OMG! ಆನ್ಲೈನ್ ಮನಿ ಗೇಮಿಂಗ್ ನಿಷೇಧ – ನೈತಿಕತೆ ಎತ್ತಿಹಿಡಿಯುವ ಕಾನೂನೋ ಅಥವಾ ಗದಾ ಪ್ರಹಾರವೋ?
ಭಾರತದಲ್ಲಿ ಆನ್ಲೈನ್ ಮನಿ ಗೇಮಿಂಗ್ (OMG) ನಿಷೇಧಿಸುವ ‘ಆನ್‌ಲೈನ್ ಗೇಮಿಂಗ್ (ಉತ್ತೇಜನ ಮತ್ತು ನಿಯಂತ್ರಣ) ಮಸೂದೆ, 2025 (TPROG)’ ಸಂಸತ್ನಲ್ಲಿ ಅನುಮೋದಿಸಲ್ಪಟ್ಟಿದೆ. ಈ ಕ್ರಮದ ಬಗ್ಗೆ ಇದೀಗ ದೇಶದಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಹೊಸ ಉದ್ಯಮವನ್ನು ಗುರಿಯಾಗಿಸಿಕೊಂಡಿರುವ ಕೇಂದ್ರ ಸರ್ಕಾರದ ಈ ಕ್ರಮ ಸಮರ್ಥನೀಯವೇ ಅಥವಾ ಅನಿಯಂತ್ರಿತ ಅತಿಕ್ರಮಣವೇ? ಈ ಕುರಿತಾದ ಎಲ್ಲಾ ಆಯಾಮಗಳನ್ನು ವಿಮರ್ಶಿಸಿದ ನಂತರವೇ ಜನಾಭಿಪ್ರಾಯ ಮೂಡಬೇಕು.

ಒಹ್ ದೇವರೇ! ಆನ್‌ಲೈನ್ ಮನಿ ಗೇಮಿಂಗ್ (OMG) ಪ್ಲಾಟ್‌ಫಾರ್ಮ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಆನ್ಲೈನ್ ಗೇಮಿಂಗ್ ಮಸೂದೆಗೆ ಸಂಸತ್ ಅನುಮೋದನೆ ನೀಡುವುದರೊಂದಿಗೆ ಆನ್ಲೈನ್ ಮನಿ ಗೇಮಿಂಗ್ ವಿರುದ್ಧ ಕಾನೂನಿನ ಕ್ರಮ ಜರುಗಿಸಲು ಸರ್ಕಾರ ಮುಂದಾಗಿದೆ. ಈಗಷ್ಟೇ ರೂಪುಗೊಳ್ಳುತ್ತಿದ್ದ ಉದ್ಯಮವೊಂದರ ಮೇಲಿನ ಪ್ರಬಲ ಹೊಡೆತವಿದು ಎಂಬುದು ಉದ್ಯಮ ಪಾಲುದಾರರ ವಾದ. ನಿಷೇಧಿಸುವ ಬದಲು ಆನ್ಲೈನ್ ಮನಿ ಗೇಮಿಂಗ್ ನಿಯಂತ್ರಿಸಬೇಕು ಮತ್ತು ತೆರಿಗೆ ವಿಧಿಸಬೇಕು. ಹೀಗೆ ಮಾಡುವುದರಿಂದ ಸರ್ಕಾರದ ಖಜಾನೆಗೆ ಉತ್ತಮ ಆದಾಯವನ್ನು ತರಬಹುದು ಎನ್ನುತ್ತಾರವರು. ಆದರೆ ಉದ್ಯಮ ವಲಯದ ಆಕ್ರೋಶ ಮತ್ತು ಸರ್ಕಾರದ ನಿಲುವನ್ನು ಮೀರಿ ಗಮನಿಸಬೇಕಾದ ಕೆಲವು ಪ್ರಮುಖ ವಿಚಾರಗಳಿವೆ.
ಪ್ರಧಾನಿ ಮೋದಿ ಮತ್ತು ಅಶ್ವಿನಿ ವೈಷ್ಣವ್ ಹೇಳಿದ್ದೇನು?
