ಎನ್​ಎಸ್​ಸಿ, ಕೆವಿಪಿ, ಪೋಸ್ಟ್​​ ಆಫೀಸ್​ ಎಫ್​ಡಿ ಬಡ್ಡಿದರಗಳ ಕಡಿತ: 46 ವರ್ಷಗಳ ಕನಿಷ್ಠ ಮಟ್ಟಕ್ಕೆ ಪಿಪಿಎಫ್ ಬಡ್ಡಿ

|

Updated on: Mar 31, 2021 | 10:47 PM

PPF, NSC, SCSS, KVP, Post Office FD, RD Interest Rate Cut: ಅಂಚೆ ಕಚೇರಿಯ ಹಲವು ಜನಪ್ರಿಯ ಯೋಜನೆಗಳ ಬಡ್ಡಿದರಗಳನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. ಸಾರ್ವಜನಿಕ ಭವಿಷ್ಯ ನಿಧಿಯ (PPF) ಬಡ್ಡಿಯನ್ನು 46 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಸಲಾಗಿದೆ.

ಎನ್​ಎಸ್​ಸಿ, ಕೆವಿಪಿ, ಪೋಸ್ಟ್​​ ಆಫೀಸ್​ ಎಫ್​ಡಿ ಬಡ್ಡಿದರಗಳ ಕಡಿತ: 46 ವರ್ಷಗಳ ಕನಿಷ್ಠ ಮಟ್ಟಕ್ಕೆ ಪಿಪಿಎಫ್ ಬಡ್ಡಿ
ಅಂಚೆ ಇಲಾಖೆ ಉಳಿತಾಯ ಯೋಜನೆಗಳ ಬಡ್ಡಿಯನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. (ಪಿಟಿಐ ಚಿತ್ರ)
Follow us on

ದೆಹಲಿ: ದೇಶದ ಕೋಟ್ಯಂತರ ಜನರು ಸಣ್ಣ ಉಳಿತಾಯಕ್ಕೆ ನೆಚ್ಚಿಕೊಂಡಿರುವ ಅಂಚೆ ಕಚೇರಿಯ ಹಲವು ಜನಪ್ರಿಯ ಯೋಜನೆಗಳ ಬಡ್ಡಿದರಗಳನ್ನು ಕೇಂದ್ರ ಸರ್ಕಾರ ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ಜನರು ದೀರ್ಘಾವಧಿಯ ನಿಯಮಿತ ಹೂಡಿಕೆ/ಉಳಿತಾಯಕ್ಕೆ ನಂಬಿಕೊಂಡಿರುವ ಸಾರ್ವಜನಿಕ ಭವಿಷ್ಯ ನಿಧಿಯ (Public Provident Fund – PPF) ಬಡ್ಡಿಯನ್ನು 46 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಸಲಾಗಿದೆ. ಕಳೆದ 46 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಿಪಿಎಫ್ ಬಡ್ಡಿದರ ಶೇ 7ಕ್ಕಿಂತ ಕಡಿಮೆಯಾಗಿದೆ ಎಂಬುದು ಗಮನಾರ್ಹ ಸಂಗತಿ.

ಸಣ್ಣ ಉಳಿತಾಯ ಯೋಜನೆಗಳಲ್ಲಿ ನಿಯಮಿತವಾಗಿ ಹಣ ತೊಡಗಿಸುವವರಿಗೆ ಇದು ನಿಜಕ್ಕೂ ಕೆಟ್ಟ ಸುದ್ದಿಯೇ ಸರಿ. ಏಪ್ರಿಲ್ 1, 2021ರಿಂದ ಜೂನ್ 30, 2021ರವರೆಗೆ ಅನ್ವಯವಾಗುವಂತೆ ಕೇಂದ್ರ ಸರ್ಕಾರವು ಬುಧವಾರ (ಮಾರ್ಚ್ 31) ಬಡ್ಡಿದರಗಳನ್ನು ಘೋಷಿಸಿದೆ. ಪಿಪಿಎಫ್​ ಬಡ್ಡಿದರವನ್ನು ಶೇ 7.1ರಿಂದ ಶೇ 6.4ಕ್ಕೆ ಇಳಿಸಲಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯ (Senior Citizen Savings Scheme – SCSS) ಬಡ್ಡಿದರವನ್ನು ಶೇ 7.4ರಿಂದ ಶೇ 6.5ಕ್ಕೆ ಇಳಿಸಲಾಗಿದೆ.

