ದೆಹಲಿ: ವಿವಾದದ ಕಿಡಿ ಹೊತ್ತಿಸಿದ್ದ ಪೌರತ್ವ ತಿದ್ದುಪಡಿ ಸಂಸತ್ನ ಉಭಯ ಸದನಗಳಲ್ಲಿ ಅಂಗೀಕಾರವಾಗ್ತಿದ್ದಂತೇ ಪರ, ವಿರೋಧದ ಚರ್ಚೆಗಳು ಕೂಡ ಜೋರಾಗಿವೆ. ನಿರಾಶ್ರಿತರು ಪೌರತ್ವ ಸಿಗುವ ಖುಷಿಯಲ್ಲಿದ್ರೆ, ಪ್ರತಿಭಟನೆಯ ಕಾವಿಗೆ ಈಶಾನ್ಯ ಭಾರತ ಬೆಂಕಿಯುಂಡೆಯಾಗಿದೆ.
ಅಗ್ನಿಪರೀಕ್ಷೆಯಲ್ಲಿ ಪಾಸಾಯ್ತು ಪೌರತ್ವ ಮಸೂದೆ:
ಪ್ರತಿಪಕ್ಷಗಳ ಪ್ರತಿರೋಧ, ಸದನದಲ್ಲಿ ತೀವ್ರ ಕೋಲಾಹಲ, ಈಶಾನ್ಯ ರಾಜ್ಯಗಳಲ್ಲಿ ಆಕ್ರೋಶದ ಕಿಚ್ಚು ಹಚ್ಚಿದ್ದ ಪೌರತ್ವ ತಿದ್ದುಪಡಿ ಮಸೂದೆ ಸಂಸತ್ನ ಮೇಲ್ಮನೆಯಾದ ರಾಜ್ಯಸಭೆಯಲ್ಲೂ ಅಂಗೀಕಾರವಾಗಿದೆ. ಮಸೂದೆ ಮೇಲೆ ಸುಮಾರು 7 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದು ವಿಧೇಯಕವನ್ನ ಮತಕ್ಕೆ ಹಾಕಲಾಯ್ತು. ಈ ವೇಳೆ ಮಸೂದೆ ಪರವಾಗಿ 125 ಮತಗಳು ಬಿದ್ದು ವಿಧೇಯಕ ಪಾಸಾಯ್ತು.
ದೇಶದೆಲ್ಲೆಡೆ ಮುಸ್ಲಿಮೇತರ ನಿರಾಶ್ರಿತರ ಸಂಭ್ರಮ:
ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗ್ತಿದ್ದಂತೆ ದೇಶದ ನಾನಾ ಭಾಗಗಳಲ್ಲಿ ನೆಲೆಸಿದ್ದ ನಿರಾಶ್ರಿತರ ಸಂಭ್ರಮ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ, ಸಿಹಿ ಹಂಚಿದ ಮುಸ್ಲಿಮೇತರ ನಿರಾಶ್ರಿತರು ಮೋದಿ ಪರ ಘೋಷಣೆಗಳನ್ನ ಕೂಗಿ ಸಂಭ್ರಮಿಸಿದ್ರು.
ಮಗುವಿಗೆ ‘ನಾಗರಿಕತ್ವ’ ಅಂತ ಹೆಸರಿಟ್ಟ ತಾಯಿ:
ರಾಜ್ಯಸಭೆಯಲ್ಲಿ ಪಾಸಾದ ಮಸೂದೆಗೆ ಶೀಘ್ರದಲ್ಲೇ ರಾಷ್ಟ್ರಪತಿ ಅಂಕಿತ ಬಿದ್ದು ಕಾಯ್ದೆ ರೂಪ ಪಡೆಯಲಿದೆ. ಅದರಂತೆ 2014ರ ಡಿಸೆಂಬರ್ 31ಕ್ಕೂ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದಿಂದ ವಲಸೆ ಬಂದು ಭಾರತದಲ್ಲಿ ನೆಲೆಸಿದ ಮುಸ್ಲಿಮೇತರ ನಿರಾಶ್ರಿತರಿಗೆ ದೇಶದ ನಾಗರಿಕತ್ವ ಸಿಗಲಿದೆ. ಇದೇ ಖುಷಿಗೆ ಪಾಕಿಸ್ತಾನದಿಂದ ಬಂದು ದೆಹಲಿಯಲ್ಲಿ ನೆಲೆಸಿದ್ದ ಹಿಂದೂ ನಿರಾಶ್ರಿತೆಯೊಬ್ಬಳು ತನ್ನ 2 ದಿನದ ಮಗುವಿಗೆ ನಾಗರಿಕತ್ವ ಅಂತಾನೆ ಹೆಸರಿಟ್ಟಿದ್ದಾಳೆ.
ಮೈಲಿಗಲ್ಲು ಎಂದ ಮೋದಿ, ಕರಾಳ ದಿನವೆಂದ ಸೋನಿಯಾ:
ಸಂಸತ್ನಲ್ಲಿ ಮಸೂದೆ ಅಂಗೀಕಾರವಾದ ಬೆನ್ನಲ್ಲೇ ಟ್ವೀಟ್ ಮಾಡಿರೋ ಪ್ರಧಾನಿ ಮೋದಿ, ಇದು ಭಾರತದ ಇತಿಹಾಸದಲ್ಲೇ ಮೈಲಿಗಲ್ಲು. ಇದರಿಂದ ಹಲವು ವರ್ಷಗಳಿಂದ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಸಿಗಲಿದೆ ಎಂದಿದ್ದಾರೆ. ಅತ್ತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಇದು ಭಾರತದ ಇತಿಹಾಸದಲ್ಲಿ ಕರಾಳ ದಿನ ಅಂತ ಬಿಜೆಪಿ ವಿರುದ್ಧ ಬೆಂಕಿ ಉಗುಳಿದ್ದಾರೆ.
ಕೊತ ಕೊತ ಕುದಿಯುತ್ತಿದೆ ಈಶಾನ್ಯ ಭಾರತ:
ಪೌರತ್ವ ತಿದ್ದುಪಡಿ ವಿಧೇಯಕ ವಿರುದ್ಧ ಇಡೀ ಈಶಾನ್ಯ ಭಾರತ ಹೊತ್ತಿ ಉರೀತಿದೆ. ಪ್ರತಿಭಟನೆಯ ಕಾವು ಜೋರಾಗಿದ್ದು, ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಹಲವೆಡೆ ಲಾಠಿ ಚಾರ್ಚ್ ಕೂಡ ನಡೆದಿದೆ. ಅದ್ರಲ್ಲೂ ಅಸ್ಸಾಂನಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಅನಿರ್ಧಿಷ್ಟಾವಧಿವರೆಗೆ ಕರ್ಫ್ಯೂ ಹೇರಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೇನೆಯನ್ನ ನಿಯೋಜಿಸಲಾಗಿದೆ. ಇನ್ನು ವಿಧೇಯಕದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಕೆಲ ಸಂಘಟನೆಗಳು ಮುಂದಾಗಿವೆ.
Published On - 6:39 am, Thu, 12 December 19