ದೆಹಲಿಯಲ್ಲಿ ನಿರಂತರ ಮಳೆ; ಏರ್​ಪೋರ್ಟ್​ ಒಳಗೂ ತುಂಬಿದ ನೀರು, ವಿಮಾನ ಹಾರಾಟ ರದ್ದು

| Updated By: Lakshmi Hegde

Updated on: Sep 11, 2021 | 5:30 PM

ನಿನ್ನೆಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಲಾವೃತಗೊಂಡಿದೆ.  ಏರ್​ಪೋರ್ಟ್ ಒಳಗೆ ಕೆಂಪು ನೀರು ನಿಂತಿತ್ತು.

ದೆಹಲಿಯಲ್ಲಿ ನಿರಂತರ ಮಳೆ; ಏರ್​ಪೋರ್ಟ್​ ಒಳಗೂ ತುಂಬಿದ ನೀರು, ವಿಮಾನ ಹಾರಾಟ ರದ್ದು
ದೆಹಲಿ ಮಳೆ
Follow us on

ಇಂದು ಬೆಳಗ್ಗೆಯಿಂದಲೂ ದೆಹಲಿ (Delhi)ಯಲ್ಲಿ ಸಿಕ್ಕಾಪಟೆ ಮಳೆ (Heavy Rainfall)ಯಾಗುತ್ತಿದೆ. ಒಂದೇ ಸಮ ಸುರಿಯುತ್ತಿರುವ ಮಳೆಯಿಂದ ವಿಪರೀತ ಅವ್ಯವಸ್ಥೆ ಸೃಷ್ಟಿಯಾಗಿದೆ. ದೆಹಲಿಯ ರಸ್ತೆ, ಬಸ್​ಸ್ಟ್ಯಾಂಡ್​​, ಏರ್​ಪೋರ್ಟ್​ಗಳೆಲ್ಲ ನೀರಿನಲ್ಲಿ ಮುಳುಗಿವೆ.  ಈ ವರ್ಷ ಮಾನ್ಸೂನ್ (Monsoon)​ನಿಂದ ದೆಹಲಿಯಲ್ಲಿ ಇಲ್ಲಿಯವರೆಗೆ 1,100 ಎಂಎಂ ಮಳೆಯಾಗಿದೆ. ಕಳೆದ 46ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದ ಮಳೆ. ಅದರಲ್ಲೂ ಕಳೆದ ವರ್ಷಕ್ಕಿಂತ ಸುಮಾರು 2 ಪಟ್ಟು ಹೆಚ್ಚು ಮಳೆಯಾದಂತೆ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಹಾಗೇ, ಆರೆಂಜ್​ ಅಲರ್ಟ್​ ಘೋಷಣೆ ಮಾಡಿದೆ.

ದೆಹಲಿ ಜನರು ಇಂದು ಬೆಳಗ್ಗೆ ಏಳುತ್ತಲೇ ಮಳೆಯೇ ಸ್ವಾಗತ ನೀಡಿದೆ. ನಿನ್ನೆ ರಾತ್ರಿಯಿಂದ ಶುರುವಾದ ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತಗೊಂಡಿದೆ. ಏರ್​ಪೋರ್ಟ್​ನಲ್ಲಿ ನೀರು ನಿಂತ ಪರಿಣಾಮ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.  ಮನೆ, ರಸ್ತೆಗಳಿಗೆಲ್ಲ ನೀರು ತುಂಬಿ ಅನೇಕರು ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಮೋತಿ ಭಾಗ್​, ಆರ್​.ಕೆ.ಪುರಂ, ಮಧು ವಿಹಾರ, ಹರಿನಗರ, ರೋಹ್ಟಕ್​ ರಸ್ತೆ, ಸೋಮ್​ ವಿಹಾರ್​, ರಿಂಗ್​ ರೋಡ್​ ಸೇರಿ ಅನೇಕ ಕಡೆ ರಸ್ತೆಗಳಲ್ಲಿ ನೀರು ತುಂಬಿ ವಾಹನ ಮತ್ತು ಜನಸಂಚಾರಕ್ಕೆ ತೀವ್ರ ಕಷ್ಟವಾಗಿತ್ತು.

