ಪವಾರ್ಗೆ ಎರಡು ಬಾರಿ ಪ್ರಧಾನಿ ಹುದ್ದೆ ತಪ್ಪಿಸಿದ್ದು ಕಾಂಗ್ರೆಸ್ಸಿನ ದರಬಾರಿ ಗಣಗಳು; ಪ್ರಫುಲ್ ಪಟೇಲ್
ಕರ್ನಾಟಕದಲ್ಲಿ ಇಂದಿಗೂ ಕುತೂಹಲ ಇರುವ ಅಂಶ ಎಂದರೆ ದೇವೇಗೌಡ ಹೇಗೆ ಪ್ರಧಾನಿ ಆದರು ಎಂದು. ಎನ್ಸಿಪಿ ಮುಖಂಡ ಪ್ರಫುಲ್ ಪಟೇಲ್ ಹೇಳುವುದು ನಿಜವಾಗಿದ್ದರೆ ಈಗ ಈ ರಹಸ್ಯದ ಅನಾವರಣ ಆದಂತಿದೆ.
ಈ ಹಿಂದೆ ಎರಡು ಬಾರಿ ಪ್ರಧಾನಿಯಾಗುವ ಅವಕಾಶ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರಿಗೆ 1990ರ ದಶಕದಲ್ಲಿ ಬಂದಿತ್ತು. ಆದರೆ ಆಗ ದೆಹಲಿಯಲ್ಲಿದ್ದ ದರಬಾರಿ ಗಣಗಳೆಲ್ಲ ಸೇರಿ ಅದನ್ನು ತಪ್ಪಿಸಿದವು ಎಂದು ಮಾಜಿ ವಿಮಾನಯಾನ ಸಚಿವ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮತ್ತೋರ್ವ ಹಿರಿಯ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ. ಈ ಮೂಲಕ ಮತ್ತೆ ಗಾಂಧೀ ಕುಟುಂಬ ಆಗ ಹೇಗಿತ್ತು ಎಂಬುದಕ್ಕೆ ಕನ್ನಡಿ ಹಿಡಿದಿದ್ದಾರೆ. ಕುತೂಹಲಕಾರಿ ಅಂಶ ಎಂದರೆ ಪವಾರ್ ಮತ್ತೆ ಪ್ರಧಾನಿ ಆಗುವ ಸಾಧ್ಯತೆ ಇದೆ ಎಂಬ ಆಸೆಯನ್ನು ಪಟೇಲ್ ಇನ್ನೂ ಇಟ್ಟುಕೊಂಡಿರುವುದು.
ಪವಾರ್ ಅವರ ಎಂಬತ್ತನೇ ಹುಟ್ಟುಹಬ್ಬದ ಪ್ರಯುಕ್ತ ಮುಂಬೈನಲ್ಲಿ ಏರ್ಪಡಿಸಿದ ಸಭೆಯೊಂದರಲ್ಲಿ ಮಾತನಾಡಿದ ಪಟೇಲ್, ಬಹಳ ಬೇಗನೇ ಪವಾರ್ ದೆಹಲಿ ರಾಜಕೀಯದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದರು. ಅಷ್ಟೇ ಅಲ್ಲ, 1991 ಮತ್ತು 1996ರಲ್ಲಿ ಪ್ರಧಾನಿ ಹುದ್ದೆಗೆ ಅತ್ಯಂತ ಯೋಗ್ಯ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಆದರೆ ಎರಡು ಬಾರಿಯೂ ಅವರಿಗೆ ಆ ಹುದ್ದೆ ಕೈ ತಪ್ಪುವಂತೆ ನೋಡಿಕೊಳ್ಳಲಾಯಿತು. ಇದರಿಂದ ವೈಯಕ್ತಿಕವಾಗಿ ಅವರಿಗೂ, ಪಕ್ಷಕ್ಕೂ, ಮತ್ತು ದೇಶಕ್ಕೂ ದೊಡ್ಡ ನಷ್ಟವಾಯಿತು ಎಂದು ಅವರು ಹೇಳಿದರು.
1991ರಲ್ಲಿ ರಾಜೀವ್ ಗಾಂದಿ ಅವರ ಹತ್ಯೆಯ ನಂತರ ಪವಾರ್ ಅವರಿಗೆ ಒಳ್ಳೆಯ ಅವಕಾಶ ಇತ್ತು. ಆದರೆ ದರಬಾರಿ ಗಣ ಪವಾರ್ ಅವರ ವಿರುದ್ಧ ಪಿತೂರಿ ಮಾಡಿದರು, ಇನ್ನೇನು ನಿವೃತ್ತಿ ಹೊಂದಿ ಹೈದರಾಬಾದಿಗೆ ಹೊರಡಲು ತಯಾರಾಗಿದ್ದ ಪಿ.ವಿ. ನರಸಿಂಹ ರಾವ್ ಅವರನ್ನು ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿಕೊಳ್ಳು ಕೇಳಿಕೊಳ್ಳಲಾಯಿತು. ಆಗ ದೆಹಲಿಯಲ್ಲಿ ನಡೆಯುತ್ತಿದ್ದ ಮಾತೆಂದರೆ ಪವಾರ್ ಕಾಂಗ್ರಸ್ಗೆ ನಿಷ್ಠಾವಂತ ಅಲ್ಲ. ಅವರು 1978 ರಲ್ಲಿ, 1986 ರಲ್ಲಿ ಪಕ್ಷಕ್ಕೆ ಸೆಡ್ಡು ಹೊಡೆದಿದ್ದರು. ಆದ್ದರಿಂದ ಅವರನ್ನು ನಂಬಲಾಗದು ಎಂದು ಹೇಳಿ ಅವರಿಗೆ ಅವಕಾಶ ತಪ್ಪಿಸಲಾಯಿತು. 1996 ರಲ್ಲಿ ಉಳಿದ ಪಕ್ಷಗಳ ನಾಯಕರು 145 ಸ್ಥಾನ ಗೆದ್ದಿದ್ದ ಕಾಂಗ್ರೆಸ್ಗೆ ಬೆಂಬಲ ಕೊಡಲು ತಯಾರಾಗಿದ್ದರು. ಅವರೆಲ್ಲರೂ ಪವಾರ್ ಪ್ರಧಾನಿ ಆಗಲಿ ಎಂದರು ಆದರೆ, ರಾವ್ ಅದಕ್ಕೆ ವಿರೋಧ ವ್ಯಕ್ತಪಡಿಸಿ ಕೊನೆಗೆ ಅದು ದೇವೆಗೌಡರ ಪಾಲಾಯ್ತು ಎಂದು ಹೇಳಿದರು.
ಇವತ್ತಿಗೂ ಮಹಾರಾಷ್ಟ್ರದ ಜನ ಎಲ್ಲ ಒಂದಾದರೆ, ಮತ್ತೆ ಪವಾರ್ ಅವರನ್ನು ಮುಂದಿನ ದಿನಗಳಲ್ಲಿ ಪ್ರಧಾನಿಯಾಗಿ ನೋಡಬಹುದು ಎಂದು ಅವರು ಹೇಳಿದರು.
NCP ಅಧ್ಯಕ್ಷ ಶರದ್ ಪವಾರ್ಗೆ 80ರ ಸಂಭ್ರಮ; ಹಿರಿಯ ನಾಯಕನಿಗೆ ಅದೃಷ್ಟ ತರಲಿದೆಯಾ ಈ ಬರ್ತ್ ಡೇ?