ಮುಂಬೈ ಅಕ್ಟೋಬರ್ 10: ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬುಧವಾರ ತಡರಾತ್ರಿ 86 ನೇ ವಯಸ್ಸಿನಲ್ಲಿ ನಿಧನರಾದ ರತನ್ ಟಾಟಾ (Ratan Tata) ಅವರಿಗೆ ಅಂತಿಮ ನಮನ ಸಲ್ಲಿಸಲು ಜನ ಪ್ರವಾಹವೇ ಹರಿದು ಬಂದಿದೆ. ಈ ವೇಳೆ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (ಎನ್‌ಸಿಪಿಎ) ಹೊರಗೆ ಗುರುವಾರ ನೂಕುನುಗ್ಗಲು ಉಂಟಾಯಿತು. ಜನರನ್ನು ನಿಯಂತ್ರಿಸಲು ಮುಂಬೈ ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಗಿ ಬಂತು.
ರತನ್ ಟಾಟಾ ಅವರ ಪಾರ್ಥಿವ ಶರೀರವನ್ನು ಅವರ ಅಂತಿಮ ವಿಧಿವಿಧಾನಗಳಿಗಾಗಿ ಮುಂಬೈನ NCPA ಯಿಂದ ವರ್ಲಿಗೆ ಸಾಗಿಸಲಾಯಿತು. ಅವರ ಪಾರ್ಥಿವ ಶರೀರವನ್ನು ದಕ್ಷಿಣ ಮುಂಬೈನ ಎನ್‌ಸಿಪಿಎಯಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.55 ರವರೆಗೆ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗಿತ್ತು.
ಹಲವಾರು ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಗೌರವ ಸಲ್ಲಿಸಿದರು. ನೆರೆದಿದ್ದ ವಿದ್ಯಾರ್ಥಿಗಳು ಮತ್ತು ಯುವಜನರಿಗೆ, ರತನ್ ಟಾಟಾ ಕೇವಲ ಒಬ್ಬ ಕೈಗಾರಿಕೋದ್ಯಮಿಗಿಂತ ಹೆಚ್ಚು-ಅವರು ಆದರ್ಶಪ್ರಾಯರಾಗಿದ್ದರು.
ದೇಶಾದ್ಯಂತದ ಹಲವಾರು ಪ್ರಮುಖ ವ್ಯಕ್ತಿಗಳು ಮತ್ತು ರಾಜಕಾರಣಿಗಳು ರತನ್ ಟಾಟಾ ಅವರಿಗೆ ಅಂತಿಮ ಶ್ರದ್ಧಾಂಜಲಿ ಸಲ್ಲಿಸಲು ಮುಂಬೈನ NCPA ಗೆ ಭೇಟಿ ನೀಡಿದರು. ಶ್ರದ್ಧಾಂಜಲಿ ಸಲ್ಲಿಸಿದವರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದ್ದಾರೆ.
ಮುಖೇಶ್ ಅಂಬಾನಿ ಅವರು ಗುರುವಾರ ಮಧ್ಯಾಹ್ನ ಎನ್‌ಸಿಪಿಎಯಲ್ಲಿ ರತನ್ ಟಾಟಾ ಅವರ ಕುಟುಂಬ ಸದಸ್ಯರೊಂದಿಗೆ ಗೌರವ ಸಲ್ಲಿಸಿದರು. ಅವರ ಪತ್ನಿ ನೀತಾ, ಮಗ ಆಕಾಶ್ ಮತ್ತು ಸೊಸೆ ಶ್ಲೋಕಾ ಅವರೊಂದಿಗೆ ಅಂಬಾನಿ ಟಾಟಾ ಅವರ ಸ್ಮರಣೆಯನ್ನು ಗೌರವಿಸಲು ಆಗಮಿಸಿದ್ದರು.
ಅಂಬಾನಿ ಅವರನ್ನು ರತನ್ ಟಾಟಾ ಅವರ ಮಲ ಸಹೋದರ ನೋಯೆಲ್ ಟಾಟಾ ಬರ ಮಾಡಿಕೊಂಡಿದ್ದು ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರನ್ನು ಭೇಟಿ ಮಾಡಿದರು.
ಮಹಾರಾಷ್ಟ್ರ ಸರ್ಕಾರವು ಅಕ್ಟೋಬರ್ 10 ಗುರುವಾರವನ್ನು ಶೋಕಾಚರಣೆಯ ದಿನವನ್ನಾಗಿ ಘೋಷಿಸಿದ್ದು, ದಿನದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ.
ಇದನ್ನೂ ಓದಿ: ಸೆಮಿಕಂಡಕ್ಟರ್ನಿಂದ ಹಿಡಿದು ಕ್ಯಾನ್ಸರ್ ಕೇರ್ವರೆಗೆ: ಅಸ್ಸಾಂನ ಅಭಿವೃದ್ಧಿಗೆ ರತನ್ ಟಾಟಾ ಸಹಾಯ
ಮಹಾರಾಷ್ಟ್ರ ಸಚಿವ ದೀಪಕ್ ಕೇಸರ್ಕರ್ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಭೇಟಿ ನೀಡಿ, “ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನದಿಂದಾಗಿ ಮುಂಬೈನಲ್ಲಿ ನಾಳೆ ರಾಜ್ಯ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ” ಎಂದು ಹೇಳಿದ್ದಾರೆ. ಅದೇ ರೀತಿ, ಬುಧವಾರ ರಾತ್ರಿ ಮುಂಬೈನಲ್ಲಿ ನಿಧನರಾದ ರತನ್ ಟಾಟಾ ಅವರ ಗೌರವಾರ್ಥ ಗುಜರಾತ್ ಸರ್ಕಾರ ಗುರುವಾರ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