2020ರಲ್ಲಿ ತಮ್ಮದೇ ಪಕ್ಷದ ಶಾಸಕರು ಬಂಡಾಯ ಎದ್ದಿದ್ದಾಗ ವಸುಂಧರಾ ರಾಜೇ(Vasundhara Raje) ಹಾಗೂ ಇಬ್ಬರು ಬಿಜೆಪಿ ಶಾಸಕರು ಸರ್ಕಾರ ಉಳಿಸಲು ಸಹಾಯ ಮಾಡಿದ್ದರು ಎನ್ನುವ ಅಶೋಕ್ ಗೆಹ್ಲೋಟ್ ಹೇಳಿಕೆಗೆ ವಸುಂಧರಾ ರಾಜೇ ತಿರುಗೇಟು ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸುಳ್ಳು ಹೇಳುತ್ತಿದ್ದಾರೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಹೇಳಿದ್ದಾರೆ.
ಲಂಚ ಪಡೆಯುವುದು ಮತ್ತು ನೀಡುವುದು ಎರಡೂ ಅಪರಾಧ ಎಂದು ವಸುಂಧರಾ ರಾಜೆ ಹೇಳಿದ್ದಾರೆ. ಅವರ ಶಾಸಕರು ಹಣ ತೆಗೆದುಕೊಂಡಿದ್ದರೆ, ಎಫ್‌ಐಆರ್ ದಾಖಲಿಸಿ. ಅವರದೇ ಪಕ್ಷದಲ್ಲಿ ಬಂಡಾಯವೆದ್ದು ಜನಸಮೂಹ ಪಾತಾಳಕ್ಕೆ ಹೋಗುತ್ತಿದೆ ಎಂಬ ಕಾರಣಕ್ಕೆ ಸಿಟ್ಟಿನಲ್ಲಿ ಈ ರೀತಿ ಅತಿರೇಕದ ಹಾಗೂ ಸತ್ಯವಲ್ಲದ ಆರೋಪಗಳನ್ನು ಮಾಡುವುದೇಕೆ ಎಂದಿದ್ದಾರೆ.
ಮುಖ್ಯಮಂತ್ರಿ ಗೆಹ್ಲೋಟ್ ನನ್ನನ್ನು ಹೊಗಳಿರುವುದು ನನ್ನ ವಿರುದ್ಧದ ದೊಡ್ಡ ಷಡ್ಯಂತ್ರ. ಜೀವನದಲ್ಲಿ ಗೆಹ್ಲೋಟ್ ನನ್ನನ್ನು ಅವಮಾನಿಸಿದಷ್ಟು ಯಾರೂ ಅವಮಾನಿಸಲು ಸಾಧ್ಯವಿಲ್ಲ. 2023 ರ ಚುನಾವಣೆಯಲ್ಲಿ ಐತಿಹಾಸಿಕ ಸೋಲನ್ನು ತಪ್ಪಿಸಲು ಅವರು ಇಂತಹ ಕಪೋಲಕಲ್ಪಿತ ಕಥೆಗಳನ್ನು ರಚಿಸುತ್ತಿದ್ದಾರೆ, ಇದು ದುರದೃಷ್ಟಕರ ಆದರೆ ಅವರ ಕುತಂತ್ರವು ಯಶಸ್ವಿಯಾಗುವುದಿಲ್ಲ.
ಮತ್ತಷ್ಟು ಓದಿ: ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಜಗಳದ ನಡುವೆಯೇ ರಾಜಸ್ಥಾನ ಕಾಂಗ್ರೆಸ್ನಲ್ಲಿ ಶೀಘ್ರದಲ್ಲೇ ಮೇಜರ್ ಸರ್ಜರಿ?
ಅಶೋಕ್ ಗೆಹ್ಲೋಟ್ ಹೇಳಿದ್ದೇನು?
ಸಚಿನ್ ಪೈಲಟ್ ನೇತೃತ್ವದಲ್ಲಿ ಬಂಡಾಯವೆದ್ದಿದ್ದ ಕಾಂಗ್ರೆಸ್ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿಯಿಂದ ಅವರು ಪಡೆದಿದ್ದ ಹಣವನ್ನು ಮರಳಿಸಲಿ. ಇದರಿಂದ ಅವರು ಯಾವುದೇ ಒತ್ತಡವಿಲ್ಲದೆ ತಮ್ಮ ಕೆಲಸ ಮಾಡಿಕೊಳ್ಳಬಹುದು ಎಂದು ಗೆಹ್ಲೋಟ್ ಸಲಹೆ ನೀಡಿದ್ದಾರೆ.
2020ರ ಜುಲೈನಲ್ಲಿ ಸಚಿನ್ ಪೈಲಟ್ ಮತ್ತು 18 ಇತರೆ ಶಾಸಕರು ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದರು. ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನಗೊಳ್ಳುವುದು ನಿಶ್ಚಿತ ಎಂದು ಹೇಳಲಾಗಿತ್ತು. ಸುಮಾರು ಒಂದು ತಿಂಗಳ ಗೊಂದಲ ಬಳಿಕ ಹೈಕಮಾಂಡ್ ಮಧ್ಯಪ್ರವೇಶದೊಂದಿಗೆ ಕೊನೆಗೂ ಬಂಡಾಯ ಶಮನಗೊಂಡಿತ್ತು.
ಆಗ ರಾಜಸ್ಥಾನದ ಡಿಸಿಎಂ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಚಿನ್ ಪೈಲಟ್ ಅವರನ್ನು ಆ ಹುದ್ದೆಗಳಿಂದ ಕಿತ್ತು ಹಾಕಲಾಗಿತ್ತು. ಧೋಲ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೆಹ್ಲೋಟ್, ಮೂರು ವರ್ಷದ ಹಿಂದೆ ತಮ್ಮ ಸರ್ಕಾರ ಉಳಿಯಲು ಸಾಧ್ಯವಾಗಿದ್ದು ಬಿಜೆಪಿಯ ಮೂವರು ನಾಯಕರಿಂದ ಎಂದು ಮಾಜಿ ಸಿಎಂ ವಸುಂಧರಾ ರಾಜೇ, ಮಾಜಿ ವಿಧಾನಸಭೆ ಸ್ಪೀಕರ್ ಕೈಲಾಶ್ ಮೇಘವಾಲ್ ಮತ್ತು ಶಾಸಕಿ ಶೋಭರಾಣಿ ಕುಶ್ವಾಹ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.
2020ರ ಜುಲೈನಲ್ಲಿ, ಸಚಿನ್ ಪೈಲಟ್ ಮತ್ತು ಅವರ 18 ನಿಷ್ಠಾವಂತರು ಗೆಹ್ಲೋಟ್ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದರು. ಆದರೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಧ್ಯಪ್ರವೇಶದ ನಂತರ ಒಂದು ತಿಂಗಳ ಬಳಿಕ ಬಿಕ್ಕಟ್ಟು ಕೊನೆಗೊಂಡಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