ನೀವು ಯಾಕೆ ಮದುವೆ ಆಗಿಲ್ಲ?; ವಿದ್ಯಾರ್ಥಿನಿಯರ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ ಹೀಗಿತ್ತು

|

Updated on: Oct 10, 2023 | 6:47 PM

Rahul Gandhi: ನಿಮ್ಮ ನೆಚ್ಚಿನ ತಿನಿಸು ಯಾವುದು ಎಂದು ಕೇಳಿದಾಗ ಹಾಗಲಕಾಯಿ, ಬಟಾಣಿ ಮತ್ತು ಪಾಲಕ್ ಹೊರತುಪಡಿಸಿ ಎಲ್ಲವನ್ನೂ ಚೆನ್ನಾಗಿ ತಿನ್ನುತ್ತೇನೆ ಎಂದಿದ್ದಾರೆ ರಾಹುಲ್. ನಿಮ್ಮ ನೆಚ್ಚಿನ ತಾಣ ಯಾವುದು ಎಂದು ಕೇಳಿದಾಗ ನಾನು ನೋಡದೇ ಇರುವ ಜಾಗ. ನಾನು ಯಾವಾಗಲೂ ಹೊಸ ಸ್ಥಳಗಳನ್ನು ನೋಡಲು ಇಷ್ಟಪಡುತ್ತೇನೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ನೀವು ಯಾಕೆ ಮದುವೆ ಆಗಿಲ್ಲ?; ವಿದ್ಯಾರ್ಥಿನಿಯರ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ ಹೀಗಿತ್ತು
ರಾಹುಲ್ ಗಾಂಧಿ
Follow us on

ದೆಹಲಿ ಅಕ್ಟೋಬರ್ 10 : ಜೈಪುರದಲ್ಲಿ (Jaipur) ಕಾಲೇಜು ವಿದ್ಯಾರ್ಥಿನಿಯರ ಜತೆ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಸಂವಾದ ನಡೆಸಿದ್ದು ಈ ವೇಳೆ ಅವರಲ್ಲಿ ಹಲವಾರು ಪ್ರಶ್ನೆಗಳನ್ನು ವಿದ್ಯಾರ್ಥಿಗಳ ಕೇಳಿದ್ದಾರೆ. ನಿಮ್ಮ ಚರ್ಮದ ಆರೈಕೆ ಹೇಗೆ ಮಾಡುತ್ತೀರಿ, ನಿಮ್ಮ ನೆಚ್ಚಿನ ಆಹಾರ, ಇಷ್ಟವಾದ ಸ್ಥಳ ಯಾವುದು ಎಂಬ ಪ್ರಶ್ನೆ ಜತೆಗೇ ನೀವು ಯಾಕೆ ಇನ್ನೂ ಮದುವೆಯಾಗಿಲ್ಲ? ಎಂದು ವಿದ್ಯಾರ್ಥಿನಿಯರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆಲ್ಲ ನಗುತ್ತಾ ರಾಹುಲ್ ಗಾಂಧಿ ಉತ್ತರಿಸಿದ್ದಾರೆ.

ಜೈಪುರದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದದ ವಿಡಿಯೊವನ್ನು ಇಂದು  ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಶೇರ್ ಮಾಡಲಾಗಿದೆ. ಈ ಸಂವಾದದಲ್ಲಿ ಜಾತಿ ಗಣತಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರದಂತಹ ವಿಷಯಗಳಿಂದ ಹಿಡಿದು ಆರ್ಥಿಕ ಸ್ವಾತಂತ್ರ್ಯದ ಅಗತ್ಯ, ತನಗೆ ಏನು ಇಷ್ಟ, ಏನು ಇಷ್ಟ ಇಲ್ಲ ಎಂಬುದನ್ನು ರಾಹುಲ್ ಗಾಂಧಿ ಹೇಳಿದ್ದಾರೆ.