‘ಭಾರತವನ್ನು ಗೇಮಿಂಗ್ ಕ್ಷೇತ್ರದಲ್ಲಿ ಹೊಸದಾದ ಮತ್ತು ಸೃಜನಶೀಲತೆಯ ಕೇಂದ್ರವನ್ನಾಗಿ ಮಾಡುವ ನಮ್ಮ ಬದ್ಧತೆಯನ್ನು ಈ ಮಸೂದೆ ಎತ್ತಿ ತೋರಿಸುತ್ತದೆ. ಇದು ಇ-ಸ್ಪೋರ್ಟ್ಸ್ ಮತ್ತು ಆನ್ಲೈನ್ ಸೋಷಿಯಲ್ ಗೇಮ್ಸ್ಗಳನ್ನು ಪ್ರೋತ್ಸಾಹಿಸುತ್ತದೆ. ಜೊತೆಗೆ ಆನ್ಲೈನ್ ಮನಿ ಗೇಮ್ಸ್ಗಳ ದುಷ್ಪರಿಣಾಮಗಳಿಂದ ಸಮಾಜವನ್ನು ರಕ್ಷಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಐಟಿ ಸಚಿವ ಅಶ್ವಿನಿ ವೈಷ್ಣವ್ ಕೂಡ ಸಂಸತ್ತಿನಲ್ಲಿ ಇದೇ ಅರ್ಥವನ್ನು ಧ್ವನಿಸುವ ಹೇಳಿಕೆ ನೀಡಿದ್ದಾರೆ. ಸರಕಾರದ ಆದಾಯ ಮತ್ತು ಯುವ ಜನರ ರಕ್ಷಣೆ ಎಂಬ ಎರಡು ವಿಚಾರ ಬಂದಾಗ ಮೋದಿ ಸರ್ಕಾರವು ಎರಡನೆಯದ್ದನ್ನೇ ಆಯ್ಕೆ ಮಾಡಿದೆ. ಶೈಕ್ಷಣಿಕ ಮತ್ತು ಸಮುದಾಯ ಆಧಾರಿತ ಕ್ರೀಡೆಗಳ ಜೊತೆಗೆ ಇ ಸ್ಪೋರ್ಟ್ಸ್ ಮತ್ತು ಚೆಸ್ನಂತಹ ತರಬೇತಿ ಆಧಾರಿತ ಆನ್ಲೈನ್ ಗೇಮ್ಸ್ಗಳಿಗೆ ಒತ್ತು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಹೀಗಾಗಿ, ಕೇಂದ್ರದ ಹೊಸ ಕಾನೂನಿನಿಂದ ಸಮಸ್ಯೆಗೆ ಈಡಾಗುವುದು ಆನ್ಲೈನ್ ಮನಿ ಗೇಮಿಂಗ್ ಮಾತ್ರ.
ಭಾರತದಲ್ಲಿ ಆನ್ಲೈನ್ ಗೇಮಿಂಗ್ ಉದ್ಯಮ: ದಿಗ್ಭ್ರಮೆಗೊಳಿಸುವ ಅಂಕಿಅಂಶ
ಭಾರತದಲ್ಲಿ ಆನ್ಲೈನ್ ಗೇಮಿಂಗ್ ಉದ್ಯಮ ಸಂಬಂಧಿತ ಅಂಕಿಅಂಶಗಳನ್ನೊಮ್ಮೆ ಗಮನಿಸಿದರೆ ದಿಗ್ಭ್ರಮೆಯಾಗದೇ ಇರದು. ದೇಶದಲ್ಲಿ ಒಟ್ಟಾರೆಯಾಗಿ ದೈನಂದಿನ ಆನ್ಲೈನ್ ಗೇಮರ್ಗಳ ಸಂಖ್ಯೆ 155 ಮಿಲಿಯನ್ ಆದರೆ, ಈ ಪೈಕಿ 110 ಮಿಲಿಯನ್ ಮಂದಿ ಆನ್ಲೈನ್ ಮನಿ ಗೇಮಿಂಗ್ಗಳಲ್ಲಿ ತೊಡಗಿಕೊಂಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ರಾಮಪ್ರಸಾದ್ ಮುರಳಿ ಅವರು ಎಫ್ಐಸಿಸಿಐ-ಇವೈ ಅಧ್ಯಯನವನ್ನು ಉಲ್ಲೇಖಿಸಿ ಪ್ರಸ್ತುತಪಡಿಸಿದ ಅಂಕಿಅಂಶ ನೋಡುವುದಾದರೆ, ಭಾರತದ ಗೇಮಿಂಗ್ ವಲಯವು 32,000 ಕೋಟಿ ರೂ. ಮೌಲ್ಯದ್ದಾಗಿದೆ. ಆನ್ಲೈನ್ ಮನಿ ಗೇಮ್ಗಳು 27,000 ಕೋಟಿ ರೂ. ಮೌಲ್ಯವನ್ನು ಹೊಂದಿವೆ. 2024 ರ ಹಣಕಾಸು ವರ್ಷದಲ್ಲಿ ಆನ್ಲೈನ್ ಮನಿ ಗೇಮ್ ಪ್ಲಾಟ್‌ಫಾರ್ಮ್‌ಗಳು ಜಾಹೀರಾತು ಆದಾಯದಲ್ಲಿ 600 ಮಿಲಿಯನ್ ಡಾಲರ್ ಗಳಿಸಿವೆ.
