ಸಂಸತ್ ಭವನದ ಮೇಲಿನ ಉಗ್ರರ ದಾಳಿಗೆ 19 ವರ್ಷ; ಹೇಡಿತನದ ಕ್ರೌರ್ಯವನ್ನೆಂದೂ ಮರೆಯೋದಿಲ್ಲವೆಂದ ಪ್ರಧಾನಿ ನರೇಂದ್ರ ಮೋದಿ
2001ರ ಡಿಸೆಂಬರ್ 13ರಂದು ಪಾಕ್ ಮೂಲದ ಲಷ್ಕರ್ ಎ ತೊಯ್ಬಾ (LeT) ಮತ್ತು ಜೈಷ್ ಎ ಮೊಹಮ್ಮದ್ (JeM) ಉಗ್ರರು ತಮ್ಮ ಕಾರಿಗೆ ಗೃಹಸಚಿವಾಲಯ ಮತ್ತು ಸಂಸತ್ತಿನ ಲೇಬಲ್ (ಸಂಸತ್ತಿನ ಆವರಣ ಪ್ರವೇಶಿಸಲು ಅನುಮತಿ ಪಡೆಯುವ ಸ್ಟಿಕರ್) ಅಂಟಿಸಿಕೊಂಡು ಬಂದು ಭದ್ರತಾ ಸಿಬ್ಬಂದಿಯನ್ನು ಸುಲಭವಾಗಿ ನಂಬಿಸಿದ್ದರು.
ದೆಹಲಿ: ದೇಶದ ಶಕ್ತಿಕೇಂದ್ರ ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದು ಇಂದಿಗೆ 19 ವರ್ಷ. ಈ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ, ಟ್ವೀಟ್ ಮಾಡಿ ಅಂದಿನ ದಾಳಿಯನ್ನು ನೆನಪಿಸಿಕೊಂಡಿದ್ದಾರೆ. ಅಂದು ಉಗ್ರರೊಂದಿಗಿನ ಹೋರಾಟದಲ್ಲಿ ಮಡಿದ ಯೋಧರು, ಪೊಲೀಸ್ ಸಿಬ್ಬಂದಿಗೆ ಗೌರವ ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
2001ರ ಡಿಸೆಂಬರ್ 13ರಂದು ನಮ್ಮ ಸಂಸತ್ ಭವನದ ಮೇಲೆ ನಡೆಸಲಾದ ಹೇಡಿತನದ ದಾಳಿಯನ್ನು ನಾವೆಂದೂ ಮರೆಯುವುದಿಲ್ಲ. ಅಂದು ಸಂಸತ್ತನ್ನು ಉಳಿಸಿ, ಜನರ ಪ್ರಾಣ ಉಳಿಸಲು ತಮ್ಮ ಜೀವವನ್ನೇ ತ್ಯಾಗ ಮಾಡಿದ ಯೋಧರ ಶೌರ್ಯವನ್ನು ನೆನಪಿಸಿಕೊಳ್ಳಲೇಬೇಕು..ಅವರಿಗೆ ಸದಾ ಕೃತಜ್ಞರಾಗಿರಬೇಕು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
We will never forget the cowardly attack on our Parliament on this day in 2001. We recall the valour and sacrifice of those who lost their lives protecting our Parliament. India will always be thankful to them.
— Narendra Modi (@narendramodi) December 13, 2020
ಕರಾಳ ದಿನದ ಮೆಲುಕು 2001ರ ಡಿಸೆಂಬರ್ 13ರಂದು ಪಾಕ್ ಮೂಲದ ಲಷ್ಕರ್ ಎ ತೊಯ್ಬಾ (LeT) ಮತ್ತು ಜೈಷ್ ಎ ಮೊಹಮ್ಮದ್ (JeM) ಉಗ್ರರು ತಮ್ಮ ಕಾರಿಗೆ ಗೃಹಸಚಿವಾಲಯ ಮತ್ತು ಸಂಸತ್ತಿನ ಲೇಬಲ್ (ಸಂಸತ್ತಿನ ಆವರಣ ಪ್ರವೇಶಿಸಲು ಅನುಮತಿ ಪಡೆಯುವ ಸ್ಟಿಕರ್) ಅಂಟಿಸಿಕೊಂಡು ಬಂದು ಭದ್ರತಾ ಸಿಬ್ಬಂದಿಯನ್ನು ಸುಲಭವಾಗಿ ನಂಬಿಸಿದ್ದರು. AK47, ಗ್ರೆನೇಡ್, ಪಿಸ್ತೂಲ್ಗಳನ್ನು ತಂದು ದಾಳಿ ನಡೆಸಿದ್ದರು. ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಗಲೇ ಸಂಸತ್ ಭವನದಿಂದ ಹೊರಟಾಗಿತ್ತು. ಆದರೆ ಅಂದಿನ ಗೃಹಸಚಿವ ಎಲ್.ಕೆ.ಆಡ್ವಾಣಿ ಮತ್ತು ಕೇಂದ್ರ ರಕ್ಷಣಾ ಖಾತೆಯ ರಾಜ್ಯ ಸಚಿವ ಹರಿನ್ ಪಾಠಕ್ ಸೇರಿ 100ಕ್ಕೂ ಹೆಚ್ಚು ರಾಜಕೀಯ ಗಣ್ಯರು ಸಂಸತ್ತಿನ ಕಟ್ಟಡದೊಳಗೆ ಇದ್ದರು.