“ನೀನು ತುಂಬಾ ಸ್ಮಾರ್ಟ್ ಮತ್ತು ಲುಕ್ ಚೆನ್ನಾಗಿದೆ. ಮದುವೆಯ ಬಗ್ಗೆ ಏಕೆ ಯೋಚಿಸಲಿಲ್ಲ?” ಎಂದು 53 ವರ್ಷದ ಮಾಜಿ ಕಾಂಗ್ರೆಸ್ ಅಧ್ಯಕ್ಷರಲ್ಲಿ ವಿದ್ಯಾರ್ಥಿನಿ ಕೇಳಿದ್ದಾರೆ. ಇದಕ್ಕೆ ರಾಹುಲ್,ನಾನು ನನ್ನ ಕೆಲಸದಲ್ಲಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಕಾರಣ ಎಂದು ಉತ್ತರಿಸಿದ್ದಾರೆ.


ನಿಮ್ಮ ನೆಚ್ಚಿನ ತಿನಿಸು ಯಾವುದು ಎಂದು ಕೇಳಿದಾಗ ಹಾಗಲಕಾಯಿ, ಬಟಾಣಿ ಮತ್ತು ಪಾಲಕ್ ಹೊರತುಪಡಿಸಿ ಎಲ್ಲವನ್ನೂ ಚೆನ್ನಾಗಿ ತಿನ್ನುತ್ತೇನೆ ಎಂದಿದ್ದಾರೆ ರಾಹುಲ್. ನಿಮ್ಮ ನೆಚ್ಚಿನ ತಾಣ ಯಾವುದು ಎಂದು ಕೇಳಿದಾಗ ನಾನು ನೋಡದೇ ಇರುವ ಜಾಗ. ನಾನು ಯಾವಾಗಲೂ ಹೊಸ ಸ್ಥಳಗಳನ್ನು ನೋಡಲು ಇಷ್ಟಪಡುತ್ತೇನೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ನಿಮ್ಮ ಸುಂದರ ತ್ವಚೆಯ ರಹಸ್ಯ ಏನು ಎಂದು ಕೇಳಿದಾಗ, ನಾನು ಮುಖಕ್ಕೆ ಸೋಪ್ ಅಥವಾ ಕ್ರೀಮ್ ಹಚ್ಚುವುದಿಲ್ಲ, ಬರೀ ನೀರಿನಿಂದ ಮಾತ್ರ ತೊಳೆಯುತ್ತೇನೆ ಎಂದು ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಪುರುಷರಿಗಿಂತ ಕಡಿಮೆಯಿಲ್ಲ, ಆದ್ದರಿಂದ ಅವರಿಗೆ ಏಕೆ ಕಡಿಮೆ ಹಕ್ಕುಗಳು ಇರಬೇಕು ಎಂದು ಕೇಳಿದ ರಾಹುಲ್, ಮಹಿಳೆಯರಿಗೆ ಆರ್ಥಿಕ ಸ್ವಾಯತ್ತತೆ ಕುರಿತು ಸುದೀರ್ಘವಾಗಿ ಮಾತನಾಡಿದರು.

ಸಮಾಜದಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯದ ಬಗ್ಗೆ ಕೇಳಿದಾಗ “ಹಣವು ಹೇಗೆ ಕೆಲಸ ಮಾಡುತ್ತದೆ, ಅಧಿಕಾರವು ಹೇಗೆ ಕೆಲಸ ಮಾಡುತ್ತದೆ, ಹಣ ಎಂದರೇನು ಎಂಬುದರ ಕುರಿತು ಮಹಿಳೆಯರಿಗೆ ಎಂದಿಗೂ ವಿವರಿಸಲಾಗುವುದಿಲ್ಲ” ಎಂದಿದ್ದಾರೆ ರಾಹುಲ್ ಗಾಂಧಿ.
“ನೀವು ಕಳೆದ 20 ವರ್ಷಗಳಿಂದ ಓದುತ್ತಿದ್ದೀರಿ. ಆದರೆ ಇದು ಹಣ, ಇದು ಅದರ ವ್ಯಾಖ್ಯಾನ ಎಂದು ಯಾರೂ ನಿಮಗೆ ಹೇಳಲಿಲ್ಲ … ಏಕೆ?” ಎಂದಾಗ ಇದನ್ನು ಕಲಿತಾಗ ಮಹಿಳೆಯರು ಸ್ವತಂತ್ರರಾಗುತ್ತಾರೆ ಮತ್ತು ಅದಕ್ಕಾಗಿಯೇ ಅವರಿಗೆ ಅದರ ಬಗ್ಗೆ ಕಲಿಸುವುದಿಲ್ಲ ಎಂದು ವಿದ್ಯಾರ್ಥಿಯೊಬ್ಬರು ಉತ್ತರಿಸಿದ್ದಾರೆ.

