PMLA Verdict: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ವಿರುದ್ಧದ ಅರ್ಜಿ ಕುರಿತು ಸುಪ್ರೀಂ ಕೋರ್ಟ್​ನಿಂದ​ ಇಂದು ಮಹತ್ವದ ತೀರ್ಪು

| Updated By: ಸುಷ್ಮಾ ಚಕ್ರೆ

Updated on: Jul 27, 2022 | 11:27 AM

ಜುಲೈ 15ರಂದು ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳನ್ನು ಪ್ರಶ್ನಿಸುವ ಅರ್ಜಿಗಳ ಮೇಲಿನ ತನ್ನ ತೀರ್ಪು ಬಹುತೇಕ ಸಿದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

PMLA Verdict: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ವಿರುದ್ಧದ ಅರ್ಜಿ ಕುರಿತು ಸುಪ್ರೀಂ ಕೋರ್ಟ್​ನಿಂದ​ ಇಂದು ಮಹತ್ವದ ತೀರ್ಪು
ಸುಪ್ರೀಂಕೋರ್ಟ್
Follow us on

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ವಿವಿಧ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ. ಸುಪ್ರೀಂ ಕೋರ್ಟ್​ (Supreme Court)  ನ್ಯಾಯಮೂರ್ತಿಗಳಾದ ಎ.ಎಂ ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಸಿಟಿ ರವಿಕುಮಾರ್ ಅವರ ನ್ಯಾಯಪೀಠ ಇಂದು ತೀರ್ಪು ಪ್ರಕಟಿಸಲಿದೆ. ಈ ತೀರ್ಪು ಇಡಿ ವಿಚಾರಣೆಗೆ ಒಳಗಾಗಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಅಪಾರ ಸಂಖ್ಯೆಯ ವಿರೋಧ ಪಕ್ಷದ ನಾಯಕರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಜುಲೈ 15ರಂದು ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳನ್ನು ಪ್ರಶ್ನಿಸುವ ಅರ್ಜಿಗಳ ಮೇಲಿನ ತನ್ನ ತೀರ್ಪು ಬಹುತೇಕ ಸಿದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಈ ಅರ್ಜಿಗಳು 2002ರ ಮನಿ ಲಾಂಡರಿಂಗ್ ತಡೆ ಕಾಯ್ದೆಯ ವ್ಯಾಖ್ಯಾನಕ್ಕೆ ಸಂಬಂಧಿಸಿದ್ದಾಗಿವೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕೆಲವು ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬ್ಯಾಚ್‌ನಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಅರ್ಜಿದಾರರಲ್ಲಿ ರಾಜಕಾರಣಿ ಕಾರ್ತಿ ಚಿದಂಬರಂ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೇರಿದಂತೆ ಇತರರು ಸೇರಿದ್ದಾರೆ.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಫಾರೂಕ್ ಅಬ್ದುಲ್ಲಾಗೆ ವಿಶೇಷ ಪಿಎಂಎಲ್ಎ ಕೋರ್ಟ್​​​ ನೋಟಿಸ್

ಕೇಂದ್ರ ಸರ್ಕಾರವು PMLAಯ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಸಮರ್ಥಿಸಿತ್ತು. ಅಕ್ರಮ ಹಣ ವರ್ಗಾವಣೆ ಕೇವಲ ವಿಜಯ್ ಮಲ್ಯ ಅಥವಾ ನೀರವ್ ಮೋದಿಯಂತಹ ಭ್ರಷ್ಟ ಉದ್ಯಮಿಗಳಿಂದ ಮಾತ್ರವಲ್ಲದೆ ಭಯೋತ್ಪಾದಕ ಗುಂಪುಗಳಿಂದ ನಡೆಸಲ್ಪಡುವುದರಿಂದ, ಹಣ ವರ್ಗಾವಣೆಯು ಹಣಕಾಸು ವ್ಯವಸ್ಥೆಗಳಿಗೆ ಮಾತ್ರವಲ್ಲದೆ ರಾಷ್ಟ್ರಗಳ ಸಮಗ್ರತೆ ಮತ್ತು ಸಾರ್ವಭೌಮತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಕೇಂದ್ರವು PMLAಗೆ ತಿದ್ದುಪಡಿಗಳನ್ನು ಸಮರ್ಥಿಸಿಕೊಂಡಿತ್ತು.

ಈ ಕುರಿತು ಒಟ್ಟು 242 ಮೇಲ್ಮನವಿಗಳು ಸಲ್ಲಿಕೆಯಾಗಿವೆ. ಮುಂದಿನ ದಿನಗಳಲ್ಲಿ ಇಡಿ ಮತ್ತು ಇತರೆ ತನಿಖಾ ಸಂಸ್ಥೆಗಳ ಕಾರ್ಯವ್ಯಾಪ್ತಿಯನ್ನೂ ಕೋರ್ಟ್‌ ಸ್ಪಷ್ಟಪಡಿಸಲಿದೆ. ತನಿಖೆ ಪ್ರಾರಂಭಿಸುವುದು, ಸಾಕ್ಷಿಗಳು ಅಥವಾ ಆರೋಪಿಗಳನ್ನು ವಿಚಾರಣೆಗೆ ಕರೆಸುವುದು, ಹೇಳಿಕೆಗಳನ್ನು ದಾಖಲಿಸುವುದು, ಆಸ್ತಿ ವಶಪಡಿಸಿಕೊಳ್ಳುವ ಪ್ರಕ್ರಿಯೆಯು ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ. ಆದರೂ ಈ ಕಾಯ್ದೆಯನ್ನು ಸರ್ಕಾರ ಸಮರ್ಥಿಸಿಕೊಂಡಿತ್ತು.

ಇದನ್ನೂ ಓದಿ: Sonia Gandhi: ನ್ಯಾಷನಲ್ ಹೆರಾಲ್ಡ್​​ ಪ್ರಕರಣ; ಇಡಿ ಅಧಿಕಾರಿಗಳಿಂದ ಇಂದು ಸೋನಿಯಾ ಗಾಂಧಿ 3ನೇ ಸುತ್ತಿನ ವಿಚಾರಣೆ

ಸೋಮವಾರ ಲೋಕಸಭೆ ಕಲಾಪದಲ್ಲಿ ಕೇಂದ್ರ ಸರ್ಕಾರ ನೀಡಿದ ಮಾಹಿತಿ ಪ್ರಕಾರ, 2022ರ ಮಾರ್ಚ್ 31ರವರೆಗೆ ಇಡಿ (ಜಾರಿ ನಿರ್ದೇಶನಾಲಯ) ಪಿಎಂಎಲ್‌ಎ ಅಡಿಯಲ್ಲಿ 5,422 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. 992 ಪ್ರಕರಣಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದೆ. 869.31 ಕೋಟಿ ರೂ. ಜಪ್ತಿ ಮಾಡಿಸಿಕೊಳ್ಳಲಾಗಿದ್ದು, 23 ಮಂದಿ ಆರೋಪಿಗಳಿಗೆ ಶಿಕ್ಷೆಯಾಗಿದೆ.

Published On - 9:58 am, Wed, 27 July 22