ಟಿವಿ ಚ್ಯಾನೆಲ್ಗಳ ಟಿಆರ್ಪಿಯನ್ನು ಒಂದು ರಹಸ್ಯವಾದ ಕರಾರಿಗೊಳಪಟ್ಟ ಹಲವು ನಿರ್ದಿಷ್ಟ ಮನೆಗಳಲ್ಲಿ ವಾಸಿಸುವ ಜನರು ಚ್ಯಾನೆಲ್ಗಳನ್ನು ವೀಕ್ಷಿಸುವ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಮುಂಬೈ ಪೊಲೀಸ್ ಆಯುಕ್ತರು ಹೇಳಿರುವಂತೆ ಆರೋಪಿತರು ಸದರಿ ಮನೆಗಳ ಮಾಲೀಕರನ್ನು ಸಂಪರ್ಕಿಸಿ ಅವರು ಮನೆಯಲ್ಲಿರದ ಸಂದರ್ಭಗಳಲ್ಲೂ ತಮ್ಮ ಚ್ಯಾನೆಲ್ಗಳನ್ನು ಸತತವಾಗಿ ಆನ್ ಇಟ್ಟಿರುವಂತೆ ಹಣದ ಆಮಿಶವೊಡ್ಡಿ ಬಲೆಗೆ ಹಾಕಿಕೊಂಡಿದ್ದಾರೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಬೆಎಆರ್ಸಿ ಅಧಿಕಾರಿಗಳನ್ನು ಪ್ರಶ್ನಿಸಲಾಗುವುದೆಂದು ಆಯುಕ್ತರು ಹೇಳಿದ್ದಾರೆ.
ಸಿಂಗ್ ಅವರ ಪ್ರೆಸ್ಸರ್ ನಂತರ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಬೆಎಆರ್ಸಿ, ‘‘ ನಮ್ಮ ಸಂಸ್ಥೆ ಶಿಸ್ತು ಮತ್ತು ಜಾಗರೂಕತೆಗೆ ಸಂಬಂಧಿಸಿದ ವಿಷಯಗಳೊಂದಿಗೆ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಈ ಹಿಂದೆ ಇಂಥ ಆರೋಪಗಳು ಎದುರಾದಾಗ ತೆಗೆದುಕೊಂಡ ಕ್ರಮವನ್ನೇ ಈಗಲೂ ತೆಗೆದುಕೊಳ್ಳಲಾಗುವುದು. ‘ಭಾರತ ಏನು ವೀಕ್ಷಿಸುತ್ತಿದೆ’ ವರದಿಯನ್ನು ನಿಖರವಾಗಿ ಮತ್ತು ವಿಶ್ವಾಸಪೂರ್ಣವಾಗಿ ನೀಡಲು ನಾವು ಬದ್ಧರಾಗಿದ್ದೇವೆ. ಮುಂಬೈ ಪೊಲೀಸ್ ಮಾಡಿರುವ ಪ್ರಯತ್ನಗಳನ್ನು ಶ್ಲಾಘಿಸುತ್ತಾ ಅವರಿಗೆ ಎಲ್ಲ ಸಹಕಾರ ಒದಗಿಸುವ ಭರವಸೆಯನ್ನು ನಾವು ನೀಡುತ್ತೇವೆ,’’ ಎಂದು ಹೇಳಿದೆ.
ಆಯುಕ್ತರು ಹೇಳಿರುವ ಪ್ರಕಾರ ಟಿಆರ್ಪಿಯನ್ನು ಮಾನಿಟರ್ ಮಾಡಲು ಬೆಎಆರ್ಸಿ, ಮುಬೈಯಲ್ಲಿ 2,000 ಬಾರೊಮೀಟರ್ಗಳನ್ನು ಅಳವಡಿಸಿದೆ ಮತ್ತು ಅವುಗಳನ್ನು ಮಾನಿಟರ್ ಮಾಡಲು ಹಂಸ ರೀಸರ್ಚ್ ಎಂಬ ಸಂಸ್ಥೆಯೊಂದಿಗೆ ರಹಸ್ಯಮಯ ಒಪ್ಪಂದ ಮಾಡಿಕೊಂಡಿದೆ. ಆರೋಪಿತರು ಈ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ತಾವು ಮನೆಯಲ್ಲಿರದ ಸಂದರ್ಭಗಳಲ್ಲೂ ತಮ್ಮ ಚ್ಯಾನೆಲ್ಗಳನ್ನು ಆನ್ ಇಡುವಂತೆ ಪುಸಲಾಯಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದ ನಂತರ ಮುಂಬೈ ಪೊಲೀಸ್ ತನ್ನ ವಶಕ್ಕೆ ತೆಗೆದುಕೊಂಡಿದೆ. ಒಬ್ಬ ಆರೋಪಿತನಲ್ಲಿ ರೂ. 20 ಲಕ್ಷ ಹಣ ದೊರೆತರೆ ಮತ್ತೊಬ್ಬನ ಲಾಕರ್ನಲ್ಲಿ ರೂ 8.5 ಲಕ್ಷ ಪತ್ತೆಯಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಮುಂದುವರಿದು ಹೇಳಿರುವ ಸಿಂಗ್, ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನಿಮಾ ಚ್ಯಾನೆಲ್ಗಳ ಮಾಲೀಕರನ್ನು ಐಪಿಸಿ ಸೆಕ್ಷನ್ 409 ಮತ್ತು 420 ಅನ್ವಯ ಬಂಧಿಸಲಾಗಿದೆ. ರಿಪಬ್ಲಿಕ್ ಟಿವಿ ಸಹ ಟಿಆರ್ಪಿಯನ್ನು ತನಗೆ ಅನುಕೂಲವಾಗುವ ರೀತಿಯಲ್ಲಿ ಬಳಸಿಕೊಂಡಿರುವ ಶಂಕೆಯನ್ನು ಬೆಎಆರ್ಸಿ ವ್ಯಕ್ತಪಡಿಸಿದೆಯೆಂದು ಕಮೀಶನರ್ ಹೇಳಿದ್ದಾರೆ. ಇಂಥ ವಂಚನೆ ಮುಂಬೈಯಂಥ ನಗರದಲ್ಲೇ ಆಗುತ್ತಿರಬೇಕಾದರೆ ಅದು ಬೇರೆ ನಗರಗಳಲ್ಲೂ ನಡೆದಿರುವ ಸಾಧ್ಯತೆಯಿದೆ ಎಂದು ಸಿಂಗ್ ಹೇಳಿದ್ದಾರೆ.
ಹಂಸ ರಿಸರ್ಚ್ ಸಂಸ್ಥೆ ಮತ್ತು ಅದರ ಮಾಜಿ ಉದ್ಯೋಗಿಗಳ ವಿರುದ್ಧವೂ ದೂರುಗಳನ್ನು ದಾಖಲಿಸಲಾಗಿದೆ, ರಿಪಬ್ಲಿಕ್ ಟಿವಿಯ ಪ್ರಮೋಟರ್ ಮತ್ತು ಉದ್ಯೋಗಿಗಳನ್ನು ವಿಚಾರಣೆಗೆ ಕರೆಸುಲಾಗುವುದೆಂದು ಆಯುಕ್ತರು ಹೇಳಿದ್ದಾರೆ.