ಭಾರತದಲ್ಲಿ ಫಲವತ್ತತೆ ದರ ಕುಸಿತ; ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲೇನಿದೆ?

ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ನಡೆಯುವ 2023-24ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಪ್ರಕಾರ, ಭಾರತದ ಫಲವತ್ತತೆ ದರ (TFR) ಬಹಳ ಕಡಿಮೆಯಾಗಿದೆ. ಮಾದರಿ ನೋಂದಣಿ ವ್ಯವಸ್ಥೆಯ (SRS) 2024ರ ವರದಿಯ ಪ್ರಕಾರ, ಭಾರತೀಯ ಮಹಿಳೆಯರಲ್ಲಿ ಫಲವತ್ತತೆ ದರ ನಿರಂತರವಾಗಿ ಕಡಿಮೆಯಾಗುತ್ತಿದೆ. TFR ಎಂದರೆ ಮಹಿಳೆ ತನ್ನ ಫಲವತ್ತಾದ ಅವಧಿಯಲ್ಲಿ ಜನ್ಮ ನೀಡುವ ಸರಾಸರಿ ಮಕ್ಕಳ ಸಂಖ್ಯೆ.

ಭಾರತದಲ್ಲಿ ಫಲವತ್ತತೆ ದರ ಕುಸಿತ; ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲೇನಿದೆ?
Baby And Mother
Image Credit source: Getty Image

Updated on: Jun 02, 2026 | 11:14 PM

ನವದೆಹಲಿ, ಜೂನ್ 2: ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬಿಡುಗಡೆಯಾಗಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಮತ್ತು ಮಾದರಿ ನೋಂದಣಿ ವ್ಯವಸ್ಥೆಯ (SRS) ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಮಹಿಳೆಯರ ಒಟ್ಟು ಫಲವತ್ತತೆ ದರವು (TFR) ನಿರಂತರವಾಗಿ ಕುಸಿಯುತ್ತಿದೆ. ಮಹಿಳೆ ತನ್ನ ಒಟ್ಟು ಫಲವತ್ತಾದ ಅವಧಿಯಲ್ಲಿ (ಅಂದರೆ 15ರಿಂದ 49 ವರ್ಷದವರೆಗೆ) ಜನ್ಮ ನೀಡುವ ಸರಾಸರಿ ಮಕ್ಕಳ ಸಂಖ್ಯೆಯನ್ನು ‘ಒಟ್ಟು ಫಲವತ್ತತೆ ದರ’ ಅಥವಾ TFR ಎನ್ನಲಾಗುತ್ತದೆ. ಜನಸಂಖ್ಯೆಯು ಹೆಚ್ಚಾಗದೆ ಅಥವಾ ಕಡಿಮೆಯಾಗದೆ ಸ್ಥಿರವಾಗಿರಲು ಈ ದರವು ಕನಿಷ್ಠ 2.1 ಇರಬೇಕು. ಆದರೆ, ಭಾರತದಲ್ಲಿ ಇದು ಈಗ 2.1ಕ್ಕಿಂತ ಕಡಿಮೆಯಾಗಿದೆ. ಇದು ದೇಶದ ಜನಸಂಖ್ಯಾ ಬೆಳವಣಿಗೆಯ ವೇಗ ತಗ್ಗುತ್ತಿರುವುದನ್ನು ಸೂಚಿಸುತ್ತದೆ.

ಮಾದರಿ ನೋಂದಣಿ ವ್ಯವಸ್ಥೆಯ (SRS) ವರದಿಯ ಪ್ರಕಾರ, ಭಾರತೀಯ ಮಹಿಳೆಯರಲ್ಲಿ ಫಲವತ್ತತೆ ದರವು ವರ್ಷದಿಂದ ವರ್ಷಕ್ಕೆ ಸತತವಾಗಿ ಕಡಿಮೆಯಾಗುತ್ತಾ ಸಾಗುತ್ತಿದೆ. ದೇಶದ ಒಟ್ಟಾರೆ ದರ ಕುಸಿದಿದ್ದರೂ, ಕೆಲವು ರಾಜ್ಯಗಳಲ್ಲಿ ಇಂದಿಗೂ ಹೆಚ್ಚಿನ ಫಲವತ್ತತೆ ದರ ಕಂಡುಬಂದಿದೆ. ಈ ಪೈಕಿ ಬಿಹಾರ ರಾಜ್ಯವು ಮುಂಚೂಣಿಯಲ್ಲಿದ್ದು, ಅಲ್ಲಿ ಪ್ರತಿ ಮಹಿಳೆಗೆ ಸರಾಸರಿ ಮಕ್ಕಳ ಸಂಖ್ಯೆ ಸುಮಾರು 3 ಎಂದು ಅಂದಾಜಿಸಲಾಗಿದೆ. ಬಿಹಾರದ ಜೊತೆಗೆ ಉತ್ತರ ಪ್ರದೇಶ ರಾಜ್ಯವು ಕೂಡ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಮತ್ತು ಹೆಚ್ಚಿನ ಫಲವತ್ತತೆ ದರವನ್ನು ಕಾಯ್ದುಕೊಂಡಿದೆ.

