Delhi Chalo: ದೆಹಲಿ-ಜೈಪುರ ಹೆದ್ದಾರಿ ತಡೆಗೆ ರೈತರ ಸಿದ್ಧತೆ; ಪಂಜಾಬ್-ಹರ್ಯಾಣ ಗಡಿಯಲ್ಲಿ ಖಾಲಿಸ್ತಾನಿ ಕರಿನೆರಳು

|

Updated on: Dec 13, 2020 | 12:17 PM

ಡಿ.16ರ ಹೊತ್ತಿಗೆ ರಾಜಸ್ಥಾನ, ಪಂಜಾಬ್​ ಮತ್ತು ಹರ್ಯಾಣದಿಂದ ಇನ್ನಷ್ಟು ರೈತರು ಇಲ್ಲಿಗೆ ಸುಮಾರು 500 ಟ್ರಾಲಿಗಳಲ್ಲಿ ಬಂದು ತಲುಪಲಿದ್ದಾರೆ ಎಂದು ಪ್ರತಿಭಟನಾನಿರತರು ಹೇಳಿದ್ದಾರೆ.

Delhi Chalo: ದೆಹಲಿ-ಜೈಪುರ ಹೆದ್ದಾರಿ ತಡೆಗೆ ರೈತರ ಸಿದ್ಧತೆ; ಪಂಜಾಬ್-ಹರ್ಯಾಣ ಗಡಿಯಲ್ಲಿ ಖಾಲಿಸ್ತಾನಿ ಕರಿನೆರಳು
ಪ್ರತಿಭಟನಾ ನಿರತ ರೈತರು (ಪಿಟಿಐ ಚಿತ್ರ)
Follow us on

ದೆಹಲಿ: ಕೃಷಿ ಕಾಯ್ದೆಯ ವಿರುದ್ಧ ಪಟ್ಟು ಬಿಡದೆ ಪ್ರತಿಭಟನೆ ನಡೆಸುತ್ತಿರುವ ರೈತರು ನಾಳೆಯಿಂದ (ಡಿ.14) ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆಯನ್ನು ಕೇಂದ್ರಸರ್ಕಾರಕ್ಕೆ ನೀಡಿದ್ದಾರೆ. ಅಂತೆಯೇ ಇಂದಿನಿಂದ ಪ್ರತಿಭಟನೆ ತೀವ್ರಗೊಳಿಸುತ್ತಿದ್ದಾರೆ. ಇಂದು ದೆಹಲಿ-ಜೈಪುರ ಹೆದ್ದಾರಿ ನಿರ್ಬಂಧಿಸಿ ಪ್ರತಿಭಟನೆ ಮಾಡಲು ಸಾವಿರಾರು ರೈತರು ಮೆರವಣಿಗೆ ಸಾಗಲು ಸಿದ್ಧರಾಗಿದ್ದಾರೆ.

ಅತ್ಯಂತ ಪ್ರಮುಖ ಅಂತಾರಾಜ್ಯ ಹೆದ್ದಾರಿ ಇದಾಗಿದ್ದು, ನಿನ್ನೆಯೂ ಇಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಲು ಮುಂದಾಗಿದ್ದ ರೈತರು ಪ್ರಯತ್ನದಲ್ಲಿ ವಿಫಲರಾಗಿದ್ದರು. ಸಿಂಘು ಗಡಿಯಲ್ಲಿ ಈಗಾಗಲೇ ಸಾವಿರಾರು ರೈತರು ಎರಡು ವಾರಗಳಿಂದಲೂ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಡಿ.16ರ ಹೊತ್ತಿಗೆ ರಾಜಸ್ಥಾನ, ಪಂಜಾಬ್​ ಮತ್ತು ಹರ್ಯಾಣದಿಂದ ಇನ್ನಷ್ಟು ರೈತರು ಇಲ್ಲಿಗೆ ಸುಮಾರು 500 ಟ್ರಾಲಿಗಳಲ್ಲಿ ಬಂದು ತಲುಪಲಿದ್ದಾರೆ ಎಂದು ಪ್ರತಿಭಟನಾ ನಿರತ ರೈತರೊಬ್ಬರು ತಿಳಿಸಿದ್ದರು.

