ಹೆಡ್​ಫೋನ್ ಹಾಕಿಕೊಂಡು ಪಬ್​​ಜಿ ಆಡುತ್ತಿದ್ದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಹೆಚ್ಚಾಯ್ತು ರಕ್ತದೊತ್ತಡ, ಮೆದುಳಿನಲ್ಲಿ ರಕ್ತಸ್ರಾವವಾಗಿ ಸಾವು

ಮೀರತ್‌ನಲ್ಲಿ ನಡೆದ ಆಘಾತಕಾರಿ ಘಟನೆ ಆನ್‌ಲೈನ್ ಗೇಮಿಂಗ್‌ನ ಮಾರಕ ಪರಿಣಾಮಗಳನ್ನು ಎತ್ತಿ ತೋರಿಸಿದೆ. ಪಬ್‌ಜಿ ವ್ಯಸನಿಯಾಗಿದ್ದ 22 ವರ್ಷದ ಯುವಕ ತಡರಾತ್ರಿ ಆಟ ಆಡುತ್ತಿದ್ದಾಗ ತೀವ್ರ ರಕ್ತದೊತ್ತಡ ಮತ್ತು ಮೆದುಳು ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ. ಆನ್‌ಲೈನ್ ಆಟಗಳು ಯುವಜನರ ಆರೋಗ್ಯ ಮತ್ತು ಜೀವಕ್ಕೆ ಹೇಗೆ ಮಾರಕವಾಗಬಹುದು ಎಂಬುದಕ್ಕೆ ಈ ಘಟನೆ ಗಂಭೀರ ಎಚ್ಚರಿಕೆಯಾಗಿದೆ.

ಹೆಡ್​ಫೋನ್ ಹಾಕಿಕೊಂಡು ಪಬ್​​ಜಿ ಆಡುತ್ತಿದ್ದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಹೆಚ್ಚಾಯ್ತು ರಕ್ತದೊತ್ತಡ, ಮೆದುಳಿನಲ್ಲಿ ರಕ್ತಸ್ರಾವವಾಗಿ ಸಾವು
ಪಬ್​ಜಿ

Updated on: Feb 09, 2026 | 2:09 PM

ಮೀರತ್, ಫೆಬ್ರವರಿ 09: ಆನ್​ಲೈನ್ ಗೇಮಿಂಗ್(Oneline Gaming) ಎಂಬುದು ಒಂದು ಪಿಡುಗಾಗಿ ಪರಿಣಮಿಸಿದೆ. ಈ ವ್ಯಸನವು ಹೇಗೆ ಮಾರಕವಾಗಬಹುದು ಎಂಬುದಕ್ಕೆ ಮೀರತ್​​ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಗಾಜಿಯಾಬಾದ್​​ನಲ್ಲಿ ಮೊಬೈಲ್​ ಗೇಮಿಂಗ್​ನಿಂದಾಗಿ ಮೂವರು ಸಹೋದರಿಯರ ಆತ್ಮಹತ್ಯೆ ಬಳಿಕ ಮೀರತ್​ನ ಖೈರ್​ನಗರ ಪ್ರದೇಶದಲ್ಲಿ ಪಬ್​ಜಿ ವ್ಯಸನವು 22 ವರ್ಷದ ಯುವಕ ಮೊಹಮ್ಮದ್ ಕೈಫ್​ನ ಜೀವವನ್ನೇ ಬಲಿ ಪಡೆದಿದೆ.