ಇದನ್ನೂ ಓದಿ: ನಿದ್ರೆಯ ಕೊರತೆಯು ಫಲವತ್ತತೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ?

ಆದರೆ, ದಕ್ಷಿಣ ಭಾರತದ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಈ ಅಂಕಿ ಅಂಶ ಗಮನಾರ್ಹವಾಗಿ ಕುಸಿದಿದೆ. ವರದಿಯ ಪ್ರಕಾರ, ತಮಿಳುನಾಡಿನಲ್ಲಿ ಫಲವತ್ತತೆ ದರ 1.6 ಆಗಿದೆ. ಭಾರತದ ಒಟ್ಟು ಫಲವತ್ತತೆ ದರ (TFR) 2024ರಲ್ಲಿ 1.9 ಆಗಿತ್ತು. ಇದು 2.1ರ ಬದಲಿ ಮಟ್ಟಕ್ಕಿಂತ ಕಡಿಮೆಯಾಗಿದೆ ಎಂಬುದನ್ನು ಗಮನಿಸಬೇಕು. 1971 ಮತ್ತು 1981ರ ನಡುವೆ, TFR 5.2 ರಿಂದ 4.5ರವರೆಗೆ ಇತ್ತು. 1991 ಮತ್ತು 2024ರ ನಡುವೆ ಇದು 3.6ರಿಂದ 1.9ಕ್ಕೆ ಇಳಿದಿದೆ. 1971ರಿಂದ 2024ರವರೆಗಿನ ದತ್ತಾಂಶದ ಪ್ರಕಾರ, ಇದು 5.4ರಿಂದ 2.1ಕ್ಕೆ ಇಳಿದಿದೆ.

ಭಾರತದಲ್ಲಿ ಒಬ್ಬ ಮಹಿಳೆ ಈಗ ತನ್ನ ಫಲವತ್ತಾದ ಅವಧಿಯಲ್ಲಿ ಕೇವಲ ಎರಡು ಮಕ್ಕಳಿಗೆ ಮಾತ್ರ ಜನ್ಮ ನೀಡುತ್ತಿದ್ದಾಳೆ. ಯಾವುದೇ ದೇಶ, ರಾಜ್ಯ ಅಥವಾ ಸಮಾಜವು ತನ್ನ ಜನಸಂಖ್ಯೆಯನ್ನು ಕಾಪಾಡಿಕೊಳ್ಳಲು ಕನಿಷ್ಠ 2.1ರ ಫಲವತ್ತತೆ ದರದ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ, ಇಡೀ ದೇಶಕ್ಕೆ ಈ ಅಂಕಿ ಅಂಶವು 1.9 ತಲುಪಿದೆ.

ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳ, ಕುಗ್ಗಿದ ಫಲವತ್ತತೆ ದರ, ಹೆಚ್ಚು ಮಕ್ಕಳನ್ನು ಹೊಂದುವಂತೆ ಸಲಹೆ

ದಕ್ಷಿಣ ಭಾರತದ 5 ರಾಜ್ಯಗಳ ಫಲವತ್ತತೆ ದರವನ್ನು ನೋಡಿದರೆ, ತಮಿಳುನಾಡು ಮತ್ತು ಆಂಧ್ರಪ್ರದೇಶದ ನಗರ ಪ್ರದೇಶಗಳಲ್ಲಿ ಒಬ್ಬ ಮಹಿಳೆ ಸರಾಸರಿ 1.6 ಮಕ್ಕಳಿಗೆ ಜನ್ಮ ನೀಡುತ್ತಾರೆ. ಆದರೆ ಆಂಧ್ರ (2.0) ಮತ್ತು ತಮಿಳುನಾಡಿನ (1.8) ಗ್ರಾಮೀಣ ಪ್ರದೇಶಗಳಲ್ಲಿ ಅಂಕಿಅಂಶಗಳು ಹೊರಬಂದಿವೆ. ಆಂಧ್ರಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಫಲವತ್ತತೆ ದರವು ಉತ್ತಮವಾಗಿದೆ ಎಂದು ಅಂದಾಜಿಸಲಾಗಿದೆ. ತೆಲಂಗಾಣದ ನಗರ ಪ್ರದೇಶಗಳಲ್ಲಿ ಈ ದರವು ಕೇವಲ 1.7 ರಷ್ಟಿದೆ. ಕರ್ನಾಟಕ ಮತ್ತು ತೆಲಂಗಾಣದ ನಗರ ಪ್ರದೇಶಗಳಲ್ಲಿ ಫಲವತ್ತತೆ ದರವು 1.7ರಷ್ಟಿದೆ. ಕೇರಳದಲ್ಲಿ, ನಗರ ದರವು 1.8 ಮತ್ತು ಗ್ರಾಮೀಣ ದರವು 1.9 ರಷ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us