ಅಂಚೆ ಇಲಾಖೆಯ ಜನಪ್ರಿಯ ಮಾಸಿಕ ಆದಾಯ ಯೋಜನೆಯ (Monthly Income Scheme – MIS) ಬಡ್ಡಿದರವನ್ನು ಶೇ 6.6ರಿಂದ ಶೇ 5.7ಕ್ಕೆ ಇಳಿಸಲಾಗಿದೆ. ಈ ಯೋಜನೆಯಡಿ ಬಡ್ಡಿಯನ್ನು ಪ್ರತಿತಿಂಗಳು ಪಾವತಿಸಲಾಗುತ್ತದೆ. ಹೀಗಾಗಿಯೇ ನಿವೃತ್ತ ಉದ್ಯೋಗಿಗಳು, ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹಣವನ್ನು ಇರಿಸಿ, ಪಿಂಚಣಿಯ ರೀತಿಯಲ್ಲಿ ಬಡ್ಡಿಯನ್ನು ಪ್ರತಿ ತಿಂಗಳು ಪಡೆದುಕೊಳ್ಳುತ್ತಾರೆ. ಈಗ ಬಡ್ಡಿ ಕಡಿಮೆಯಾಗಿರುವುದರಿಂದ ಈ ಯೋಜನೆಯಡಿ ಸಿಗುವ ಮಾಸಿಕ ಹಣವೂ ಕಡಿಮೆಯಾಗುತ್ತದೆ.

ಒಂದು ವರ್ಷದ ಅವಧಿ ಠೇವಣಿಗೆ (Time Deposit) ಶೇ 4.4 ಮತ್ತು 5 ವರ್ಷದ ಅವಧಿ ಠೇವಣಿಗೆ ಶೇ 5.8ರ ಬಡ್ಡಿದರಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಒಂದು ವರ್ಷದ ಅವಧಿ ಠೇವಣಿಗೆ ಈ ಹಿಂದೆ ಶೇ 5.5ರ ಬಡ್ಡಿ ನೀಡಲಾಗುತ್ತಿತ್ತು. ಈಗ ಇದು ಕೇವಲ ಶೇ 4.4ಕ್ಕೆ ಇಳಿದಿದೆ. ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಈವರೆಗೆ ಶೇ 4ರ ಬಡ್ಡಿ ನೀಡಲಾಗುತ್ತಿತ್ತು. ಇದನ್ನೂ ಶೇ .5ರಷ್ಟು ಕಡಿಮೆ ಮಾಡಿದೆ. ಇನ್ನು ಮುಂದೆ ಉಳಿತಾಯ ಖಾತೆಗಳಿಗೆ ಕೇವಲ ಶೇ 3.5ರ ಬಡ್ಡಿ ಸಿಗಲಿದೆ. ಅಂಚೆ ಇಲಾಖೆಯ ಮತ್ತೊಂದು ಜನಪ್ರಿಯ ಯೋಜನೆಯಾಗಿರುವ ಆವರ್ತ ಠೇವಣಿ ಯೋಜನೆಯ (Recurring Deposit Scheme) ಬಡ್ಡಿದರಗಳೂ ಯದ್ವಾತದ್ವಾ ಇಳಿದಿವೆ. 5 ವರ್ಷದ ಆರ್​ಡಿಗೆ ಈಗ ಸಿಗುವುದು ಕೇವಲ ಶೇ 5.3ರ ಬಡ್ಡಿದರ.

