ದೆಹಲಿ: ದೇಶದಲ್ಲಿ ಕಾಂಗ್ರೆಸ್ (Congress Party) ದಿನದಿಂದ ದಿನಕ್ಕೆ ಜನಬೆಂಬಲ ಕಳೆದುಕೊಳ್ಳುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಹೀನಾಯ ಸ್ಥಿತಿ ತಲುಪುತ್ತಿರುವ ಪಕ್ಷವನ್ನು ಪುನರುಜ್ಜೀವನಗೊಳಿಸಲು ಕಾಂಗ್ರೆಸ್ ನಾಯಕರು ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಒಂದೊಂದೇ ರಾಜ್ಯವನ್ನು ಕಾಂಗ್ರೆಸ್ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಹಿರಿಯ ನಾಯಕರು ಹೈಕಮಾಂಡ್ ನಡೆ ಖಂಡಿಸಿ ಪಕ್ಷವನ್ನು ಒಬ್ಬೊಬ್ಬರಾಗಿ ತೊರೆಯುತ್ತಿದ್ದಾರೆ. ಈ ಸಮಸ್ಯೆಗಳ ನಡುವೆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂದಿನ ಒಂದು ವರ್ಷ ಪೂರ್ತಿ ಪಾದಯಾತ್ರೆ ಮಾಡಲಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಹುಲ್ ಗಾಂಧಿ ಪಾದಯಾತ್ರೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ.
ಕಾಂಗ್ರೆಸ್ ಸಂಸದೀಯ ಮಂಡಳಿ ಬದಲಾವಣೆ
ಕಾಂಗ್ರೆಸ್ ಪಕ್ಷದ ಆಂತರಿಕ ವ್ಯವಹಾರಗಳನ್ನು ನಿರ್ವಹಿಸುವ ಪ್ರಭಾವಶಾಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ (Congress working committee – CWC) ಅಗತ್ಯ ಬದಲಾವಣೆಗಳು ಆಗಬೇಕು. ಪಕ್ಷದ ಸಂಸದೀಯ ಮಂಡಳಿಯನ್ನು ಮತ್ತೆ ಚಾಲ್ತಿಗೆ ತರಬೇಕು ಎನ್ನುವ ಕಾಂಗ್ರೆಸ್ನ ಜಿ23 ಬಂಡುಕೋರ ಗುಂಪಿನ ಬೇಡಿಕೆಗೆ ಕಾಂಗ್ರೆಸ್ ನಾಯಕರು ಮಣಿದಿದ್ದಾರೆ ಎನ್ನಲಾಗಿದೆ. ರಾಜಸ್ಥಾನದ ಉದಯ್ಪುರದಲ್ಲಿ ನಡೆದ ಚಿಂತನ ಶಿಬಿರದಲ್ಲಿ ಈ ಕುರಿತು ಸುದೀರ್ಘ ಚರ್ಚೆಗಳು ನಡೆದವು. ಈ ವೇಳೆ ವ್ಯಕ್ತವಾದ ವಿಚಾರಗಳನ್ನು ಆಧರಿಸಿ ಕಾಂಗ್ರೆಸ್ನಲ್ಲಿ ಸುಧಾರಣೆ ಪ್ರಯತ್ನಗಳು ಅರಂಭವಾಗಲಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ನ ಕಾರ್ಯಕಾರಿ ಸಮಿತಿಯು ತೆಗೆದುಕೊಳ್ಳುವ ತೀರ್ಮಾನಗಳನ್ನು ಅನುಷ್ಠಾನಗೊಳಿಸುವ ಕೆಲಸವನ್ನು ಸಂಸದೀಯ ಮಂಡಳಿ ಮಾಡುತ್ತದೆ. ಸುಮಾರು 10 ಜನರಿರುವ ಈ ಮಂಡಳಿಯ ಮೂಲಕ ಸಾಮೂಹಿಕ ನಾಯಕತ್ವಕ್ಕೆ ಹೊಸ ಅರ್ಥ ಬರುತ್ತದೆ ಎಂದು ಜಿ23 ಗುಂಪಿನ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಈ ಬೇಡಿಕೆಗಳಿಗೆ ಆಕ್ಷೇಪಗಳೂ ಕೇಳಿಬಂದಿವೆ. ‘ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಮತ್ತು ಸಮಗ್ರ ಚರ್ಚೆಯ ನಂತರ ತೀರ್ಮಾನ ತೆಗೆದುಕೊಳ್ಳುವ ವ್ಯವಸ್ಥೆ ರೂಪುಗೊಂಡಿದೆ. ಸಂಸದೀಯ ಮಂಡಳಿಯನ್ನು ಮತ್ತೆ ಚಾಲ್ತಿಗೆ ತರುವುದರಿಂದ ಕೆಲ ಜಿ-23 ನಾಯಕರಿಗೆ ಪುನರ್ವಸತಿ ಸಿಗಬಹುದೇ ಹೊರತು ಬೇರೆ ಯಾವುದೇ ಸಾಧನೆಯಾಗುವುದಿಲ್ಲ’ ಎಂದು ಇತರ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
1991ರಲ್ಲಿ ಅಂದಿನ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ಪಿ.ವಿ.ನರಸಿಂಹರಾವ್ ಕಾಂಗ್ರೆಸ್ ಸಂಸದೀಯ ಮಂಡಳಿಯನ್ನು ರದ್ದುಪಡಿಸಿದ್ದರು.
ಇನ್ನಷ್ಟು ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:35 am, Sun, 15 May 22