ತುಂಬಿದ ನೀರಲ್ಲಿ ರಾಫ್ಟಿಂಗ್​ ಮಾಡಿದ ಬಿಜೆಪಿ ನಾಯಕ
ದೆಹಲಿಯಾದ್ಯಂತ ನೀರು ತುಂಬಿ ಒಂದೆಡೆ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ, ಬಿಜೆಪಿಯ ದೆಹಲಿ ವಕ್ತಾರ ತಜಿಂದರ್ ಸಿಂಗ್​,  ಕುತ್ತಿಗೆವರೆಗೆ ನೀರು ನಿಂತ ಭಜನ್​ಪುರ ಪ್ರದೇಶದ ರಸ್ತೆಯಲ್ಲಿ ರಾಫ್ಟಿಂಗ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಸಿಎಂ ಕೇಜ್ರಿವಾಲ್​​ರ ಗಮನ ಸೆಳೆದಿದ್ದಾರೆ.

ವಿಮಾನನಿಲ್ದಾಣದಲ್ಲೆಲ್ಲ ನೀರು, ನೀರು..
ನಿನ್ನೆಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಲಾವೃತಗೊಂಡಿದೆ.  ಟ್ವೀಟ್ ಮಾಡಿದ ದೆಹಲಿ ಏರ್​ಪೋರ್ಟ್​ ಆಡಳಿತ, ಅತಿಯಾದ ಮಳೆಯಿಂದಾಗಿ ವಿಮಾನನಿಲ್ದಾಣದಲ್ಲಿ ನೀರು ತುಂಬಿದೆ. ಅದನ್ನು ಸರಿಪಡಿಸಲು ನಮ್ಮ ಸಿಬ್ಬಂದಿ ಶ್ರಮಿಸಿದರು. ಇನ್ನು ಅತಿಯಾದ ಮಳೆ, ಏರ್​ಪೋರ್ಟ್​​ನಲ್ಲಿ ನೀರು ತುಂಬಿದ ಕಾರಣಕ್ಕೆ ಇಂದು 5 ವಿಮಾನಗಳ ಹಾರಾಟ ರದ್ದುಪಡಿಸಲಾಯಿತು ಎಂದು ಹೇಳಿದೆ.

ಮನೆ ಕುಸಿತ
ಪೂರ್ವ ದೆಹಲಿಯ ರೋಹಿಣಿ ಸೆಕ್ಟರ್​ 22ರಲ್ಲಿ ಇಂದು ಮುಂಜಾನೆ 7ಗಂಟೆ ಹೊತ್ತಿಗೆ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿದೆ. ಈ ಕಟ್ಟಡ ತುಂಬ ಹಳೆಯದಾಗಿತ್ತು. ಮಳೆಯಿಂದಾಗಿ ಕುಸಿದಿದೆ. ಈ ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ. ಈ ದೊಡ್ಡ ಕಟ್ಟದ ಅಕ್ಕಪಕ್ಕದ ಮನೆಗಳ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಆ ಮನೆಗಳೂ ಖಾಲಿ ಇದ್ದುದರಿಂದ ಯಾವುದೇ ಅಪಾಯ ಆಗಲಿಲ್ಲ.

ಇದನ್ನೂ ಓದಿ: ಕೆಲವೊಮ್ಮೆ ರೈತರ ಪರವಾಗಿ ನಿಂತರೂ ವಿಲನ್​ ಆಗುತ್ತೇವೆ; ಸತೀಶ್​ ನೀನಾಸಂ ನೇರ ಮಾತು

Bhoot Police: ಗೆಳೆಯ ಅರ್ಜುನ್ ಕಪೂರ್ ನಟನೆಯ ‘ಭೂತ್ ಪೊಲೀಸ್’ ಚಿತ್ರಕ್ಕೆ ಮಲೈಕಾ ರಿಯಾಕ್ಷನ್ ಏನು?

Published On - 5:27 pm, Sat, 11 September 21