ಅನ್ನು ಹೊಂದಿರುತ್ತದೆ. 12 ಕಿಲೋಮೀಟರ್ ಉದ್ದದ ವನ್ಯಜೀವಿ ಎಲಿವೇಟೆಡ್ ಕಾರಿಡಾರ್ ಹೊಂದಿರುತ್ತದೆ. ಅಲ್ಲದೆ, ಡೆಹ್ರಾಡೂನ್‌ನ ದಟ್ ಕಾಲಿ ದೇವಸ್ಥಾನದ ಬಳಿ 340 ಮೀ ಉದ್ದದ ಸುರಂಗವು ವನ್ಯಜೀವಿಗಳು ಮುಕ್ತವಾಗಿ ಸಂಚಾರ ಮಾಡಲು ಅವಕಾಶ ಮಾಡಿಕೊಡುತ್ತೆ.

ಇದಲ್ಲದೆ, ಪ್ರಾಣಿ-ವಾಹನ ಘರ್ಷಣೆಯನ್ನು ತಪ್ಪಿಸಲು ಗಣೇಶ್‌ಪುರ-ಡೆಹ್ರಾಡೂನ್ ವಿಭಾಗದಲ್ಲಿ ಬಹು ಪ್ರಾಣಿ ಪಾಸ್‌ಗಳನ್ನು ಒದಗಿಸಲಾಗಿದೆ. ದೆಹಲಿ-ಡೆಹ್ರಾಡೂನ್ ಎಕನಾಮಿಕ್ ಕಾರಿಡಾರ್ 500 ಮೀಟರ್ ಮಧ್ಯಂತರದಲ್ಲಿ ಮಳೆನೀರು ಕೊಯ್ಲು ಮತ್ತು 400 ಕ್ಕೂ ಹೆಚ್ಚು ನೀರಿನ ರೀಚಾರ್ಜ್ ಪಾಯಿಂಟ್‌ಗಳನ್ನು ಸಹ ಹೊಂದಿದೆ ಎಂದು ಪ್ರಧಾನಮಂತ್ರಿ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಸರ್ಕಾರದ ತಂತ್ರಾಂಶದಲ್ಲಿ ಎಡವಟ್ಟು; ಲಸಿಕೆ ಪಡೆಯದಿದ್ದರೂ ಸಿಗುತ್ತಿದೆ ಲಸಿಕೆ ಪಡೆದ ಸರ್ಟಿಫಿಕೆಟ್