ಮಾಸ್ಕ್ ಧರಿಸದಿದ್ದರೆ ಕೋವಿಡ್ ಕೇಂದ್ರದಲ್ಲಿ ಕಡ್ಡಾಯ ಸೇವೆ ಎಂದಿದ್ದ ಗುಜರಾತ್ ಹೈಕೋರ್ಟ್​ ಆದೇಶಕ್ಕೆ ಸುಪ್ರೀಂಕೋರ್ಟ್​ ತಡೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 03, 2020 | 8:00 PM

ಮಾಸ್ಕ್​ ಧರಿಸದೇ ಸಂಚರಿಸಿ ಸಿಕ್ಕಿಬೀಳುವವರನ್ನು ಕೋವಿಡ್-19 ಕೇಂದ್ರಗಳಲ್ಲಿ ಕಡ್ಡಾಯ ಸೇವೆಗೆ ನಿಯೋಜಿಸುವ ಗುಜರಾತ್ ಹೈಕೋರ್ಟ್​ ಆದೇಶಕ್ಕೆ ಸುಪ್ರೀಂಕೋರ್ಟ್​ ಗುರುವಾರ ತಡೆಯಾಜ್ಞೆ ನೀಡಿದೆ.

ಮಾಸ್ಕ್ ಧರಿಸದಿದ್ದರೆ ಕೋವಿಡ್ ಕೇಂದ್ರದಲ್ಲಿ ಕಡ್ಡಾಯ ಸೇವೆ ಎಂದಿದ್ದ ಗುಜರಾತ್ ಹೈಕೋರ್ಟ್​ ಆದೇಶಕ್ಕೆ ಸುಪ್ರೀಂಕೋರ್ಟ್​ ತಡೆ
ಸುಪ್ರೀಂ ಕೋರ್ಟ್​
Follow us on

ದೆಹಲಿ: ಮಾಸ್ಕ್​ ಧರಿಸದೇ ಸಂಚರಿಸಿ ಸಿಕ್ಕಿಬೀಳುವವರನ್ನು ಕೋವಿಡ್-19 ಕೇಂದ್ರಗಳಲ್ಲಿ ಕಡ್ಡಾಯ ಸೇವೆಗೆ ನಿಯೋಜಿಸುವ ಗುಜರಾತ್ ಹೈಕೋರ್ಟ್​ ಆದೇಶಕ್ಕೆ ಸುಪ್ರೀಂಕೋರ್ಟ್​ ಗುರುವಾರ ತಡೆಯಾಜ್ಞೆ ನೀಡಿದೆ.

ಹೈಕೋರ್ಟ್ ಬುಧವಾರ ನೀಡಿದ್ದ ತೀರ್ಪಿನ ಬಗ್ಗೆ ಗುಜರಾತ್ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು, ಗುಜರಾತ್ ಹೈಕೋರ್ಟ್​ನ ಈ ನಿರ್ದೇಶನವನ್ನು ನ್ಯಾಯಸಮ್ಮತವಾಗಿ ನಿರ್ವಹಿಸುವುದು ಕಷ್ಟ ಮತ್ತು ಇದಕ್ಕೆ ಕಾನೂನಿನ ಮಾನ್ಯತೆಯೂ ಇಲ್ಲ ಎಂದು ಹೇಳಿತ್ತು.

ವಿಡಿಯೊ ಕಾನ್ಫರೆನ್ಸ್​ ಮೂಲಕ ವಿಚಾರಣೆ ನಡೆಯಿತು. ನ್ಯಾಯಮೂರ್ತಿಗಳಾದ ಆರ್​.ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಸಹ ವಿಚಾರಣಾ ನ್ಯಾಯಪೀಠದಲ್ಲಿದ್ದರು.

ಗುಜರಾತ್ ಹೈಕೋರ್ಟ್​ನ ಆದೇಶವು ಕಟುವಾಗಿದೆ. ನಿಯಮಾವಳಿಗಳನ್ನು ಉಲ್ಲಂಘಿಸಿದವರ ಆರೋಗ್ಯದ ಮೇಲೆಯೂ ಈ ಆದೇಶ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ಕೋವಿಡ್-19ರ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ನಿಯಮಾವಳಿಗಳು ಗುಜರಾತ್​ನಲ್ಲಿ ಸಾರಾಸಗಟಾಗಿ ಉಲ್ಲಂಘನೆಯಾಗುತ್ತಿರುವ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಪಾಡಿಕೊಳ್ಳುವುದೂ ಸೇರಿದಂತೆ ಎಲ್ಲ ಮಾರ್ಗದರ್ಶಿ ಸೂತ್ರಗಳು ಸರಿಯಾಗಿ ಪಾಲನೆಯಾಗುತ್ತಿವೆ ಎಂಬುದನ್ನು ಗುಜರಾತ್ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ (ಗೃಹ) ಖಾತ್ರಿಪಡಿಸಬೇಕು ಎಂದು ನ್ಯಾಯಪೀಠ ಸೂಚಿಸಿತು.

ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸುವವರಿಗೆ ದಂಡ ಹಾಕುವುದು, ಪ್ರಕರಣಗಳನ್ನು ದಾಖಲಿಸುವುದೂ ಸೇರಿದಂತೆ ಶಿಸ್ತುಕ್ರಮ ಜರುಗಿಸಬೇಕು ಎಂದು ನ್ಯಾಯಪೀಠವು ಪೊಲೀಸರು ಮತ್ತು ಇತರ ಅಧಿಕಾರಿಗಳಿಗೆ ನಿರ್ದೇಶನ ನೀಡಿತು.

ಮಾಸ್ಕ್ ಧರಿಸದವರಿಗೆ ಸಮುದಾಯ ಸೇವೆ ಸಲ್ಲಿಸಲು ಆದೇಶಿಸಬೇಕು ಎಂದು ಕೋರಿ ಗುಜರಾತ್ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಿಶಾಲ್ ಅವ್ಟಾನಿ ಅವರಿಗೂ ಸುಪ್ರೀಂಕೋರ್ಟ್​ ನೊಟೀಸ್ ಜಾರಿ ಮಾಡಿತು. ವಿಚಾರಣೆಯನ್ನು ಜನವರಿ 2ನೇ ವಾರಕ್ಕೆ ಮುಂದೂಡಲಾಗಿದೆ.

ಮಾಸ್ಕ್ ಧರಿಸದಿದ್ದರೆ ಸೋಂಕಿತರ ಸೇವೆ ಮಾಡುವ ಶಿಕ್ಷೆ: ಗುಜರಾತ್ ಹೈಕೋರ್ಟ್​ ವಿನೂತನ ಕ್ರಮ