Post Office Monthly Income Scheme ತಿಂಗಳ ಆದಾಯಕ್ಕೆ ಹೇಳಿಮಾಡಿಸಿದ ಯೋಜನೆ.. ಹಣ ತೊಡಗಿಸಿ!
Post Office Monthly Income Scheme ಇದಕ್ಕೆ ಸರ್ಕಾರದ ಭದ್ರತೆಯೂ ಇದ್ದು, ಮೆಚ್ಯೂರಿಟಿ ಹಣ ಕೈ ಸೇರುವ ತನಕವೂ ಮಾರುಕಟ್ಟೆಯ ಯಾವುದೇ ಅಪಾಯಗಳು ಎದುರಾಗದಂತೆ ಸರ್ಕಾರ ಮುತುವರ್ಜಿ ವಹಿಸಲಿದೆ.
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ (Savings Account) ತೆರೆಯುವುದು ಅತ್ಯಂತ ಸುರಕ್ಷಿತ ಮಾರ್ಗ. ತಿಂಗಳಿಗೆ ನಿಯಮಿತವಾದ ಆದಾಯ ದೊರಕಿಸಿಕೊಡುವ, ಭದ್ರತೆಯನ್ನು ನೀಡುವ ‘ಪೋಸ್ಟ್ ಆಫೀಸ್ ಮಾಸಿಕ ಆದಾಯ ಪ್ಲ್ಯಾನ್’ (Post Office Monthly Income Scheme) ಹಿರಿಯ ನಾಗರಿಕರಿಗೆ ಮತ್ತು ನಿವೃತ್ತಿ ಜೀವನ ನಡೆಸುತ್ತಿರುವವರಿಗೆ ಉತ್ತಮ ಯೋಜನೆಯಾಗಬಲ್ಲದು. ಈ ನಿಟ್ಟಿನಲ್ಲಿ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವುದು ಹೇಗೆ? ನೀವು ಈಗಿನಿಂದಲೇ ಉಳಿತಾಯ ಆರಂಭಿಸಿದರೆ ಅದು ನಿಮಗೆ ಯಾವ ತೆರನಾದ ಪ್ರಯೋಜನ ನೀಡಬಲ್ಲದು ಎನ್ನುವ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಅಂಚೆ ಕಚೇರಿಯ ಸದರಿ ಯೋಜನೆಯಲ್ಲಿ ನೀವು ಅತ್ಯಂತ ಕನಿಷ್ಠ ಮೊತ್ತದಿಂದ ಉಳಿತಾಯ ಆರಂಭಿಸಬಹುದಾಗಿದೆ. ₹1,000ಕ್ಕಿಂತಲೂ ಕಡಿಮೆ ಮೊತ್ತದಲ್ಲಿ ಈ ಯೋಜನೆ ಶುರು ಮಾಡಬಹುದಾಗಿದ್ದು, ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲಕರವಾಗಿದೆ. ಇದಕ್ಕೆ ಸರ್ಕಾರದ ಭದ್ರತೆಯೂ ಇದ್ದು, ಮೆಚ್ಯೂರಿಟಿ ಹಣ ಕೈ ಸೇರುವ ತನಕವೂ ಮಾರುಕಟ್ಟೆಯ ಯಾವುದೇ ಅಪಾಯಗಳು ಎದುರಾಗದಂತೆ ಸರ್ಕಾರ ಮುತುವರ್ಜಿ ವಹಿಸಲಿದೆ. ಈ ಕಾರಣದಿಂದಲೇ ಯೋಜನೆಯು ದೇಶದಲ್ಲಿ ಜನಪ್ರಿಯಗೊಂಡಿದ್ದು, ಹೆಚ್ಚೆಚ್ಚು ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಪ್ಲ್ಯಾನ್ನಡಿ ವೈಯಕ್ತಿಕವಾಗಿ ಗರಿಷ್ಠ ₹4.5ಲಕ್ಷ ಮೊತ್ತವನ್ನು ಹೂಡಬಹುದಾಗಿದ್ದು, ಜಂಟಿ ಖಾತೆಯಲ್ಲಿ ಗರಿಷ್ಠ ₹9 ಲಕ್ಷ ಇಡಬಹುದಾಗಿದೆ. ಇದಕ್ಕೆ ಕನಿಷ್ಠ ಕಾಲಾವಧಿ 5 ವರ್ಷಗಳಾಗಿದ್ದು, ತದನಂತರ ನಿಮ್ಮ ಹಣವನ್ನು ಮರಳಿ ಪಡೆಯುವ ಅಥವಾ ಮರುಹೂಡಿಕೆ ಮಾಡುವ ಅವಕಾಶವೂ ಇದೆ. ಸದ್ಯ ಈ ಯೋಜನೆಗೆ ಶೇ. 6.6ರಷ್ಟು ವಾರ್ಷಿಕ ಬಡ್ಡಿ ದೊರೆಯುತ್ತಿದ್ದು, ಮಾಸಾಂತ್ಯಕ್ಕೆ ಬಡ್ಡಿ ಹಣ ಗ್ರಾಹಕರಿಗೆ ಲಭಿಸಲಿದೆ.
ಒಬ್ಬ ವ್ಯಕ್ತಿ ತನ್ನದೇ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಖಾತೆ ತೆರೆಯಲು ಅವಕಾಶವಿದೆಯಾದರೂ, ಅಷ್ಟೂ ಖಾತೆಗಳಲ್ಲಿನ ಒಟ್ಟು ಮೊತ್ತ ₹4.5ಲಕ್ಷ ಮೀರಬಾರದೆಂಬ ನಿಯಮ ಅನ್ವಯಿಸುತ್ತದೆ. ಜೊತೆಗೆ, 10 ವರ್ಷ ಕೆಳಪಟ್ಟ ಮಕ್ಕಳ ಹೆಸರಲ್ಲಿ ಖಾತೆ ತೆರೆಯುವ ಅವಕಾಶವೂ ಇದ್ದು, ಅವರು 18 ವರ್ಷ ದಾಟಿದ ನಂತರ ಹಣ ಹಿಂಪಡೆಯಬಹುದಾಗಿದೆ. ಆದರೆ, ಮಕ್ಕಳ ಖಾತೆಯಲ್ಲಿನ ಮೊತ್ತಕ್ಕೆ ಗರಿಷ್ಠ ಮೊತ್ತವನ್ನು ₹3 ಲಕ್ಷವೆಂದು ನಿಗದಿಪಡಿಸಲಾಗಿದ್ದು, ಆಸಕ್ತರು ಹತ್ತಿರದ ಅಂಚೆ ಕಚೇರಿಗೆ ತೆರಳಿ ಹೆಚ್ಚಿನ ಮಾಹಿತಿ ಪಡೆದು ಖಾತೆ ತೆರೆಯಬಹುದಾಗಿದೆ.
Tv9 Digital Live | ಬಿಟ್ ಕಾಯಿನ್ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್ ಕರೆನ್ಸಿ?