ಇದನ್ನೂ ಓದಿ: ಜಾತಿ ಗಣತಿ: ಅವರಪ್ಪನ ನಿಲುವೇನಾಗಿತ್ತು?, ರಾಹುಲ್ ಗಾಂಧಿ ವಿರುದ್ಧ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ

“ಮಹಿಳೆಗೆ ಉದ್ಯೋಗವಿದ್ದರೂ ಹಣ ಅರ್ಥವಾಗದಿದ್ದರೆ ಅದು ಕೆಲಸ ಮಾಡುವುದಿಲ್ಲ, ಮಹಿಳೆಗೆ ಕೆಲಸವಿಲ್ಲದಿದ್ದರೆ ಹಣದ ಅರ್ಥವಿದೆ, ಅದು ಪವರ್​​ಫುಲ್ ವಿಷಯವಾಗಿದೆ, ಮಹಿಳೆಯರು ಈ ವಿಷಯಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ಅವರು ಯಾವಾಗಲೂ ಕೆಲಸ ಹೊಂದಿರುವ ಅಥವಾ ಈ ವಿಷಯಗಳನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯ ಮೇಲೆ ಅವಲಂಬಿತವಾಗಿರಬೇಕಾಗುತ್ತದೆ”ಎಂದು ಅವರು ಹೇಳಿದರು.

“ಖತಮ್, ಟಾಟಾ, ಬೈ-ಬೈ, ಗಯಾ” ಎಂಬ ಮೀಮ್ ಬಗ್ಗೆ ವಿದ್ಯಾರ್ಥಿಯೊಬ್ಬರು ನೆನಪಿಸಿದಾಗ, ಕೆಲವೊಮ್ಮೆ ಇಂತಹ ಮಾತುಗಳನ್ನು ಹೇಳಬೇಕಾಗುತ್ತದೆ. ನೋಡಿ ನಮ್ಮ ಟೀಂನವರು ಖತಮ್, ಟಾಟಾ, ಬೈ-ಬೈ ಹೇಳಿ ಎಂದು ಈ  ಸಂವಹನವನ್ನು ಕೊನೆಗೊಳಿಸುವಂತ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ನಕ್ಕಿದ್ದಾರೆ.

ರಾಜಕಾರಣಿಯಾಗದಿದ್ದರೆ ನೀವೇನಾಗುತ್ತಿದ್ದಿರಿ ಎಂದು ಕೇಳಿದಾಗ ಹಲವಾರು ಇದೆ.ನಾನು ಶಿಕ್ಷಕ. ನಾನು ಯುವಕರಿಗೆ ಕಲಿಸುತ್ತೇನೆ. ನಾನು ಅಡುಗೆ ಮಾಡುವವನು. ಹಾಗಾಗಿ, ನನ್ನಲ್ಲಿ ಬೇರೆ ಬೇರೆ ವಿಷಯಗಳಿವೆ. ಅದು ಸಂಕೀರ್ಣವಾದ ವಿಷಯ ಎಂದಿದ್ದಾರೆ.

ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ತಾವು ಕೈಗೊಂಡ ಭಾರತ್ ಜೋಡೋ ಯಾತ್ರೆಯು ಈ ಸಂವಾದಗಳೊಂದಿಗೆ ಮುಂದುವರಿಯುತ್ತದೆ ಎಂದು ಪ್ರತಿಪಾದಿಸುತ್ತಾ ಸಮಾಜದ ವಿವಿಧ ವರ್ಗಗಳೊಂದಿಗೆ ಮೆಕ್ಯಾನಿಕ್‌ಗಳು ಮತ್ತು ಪೋರ್ಟರ್‌ಗಳಿಂದ ವಿದ್ಯಾರ್ಥಿಗಳು ಮತ್ತು ಬಡಗಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.

ಅವರು ಇತ್ತೀಚೆಗೆ ಲಡಾಖ್‌ಗೆ ಭೇಟಿ ನೀಡಿದ್ದು ವಿವಿಧ ಸಾಮಾಜಿಕ ಗುಂಪುಗಳನ್ನು ಭೇಟಿ ಮಾಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