ದೆಹಲಿ: ಬಿಜೆಪಿ ಮುಖ್ಯಸ್ಥ ಜೆ ಪಿ ನಡ್ಡಾ ಅವರ ಬೆಂಗಾವಲು ವಾಹನಗಳ ಮೇಲೆ ದಾಳಿ ಪರಿಣಾಮವನ್ನು ಐಪಿಎಸ್ ಅಧಿಕಾರಿಗಳು ಎದುರಿಸಬೇಕಾಗಿದೆ. ಪಶ್ಚಿಮ ಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳಿಗೆ ಕರ್ತವ್ಯ ಲೋಪದ ಆರೋಪದಡಿ ಗೃಹ ಇಲಾಖೆ ಸಮನ್ಸ್ ನೀಡಿದ್ದು, ಕೇಂದ್ರ ಸೇವೆಗೆ ವರ್ಗಾವಣೆ ಮಾಡಿದೆ. ಈ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಬಿಜೆಪಿಯ ಕೇಂದ್ರ ಸರ್ಕಾರಗಳ ನಡುವಿನ ಶೀತಲ ಸಮರ ಮುಂದುವರೆಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.
ಡೈಮಂಡ್ ಹಾರ್ಬರ್ ಠಾಣೆಯ ಎಸ್ ಪಿ ಭೋಲಾನಾಥ್ ಪಾಂಡೆ, ಡಿಐಜಿ ಪ್ರವೀಣ್ ತ್ರಿಪಾಠಿ, ದಕ್ಷಿಣ ಬಂಗಾಳದ ಎಡಿಜಿ ರಾಜೀವ್ ಮಿಶ್ರಾ ಅಂದಿನ ಘಟನೆಗೆ ಜವಾಬ್ದಾರರು ಎಂದು ಗೃಹ ಇಲಾಖೆ ಹೇಳಿದೆ. ಸಾಮಾನ್ಯವಾಗಿ ಈ ರೀತಿ ಐಪಿಎಸ್ ಅಧಿಕಾರಿಗಳ ಸೇವೆಯಲ್ಲಿ ಬದಲಾವಣೆಗೂ ಮುನ್ನ ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನೂ ಪಡೆಯಲಾಗುತ್ತದೆ. ಆದರೆ, ಗೃಹ ಇಲಾಖೆ ಈ ಬಾರಿ ಏಕಪಕ್ಷೀಯ ಕ್ರಮ ಅನುಸರಿಸಿದೆ.
ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಆಯುಕ್ತರಿಗೂ ರಾಜ್ಯದ ಕಾನೂನು ಸುವ್ಯವಸ್ಥೆಯ ವರದಿ ಕೇಳಿ ಗೃಹ ಇಲಾಖೆ ಸಮನ್ಸ್ ನೀಡಿತ್ತು. ಆದರೆ, ಡಿಸೆಂಬರ್ 14ರ ರಾಜ್ಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ವಿವರಿಸಲು ನಿರ್ದೇಶನ ನೀಡಲಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ತಿಳಿಸಿದ್ದರು. ಅಲ್ಲದೇ, ಗೃಹ ಇಲಾಖೆಗೆ ಉತ್ತರಿಸಲು ಬಂಗಾಳ ಸರ್ಕಾರ ನಿರಾಕರಿಸಿತ್ತು.