ಲಖನೌ: ಮನೆ ಖರೀದಿಸುವವರ ಮತ್ತು ಮನೆ ನಿರ್ಮಾಣ ಮಾಡುವ ಬಿಲ್ಡರ್ಗಳ ನಡುವೆ ವಿಶ್ವಾಸ ಮೂಡಿಸಲು ಮತ್ತು ಸಮಸ್ಯೆಗಳನ್ನು ನಿವಾರಿಸಲು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಕಾಯ್ದೆ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕ ಸೋಮವಾರ ಆಗ್ರಾ ಮೆಟ್ರೊ ರೈಲು ಕಾಮಕಾರಿಗೆ ಚಾಲನೆ ನೀಡಿದ ಮೋದಿ, ದುರುದ್ದೇಶ ಹೊಂದಿದ ಜನರು ರಿಯಲ್ ಎಸ್ಟೇಟ್ ವಲಯಕ್ಕೆ ಕುಖ್ಯಾತಿ ತರುವ ಮೂಲಕ ಮಧ್ಯಮ ವರ್ಗದವರಿಗೆ ಬೇಸರವನ್ನುಂಟು ಮಾಡಿದ್ದಾರೆ. ರೇರಾ ಕಾಯ್ದೆ ಜಾರಿಗೆ ಬಂದ ಮೇಲೆ ಮಧ್ಯಮ ವರ್ಗದವರ ಮನೆಗಳು ಬೇಗನೆ ನಿರ್ಮಾಣ ಆಗುತ್ತಿದೆ ಎಂದು ಇತ್ತೀಚೆಗೆ ಕೆಲವು ವರದಿಗಳು ಪ್ರಕಟವಾಗಿದ್ದವು ಎಂದಿದ್ದಾರೆ ಮೋದಿ.
ಆಧುನಿಕ ಸಾರ್ವಜನಿಕ ಸಾರಿಗೆ ಸಂಪರ್ಕದಿಂದ ಹಿಡಿದು ಗೃಹ ನಿರ್ಮಾಣದವರಗೆ ಸರ್ವಾಂಗೀಣ ಅಭಿವೃದ್ಧಿ ಆಗಿದ್ದು ಇದು ನಗರಗಳಲ್ಲಿನ ಜೀವನವನ್ನು ಸುಲಭವಾಗಿಸಿದೆ. ಪ್ರಧಾನ್ ಮಂತ್ರಿ ಆವಾಸ್ ಯೋಜನೆಯನ್ನು ಆಗ್ರಾದಲ್ಲಿಯೇ ಉದ್ಧಾಟಿಸಲಾಗಿತ್ತು. ಈ ಯೋಜನೆಯಡಿಯಲ್ಲಿ ನಗರದ ಬಡಕುಟುಂಬಗಳಿಗೆ 1 ಕೋಟಿಗಿಂತಲೂ ಹೆಚ್ಚು ಮನೆಗಳನ್ನು ನಿರ್ಮಿಸಲು ಅನುಮತಿ ನೀಡಿದೆ. ನಗರದಲ್ಲಿರುವ ಮಧ್ಯಮ ವರ್ಗ ಕುಟುಂಬಗಳಿಗೆ ಮೊದಲ ಬಾರಿ ಮನೆ ಖರೀದಿಸಲು ಸಹಾಯ ಮಾಡಲಾಗುತ್ತದೆ. ಮನೆ ಖರೀದಿಗಾಗಿ ನಗರದಲ್ಲಿರುವ 12 ಲಕ್ಷ ಕುಟುಂಬಗಳಿಗೆ ₹28,000 ಕೋಟಿಯಷ್ಟು ಸಹಾಯ ನೀಡಲಾಗಿದೆ ಎಂದು ಮೋದಿ ಮಾಹಿತಿ ನೀಡಿದರು.
ಅಮೃತ್ ಮಿಷನ್ ಅಡಿಯಲ್ಲಿ ಹಲವಾರು ನಗರಗಳಲ್ಲಿ ಮೂಲ ಸೌಕರ್ಯಗಳಾದ ನೀರು ಮತ್ತು ಚರಂಡಿ ವ್ಯವಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ನಗರದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಉತ್ತಮಪಡಿಸಲು ಮತ್ತು ತ್ಯಾಜ್ಯ ನಿರ್ವಹಣೆಗೆ ಆಧುನಿಕ ವ್ಯವಸ್ಥೆ ಅಳವಡಿಸಿಕೊಳ್ಳಲು ಈ ಯೋಜನೆ ಸಹಕಾರಿಯಾಗಿದೆ. ನವ ಭಾರತದ ಕನಸು ದೊಡ್ಡದಾಗಿದೆ. ಕನಸು ಕಂಡರೆ ಮಾತ್ರ ಸಾಲದು ಅದನ್ನು ನನಸಾಗಿಸಲು ಧೈರ್ಯ ಬೇಕು. ನೀವು ಧೈರ್ಯ ಮತ್ತು ಸಮರ್ಪಣಾಭಾವದಿಂದ ಮುನ್ನುಗ್ಗಿದರೆ ಯಾವುದೇ ಶಕ್ತಿಗೆ ನಿಮ್ಮನ್ನು ತಡೆಯಲಾಗುವುದಿಲ್ಲ. ಸಣ್ಣಸಣ್ಣ ನಗರಗಳಲ್ಲಿರುವ ಭಾರತದ ಯುವಜನರು ಧೈರ್ಯ ಮತ್ತು ಸಮರ್ಪಣಾಭಾವವನ್ನು ತೋರಿಸುತ್ತಿದ್ದಾರೆ.
20ನೇ ಶತಮಾನದಲ್ಲಿ ಮೆಟ್ರೊ ನಗರಗಳು ವಹಿಸಿದ ಪಾತ್ರವನ್ನು ಆಗ್ರಾದಂಥ ಸಣ್ಣ ನಗರಗಳು ಈಗ ವಹಿಸುತ್ತಿವೆ. ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿಯೇ ಮೆಟ್ರೊ ರೈಲು ಬೋಗಿಗಳನ್ನು ನಿರ್ಮಿಸಲಾಗುವುದು. ಮೆಟ್ರೊ ನೆಟ್ವರ್ಕ್ ವಿಷಯಕ್ಕೆ ಬಂದಾಗ ಭಾರತ ಸ್ವಾವಲಂಬಿ ಆಗಿದೆ. ಉತ್ತರ ಪ್ರದೇಶದಲ್ಲಿ ಮೆಟ್ರೊ ರೈಲು ಸಂಪರ್ಕ ಹೊಂದಿರುವ ಏಳನೇ ನಗರ ಆಗಲಿದೆ ಆಗ್ರಾ ಎಂದು ಮೋದಿ ಹೇಳಿದ್ದಾರೆ.
ಆಗ್ರಾ ಮೆಟ್ರೊ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
Published On - 7:45 pm, Mon, 7 December 20