
ಅಮೃತಸರ, ಡಿಸೆಂಬರ್ 08: ಅಮೆರಿಕದಿಂದ ಭಾರತಕ್ಕೆ ಬಂದು ಸೋದರಳಿಯನನ್ನು ಕೊಲೆ(Murder) ಮಾಡಿ, ಪಾಸ್‌ಪೋರ್ಟ್, ನಗದು ತೆಗೆದುಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ಕೇವಲ ಒಂದು ತಿಂಗಳ ಹಿಂದೆ ಕ್ಯಾಲಿಫೋರ್ನಿಯಾದಿಂದ ಹಿಂದಿರುಗಿದ್ದ ಅನಿವಾಸಿ ಭಾರತೀಯನೊಬ್ಬ ತನ್ನ ಸೋದರಳಿಯನನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ, ಕೃಷಿ ಭೂಮಿಯ ಮೇಲಿನ ಕೌಟುಂಬಿಕ ಕಲಹ ಹಿಂಸಾಚಾರದಲ್ಲಿ ಅಂತ್ಯ ಕಂಡಿತ್ತು.
ಆರೋಪಿ 70 ವರ್ಷದ ಬಹದ್ದೂರ್ ಸಿಂಗ್, ಪಾಸ್‌ಪೋರ್ಟ್ ಮತ್ತು ನಗದು ತೆಗೆದುಕೊಂಡು ದೇಶ ಬಿಟ್ಟು ಪರಾರಿಯಾಗುವ ಕೆಲವೇ ನಿಮಿಷಗಳ ಮೊದಲು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ದಶಕಗಳಿಂದ ಅಮೆರಿಕದಲ್ಲಿ ತನ್ನ ಐದು ಮಕ್ಕಳೊಂದಿಗೆ ವಾಸಿಸುತ್ತಿರುವ ಬಹದ್ದೂರ್ ಸಿಂಗ್, ನಿಹಾಲ್ ಸಿಂಗ್ ವಾಲಾದ ಮಾಸ್ಸಿಕೆ ಗ್ರಾಮದಲ್ಲಿ ಜಂಟಿಯಾಗಿ ಹೊಂದಿದ್ದ ಸುಮಾರು 30 ಎಕರೆ ಕೃಷಿಭೂಮಿಯ ಬಗ್ಗೆ ತಮ್ಮ ಸೋದರಳಿಯ ನವದೀಪ್ ಸಿಂಗ್ ಜೊತೆ ದೀರ್ಘಕಾಲದ ವಿವಾದವನ್ನು ಹೊಂದಿದ್ದರು. ಎರಡು ವರ್ಷಗಳ ಹಿಂದೆ ನವದೀಪ್ ಅವರ ತಂದೆ ಬಲ್ವಿಂದರ್ ಸಿಂಗ್ ಅವರ ಮರಣದ ನಂತರ ಈ ಭಿನ್ನಾಭಿಪ್ರಾಯ ಮತ್ತಷ್ಟು ತೀವ್ರಗೊಂಡಿತ್ತು.
ಶನಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ, ನವದೀಪ್ ಮತ್ತು ಅವರ ಪತ್ನಿ ಗುರುಪ್ರೀತ್ ಕೌರ್ ವಿವಾದಿತ ಹೊಲಕ್ಕೆ ಬಂದಿದ್ದರು. ಅಲ್ಲಿ ಬಹದ್ದೂರ್ ಸಿಂಗ್ ಮತ್ತು ಅವರ ಪತ್ನಿ ಜೋಗಿಂದರ್ ಕೌರ್ ಆಗಲೇ ಭೂಮಿಯನ್ನು ಉಳುಮೆ ಮಾಡುತ್ತಿದ್ದರು. ಆಗ ಜಗಳ ಶುರುವಾಗಿತ್ತು. ಬಹದ್ದೂರ್ ಸಿಂಗ್ ತನ್ನ ಪರವಾನಗಿ ಪಡೆದ ರಿವಾಲ್ವರ್ ಅನ್ನು ಹೊರತೆಗೆದು ಹತ್ತಿರದಿಂದ ಗುಂಡು ಹಾರಿಸಿದಾಗ ಅದು ನವದೀಪ್ ತಲೆಗೆ ಗುಂಡು ತಗುಲಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. 30 ವರ್ಷದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: ಚಾಮರಾಜನಗರ: ಸಾಲ ವಾಪಸ್ ಕೇಳಿದ್ದಕ್ಕೆ ವೃದ್ಧನ ಕೊಲೆ ಮಾಡಿದ ಆರೋಪ, ಮೂವರ ಬಂಧನ
ಆರೋಪಿಯು ನವದೀಪ್ ಮೃತದೇಹದ ಮೇಲೆ ತನ್ನ ವಾಹನವನ್ನು ಚಲಾಯಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಆತ ಮನೆಗೆ ಓಡಿಹೋಗಿ, ಪಾಸ್‌ಪೋರ್ಟ್ ಮತ್ತು ಹಣವನ್ನು ಕಸಿದುಕೊಂಡು ಅಮೆರಿಕಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದಾಗ ಗ್ರಾಮಸ್ಥರು ಮತ್ತು ಪೊಲೀಸರು ಆತನನ್ನು ತಡೆದಿದ್ದಾರೆ. ಹತ್ಯೆಗೆ ಬಳಸಲಾದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಡಿಎಸ್ಪಿ ನಿಹಾಲ್ ಸಿಂಗ್ ವಾಲಾ ಅನ್ವರ್ ಅಲಿ ಮತ್ತು ಎಎಸ್ಐ ಜಸ್ವಂತ್ ಸಿಂಗ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ನವದೀಪ್ ಅವರು ಪತ್ನಿ, ಏಳು ವರ್ಷದ ಮಗಳು ಮತ್ತು ಐದು ವರ್ಷದ ಮಗನನ್ನು ಅಗಲಿದ್ದಾರೆ. ಬಹದ್ದೂರ್ ಸಿಂಗ್ ಮತ್ತು ಅವರ ಪತ್ನಿ ಜೋಗಿಂದರ್ ಕೌರ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಕೊಲೆ) ಸೆಕ್ಷನ್ 103 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ನಿಹಾಲ್ ಸಿಂಗ್ ವಾಲಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:06 am, Mon, 8 December 25