ಆನ್ಲೈನ್ ಮನಿ ಗೇಮ್ಸ್ ನಿಷೇಧ: ಉದ್ಯಮ ವಲಯದ ವಾದವೇನು?
ಮನಿ ಗೇಮ್ಸ್, ಇ-ಸ್ಪೋರ್ಟ್ಸ್ ಅಥವಾ ಸೋಷಿಯಲ್ ಗೇಮ್ಸ್ ಮಧ್ಯೆ ಸೂಕ್ಷ್ಮವಾದ ಕಾನೂನಿನ ಗೆರೆ ಎಳೆಯುವುದು ಅಸ್ಪಷ್ಟ ಆತಂಕಕ್ಕೆ ಕಾರಣವಾಗುತ್ತದೆ ಎಂದು ಉದ್ಯಮಿ ರಾಹುಲ್ ರಜ್ದಾನ್ ‘ನ್ಯೂಸ್9 ಲೈವ್’ಗೆ ಬರೆದ ವಿಶ್ಲೇಷಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮಸೂದೆಯು ಸಾರ್ವಜನಿಕ ಹಿತಾಸಕ್ತಿಯ ಧ್ವನಿಯನ್ನು ಹೊಂದಿಲ್ಲ ಎಂದು ಅವರು ಟೀಕಿಸಿದ್ದಾರೆ.
ಆನ್ಲೈನ್ ಮನಿ ಗೇಮಿಂಗ್ ಹೊರತುಪಡಿಸಿ ಇನ್ನೆರಡು ವಿಭಾಗಗಳ ಆನ್ಲೈನ್ ಗೇಮ್ಗಳಿಗೆ ಮಸೂದೆಯು ಅವಕಾಶ ನೀಡಿದ್ದರೂ, ಹಣಕ್ಕೆ ಸಂಬಂಧಿಸಿದ ಆಟದ ವಿಚಾರವೇ ಸರ್ಕಾರ ಮತ್ತು ಉದ್ಯಮಿಗಳ ನಡುವಣ ಸಮಸ್ಯೆಗೆ ಕಾರಣವಾಗಿದೆ. ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಮಾಡಿರುವ ರೀತಿಯ ನಿಯಂತ್ರಣ ಹೇರಿದರೆ ಆನ್ಲೈನ್ ಮನಿ ಗೇಮ್ಸ್ ವ್ಯವಸ್ಥಿತವಾಗಿ ಅಭಿವೃದ್ಧಿಹೊಂದಬಹುದಿತ್ತು ಎಂಬುದು ಉದ್ಯಮಿಗಳ ವಾದ. ಆನ್ಲೈನ್ ಮನಿ ಗೇಮ್ಸ್ ನಿಷೇಧದಿಂದ 2 ಲಕ್ಷ ಉದ್ಯೋಗ ನಷ್ಟವಾಗಬಹುದು ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮೋಜು-ವಿರಾಮ ಮತ್ತು ವಾಣಿಜ್ಯೀಕರಣ
ಆನ್ಲೈನ್ ಮನಿ ಗೇಮ್ಸ್ ವಿಚಾರವಾಗಿ ಸೃಷ್ಟಿಯಾಗಿರುವ ವಿವಾದವನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ ಭಾರತದ ವಿಭಿನ್ನ ಸಂಸ್ಕೃತಿ, ವೈವಿಧ್ಯಮಯ ಜೀವನ ಪದ್ಧತಿ ಮತ್ತು ವಾಣಿಜ್ಯೀಕರಣದ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಅಮೆರಿಕ ಹಾಗೂ ಬ್ರಿಟನ್‌ನಲ್ಲಿ ಮಾಡಿದಂತೆ ಏಕರೂಪದ ನಿಯಮವನ್ನು ಭಾರತದಲ್ಲಿ ಅನುಷ್ಠಾನಗೊಳಿಸುವುದು ಕಾರ್ಯಸಾಧುವಲ್ಲ. ಈ ಬಗ್ಗೆ ಅನೇಕ ಅಧ್ಯಯನಗಳು ಕೂಡ ದೃಢಪಡಿಸಿವೆ. ಹಾಗೊಂದು ವೇಳೆ ಮಾಡಿದ್ದೇ ಆದಲ್ಲಿ ಅದು ಗದಾ ಪ್ರಹಾರವಾದೀತು.
