ಸಿಎಂ ರೇವಂತ್ ರೆಡ್ಡಿಯ ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಣೆ ಕುರಿತು ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಅವರ ಅಮೆರಿಕ ಭೇಟಿ ರದ್ದಾಗಿದೆ.ತೆಲಂಗಾಣ ಸರ್ಕಾರ ಮುಖ್ಯಮಂತ್ರಿಗಳು ಅಮೆರಿಕ ಮತ್ತು ಯುಕೆಗೆ ಪ್ರಯಾಣಿಸಲು ಕೇಂದ್ರದಿಂದ ಅನುಮತಿ ಕೋರಿತ್ತು. ಆದರೆ ಕೇಂದ್ರ ಸರ್ಕಾರ ಯುಕೆ (ಇಂಗ್ಲೆಂಡ್) ಭೇಟಿಗೆ ಮಾತ್ರ ಹಸಿರು ನಿಶಾನೆ ತೋರಿಸಿದೆ. ಅಮೆರಿಕ ಭೇಟಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಹಾಗೇ, ಈ ನಿರ್ಧಾರಕ್ಕೆ ಕಾರಣವೇನೆಂಬುದರ ಬಗ್ಗೆಯೂ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.

ಸಿಎಂ ರೇವಂತ್ ರೆಡ್ಡಿಯ ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಣೆ ಕುರಿತು ಕೇಂದ್ರ ಸರ್ಕಾರದಿಂದ ಸ್ಪಷ್ಟನೆ
Randhir Jaiswal
Image Credit source: PTI

Updated on: Aug 21, 2026 | 10:33 PM

ನವದೆಹಲಿ, ಆಗಸ್ಟ್ 21: ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ಅವರ ಕಚೇರಿ ಸಲ್ಲಿಸಿದ್ದ ಕಾರ್ಯಕ್ರಮದ ವಿವರಗಳನ್ನು ಪರಿಶೀಲಿಸಿದ ನಂತರವೇ ಅವರ ಅಮೆರಿಕ ಪ್ರವಾಸಕ್ಕೆ ರಾಜಕೀಯ ಅನುಮತಿ ನಿರಾಕರಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಇತರ ಗಣ್ಯರ ವಿದೇಶಿ ಪ್ರವಾಸಗಳಿಗೆ ರಾಜಕೀಯ ಅನುಮತಿ ನೀಡುವ ಮುನ್ನ ಸಚಿವಾಲಯವು ಪ್ರಸ್ತಾವಿತ ಕಾರ್ಯಕ್ರಮಗಳನ್ನು ಪರಿಶೀಲಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

“ಈ ನಿರ್ದಿಷ್ಟ ಪ್ರಕರಣದಲ್ಲಿ, ಅಮೆರಿಕ ಪ್ರವಾಸಕ್ಕೆ ಸಂಬಂಧಿಸಿದ ಕಾರ್ಯಕ್ರಮವು ಸೂಕ್ತವಾಗಿರಲಿಲ್ಲ, ಆದ್ದರಿಂದ ಅನುಮತಿಯನ್ನು ನಿರಾಕರಿಸಲಾಗಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಮುಖ್ಯಮಂತ್ರಿಯವರ ಯುನೈಟೆಡ್ ಕಿಂಗ್‌ಡಮ್ (ಯುಕೆ) ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು ಎಂಬುದನ್ನು ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಶಾಸಕ, ಸಂಸದರಾಗಲು ವಯೋಮಿತಿ 21ಕ್ಕೆ ಇಳಿಕೆ: ಆಗಸ್ಟ್ ಮೊದಲ ವಾರದಲ್ಲೇ ವಿಧೇಯಕ ತರಲು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ನಿರ್ಧಾರ

ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಎಂ ರೇವಂತ್ ರೆಡ್ಡಿ ನೇತೃತ್ವದ ‘ತೆಲಂಗಾಣ ರೈಸಿಂಗ್’ ನಿಯೋಗದ ಅಮೆರಿಕ ಪ್ರವಾಸ ರದ್ದಾಗಿದೆ ಎಂದು ತೆಲಂಗಾಣ ಸರ್ಕಾರ ತಿಳಿಸಿದೆ. ಮುಖ್ಯಮಂತ್ರಿಯವರು ಲಂಡನ್‌ನಿಂದ ಬೋಸ್ಟನ್‌ಗೆ ತೆರಳಿ, ನಂತರ ನ್ಯೂಯಾರ್ಕ್ ಮತ್ತು ಇತರ ಅಮೆರಿಕದ ನಗರಗಳಿಗೆ ಭೇಟಿ ನೀಡಲು ಯೋಜಿಸಿದ್ದರು. ಈ ಪ್ರವಾಸವು ಶಿಕ್ಷಣ, ಕೌಶಲ್ಯ, ತಂತ್ರಜ್ಞಾನ ಮತ್ತು ಜಾಗತಿಕ ಸಂಸ್ಥೆಗಳೊಂದಿಗಿನ ಸಹಯೋಗದ ಮೇಲೆ ಗಮನ ಹರಿಸಿತ್ತು ಎಂದು ರಾಜ್ಯ ಸರ್ಕಾರ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us