ರಾಮ ಮಂದಿರ ದೇಣಿಗೆಯಲ್ಲಿ ಭಾರಿ ಲೋಪ ಪ್ರಕರಣ, ಎಸ್‌ಐಟಿ ತನಿಖೆಯಲ್ಲಿ ಮತ್ತಷ್ಟು ಆಘಾತಕಾರಿ ಸತ್ಯಗಳು ಬಯಲು

ಶ್ರೀ ರಾಮ ಮಂದಿರದ ದೇಣಿಗೆಯಲ್ಲಿ ಭಾರಿ ಲೋಪಗಳು ಮತ್ತು ಭದ್ರತಾ ವೈಫಲ್ಯಗಳು ಎಸ್‌ಐಟಿ ತನಿಖೆಯಲ್ಲಿ ಬಯಲಾಗಿವೆ. ಸಿಸಿಟಿವಿ ಕ್ಯಾಮರಾ ಮರೆಮಾಚುವಿಕೆ, ಸಿಬ್ಬಂದಿ ದೇಹ ತಪಾಸಣೆ ಕೊರತೆ, ಅಪಾರದರ್ಶಕ ನೇಮಕಾತಿ, ಮತ್ತು ಚಿನ್ನಾಭರಣ ದಾಖಲೆಗಳ ವ್ಯತ್ಯಾಸಗಳು ಮುಖ್ಯ ಆರೋಪಗಳಾಗಿವೆ. ಭವಿಷ್ಯದಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ತಡೆಯಲು ಎಸ್‌ಐಟಿ ಸರ್ಕಾರಕ್ಕೆ ಪ್ರಮುಖ ಶಿಫಾರಸುಗಳನ್ನು ಸಲ್ಲಿಸಿದೆ.

ರಾಮ ಮಂದಿರ ದೇಣಿಗೆಯಲ್ಲಿ ಭಾರಿ ಲೋಪ ಪ್ರಕರಣ, ಎಸ್‌ಐಟಿ ತನಿಖೆಯಲ್ಲಿ ಮತ್ತಷ್ಟು ಆಘಾತಕಾರಿ ಸತ್ಯಗಳು ಬಯಲು
ಅಯೋಧ್ಯೆ
Image Credit source: Jansatta

Updated on: Jun 23, 2026 | 12:02 PM

ಅಯೋಧ್ಯೆ, ಜೂನ್ 23: ಅಯೋಧ್ಯೆ(Ayodhya)ಯ ಶ್ರೀ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ಕಳ್ಳತನ ಮತ್ತು ಕಾಣಿಕೆ ಹಣದ ದುರುಪಯೋಗದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT), ದೇವಸ್ಥಾನದ ದೇಣಿಗೆ ನಿರ್ವಹಣೆಯಲ್ಲಿ ಭೀಕರ ಲೋಪಗಳು ಮತ್ತು ಭದ್ರತಾ ವೈಫಲ್ಯಗಳು ಇರುವುದನ್ನು ಪತ್ತೆಹಚ್ಚಿದೆ. ಟ್ರಸ್ಟ್‌ನ ಕೋರಿಕೆಯ ಮೇರೆಗೆ ಜೂನ್ 13, 2026 ರಂದು ರಚಿಸಲಾದ ಮೂವರು ಸದಸ್ಯರ ಈ ಎಸ್‌ಐಟಿ ತಂಡವು 100 ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿ ಈ ವರದಿಯನ್ನು ಸಿದ್ಧಪಡಿಸಿದೆ. ತಪ್ಪು ಮಾಡಿದವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ಎಸ್‌ಐಟಿ ಸಜ್ಜಾಗಿದೆ.