ಉದಾಹರಣೆಗೆ; ಭಾರತದ ಬುಡಕಟ್ಟು ಜನಾಂಗದವರ ಆಹಾರದ ವಿಷಯ ತೆಗೆದುಕೊಳ್ಳೋಣ. ಅವರಿಗೆ ಬೇಟೆ ಎಂಬುದು ಜೀವನೋಪಾಯವಾಗಿತ್ತು. ಅದೇ, ಬ್ರಿಟಿಷರು ಮತ್ತು ಶ್ರೀಮಂತ ಭಾರತೀಯರಿಗೆ ಅದೊಂದು ವಿರಾಮದ ಅಥವಾ ಮೋಜಿನ ಚಟುವಟಿಕೆ. ಕಾಡುಪ್ರಾಣಿ ಬೇಟೆಯಾಡುವುದನ್ನು ನಿಷೇಧಿಸುವಾಗ ನಾವು ಬುಡಕಟ್ಟು ಜನಾಂಗದವರ ದೃಷ್ಟಿಕೋನದಿಂದ ಯೋಚಿಸಿದ್ದೇವೆಯೇ? ನಮ್ಮ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಬುಡಕಟ್ಟು ಜನಾಂಗದವರು ಹೇಳಿದ್ದರೆ, ನಾವು ಕೇಳುವ ಸ್ಥಿತಿಯಲ್ಲಿದ್ದೆವೇ ಅಂದು? ಹಿಂತಿರುಗಿ ನೋಡಿದರೆ, ಕಾಡುಪ್ರಾಣಿ ಬೇಟೆ ನಿಷೇಧ ಮಾಡಿದ್ದು ಒಳ್ಳೆಯದಾಯಿತು ಎಂದು ಎಲ್ಲರೂ ಹೇಳುತ್ತಾರೆ ತಾನೆ.
ಜಲ್ಲಿಕಟ್ಟು ನಿಷೇಧ ವಿಚಾರ ಕೂಡ ಇದೇ ರೀತಿ ಚರ್ಚೆಗೆ ಗ್ರಾಸವಾಯಿತು. ಇದು ತಮಿಳರ ಸಂಸ್ಕೃತಿಗೆ ಸಂಬಂಧಪಟ್ಟ ವಿಚಾರ. ಭಾರತೀಯ ಸಂಸ್ಕೃತಿಯಲ್ಲಿ, ವಿರಾಮಕ್ಕೆ ಎರಡು ಆಯಾಮ ಇರುವುದು ಕಂಡು ಬರುತ್ತಿದೆ. ಒಂದು ಜಲ್ಲಿಕಟ್ಟಿನಂತಹ ವಿರಾಮದ ಆಟಗಳಲ್ಲಿ ಕಂಡು ಬರುವ ಶೌರ್ಯ ಪ್ರದರ್ಶನಕ್ಕೆ ನೀಡುವ ಪ್ರಾಶಸ್ತ್ಯ. ಇನ್ನೊಂದು ವಿರಾಮ ಕಾಲದಲ್ಲಿ, ಅಧ್ಯಾತ್ಮಿಕ ಚಟುವಟಿಕೆ ಮತ್ತು ತೀರ್ಥಯಾತ್ರೆಯನ್ನು ಮಾಡುವುದು. ಪಾಶ್ಚಾತ್ಯರು ಇದನ್ನು ಒಪ್ಪಿಕೊಳ್ಳದಿರಬಹುದು, ಆದರೆ ನಮ್ಮಲ್ಲಿ ವಿರಾಮ ಕಾಲದಲ್ಲಿ ತೀರ್ಥಯಾತ್ರೆ ಮತ್ತು ಅಧ್ಯಾತ್ಮಿಕತೆಯಲ್ಲಿ ತೊಡಗಿಕೊಳ್ಳುವ ಲಕ್ಷಾಂತರ ಜನರನ್ನು ಕಾಣಬಹುದು.
