ದೆಹಲಿ ಜುಲೈ 25: ದೇಶದ ಜನತೆಯ ವಿಶ್ವಾಸ ಕಳೆದುಕೊಂಡಿರುವ ಪ್ರತಿಪಕ್ಷಗಳು ಪ್ರಧಾನಿ ಮೋದಿ (PM Modi) ವಿರುದ್ಧ ಎಷ್ಟೇ ಅವಿಶ್ವಾಸ ನಿರ್ಣಯ ತರಲು ಯೋಚಿಸಿದರೂ ಏನೂ ಬದಲಾವಣೆ ಆಗಲ್ಲ. ಸಾರ್ವಜನಿಕರಿಂದ ಮತ್ತೆ ಮತ್ತೆ ತಿರಸ್ಕರಿಸಲ್ಪಟ್ಟು ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿರುವವರು I.N.D.I.A ಹೆಸರನ್ನು ಇಟ್ಟುಕೊಂಡು ಸಾರ್ವಜನಿಕರ ವಿಶ್ವಾಸ ಗಳಿಸುವುದಾದರೆ ಈಸ್ಟ್ ಇಂಡಿಯಾ ಕಂಪನಿಗೆ ಓಡಿ ಹೋಗಬೇಕಾಗಿ ಬರುತ್ತಿರಲಿಲ್ಲ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜನರಿಗೆ ನೀಡಿದ ಭರವಸೆ ಮತ್ತು ನಂಬಿಕೆಯ ಜ್ವಾಲೆಯನ್ನು ನಂದಿಸುವುದು ಯಾವುದೇ ವೇಷ ಬದಲಿಸುವವರಿಗೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಮಂಗಳವಾರ ವಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಆರಂಭಿಸಿ ಇಂಡಿಯನ್ ಮುಜಾಹಿದ್ದೀನ್ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ಭಯೋತ್ಪಾದಕ ಸಂಘಟನೆಗಳವರೆಗೆ ಅನೇಕ ಸಂಘಟನೆಗಳ ಹೆಸರಿನಲ್ಲಿ ಇಂಡಿಯಾ ಇದೆ ಎಂದು ಹೇಳಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ಮೊದಲ ಬಾರಿಗೆ ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೇಂದ್ರದಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೆ ಸಿದ್ಧವಾಗುವಂತೆ ಪಕ್ಷಕ್ಕೆ ಹೇಳಿದ್ದು ಅದರ ಕಾರ್ಯತಂತ್ರವನ್ನು ವಿವರಿಸಿದರು.
ಮೂಲಗಳ ಪ್ರಕಾರ, ಇಂಡಿಯಾ ಎಂಬ ಹೆಸರು ಕೇವಲ “ಜನರನ್ನು ದಾರಿ ತಪ್ಪಿಸುವ” ವಿರೋಧ ಪಕ್ಷದ ಪ್ರಯತ್ನವಾಗಿದೆ ಎಂದು ಮೋದಿ ಹೇಳಿದ್ದಾರೆ. ಈಸ್ಟ್ ಇಂಡಿಯಾ ಕಂಪನಿ ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಹೆಸರಿಸಿರುವ ಮೋದಿ, ಇಂಡಿಯಾ ಎಂಬ ಹೆಸರು ಇಟ್ಟುಕೊಂಡಿರುವುದರಿಂದ ಏನೇನೂ ಆಗುವುದಿಲ್ಲ. ಈಸ್ಟ್ ಇಂಡಿಯಾ ಕಂಪನಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಇಂಡಿಯನ್ ಮುಜಾಹಿದ್ದೀನ್ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೂಡ ತಮ್ಮ ಹೆಸರಿನಲ್ಲಿ ಇಂಡಿಯಾವನ್ನು ಹೊಂದಿದೆ ಎಂದು ಮೋದಿ ಹೇಳಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ನಂತರವೂ ತಾವು ಪ್ರತಿಪಕ್ಷದಲ್ಲಿಯೇ ಉಳಿಯುತ್ತೇವೆ ಎಂದು ಅದರ ನಾಯಕರು ಅರಿತುಕೊಂಡಿದ್ದರಿಂದ ಪ್ರತಿಪಕ್ಷಗಳು ಹತಾಶಗೊಂಡಿವೆ. ಇಂತಹ ದಿಕ್ಕು ತೋಚದ ವಿರೋಧ ಪಕ್ಷವನ್ನು ನಾನು ನೋಡಿಲ್ಲ ಎಂದು ಹಿರಿಯ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರಧಾನಿ ಮಾತನ್ನು ಉಲ್ಲೇಖಿಸಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