ಕ್ಯಾಮೆರಾಗಳನ್ನು ಮರೆಮಾಚಿದ ಸಿಬ್ಬಂದಿ: ಹಣ ಎಣಿಕೆ ಮಾಡುವ ಸಮಯದಲ್ಲಿ ಅಲ್ಲಿನ ನೌಕರರು ಸಿಸಿಟಿವಿ ಕ್ಯಾಮೆರಾಗಳಿಗೆ ಅಡ್ಡವಾಗಿ ನಿಂತು ದೃಶ್ಯಾವಳಿಗಳು ರೆಕಾರ್ಡ್ ಆಗದಂತೆ ತಡೆದಿದ್ದಾರೆ. ನಗದು ಎಣಿಕೆ ಕೋಣೆಯ ಸಿಸಿಟಿವಿ ರೆಕಾರ್ಡಿಂಗ್‌ಗಳನ್ನು ಡಿಲೀಟ್ ಮಾಡಲಾಗಿರುವ ಅಥವಾ ಬದಲಾಯಿಸಲಾಗಿರುವ ಬಲವಾದ ಲಕ್ಷಣಗಳು ಕಂಡುಬಂದಿವೆ. ಜೊತೆಗೆ ಕೇವಲ 45 ದಿನಗಳ ಹಳೆಯ ದೃಶ್ಯಾವಳಿಗಳು ಮಾತ್ರ ಲಭ್ಯವಿದ್ದು, ಹಳೆಯ ದಾಖಲೆಗಳನ್ನು ಪರಿಶೀಲಿಸುವುದು ಕಷ್ಟವಾಗಿದೆ.

ಹಣ ಎಣಿಸುವ ಸಿಬ್ಬಂದಿ ಬರುವಾಗ ಮತ್ತು ಹೋಗುವಾಗ ಅವರ ದೇಹ ತಪಾಸಣೆ (Checking) ನಡೆಸಲು ಯಾವುದೇ ಬಲವಾದ ವ್ಯವಸ್ಥೆ ಇರಲಿಲ್ಲ. ನಿಯಮಿತ ಸಮವಸ್ತ್ರ ಧರಿಸುವ ಬದಲಿಗೆ ಸಿಬ್ಬಂದಿ ತಮ್ಮ ಸಾಮಾನ್ಯ ಬಟ್ಟೆಯಲ್ಲೇ ಬಂದು ಹಣ ಎಣಿಸುತ್ತಿದ್ದರು. ಇದು ಹಣವನ್ನು ಸುಲಭವಾಗಿ ಹೊರಗೆ ಸಾಗಿಸಲು ದಾರಿ ಮಾಡಿಕೊಟ್ಟಿದೆ.

ಶಿಫಾರಸಿನ ಮೇರೆಗೆ ನೌಕರಿ: ದೇವಸ್ಥಾನದ 35 ದೇಣಿಗೆ ಪೆಟ್ಟಿಗೆಗಳಿಂದ ಹಣವನ್ನು ತಂದು ಎಣಿಸುವ ಜವಾಬ್ದಾರಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಿಬ್ಬಂದಿಗೆ ನೀಡಲಾಗಿತ್ತು. ಆದರೆ, ಬ್ಯಾಂಕ್‌ನವರು ವಾರಾಣಸಿಯ ಖಾಸಗಿ ಸಂಸ್ಥೆಯೊಂದರ ಮೂಲಕ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದರು. ಈ ನೇಮಕಾತಿಯು ರಾಮ ಮಂದಿರ ಟ್ರಸ್ಟ್‌ಗೆ ಆಪ್ತರಾದವರ ಶಿಫಾರಸಿನ ಮೇರೆಗೆ ನಡೆದಿತ್ತು. ಉದಾಹರಣೆಗೆ, ಟ್ರಸ್ಟ್‌ನ ಆಪ್ತ ಅನುಕುಲ್ ಮಿಶ್ರಾ ಎಂಬಾತ ತನ್ನ ಸೋದರಮಾವ ಲವ್‌ಕುಶ್ ಮಿಶ್ರಾ ಎಂಬುವವರಿಗೆ ಹಣ ಎಣಿಸುವ ಕೆಲಸ ಕೊಡಿಸಿದ್ದರು. ಇಂತಹ ಪಾರದರ್ಶಕವಲ್ಲದ ನೇಮಕಗಳಿಂದ ವಂಚನೆ ಸುಲಭವಾಗಿದೆ ಎಂದು ಎಸ್‌ಐಟಿ ಹೇಳಿದೆ.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ಹಗರಣ: ಎಣಿಕೆ ಕಾರ್ಯದಿಂದ 40 ಸಿಬ್ಬಂದಿ ವಜಾ, ಸಿಎಂ ಯೋಗಿಗೆ ಇಂದು ಎಸ್‌ಐಟಿ ವರದಿ ಸಲ್ಲಿಕೆ