ಮತ್ತೊಂದೆಡೆ, ವಾಣಿಜ್ಯೀಕರಣವು ವಿರಾಮಕ್ಕೆ ಹೊಸ ಭಾಷ್ಯ ಬರೆಯುವಂತೆ ಮಾಡಿದೆ. ಒಂದು ಕಾಲದಲ್ಲಿ ಜೆಂಟಲ್ ಮ್ಯಾನ್ ಆಟ ಎಂದು ಕರೆಯಲ್ಪಡುತ್ತಿದ್ದ ಕ್ರಿಕೆಟ್ ಈಗ ಐಪಿಎಲ್ ರೂಪದಲ್ಲಿ ವಾಣಿಜ್ಯ ರೂಪ ಪಡೆದಿದೆ. ಹರಾಜಿನಲ್ಲಿ ಆಟಗಾರರನ್ನು ಸರಕುಗಳಂತೆ ಮಾರಾಟ ಮಾಡುವ ಶತಕೋಟಿ ಡಾಲರ್ ಮೌಲ್ಯದ ಪ್ರದರ್ಶನವಾಗಿ ಮಾರ್ಪಟ್ಟಿದೆ.
ನಿಷೇಧಿಸಿದ ಕೂಡಲೇ ಬಗೆಹರಿಯುತ್ತಾ ಸಮಸ್ಯೆ?
ಆನ್ಲೈನ್ ಮನಿ ಗೇಮ್ಸ್ ನಿಷಧಿಸಿದ ಕೂಡಲೇ ಸಮಸ್ಯೆ ಬಗೆಹರಿಯುತ್ತದೆ ಎಂದು ಭಾವಿಸುವುದು ಮೂರ್ಖತನವಾದೀತು. ಆನ್ಲೈನ್ ಮನಿ ಗೇಮ್ಸ್ ವ್ಯಸನಿಗಳು ಇತರ ರೀತಿಯ ಬೆಟ್ಟಿಂಗ್ ಅಥವಾ ವ್ಯಸನಗಳತ್ತ ಹೊರಳುವ ಸಾಧ್ಯತೆ ಇದೆ ಎಂಬ ಆತಂಕ ಕೂಡ ವ್ಯಕ್ತವಾಗಿದೆ. ಈ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಆದರೆ ನಿಷೇಧದಿಂದಾಗಿ ಲಭ್ಯತೆ ಇಲ್ಲವಾಗುವುದರಿಂದ ಹಾನಿಯ ಪ್ರಮಾಣವನ್ನಂತೂ ತಡೆಗಟ್ಟಬಹುದು. ಉದಾಹರಣೆಗೆ, ಅನೇಕ ರಾಜ್ಯಗಳು ಶಾಲೆಗಳ ಬಳಿ ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಿವೆ. ಸಿಗರೇಟ್ ಲಭ್ಯತೆಯೇ ಇಲ್ಲದಿರುವುದು ಶಾಲಾ ಸಮಯದಲ್ಲಿ ಧೂಮಪಾನ ಮಾಡುವ ಹದಿಹರೆಯದವರನ್ನು ಅದರಿಂತ ದೂರ ಇರುವಂತೆ ಮಾಡಬ್ಲದು ಎಂಬ ಲೆಕ್ಕಾಚಾರ, ಈ ನಡೆಯ ಹಿಂದಿದೆ.
ಮದ್ಯದಂಗಡಿಗಳನ್ನು ತೆರೆಯುವುದನ್ನು ಅನೇಕ ಹಳ್ಳಿಗಳಲ್ಲಿ ಮಹಿಳಾ ಸಂಘಟನೆಗಳು ವಿರೋಧಿಸುವುದು ಸಾಮಾನ್ಯ. ತಮ್ಮ ಸಂಗಾತಿಗಳು ಮದ್ಯ ಸೇವಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂಬುದು ಅವರಿಗೂ ಗೊತ್ತಿದೆ. ಆದಾಗ್ಯೂ, ಸ್ಥಳೀಯವಾಗಿ ಲಭ್ಯತೆಯೇ ಇಲ್ಲವಾದಾಗ ಅವರನ್ನು ನಿಯಂತ್ರಿಸಬಹುದು ಎಂಬ ಲೆಕ್ಕಾಚಾರ ಇದರ ಹಿಂದೆ ಅಡಗಿದೆ.
