ನವದೆಹಲಿ, ನವೆಂಬರ್ 6: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ (Iran) ಅಧ್ಯಕ್ಷ ಡಾ. ಸೆಯ್ಯದ್ ಇಬ್ರಾಹಿಂ ರೈಸಿ (Dr. Seyyed Ebrahim Raisi) ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಉಭಯ ನಾಯಕರು ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಉದ್ವಿಗ್ನ ಪರಿಸ್ಥಿತಿ ಮತ್ತು ಇಸ್ರೇಲ್ – ಹಮಾಸ್ ನಡುವಣ ಸಂಘರ್ಷದ (Israel Hamas Conflict) ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ತಿಳಿಸಿದೆ.
ಭಯೋತ್ಪಾದಕ ಕೃತ್ಯಗಳು, ಹಿಂಸಾಚಾರ ಮತ್ತು ನಾಗರಿಕರ ಜೀವಹಾನಿಯ ಬಗ್ಗೆ ಪ್ರಧಾನಿ ಮೋದಿ ಅವರು ಇರಾನ್ ಅಧ್ಯಕ್ಷರ ಜತೆ ತೀವ್ರ ಕಳವಳ ವ್ಯಕ್ತಪಡಿಸಿದರು. ಇಸ್ರೇಲ್ – ಪ್ಯಾಲೆಸ್ತೀನ್ ವಿಷಯದಲ್ಲಿ ಭಾರತದ ದೀರ್ಘಕಾಲದ ಮತ್ತು ಸ್ಥಿರವಾದ ನಿಲುವನ್ನು ಅವರು ಪುನರುಚ್ಚರಿಸಿದರು ಎಂದು ಪಿಎಂಒ ಪ್ರಕಟಣೆ ತಿಳಿಸಿದೆ.
ಇರಾನ್ ಅಧ್ಯಕ್ಷ ರೈಸಿ ಅವರು ಮೋದಿ ಜತೆ ಪರಿಸ್ಥಿತಿಯ ಕುರಿತು ಪರಾಮರ್ಶಿಸಿದ ವಿಚಾರಗಳನ್ನು ಹಂಚಿಕೊಂಡರು.
ಸಂಘರ್ಷ ಉಲ್ಬಣಗೊಳ್ಳುವುದನ್ನು ತಡೆಯಬೇಕಾದ ಅಗತ್ಯತೆ, ನಿರಂತರ ಮಾನವೀಯ ನೆರವು, ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಯನ್ನು ಖಾತ್ರಿಪಡಿಸುವ ಅಗತ್ಯವನ್ನು ಉಭಯ ನಾಯಕರು ಒತ್ತಿ ಹೇಳಿದರು.
ಇದನ್ನೂ ಓದಿ: ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಸಾಮೂಹಿಕ ನಮಾಜ್: ವಿವಾದಕ್ಕೆ ಕಾರಣವಾದ ಜೋರ್ಡಾನ್ ಪ್ರಯಾಣಿಕರ ನಡೆ
ದ್ವಿಪಕ್ಷೀಯ ಸಹಕಾರದಲ್ಲಿನ ಪ್ರಗತಿಯನ್ನು ಇಬ್ಬರೂ ನಾಯಕರು ಪರಿಶೀಲಿಸಿದರು. ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸಲು ಇರಾನ್‌ನ ಚಬಹಾರ್ ಬಂದರಿಗೆ ನೀಡಲಾದ ಗಮನ ಮತ್ತು ಆದ್ಯತೆಯನ್ನು ಅವರು ಸ್ವಾಗತಿಸಿದರು.
ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಗೆ ಸಂಬಂಧಿಸಿ ಸದಾ ಸಂಪರ್ಕದಲ್ಲಿರಲು ಎರಡೂ ಕಡೆಯವರು ಒಪ್ಪಿಕೊಂಡರು ಎಂದು ಪಿಎಂಒ ಪ್ರಕಟಣೆ ತಿಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