ಪ್ರಧಾನಿ ಮೋದಿ ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ: ರಾಹುಲ್ ಗಾಂಧಿ ಆರೋಪ, ಬಹಿರಂಗ ಚರ್ಚೆಗೆ ಮತ್ತೊಮ್ಮೆ ಸವಾಲು

ರಾಹುಲ್ ಗಾಂಧಿ ಪ್ರಧಾನಿ ಮೋದಿ ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಬಳಿ ಪುರಾವೆ ಇದೆ ಎಂದು ಹೇಳಿ, ಮೋದಿಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿದ್ದಾರೆ. ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ಸಿಗುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ಈ ಹಿಂದೆ ಪೆಗಾಸಸ್ ಸ್ಪೈವೇರ್ ಆರೋಪವನ್ನೂ ಮಾಡಿದ್ದ ರಾಹುಲ್, ಕೇಂದ್ರ ಸರ್ಕಾರ ಆಗಲೂ ಆರೋಪವನ್ನು ನಿರಾಕರಿಸಿತ್ತು.

ಪ್ರಧಾನಿ ಮೋದಿ ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ: ರಾಹುಲ್ ಗಾಂಧಿ ಆರೋಪ, ಬಹಿರಂಗ ಚರ್ಚೆಗೆ ಮತ್ತೊಮ್ಮೆ ಸವಾಲು
ರಾಹುಲ್ ಗಾಂಧಿ

Updated on: Nov 13, 2026 | 2:35 PM

ನವದೆಹಲಿ, ನವೆಂಬರ್ 13: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಧಾನಿ ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಹೇಳಿರುವ ಅವರು, ತಮ್ಮ ಬಳಿ ಇದಕ್ಕೆ ಸಂಬಂಧಿಸಿದ ಪುರಾವೆಗಳಿವೆ ಎಂದು ಪ್ರತಿಪಾದಿಸಿದ್ದಾರೆ. ಜೊತೆಗೆ ಪ್ರಧಾನಿ ಮೋದಿಗೆ ಬಹಿರಂಗ ಚರ್ಚೆಗೆ ಮತ್ತೊಮ್ಮೆ ಸವಾಲು ಹಾಕಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಫೋನ್‌ನ್ನೇ ಎತ್ತಿ ತೋರಿಸಿ, “ಪುರಾವೆ ಈ ಫೋನ್‌ನಲ್ಲಿದೆ. ಪ್ರಧಾನಿ ನನ್ನ ಫೋನ್ ಟ್ಯಾಪ್ ಮಾಡುತ್ತಿರುವುದರಿಂದ ಅವರಿಗೆ ಈ ವಿಷಯ ಗೊತ್ತಿದೆ” ಎಂದು ಹೇಳಿದ್ದಾರೆ. ಆದರೆ ಈ ಬಾರಿ ತಮ್ಮ ಆರೋಪಕ್ಕೆ ಸಂಬಂಧಿಸಿದ ಯಾವುದೇ ತಾಂತ್ರಿಕ ಅಥವಾ ಪರಿಶೀಲಿಸಬಹುದಾದ ಸಾಕ್ಷ್ಯವನ್ನು ಅವರು ಸಾರ್ವಜನಿಕವಾಗಿ ನೀಡಿಲ್ಲ.

Loading...

ಮೋದಿಗೆ ಏಕೆ ಬಹಿರಂಗ ಚರ್ಚೆಯ ಸವಾಲು?
ರಾಹುಲ್ ಗಾಂಧಿ ಕಳೆದ ಕೆಲವು ದಿನಗಳಿಂದ ಪ್ರಧಾನಿ ಮೋದಿಗೆ ಬಹಿರಂಗ ಚರ್ಚೆಯ ಸವಾಲು ಹಾಕುತ್ತಿದ್ದಾರೆ. ವಿದೇಶಿ ಶಕ್ತಿಗಳ ಪ್ರಭಾವ, ರಾಷ್ಟ್ರೀಯ ಭದ್ರತೆ, ಚುನಾವಣಾ ಅಕ್ರಮಗಳು ಮತ್ತು ದೇಶದ ರಾಜಕೀಯ ವಿಚಾರಗಳ ಬಗ್ಗೆ ಮುಖಾಮುಖಿ ಚರ್ಚೆಯಾಗಬೇಕು ಎಂಬುದು ಅವರ ಬೇಡಿಕೆ.

ಶುಕ್ರವಾರದ ಇನ್‌ಸ್ಟಾಗ್ರಾಮ್ ಸಂವಾದದಲ್ಲೂ ಇದೇ ವಿಚಾರವನ್ನು ಪ್ರಸ್ತಾಪಿಸಿದ ರಾಹುಲ್, ಸಂಸತ್ತಿನಲ್ಲಿ ತಮಗೆ ಮುಕ್ತವಾಗಿ ಮಾತನಾಡಲು ಅವಕಾಶ ಸಿಗುತ್ತಿಲ್ಲ. ಹಲವು ಪ್ರಮುಖ ವಿಷಯಗಳ ಬಗ್ಗೆ ಮಾತನಾಡಲು ಪ್ರಯತ್ನಿಸಿದಾಗ ಮೈಕ್ ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ದೀರ್ಘ ಭಾಷಣಗಳ ಬದಲು ಪ್ರಧಾನಿ ಮತ್ತು ತಾವು ನೇರವಾಗಿ ಪ್ರಶ್ನೆ ಕೇಳುವ, ಉತ್ತರಿಸುವ ರೀತಿಯ ಚರ್ಚೆ ಬಯಸುವುದಾಗಿ ಹೇಳಿದ್ದಾರೆ.

