ನವದೆಹಲಿ: 2025ರ ವೇಳೆಗೆ ಕ್ಷಯರೋಗ ನಿರ್ಮೂಲನೆಯ ಗುರಿಯನ್ನು ಸಾಧಿಸಲು ಕೇಂದ್ರ ಸರ್ಕಾರವು ಇಂದು ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನವನ್ನು (PM TB Mukt Bharat Abhiyaan) ಪ್ರಾರಂಭಿಸಲಿದೆ. ಈ ಮೂಲಕ ಟಿಬಿ ರೋಗದಿಂದ ಬಳಲುತ್ತಿರುವವರಿಗೆ ಸಮುದಾಯದ ಬೆಂಬಲವನ್ನು ನೀಡುವ ಗುರಿಯನ್ನು ಹೊಂದಿದೆ. ಈ ಅಭಿಯಾನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಇಂದು ಚಾಲನೆ ನೀಡಲಿದ್ದಾರೆ.
ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಜನರು ಮತ್ತು ಸಂಸ್ಥೆಗಳು ಬ್ಲಾಕ್‌ಗಳು, ಜಿಲ್ಲೆಗಳು ಅಥವಾ ವೈಯಕ್ತಿಕ ರೋಗಿಯನ್ನು ದತ್ತು ಪಡೆಯಬಹುದು. ಹಾಗೇ, ಪೌಷ್ಟಿಕಾಂಶ ಮತ್ತು ಚಿಕಿತ್ಸೆ ಬೆಂಬಲವನ್ನು ಒದಗಿಸಬಹುದು. 2030ರ ಎಸ್‌ಡಿಜಿ (ಸುಸ್ಥಿರ ಅಭಿವೃದ್ಧಿ ಗುರಿ) ಗುರಿಗಿಂತ 5 ವರ್ಷಗಳ ಮೊದಲು ಭಾರತದಿಂದ ಕ್ಷಯ ರೋಗವನ್ನು ತೊಡೆದುಹಾಕಲು 2018ರ ಮಾರ್ಚ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗವರ್ನರ್‌ಗಳು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು, ರಾಜ್ಯ ಅಧಿಕಾರಿಗಳ ಜೊತೆಗೆ ಅಭಿಯಾನವನ್ನು ಮುಂದಕ್ಕೆ ಕೊಂಡೊಯ್ಯಲು ಒತ್ತಾಯಿಸಲಾಗುವುದು. ಅಧಿಕೃತ ಮೂಲಗಳ ಪ್ರಕಾರ, ಪ್ರಸ್ತುತ ದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಟ್ಟು 13,51,611 ಕ್ಷಯ ರೋಗಿಗಳಲ್ಲಿ 8,95,119 ಜನರು ಸೆಪ್ಟೆಂಬರ್ 7ರವರೆಗೆ ದತ್ತು ತೆಗೆದುಕೊಳ್ಳಲು ಒಪ್ಪಿಗೆ ನೀಡಿದ್ದಾರೆ.
ಇದನ್ನೂ ಓದಿ: President Speech ಭಾರತದ ಹೊಸ ಆತ್ಮವಿಶ್ವಾಸದ ಮೂಲ ಯುವಕರು, ರೈತರು ಮತ್ತು ಮಹಿಳೆಯರು: ದ್ರೌಪದಿ ಮುರ್ಮು
ಭಾರತವನ್ನು ಟಿಬಿ ಮುಕ್ತಗೊಳಿಸಲು ಸರ್ಕಾರ ಮತ್ತು ಸರ್ಕಾರೇತರ ಮಟ್ಟದಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ರೋಗದ ವಿರುದ್ಧ ಹೋರಾಡಲು ಸರ್ಕಾರವು ಅನೇಕ ಯೋಜನೆಗಳ ಮೂಲಕ ರೋಗಿಗಳಿಗೆ ಸೌಲಭ್ಯಗಳನ್ನು ಒದಗಿಸುತ್ತಿದೆ. ಯಾವುದೇ ಕಂಪನಿ, ಸಂಸ್ಥೆ ಅಥವಾ ವ್ಯಕ್ತಿ ಬಯಸಿದರೆ, ಆ ಬ್ಲಾಕ್ ಅಥವಾ ಜಿಲ್ಲೆಯ ಎಲ್ಲಾ ರೋಗಿಗಳನ್ನು ಒಬ್ಬ ವ್ಯಕ್ತಿ ಮಾತ್ರ ದತ್ತು ಪಡೆಯಬಹುದು ಅಥವಾ ಅವನು ಯಾವುದೇ ಒಬ್ಬ ರೋಗಿಯನ್ನು ದತ್ತು ಪಡೆಯಬಹುದು.
ಸಾರ್ವಜನಿಕ ಸಹಭಾಗಿತ್ವವನ್ನು ಹೆಚ್ಚಿಸುವ ಸಲುವಾಗಿ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ’ಕ್ಕೆ ಚಾಲನೆ ನೀಡಲಿದ್ದಾರೆ. ಈ ಅಭಿಯಾನದ ಅಡಿಯಲ್ಲಿ, 2030ರ ವೇಳೆಗೆ ಭಾರತವನ್ನು ಟಿಬಿ ಮುಕ್ತಗೊಳಿಸಲು ಗುರಿಯನ್ನು ನಿಗದಿಪಡಿಸಲಾಗಿದೆ. ಕ್ಷಯರೋಗದ ರೋಗಿಯನ್ನು ದತ್ತು ಪಡೆದ ನಂತರ, ಪ್ರತಿ ತಿಂಗಳು 1,000 ರೂ. ಮೌಲ್ಯದ ಪೌಷ್ಟಿಕಾಂಶದ ಕಿಟ್ ಅನ್ನು ರೋಗಿಗೆ ಕಳುಹಿಸಲಾಗುತ್ತದೆ. ಈ ಕಿಟ್‌ನಲ್ಲಿರುವ ಪೌಷ್ಟಿಕಾಂಶದ ಮೌಲ್ಯದ ಪ್ರಕಾರ, ಒಂದು ತಿಂಗಳ ಪೌಷ್ಟಿಕಾಂಶದ ಆಹಾರದ ಬಗ್ಗೆ ಮಾಹಿತಿಯು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
ಈ ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ ಯೋಜನೆಯಡಿ, ರೋಗಿಯನ್ನು ಕನಿಷ್ಠ 1 ವರ್ಷ ಮತ್ತು ಗರಿಷ್ಠ 3 ವರ್ಷಗಳವರೆಗೆ ದತ್ತು ಪಡೆಯಬಹುದು. ಭಾರತದಲ್ಲಿ ಸುಮಾರು 13 ಲಕ್ಷ 51 ಸಾವಿರ ಕ್ಷಯ ರೋಗಿಗಳಿದ್ದು, ಪ್ರತಿ ವರ್ಷ ದೇಶದಲ್ಲಿ ಸುಮಾರು 20 ರಿಂದ 25 ಲಕ್ಷ ಕ್ಷಯ ರೋಗಿಗಳು ದಾಖಲಾಗುತ್ತಿದ್ದಾರೆ. ಸುಮಾರು 83%ರಷ್ಟು ಜನ ಗುಣಮುಖರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ, ಒಟ್ಟು ಟಿಬಿ ರೋಗಿಗಳಲ್ಲಿ ಸುಮಾರು 9 ಲಕ್ಷ ಜನರು ದತ್ತು ತೆಗೆದುಕೊಳ್ಳಲು ಒಪ್ಪಿಗೆ ನೀಡಿದ್ದಾರೆ.