ಮೊದಲು ಉಪರಾಷ್ಟ್ರಪತಿ ಕಿಶನ್ ಕಾಂತ್ ಅವರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ ಉಗ್ರರನ್ನು ಅಲ್ಲಿದ್ದ ಭದ್ರತಾ ಸಿಬ್ಬಂದಿ ತಡೆದರು. ಅವರೂ ಪ್ರತಿಯಾಗಿ ಗುಂಡಿನ ದಾಳಿ ಶುರು ಮಾಡಿದರು. ಈ ಭಯಾನಕ ಘಟನೆಯಲ್ಲಿ 9 ಮಂದಿ ಮೃತಪಟ್ಟು, 22 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಉಗ್ರರು ನಡೆಸಬಹುದಾಗಿದ್ದ ಬಹುದೊಡ್ಡ ದಾಳಿಯನ್ನು ಭದ್ರತಾ ಸಿಬ್ಬಂದಿ ತಡೆದಿದ್ದರು. ಹಾಗೇ 5 ಮಂದಿ ಉಗ್ರರರನ್ನು ಹೊಡೆದುರುಳಿಸಿದ್ದರು.
ಪ್ರಕರಣದ ನಂತರ ಪೊಲೀಸರ ತನಿಖೆಯಲ್ಲಿ ಮೊಹಮ್ಮದ್ ಅಫ್ಜಲ್ ಗುರು, ಶೌಕತ್ ಹುಸೇನ್ ಗುರು, ಸೈಯದ್ ಅಬ್ದುಲ್ ರೆಹಮಾನ್ ಗಿಲಾನಿ ಮತ್ತು ಶೌಕತ್ನ ಪತ್ನಿ ಆಫ್ಸಾ ಗುರು (ನವಜೋತ್ ಸಂಧು) ಆರೋಪಿಗಳೆಂದು ಸಾಬೀತಾಯಿತು. ಆರೇ ತಿಂಗಳಲ್ಲಿ ವಿಚಾರಣೆ ಮುಗಿಸಿದ ಕೋರ್ಟ್ ಅಫ್ಜಲ್ ಗುರು, ಶೌಕತ್ ಹುಸೇನ್ ಗುರು, ಸೈಯದ್ ಅಬ್ದುಲ್ ರೆಹಮಾನ್ ಗಿಲಾನಿಗೆ ಮರಣದಂಡನೆ ವಿಧಿಸಿತ್ತು. ನವಜೋತ್ ಸಂಧುಗೆ 5 ವರ್ಷ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಲಾಗಿತ್ತು.
ಮೇಲ್ಮನವಿ ಸಲ್ಲಿಸಿದ್ದ ಗಿಲಾನಿ ಪರ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ವಕಾಲತ್ತು ವಹಿಸಿದ್ದರು. ಗಿಲಾನಿ ನಂತರ ಬಿಡುಗಡೆಯಾದ. ಆದರೆ ಶೌಕತ್ ಮತ್ತು ಅಫ್ಜಲ್ ಗುರುವಿಗೆ ಮರಣದಂಡನೆಯಲ್ಲಿ ವಿನಾಯಿತಿ ನೀಡಿರಲಿಲ್ಲ. ಆದರೆ 9 ತಿಂಗಳ ನಂತರ ಶೌಕತ್ ತನ್ನ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಆದ. ಆಫ್ಜಲ್ ಗುರು 2013ರಲ್ಲಿ ನೇಣಿಗೇರಿದೆ. ಈತ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದ. ಆದರೆ ಅವರು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪವಾರ್ಗೆ ಎರಡು ಬಾರಿ ಪ್ರಧಾನಿ ಹುದ್ದೆ ತಪ್ಪಿಸಿದ್ದು ಕಾಂಗ್ರೆಸ್ಸಿನ ದರಬಾರಿ ಗಣಗಳು; ಪ್ರಫುಲ್ ಪಟೇಲ್