ಅಷ್ಟೇ ಅಲ್ಲ, ಈ ಚರ್ಚೆಗೆ ಉದ್ಯಮಿ ಗೌತಮ್ ಅದಾನಿ ಅಥವಾ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ನಿರ್ಣಾಯಕರಾಗಿ ನೇಮಿಸಿದರೂ ತಮ್ಮ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ. ಚರ್ಚೆಯ ನಂತರ ಮೋದಿ ಪ್ರಧಾನಿಯಾಗಿ ಉಳಿಯುವುದಿಲ್ಲ ಎಂಬ ರಾಜಕೀಯ ಸವಾಲನ್ನೂ ಹಾಕಿದ್ದಾರೆ.

ಇದನ್ನೂ ಓದಿ:
ಪ್ರಧಾನಿ ಮೋದಿ ಸಂಚರಿಸುವ ಮಾರ್ಗದುದ್ದಕ್ಕೂ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!

ಬಿಜೆಪಿಯ ಪ್ರತಿಕ್ರಿಯೆ ಏನು?

ರಾಹುಲ್ ಗಾಂಧಿಯವರ ಬಹಿರಂಗ ಚರ್ಚೆಯ ಬೇಡಿಕೆಯನ್ನು ಬಿಜೆಪಿ ನಾಯಕರು ಒಪ್ಪಿಲ್ಲ. ಚರ್ಚೆ ನಡೆಸಲು ಸಂಸತ್ತೇ ಸೂಕ್ತ ವೇದಿಕೆ. ಅಲ್ಲಿ ವಿಷಯಾಧಾರಿತವಾಗಿ ಚರ್ಚಿಸಬಹುದು ಎಂಬುದು ಬಿಜೆಪಿಯ ನಿಲುವು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಬಿಜೆಪಿ ನಾಯಕರು ರಾಹುಲ್ ಸಂಸತ್ತಿನಲ್ಲಿ ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದ್ದಾರೆ.

ಈ ಹಿಂದೆಯೂ ಪೆಗಾಸಸ್ ಆರೋಪ ಮಾಡಿದ್ದ ರಾಹುಲ್
ಫೋನ್ ಕದ್ದಾಲಿಕೆ ವಿಚಾರ ರಾಹುಲ್ ಗಾಂಧಿಗೆ ಹೊಸದಲ್ಲ. 2023ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮಾತನಾಡುವಾಗ ತಮ್ಮ ಫೋನ್‌ನಲ್ಲಿ ಇಸ್ರೇಲ್‌ನ ಎನ್‌ಎಸ್‌ಒ ಕಂಪನಿ ಅಭಿವೃದ್ಧಿಪಡಿಸಿದ ಪೆಗಾಸಸ್ ಸ್ಪೈವೇರ್ ಇತ್ತು ಎಂದು ಆರೋಪಿಸಿದ್ದರು. ಹಲವು ರಾಜಕಾರಣಿಗಳ ಫೋನ್‌ಗಳ ಮೇಲೂ ನಿಗಾ ಇಡಲಾಗಿದೆ ಮತ್ತು ಫೋನ್‌ನಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದ ಇರುವಂತೆ ಗುಪ್ತಚರ ಅಧಿಕಾರಿಗಳು ಸೂಚಿಸಿದ್ದರು ಎಂದು ಹೇಳಿದ್ದರು.

ಆದರೆ ಕೇಂದ್ರ ಸರ್ಕಾರ ಈ ಆರೋಪಗಳನ್ನು ನಿರಾಕರಿಸಿತ್ತು. ಪೆಗಾಸಸ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ್ದ ತಾಂತ್ರಿಕ ಸಮಿತಿಯ ಪರಿಶೀಲನೆಯಲ್ಲೂ ಪರೀಕ್ಷಿಸಿದ 29 ಫೋನ್‌ಗಳಲ್ಲಿ ಪೆಗಾಸಸ್ ಪತ್ತೆಯಾಗಿರಲಿಲ್ಲ. ಆದರೆ ಕೆಲವು ಫೋನ್‌ಗಳಲ್ಲಿ ಮಾಲ್‌ವೇರ್ ಕಂಡುಬಂದಿತ್ತು ಎಂದು ಸಮಿತಿಯ ವರದಿಯನ್ನು ಉಲ್ಲೇಖಿಸಿ ವರದಿಯಾಗಿತ್ತು.

ರಾಹುಲ್ ಗಾಂಧಿ ಫೋನ್​ ಕದ್ದಾಲಿಕೆ ಹೇಳಿಕೆಗೆ ಅಖಿಲೇಶ್ ಸಮರ್ಥನೆ ಮಾಡಿಕೊಂಡಿದ್ದಾರೆ, ತಂತ್ರಜ್ಞಾನದಿಂದ ಏನು ಬೇಕಾದರೂ ಮಾಡಬಹುದಾಗಿದೆ ಎಂದಿದ್ದಾರೆ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us