ಘಾಜಿಯಾಪುರ ಗಡಿ ಬಂದ್​
ರೈತರ ಪ್ರತಿಭಟನೆಯಿಂದಾಗಿ ಘಾಜಿಯಾಪುರ ಗಡಿಯನ್ನು ಬಂದ್ ಮಾಡಲಾಗಿದ್ದು, ನೊಯ್ಡಾ ಮತ್ತು ಗಾಝಿಯಾಬಾದ್​ನಿಂದ ದೆಹಲಿಗೆ ಸಂಚಾರ ನಿಷೇಧಿಸಲಾಗಿದೆ. ಅದರ ಬದಲು ಚಿಲ್ಲಾ, ಆನಂದ ವಿಹಾರ್, ಡಿಎನ್​ಡಿ, ಅಪ್ಸರಾ, ಭೋಪ್ರಾ ಗಡಿ ಮೂಲಕ ದೆಹಲಿಗೆ ಹೋಗಲು ಪ್ರಯಾಣಿಕರಿಗೆ ಸೂಚಿಸಲಾಗುತ್ತಿದೆ. ಇದರೊಂದಿಗೆ ಸಿಂಘು, ಔಚಂಡಿ, ಮಂಗೇಶ್​, ಪಿಯಾವ್ ಮಣಿಯಾರಿ ಗಡಿಗಳನ್ನೂ ನಿರ್ಬಂಧಿಸಲಾಗಿದೆ. ಅದರ ಬದಲು ಲಂಫುರ್​, ಸಾಫಿಯಾಬಾದ್​, ಸಬೋಲಿ ಮತ್ತು ಸಿಂಘು ಸ್ಕೂಲ್​ ಟೋಲ್​ ಟ್ಯಾಕ್ಸ್ ಬಾರ್ಡರ್ ಮೂಲಕ ಸಂಚರಿಸಲು ತಿಳಿಸಲಾಗಿದೆ. ಹಾಗೇ, ರೈತರು ಹೋರಾಟ ನಡೆಸುತ್ತಿರುವ ಗಡಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಖಾಲಿಸ್ತಾನಿ ಪ್ರಚೋದನೆ?
ಪಂಜಾಬ್-ಹರ್ಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಖಾಲಿಸ್ತಾನಿ ಗುಂಪು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ರೈತರಿಗೆ ಖಾಲಿಸ್ತಾನ ಚಳವಳಿ ಧ್ವಜ ನೀಡುತ್ತಿದ್ದು, ಅದನ್ನು ಹಿಡಿದು ಹೋರಾಟ ನಡೆಸುವಂತೆ ಪ್ರಚೋದನೆ ಮಾಡುತ್ತಿದೆ. ಅಷ್ಟೇ ಅಲ್ಲ, ಯಾರು ಖಾಲಿಸ್ತಾನಿ ಧ್ವಜ ಹಿಡಿದು ಪ್ರತಿಭಟನೆ ಮಾಡಲು ಮುಂದಾಗುತ್ತಾರೋ ಅವರಿಗೆ ಸೂಕ್ತ ಬಹುಮಾನ ನೀಡುವುದಾಗಿಯೂ ಖಾಲಿಸ್ತಾನ ಪ್ರತ್ಯೇಕತಾ ಚಳವಳಿಕಾರರು ಹೇಳುತ್ತಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.

ಖಾಲಿಸ್ತಾನಿ ಪ್ರತ್ಯೇಕತಾವಾದಿಗಳಿಂದ ವಾಷಿಂಗ್ಟನ್​ನ ಮಹಾತ್ಮ ಗಾಂಧಿ ಪ್ರತಿಮೆ ವಿರೂಪ

Published On - 12:08 pm, Sun, 13 December 20