
ನವದೆಹಲಿ, ಅಕ್ಟೋಬರ್ 07: ಚುನಾವಣಾ ಆಯೋಗದ (ECI)ಕಚೇರಿಯತ್ತ ‘ಇಂಡಿ’ ಮೈತ್ರಿಕೂಟ ನಡೆಸಿದ ಪ್ರತಿಭಟನಾ ಮೆರವಣಿಗೆಯ ವೇಳೆ ರಾಜಕೀಯ ನಾಟಕೀಯ ಬೆಳವಣಿಗೆಗಳು ನಡೆದಿವೆ. ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಕಿಂಗ್ಸ್‌ವೇ ಕ್ಯಾಂಪ್‌ನಲ್ಲಿ ಇರಿಸಿದ್ದಾಗ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಲ್ಲಿನ ಬೃಹತ್ ಗೇಟ್ ಹತ್ತಿ ಒಳಪ್ರವೇಶಿಸಿ ಸ್ವತಃ ಬಾಗಿಲನ್ನು ತೆರೆದಿದ್ದಾರೆ. ಈ ದೃಶ್ಯಗಳ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಸೀರೆಯಲ್ಲಿಯೇ ಗೇಟ್ ಹತ್ತಿ ಇಳಿದ ಪ್ರಿಯಾಂಕಾ ಅವರ ಸಾಹಸಕ್ಕೆ ನೆಟ್ಟಿಗರು ಮಾರುಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಇವರನ್ನು ಹೆಣ್ಣು ಹುಲಿ ಎಂದು ಬಣ್ಣಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಸತ್ ಭವನದಿಂದ ಚುನಾವಣಾ ಆಯೋಗದ ಕಚೇರಿಯತ್ತ ಹೊರಟಿದ್ದ 300ಕ್ಕೂ ಹೆಚ್ಚು ವಿಪಕ್ಷ ಸಂಸದರನ್ನು ಆಕಾಶವಾಣಿ ಭವನ ಮತ್ತು ನೀತಿ ಆಯೋಗದ ಬಳಿ ಪೊಲೀಸರು ತಡೆದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ರಸ್ತೆಯಲ್ಲೇ ಕುಳಿತು ಸುಮಾರು ಒಂಬತ್ತು ಗಂಟೆಗಳ ಕಾಲ ಧರಣಿ ನಡೆಸಿದರು. ಸಂಜೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಪೊಲೀಸ್ ಬಸ್ ಮೂಲಕ ಉತ್ತರ ದೆಹಲಿಯ ಕಿಂಗ್ಸ್‌ವೇ ಕ್ಯಾಂಪ್‌ಗೆ ಕರೆದೊಯ್ದರು.
ಮತ್ತಷ್ಟು ಓದಿ: ಚುನಾವಣಾ ಆಯೋಗದ ಕಚೇರಿ ಚಲೋ: ಆಕಾಶವಾಣಿ ಭವನದ ಬಳಿ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ತಡೆದ ದೆಹಲಿ ಪೊಲೀಸರು
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ದೇಶಾದ್ಯಂತ ಕೋಟ್ಯಂತರ ಮತದಾರರ ಹೆಸರುಗಳನ್ನು ಏಕಾಏಕಿ ಕೈಬಿಡಲಾಗಿದೆ ಎಂದು ವಿರೋಧ ಪಕ್ಷಗಳು ಗಂಭೀರವಾಗಿ ಆರೋಪಿಸಿವೆ. ಈ ಪ್ರಕ್ರಿಯೆಯು ಆಡಳಿತಾರೂಢ ಬಿಜೆಪಿಗೆ ಅನುಕೂಲ ಮಾಡಿಕೊಡುವಂತಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ತಕ್ಷಣದ ರಾಜೀನಾಮೆಗೆ ‘ಇಂಡಿಯಾ’ ಮೈತ್ರಿಕೂಟ ಪಟ್ಟು ಹಿಡಿದಿದೆ.
ಪೋಸ್ಟ್
VIDEO | Delhi: Congress MP Priyanka Gandhi Vadra (@priyankagandhi) climbs over and opens the gate of Kingsway Camp, where Rahul Gandhi and other detained Opposition leaders were being held. Congress workers and other protesters then storm into the premises.
(Full video available on PTI Videos – https://t.co/bIyFWTfmBd)
— Press Trust of India (@PTI_News) October 6, 2026
ಮತದಾರರ ಪಟ್ಟಿ ಪರಿಷ್ಕರಣೆ ನಿಯಮಾನುಸಾರವೇ ನಡೆದಿದ್ದು, ಯಾವುದೇ ಅರ್ಹ ಮತದಾರರನ್ನು ಅನ್ಯಾಯವಾಗಿ ಕೈಬಿಟ್ಟಿಲ್ಲ ಎಂದು ಚುನಾವಣಾ ಆಯೋಗ ಮತ್ತು ಬಿಜೆಪಿ ಸ್ಪಷ್ಟಪಡಿಸಿವೆ. ವಿರೋಧ ಪಕ್ಷಗಳು ಅನಗತ್ಯ ರಾಜಕೀಯ ಗಿಮಿಕ್ ಮಾಡುತ್ತಿವೆ ಎಂದು ಆಡಳಿತ ಪಕ್ಷ ಆರೋಪಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