ಮುಂಬೈ: ರಮೇಶ್ ಬೈಸ್ ಇಂದು ಶನಿವಾರ ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ (Maharashtra New Governor) ಪ್ರಮಾಣ ವಚನ ಸ್ವೀಕರಸಿದ್ದಾರೆ. ಬಾಂಬೆ ಹೈಕೋರ್ಟ್ನ ಹಂಗಾಮಿ ಮುಖ್ಯನ್ಯಾಯಾಧೀಶ ಎಸ್.ವಿ. ಗಂಗಾಪುರ್ವಾಲ ನೂತನ ರಾಜ್ಯಪಾಲರಿಗೆ ಪ್ರಮಾಣವಚನ ಬೋಧಿಸಿದರು. ಬೈಸ್ ಅವರು ಮರಾಠಿ ಭಾಷೆಯಲ್ಲಿ ವಚನ ಸ್ವೀಕರಿಸಿದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ, ಸಂಪುಟ ಸದಸ್ಯರು, ಉನ್ನತ ಹಂತದ ಅಧಿಕಾರಿಗಳು ಉಪಸ್ಥಿತರಿದ್ದರು. ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ಜಂಟಿ ಕಾರ್ಯದರ್ಶಿಗಳಾದ ಶ್ವೇತಾ ಸಿಂಘಲ್ ಮತ್ತು ಪ್ರಾಚಿ ಜಾಂಭೇಕರ್ ಮೊದಲಾದವರೂ ಪ್ರಮಾಣವಚನ ಸಮಾರಂಭದಲ್ಲಿ ಹಾಜರಿದ್ದರು.
ಹಿಂದಿನ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ಸ್ಥಾನವನ್ನು ರಮೇಶ್ ಬೈಸ್ ತುಂಬಿದ್ದಾರೆ. 2019ರಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕವಾಗಿದ್ದ ಭಗತ್ ಸಿಂಗ್ ಕೋಶ್ಯಾರಿ ಕಳೆದ ವಾರ ರಾಜೀನಾಮೆ ನೀಡಿದ್ದರು. ಕೋಶ್ಯಾರಿ ಅವರಿಗೆ ನಿನ್ನೆ ರಾಜಭವನದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ಭಾರತೀಯ ನೌಕಾಪಡೆಯ ತಂಡವೊಂದು ನಿರ್ಗಮಿತ ರಾಜ್ಯಪಾಲರಿಗೆ ವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: Green Sunglass: ಚಿಪ್ಸ್ ಪ್ಯಾಕೆಟ್‌ಗಳಿಂದ ತಯಾರಾಗುತ್ತಿವೆ ಸಖತ್ ಸನ್‌ಗ್ಲಾಸ್‌ಗಳು! ಇಲ್ಲಿದೆ ಒಂದು ಕಂಪನಿಯ ಅದ್ಬುತ ಕತೆ
ಇನ್ನು, ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿರುವ 75 ರಮೇಶ್ ಬೈಸ್ ಅಪಾರ ರಾಜಕೀಯ ಅನುಭವ ಇರುವವರು. ಈಗಿನ ಛತ್ತೀಸ್ಗಡ ರಾಜಧಾನಿ ರಾಯಪುರ್ನಲ್ಲಿ ಹುಟ್ಟಿದ ಅವರು ಬಿಜೆಪಿಯ ನಾಯಕರಾಗಿ ವಿವಿಧ ಸ್ತರಗಳಲ್ಲಿ ರಾಜಕೀಯ ಚಟುವಟಿಕೆ ನಡೆಸಿದ್ದಾರೆ. ಏಳು ಬಾರಿ ಸಂಸದರಾಗಿದ್ದಾರೆ. ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವರೂ ಆಗಿದ್ದರು. ಜಾರ್ಖಂಡ್ ಮತ್ತು ತ್ರಿಪುರಾದಲ್ಲಿ ರಾಜ್ಯಪಾಲರಾಗಿಯೂ ಕರ್ತವ್ಯ ನಿಭಾಯಿಸಿದ್ದಾರೆ.
Published On - 1:26 pm, Sat, 18 February 23