ಅಂಚೆ  ಕಚೇರಿ ಉಳಿತಾಯ ಯೋಜನೆಗಳಲ್ಲಿ ಸಿಗುವ ಬಡ್ಡಿ ವಿವರ

ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ರೂಪಿಸಿದ ವಿನೂತನ ಮಾದರಿಯ ಹಣಕಾಸು ಯೋಜನೆ ಸುಕನ್ಯಾ ಸಮೃದ್ಧಿಯ ಬಡ್ಡಿದರವೂ ಶೇ 7ರ ಗಡಿಯಿಂದ ಕೆಳಗಿಳಿದಿದೆ. ಈ ಮೊದಲು ಸುಕನ್ಯಾ ಸಮೃದ್ಧಿಗೆ ಶೇ 7.6 ಬಡ್ಡಿ ಸಿಗುತ್ತಿತ್ತು. ಇನ್ನು ಮುಂದೆ ಕೇವಲ ಶೇ 6.9ರಷ್ಟು ಬಡ್ಡಿ ಸಿಗಲಿದೆ. ತೆರಿಗೆ ಉಳಿತಾಯಕ್ಕೆ ಬಳಕೆಯಾಗುವ ಜನಪ್ರಿಯ ಯೋಜನೆ ರಾಷ್ಟ್ರೀಯ ಉಳಿತಾಯ ಪತ್ರದ (National Savings Certificate – NSC) ಬಡ್ಡಿದರವೂ ಶೇ 6.8ರಿಂದ ಶೇ 5.9ಕ್ಕೆ ಇಳಿದಿದೆ. ಕಿಸಾನ್ ವಿಕಾಸ್ ಪತ್ರಕ್ಕೆ ಶೇ 6.2ರ ಬಡ್ಡಿ ನಿಗದಿಪಡಿಸಲಾಗಿದೆ. ಈ ಪತ್ರಗಳಲ್ಲಿ ಹೂಡಿಕೆಯು 138 ತಿಂಗಳ ನಂತರ ದ್ವಿಗುಣಗೊಳ್ಳುತ್ತದೆ. ಈ ಮೊದಲು ಕಿಸಾನ್ ವಿಕಾಸ್ ಪತ್ರಕ್ಕೆ ಶೇ 6.9ರ ಬಡ್ಡಿಯಿತ್ತು. ಹೂಡಿಕೆಯು 124 ತಿಂಗಳಲ್ಲಿ ದ್ವಿಗುಣವಾಗುತ್ತಿತ್ತು.

ಏಪ್ರಿಲ್ 1ರಿಂದ ಹೊಸ ಬಡ್ಡಿದರಗಳು ಚಾಲ್ತಿಗೆ ಬರುತ್ತವೆ. ಪಿಪಿಎಫ್, ಸುಕನ್ಯಾ ಸಮೃದ್ಧಿಯಂಥ ಪ್ರತಿ ವರ್ಷ ಬಡ್ಡಿ ದರಗಳು ಬದಲಾಗುವ ಯೋಜನೆಗಳು ಹೊರತುಪಡಿಸಿ ಉಳಿದ ಯೋಜನೆಗಳನ್ನು ಈ ಹಿಂದೆಯೇ ಆರಂಭಿಸಿದಲ್ಲಿ, ಖಾತೆ ಆರಂಭಿಸಿದಾಗ ಚಾಲ್ತಿಯಲ್ಲಿದ್ದ ಬಡ್ಡಿದರವೇ ಅವಧಿ ಪೂರ್ಣ ಚಾಲ್ತಿಯಲ್ಲಿರುತ್ತದೆ.

ಇದನ್ನೂ ಓದಿ: Tax Saving: ತೆರಿಗೆ ಉಳಿತಾಯದ 10 ಉತ್ತಮ ಯೋಜನೆಗಳು ಇಲ್ಲಿವೆ

ಇದನ್ನೂ ಓದಿ: ಎಂಐಎಸ್: ತಿಂಗಳ ಆದಾಯಕ್ಕೆ ಹೇಳಿಮಾಡಿಸಿದ ಯೋಜನೆ.. ಹಣ ತೊಡಗಿಸಿ!

Published On - 10:41 pm, Wed, 31 March 21