ಕಟಿಹಾರ್: ವಿದ್ಯಾರ್ಥಿನಿಯೊಬ್ಬಳ ಜತೆ ಅನುಚಿತವಾಗಿ ವರ್ತಿಸಿದ ಶಾಲಾ ಮುಖ್ಯಶಿಕ್ಷಕನಿಗೆ ಸ್ಥಳೀಯರೆಲ್ಲ ಸೇರಿ ಸಿಕ್ಕಾಪಟೆ ಹೊಡೆದಿದ್ದಾರೆ. ಅಷ್ಟೇ ಅಲ್ಲ ಪೊಲೀಸರು ಆ ಶಿಕ್ಷಕನನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ನಡೆದದ್ದು ಬಿಹಾರದ ಕಟಿಹಾರ ಜಿಲ್ಲೆಯ ಸೇಮಾಪುರ ಎಂಬಲ್ಲಿರುವ ಪಿಪ್ರಿ ಬಹಿಯಾರ್ ಎಂಬ ಪ್ರಾಥಮಿಕ ಶಾಲೆಯಲ್ಲಿ. ಇಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ 12ವರ್ಷದ ಬಾಲಕಿಗೆ ಮುಖ್ಯಶಿಕ್ಷಕ ಕೆನ್ನೆಯ ಮೇಲೆ ಕಚ್ಚಿದ್ದ.
ಮುಖ್ಯ ಶಿಕ್ಷಕ ಕಚ್ಚಿದ್ದರಿಂದ ಬಾಲಕಿ ದೊಡ್ಡದಾಗಿ ಅಳಲು ಶುರು ಮಾಡಿದ್ದಳು. ಬಾಲಕಿಯ ಅಳುವಿನ ಶಬ್ದ ಕೇಳಿ ಅಲ್ಲೇ ಅಕ್ಕ-ಪಕ್ಕ ಇದ್ದವರೆಲ್ಲ ಓಡಿಬಂದಿದ್ದಾರೆ. ಜನರನ್ನು ನೋಡುತ್ತಿದ್ದಂತೆ ಶಾಲೆಯ ಒಂದು ಕೋಣೆಗೆ ಹೋಗಿ ಲಾಕ್ ಮಾಡಿಕೊಂಡಿದ್ದ. ಆದರೆ ಸ್ಥಳೀಯ ಜನರು ಅವನನ್ನು ಬಿಡಲಿಲ್ಲ. ಪೊಲೀಸರಿಗೆ ಕರೆ ಮಾಡಿ, ತಾವೆಲ್ಲ ಶಾಲೆಯ ಹೊರಗೇ ಸುತ್ತುವರಿದು ನಿಂತಿದ್ದರು. ಪೊಲೀಸರು ಬಂದು ಮುಖ್ಯಶಿಕ್ಷಕನನ್ನು ಹೊರಗೆ ಕರೆದುತರುತ್ತಿದ್ದಂತೆ ಆತನ ಮೇಲೆ ಜನರು ದಾಳಿ ಮಾಡಿದ್ದಾರೆ. ಕೋಲು, ಬಡಿಗೆಗಳಿಂದ ಪೊಲೀಸರ ಎದುರೇ ಹೊಡೆದಿದ್ದಾರೆ.
ಗಲಾಟೆಯನ್ನು ನಿಯಂತ್ರಿಸಲು ಪೊಲೀಸರು ತುಂಬ ಪ್ರಯತ್ನ ಮಾಡಬೇಕಾಯಿತು. ನಂತರವಷ್ಟೇ ಪೊಲೀಸರು ಆರೋಪಿಯನ್ನು ಜನರಿಂದ ರಕ್ಷಿಸಿ ಸ್ಟೇಶನ್ಗೆ ಕರೆದುಕೊಂಡು ಹೋದರು. ಮುಖ್ಯಶಿಕ್ಷಕನಿಗೆ ಸ್ಥಳೀಯರು ಹೊಡೆಯುತ್ತಿರುವ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿವೆ. ಈ ವ್ಯಕ್ತಿ ಹುಡುಗಿಯರ ಮೇಲೆ ದೌರ್ಜನ್ಯ ನಡೆಸಿದ್ದು ಇದೇ ಮೊದಲಲ್ಲ ಎಂದು ಹಳ್ಳಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರ್; ದಂಪತಿ ಸ್ಥಳದಲ್ಲೇ ದುರ್ಮರಣ, ಮಕ್ಕಳು ಪಾರು
Published On - 12:43 pm, Sun, 19 September 21