ಭಾತದ ವಿಚಾರಕ್ಕೆ ಬಂದಾಗ ಪಾಶ್ಚಾತ್ಯ ಮಾದರಿಗಳನ್ನು ಉಲ್ಲೇಖಿಸುವುದು ಕಷ್ಟ. ಕ್ರೀಡಾ ಬೆಟ್ಟಿಂಗ್ ಅನ್ನು ಯುರೋಪ್ ಕಾನೂನುಬದ್ಧಗೊಳಿಸಿದೆ ಮತ್ತು ವೇಶ್ಯಾವಾಟಿಕೆಗೆ ಸಹ ಕಾನೂನಿನ ರೂಪ ಕೊಟ್ಟಿದೆ. ಅಲ್ಲಿ ಪುರುಷರು ಲೈಂಗಿಕತೆಯನ್ನು ಕೋರಲು ಸಾಧ್ಯವಿಲ್ಲ. ಒಂದು ವೇಳೆ ಗಂಡಸೊಬ್ಬ ಆ ರೀತಿ ಮಾಡಲು ಮುಂದಾದರೆ ಅದು ಅಪರಾಧವಾಗುತ್ತದೆ. ಆದರೆ, ಮಹಿಳೆಯರು ಸ್ವಯಂಪ್ರೇರಿತವಾಗಿ ವೇಶ್ಯಾವಾಟಿಕೆ ನಡೆಸಲು ಅನುಮತಿಸಲಾಗಿದೆ. ಅಮೆರಿಕದ ಕೆಲವು ರಾಜ್ಯಗಳು ಮಾದಕವಸ್ತು ಬಳಕೆಯನ್ನು ಅಪರಾಧ ಮುಕ್ತಗೊಳಿಸಿವೆ. ಆದರೆ, ಭಾರತದ ಸಾಮಾಜಿಕ ನೆಲೆಗಟ್ಟುಗಳು ವಿಭಿನ್ನವಾಗಿವೆ ಮತ್ತು ಪಾಶ್ಚಿಮಾತ್ಯ ನೀತಿಗಳ ನೇರ ವರ್ಗಾವಣೆ ಹೊಂದಿಕೆಯಾಗುವುದಿಲ್ಲ ಎಂಬುದು ಗಮನಾರ್ಹ.
ಸರ್ಕಾರದ ಕಳವಳವೆನು?
ಆನ್ಲೈನ್ ಮನಿ ಗೇಮ್ಸ್ ನಿಷೇಧ ವಿಚಾರದಲ್ಲಿ ಪ್ರಮುಖ ಎರಡು ಕಳವಳಗಳಿವೆ. ಮೊದಲನೆಯದಾಗಿ, ಅನೇಕ ಆನ್ಲೈನ್ ಮನಿ ಗೇಮ್ಸ್ಗಳು ಬೆಟ್ಟಿಂಗ್ ಅನ್ನು ‘ಕೌಶಲಯುಕ್ತ ಆಟಗಳು’ ಎಂದು ಬಿಂಬಿಸಿ ಹಣ ಸುಲಿಯುತ್ತಿರುವುದು. ಉದಾಹರಣೆಗೆ; ನಿಜವಾಗಿ ನಡೆಯುವ ಪಂದ್ಯಗಳಲ್ಲಿ ಭಾಗವಹಿಸುವ ಆಟಗಾರನ ಪ್ರದರ್ಶನದ ಮೇಲೆ ಬಾಜಿ ಕಟ್ಟುವುದು.