ಚಿನ್ನ-ಬೆಳ್ಳಿ ಆಭರಣಗಳ ದಾಖಲೆಯಲ್ಲೂ ವ್ಯತ್ಯಾಸ
ಕೇವಲ ನಗದು ಮಾತ್ರವಲ್ಲದೆ, ಭಕ್ತರು ದೇವರಿಗೆ ದಾನ ಮಾಡಿದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳು ಮತ್ತು ಅಮೂಲ್ಯ ರತ್ನಗಳನ್ನು ಟ್ರಸ್ಟ್ ಹೇಗೆ ಸಂಗ್ರಹಿಸಿಟ್ಟಿದೆ ಮತ್ತು ದಾಖಲಿಸಿದೆ ಎಂಬುದಕ್ಕೆ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ. ದಾಖಲೆಗಳಲ್ಲಿ ಭಾರಿ ವ್ಯತ್ಯಾಸಗಳಿದ್ದು, ಅಸಲಿ ಆಭರಣಗಳನ್ನು ಕದ್ದು ಅವುಗಳ ಜಾಗಕ್ಕೆ ನಕಲಿ ಆಭರಣಗಳನ್ನು ಇಟ್ಟಿರುವ ಶಂಕೆಯನ್ನು ಎಸ್‌ಐಟಿ ವ್ಯಕ್ತಪಡಿಸಿದೆ.

2025 ರ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆದ ಮಹಾ ಕುಂಭಮೇಳದ ಸಮಯದಲ್ಲಿ ಹರಿದುಬಂದ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ಎಸ್‌ಐಟಿ ಪರಿಶೀಲಿಸುತ್ತಿದೆ. ಇದರೊಂದಿಗೆ ಟ್ರಸ್ಟ್ ಖರೀದಿಸಿರುವ ಭೂಮಿ ಮತ್ತು ಕಟ್ಟಡ ಸಾಮಗ್ರಿಗಳ ವ್ಯವಹಾರದಲ್ಲೂ ಅಕ್ರಮ ನಡೆದಿದೆಯೇ ಎಂಬ ತನಿಖೆ ನಡೆಯುತ್ತಿದೆ.

ಇಂತಹ ಲೋಪಗಳು ಮುಂದೆ ಮರುಕಳಿಸದಂತೆ ತಡೆಯಲು ಎಸ್‌ಐಟಿ ಮುಖ್ಯಮಂತ್ರಿ ಕಚೇರಿಗೆ ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಿದೆ.

-ಖಾಸಗಿ ವ್ಯಕ್ತಿಗಳ ಬದಲಿಗೆ ಕೇವಲ ಅಧಿಕೃತ ಬ್ಯಾಂಕ್ ಸಿಬ್ಬಂದಿಯಿಂದ ಮಾತ್ರ ಹಣ ಎಣಿಸಬೇಕು.

-ನೌಕರರ ನೇಮಕಾತಿಯನ್ನು ಪಾರದರ್ಶಕವಾಗಿ ಮಾಡಬೇಕು.

-ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ಕಠಿಣಗೊಳಿಸಬೇಕು.

-ದೇವಸ್ಥಾನದ ಒಟ್ಟು ಆದಾಯ ಮತ್ತು ಖರ್ಚುಗಳ ಬಗ್ಗೆ ನಿಯಮಿತವಾಗಿ ಸ್ವತಂತ್ರ ಆಡಿಟಿಂಗ್ (ಲೆಕ್ಕಪರಿಶೋಧನೆ) ನಡೆಸಬೇಕು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:00 pm, Tue, 23 June 26

Follow Us