ನವದೆಹಲಿ: ಇಂದು (ಜ.23) ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhash Chandra Bose) ಅವರ ಜನ್ಮದಿನದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಂಸತ್ತಿನ (Parliment) ಸೆಂಟ್ರಲ್ ಹಾಲ್‌ನಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು, ಸಂಸತ್ತನ ಮಾಜಿ ಸದಸ್ಯರು ಮತ್ತು ಇನ್ನೀತರ ನಾಯಕರು ಗೌರವ ಸಲ್ಲಿಸಲಿದ್ದಾರೆ.
ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರವನ್ನು 1978 ಜನೆವರಿ 23 ರಂದು ಅಂದಿನ ರಾಷ್ಟ್ರಪತಿ ಎನ್ ಸಂಜೀವ್ ರೆಡ್ಡಿಯವರು ಅನಾವರಣಗೊಳಿಸಿದರು. ಸಂಸತ್ತಿನ ಪ್ರಕಾರ, ದೇಶದ ಅತ್ಯುನ್ನತ ರಾಷ್ಟ್ರೀಯ ಐಕಾನ್‌ಗಳ ಜೀವನ ಮತ್ತು ಕೊಡುಗೆಗಳ ಬಗ್ಗೆ ಯುವಜನರಲ್ಲಿ ತಿಳಿಸುವ ದೃಷ್ಟಿಯಿಂದ ಪುಷ್ಪ ನಮನ ಕಾರ್ಯಕ್ರಮಗಳು ಪರಿಣಾಮಕಾರಿ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಗುರುತಿಸಲಾಗಿದೆ.
ಅದರಂತೆ, ಸಂಸತ್ತಿನ ಸೆಕ್ರೆಟರಿಯೇಟ್‌ನ ಸಂಸದೀಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (PRIDE), ‘ನಿಮ್ಮ ನಾಯಕರನ್ನು ತಿಳಿದುಕೊಳ್ಳಿ’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಡಿಸೆಂಬರ್ 25, 2022 ರವರೆಗೆ, ‘ನಿಮ್ಮ ನಾಯಕರನ್ನು ತಿಳಿಯಿರಿ’ ಕಾರ್ಯಕ್ರಮದ ಅಡಿಯಲ್ಲಿ ಸೆಂಟ್ರಲ್ ಹಾಲ್‌ನಲ್ಲಿ 8 ಪುಷ್ಪ ನಮನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಕ್ಟೋಬರ್ 2, 2022 ರಂದು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಮೊದಲ ಕಾರ್ಯಕ್ರಮವನ್ನು ನಡೆಸಲಾಯಿತು.
ಇಂದಿನ ಸೆಂಟ್ರಲ್ ಹಾಲ್ನ ಕಾರ್ಯಕ್ರಮದಲ್ಲಿ 80 ಯುವಕರು ಭಾಗವಹಿಸಿ ನೇತಾಜಿ ಅವರಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ತಿಳಿಸಿದೆ. ಈ 80 ಜನ ಯುವಕರು ಸಚಿವಾಲಯಗಳು ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯೋಜಿಸಿದ್ದ ಅಖಿಲ ಭಾರತ ಮಟ್ಟದ ಕ್ರೀಡೆಗಳಲ್ಲಿ ವಿಜೇತರಾದವರಾಗಿದ್ದಾರೆ.
ಈ 80 ಯುವಜನರಲ್ಲಿ 31 ಮಂದಿ ನೇತಾಜಿಯವರ ಕೊಡುಗೆಯ ಕುರಿತು ಹಿಂದಿ, ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಭಾಷಣ ಮಾತನಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವರರನ್ನು ಕರ್ತವ್ಯ ಪಥ, ಯುದ್ಧ ಸ್ಮಾರಕ, ರಾಜ್ ಘಾಟ್, ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ಮತ್ತು ಪ್ರಧಾನ ಮಂತ್ರಿ ಸಂಘಾಲಯಕ್ಕೆ ಕರೆದೊಯ್ಯಲಾಗುವುದರ ಜೊತೆಗೆ ಸ್ಮರಣಿಕೆಗಳನ್ನು ನೀಡಲಾಗುವುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:01 am, Mon, 23 January 23