ಎರಡನೇ ಕಳವಳದ ಸಂಗತಿ ಎಂದರೆ, ಹಣಕಾಸಿನ ಹರಿವು. ಆನ್ಲೈನ್ ಮನಿ ಗೇಮ್ಸ್ನಲ್ಲಿ ತೊಡಗುವ ಉತ್ಸಾಹಿಗಳು ಹಣ ಎಲ್ಲಿಗೆ ಹೋಗುತ್ತದೆ ಎಂಬುದರ ಗೋಜಿಗೇ ಹೋಗುವುದಿಲ್ಲ. ಕಪ್ಪು ಹಣ ಮತ್ತು ಅಕ್ರಮ ವಿದೇಶಿ ವಹಿವಾಟುಗಳಿಗೆ ಇದು ದಾರಿ ಮಾಡಿಕೊಡುತ್ತದೆ. ಆನ್ಲೈನ್ ಮನಿ ಗೇಮ್ಸ್ ಕಂಪನಿಯು ಭಾರತದ ಹೊರಗೆ ನೋಂದಾಯಿಸಲಾದ ವಿಪಿಎನ್ ಸಂಖ್ಯೆಯೊಂದಿಗೆ ಪಾವತಿ ಗೇಟ್‌ವೇ ಒದಗಿಸುವ ಪರಿಸ್ಥಿತಿಯನ್ನು ಕಲ್ಪಿಸಿಕೊಂಡರೆ ಇದರ ತೀವ್ರತೆ ನಮಗೆ ಅರ್ಥವಾದೀತು. ಆನ್ಲೈನ್ ಮನಿ ಗೇಮ್ಸ್ ಉತ್ಸಾಹಿಗಳು ಈ ವಿವರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಇದನ್ನೂ ಓದಿ: ಮತ ಕಳ್ಳತನ ಆರೋಪ: ಹೊಸ ಬಾಟಲಿಯಲ್ಲಿ ಹಳೆ ಮದ್ಯದೊಂದಿಗೆ ಬಂದ ರಾಹುಲ್ ಗಾಂಧಿ?
ಎಸ್ಎಂ ಕೃಷ್ಟ ಮುಖ್ಯಮಂತ್ರಿ ಆಗಿದ್ದಾಗ ಈ ರೀತಿಯ ವಿಚಾರವೊಂದು ಬಂದಿತ್ತು. ಅದನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಅದೇ ಒಂದಂಕಿ ಲಾಟರಿ. ಊರೂರಲ್ಲಿ ಜೂಜಿನ ಅಡ್ಡಾ ಪ್ರಾರಂಭವಾಗಿ ಜನ ಹಣ ಕಳೆದುಕೊಳ್ಳುವ ಹಂತಕ್ಕೆ ಬಂದರು. ಆಗ ಇಂತಹದೊಂದು ಚರ್ಚೆ ನಡೆಯಿತು. ಆ ಜೂಜಾಟದಿಂದ ಬರುವ ಹಣ ಶಾಲೆಗಳಲ್ಲಿ ಪ್ರತಿ ದಿನ ನೀಡುವ ಮಧ್ಯಾಹ್ನದ ಬಿಸಿಯೂಟಕ್ಕೆ ವ್ಯಯಿಸುತ್ತೇವೆ ಎಂದು ಸರಕಾರ ಹೇಳಿದರೂ ಜನ ಕೇಳಲಿಲ್ಲ. ಕೊನೆಗೆ ಪ್ರತಿರೋಧ ಯಾವ ಹಂತಕ್ಕೆ ಹೋಯಿತೆಂದರೆ, ಸರಕಾರ ಆ ಜೂಜಾಟವನ್ನು ನಿಲ್ಲಿಸಲೇ ಬೇಕಾಯ್ತು.
ಕೊನೇ ಮಾತು
ಸರಳವಾಗಿ ವಿವರಿಸುವುದಾರೆ, ಸರ್ಕಾರ ಐಪಿಎಲ್ ನಿಷೇಧಿಸಿಲ್ಲ. ಕೌಶಲಾಧಾರಿತ ಆನ್ಲೈನ್ ಮನಿ ಗೇಮ್ಸ್ಗಳಂತೆ ಬಿಂಬಿಸುವ, ಐಪಿಎಲ್ ಪಂದ್ಯಗಳ ಮೇಲಿನ ಬೆಟ್ಟಿಂಗ್ ಅನ್ನು ನಿಷೇಧಿಸಿದೆ. ಈ ದೃಷ್ಟಿಯಿಂದ ನೋಡಿದಾಗ, ಆನ್ಲೈನ್ ಮನಿಗೇಮ್ಸ್ ನಿಷೇಧಿಸುವ ನಡೆ ಮಾದರಿ ಅಲ್ಲದಿರಬಹುದು, ಆದರೆ ಪ್ರಸ್ತುತ ಸಂದರ್ಭಕ್ಕೆ ಒಪ್ಪುವ ಯಥೋಚಿತ ಕ್ರಮ ಎನ್ನಲಡ್ಡಿಯಿಲ್ಲ.
ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Sat, 23 August 25




