ಪಾಟ್ನಾ: ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪಿ ನಂತರ ಶಿಕ್ಷೆಯಿಂದ ಪಾರಾಗಲು ಜಿಲ್ಲಾ ಕೋರ್ಟ್ನ ಆವರಣದಲ್ಲೇ ಆಕೆಯನ್ನು ಮದುವೆಯಾದ ಘಟನೆ ಬಿಹಾರದ ಸಮಷ್ಟಿಪುರದಲ್ಲಿ ನಡೆದಿದೆ. ಇವರಿಬ್ಬರ ಕುಟುಂಬಗಳ ಮಾತುಕತೆಯ ಬಳಿಕ, ಮುಸ್ಲಿಂ ಧರ್ಮಗುರು ವಿವಾಹ ಮಾಡಿಸಿದ್ದಾರೆ. ಆರೋಪಿಯ ಹೆಸರು ಮೊಹಮ್ಮದ್ ರಾಜಾ ಎಂದಾಗಿದ್ದು, ರಹೀಮ್ಪುರ ರುದೌಲಿ ಗ್ರಾಮದಲ್ಲಿ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ್ದ. ಈತನ ವಿರುದ್ಧ POCSO ಕಾಯ್ದೆಯಡಿ ಮುಸ್ಸಾರಿ ಘರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೊಹಮ್ಮದ್ ರಾಜಾನನ್ನು ಬಂಧಿಸಿದ್ದ ಪೊಲೀಸರು ಜೈಲಿಗೆ ಹಾಕಿದ್ದರು. ಹಾಗೇ ಪ್ರಕರಣದ ವಿಚಾರಣೆ ಪೋಕ್ಸೊ ಕೋರ್ಟ್ನಲ್ಲಿ ನಡೆದಿತ್ತು. ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಪೋಕ್ಸೊ ಕಾಯ್ದೆಯಡಿ ಜೀವಾವಧಿ ಶಿಕ್ಷೆಯನ್ನೂ ನೀಡಬಹುದಾಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ಯೋಚನೆ ಮಾಡಿದ. ಹೀಗಾಗಿ ಹುಡುಗಿಯ ಮನೆಯವರ ಬಳಿ, ಈತನ ಮನೆಯವರು ಮಾತುಕತೆ ನಡೆಸಿದರು. ಎರಡೂ ಕಡೆಯಿಂದ ಒಪ್ಪಿಗೆ ಸಿಕ್ಕ ಬಳಿಕ ಮೊಹಮ್ಮದ್ ರಾಜಾ ಆಕೆಯನ್ನು ವಿವಾಹವಾಗಿದ್ದಾನೆ.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಮದುವೆ ನೋಡಲು ಭರ್ಜರಿ ಜನ ಸೇರಿದ್ದರು. ಇನ್ನು ಈ ಜೋಡಿಗೆ ಮದುವೆ ಮಾಡಿಸಿದ ಧರ್ಮಗುರುವನ್ನು ನ್ಯಾಯಾಲಯ ಕರೆಸಿ, ವಿಚಾರಣೆ ಮಾಡಿದೆ. ಮೊಹಮ್ಮದ್ ರಾಜಾನಿಗೆ ಜಾಮೀನು ಸಿಕ್ಕಿತೋ, ವಿಚಾರಣೆ ಮುಂದೂಡಲ್ಪಟ್ಟಿದೆಯೋ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಅದಲ್ಲದೆ ಆಕೆ ಅಪ್ರಾಪ್ತೆ ಆಗಿದ್ದರಿಂದ ಬಾಲ್ಯ ವಿವಾಹ ಎಂದು ಪರಿಗಣಿಸಲ್ಪಡುವ ಸಾಧ್ಯತೆಯೂ ಇರತ್ತದೆ.
Published On - 3:36 pm, Tue, 16 March 21