ತಡರಾತ್ರಿವರೆಗೆ ಈತ ಗೇಮ್ ಆಡುತ್ತಿದ್ದ, ಇದ್ದಕ್ಕಿದ್ದಂತೆ ರಕ್ತದೊತ್ತಡ ತುಂಬಾ ಹೆಚ್ಚಾಗಿ ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು.
ಮೀರತ್​​ನ ಖೈರ್​​ನಗರ ಗುಲಾರ್ ವಾಲಿ ಗಾಲಿ ನಿವಾಸಿ, ಫಾರೂಕ್ ಅವರ ಏಕೈಕ ಪುತ್ರ ಮೊಹಮ್ಮದ್ ಕೈಫ್ ಸಾವನ್ನಪ್ಪಿದ್ದಾರೆ. ರಾತ್ರಿ ತನ್ನ ಕೋಣೆಯಲ್ಲಿ ಹೆಡ್‌ಫೋನ್‌ಗಳನ್ನು ಹಾಕಿಕೊಂಡು ತನ್ನ ಮೊಬೈಲ್ ಫೋನ್‌ನಲ್ಲಿ PUBG ಆಡುತ್ತಿದ್ದ, ಕೈಫ್ ಕಳೆದ ನಾಲ್ಕು ತಿಂಗಳಿನಿಂದ ಆನ್‌ಲೈನ್ ಗೇಮಿಂಗ್‌ನ ಗೀಳನ್ನು ಬೆಳೆಸಿಕೊಂಡಿದ್ದ. ಶುಕ್ರವಾರ ರಾತ್ರಿ 3 ಗಂಟೆ ಸುಮಾರಿಗೆ, ಆಟ ಆಡುವಾಗ ಇದ್ದಕ್ಕಿದ್ದಂತೆ ಹಾಸಿಗೆಯಿಂದ ಬಿದ್ದಿದ್ದಾನೆ.

ಕುಟುಂಬ ಸದಸ್ಯರು ಕೋಣೆಗೆ ಬಂದಾಗ, ಕೈಫ್ ಸ್ಥಿತಿ ಗಂಭೀರವಾಗಿತ್ತು. ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಕೈಫ್ ರಕ್ತದೊತ್ತಡ 300 ಕ್ಕಿಂತ ಹೆಚ್ಚಿರುವುದನ್ನು ಕಂಡು ವೈದ್ಯರು ದಿಗ್ಭ್ರಮೆಗೊಂಡರು.
ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಕ್ಷಣ ಅವರನ್ನು ದೆಹಲಿಗೆ ಕರೆದೊಯ್ಯಲು ಸೂಚಿಸಿದರು. ದೆಹಲಿ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ನಂತರ, ಕೈಫ್ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ.

ಮತ್ತಷ್ಟು ಓದಿ: ಅಕ್ರಮ ಆನ್​ಲೈನ್ ಬೆಟ್ಟಿಂಗ್: ಗೇಮಿಂಗ್ ಕಂಪನಿ ಧ್ವಂಸ ಮಾಡಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು

ವೈದ್ಯರ ಪ್ರಕಾರ, ತೀವ್ರ ಒತ್ತಡ ಮತ್ತು ಉತ್ಸಾಹವು ರಕ್ತದೊತ್ತಡ ಹೆಚ್ಚಳಕ್ಕೆ ಕಾರಣವಾಯಿತು, ಇದು ಮೆದುಳಿನಲ್ಲಿ ರಕ್ತಸ್ರಾವಕ್ಕೆ (ಮೆದುಳಿನಲ್ಲಿನ ರಕ್ತನಾಳದ ಛಿದ್ರ) ಕಾರಣವಾಯಿತು ಎಂದು ಹೇಳಿದ್ದಾರೆ.

ಕೈಫ್​ಗೆ ಮೊದಲು ರೀಲ್‌ಗಳನ್ನು ಮಾಡುವುದರಲ್ಲಿ ಆಸಕ್ತಿ ಇತ್ತು, ಆದರೆ ಕಳೆದ ಕೆಲವು ತಿಂಗಳುಗಳಿಂದ ಆನ್​ಲೈನ್​ ಗೇಮಿಂಗ್​ಗೆ ದಾಸನಾಗಿದ್ದ. ತನ್ನ ಹಗಲು ರಾತ್ರಿಗಳನ್ನು ಆಟದಲ್ಲಿಯೇ ಕಳೆಯುತ್ತಿದ್ದ. ಅವನ ಕುಟುಂಬ ಸದಸ್ಯರು ಪದೇ ಪದೇ ಅವನಿಗೆ ಬುದ್ಧಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಆತ ಇರಲಿಲ್ಲ.

ಆನ್‌ಲೈನ್ ಆಟಗಳು ಯುವಕರ ಮೆದುಳಿನಲ್ಲಿ ಡೋಪಮೈನ್ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ವ್ಯಸನಕ್ಕೆ ಕಾರಣವಾಗುತ್ತವೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 2:08 pm, Mon, 9 February 26