ಅಧ್ಯಕ್ಷ ಸ್ಥಾನ ತೊರೆಯುವುದಾಗಿ ಶರದ್ ಪವಾರ್ ನಿರ್ಧಾರ ವಿರೋಧಿಸಿ ಎನ್‌ಸಿಪಿಯ ಹಿರಿಯ ನಾಯಕ ರಾಜೀನಾಮೆ

|

Updated on: May 03, 2023 | 3:36 PM

ಶರದ್ ಪವಾರ್ ನಿರ್ಧಾರದಿಂದ ನೊಂದಿರುವ ಪಕ್ಷದ ಹಿರಿಯ ನಾಯಕ ಜಿತೇಂದ್ರ ಅಹ್ವಾದ್ ಮತ್ತು ಅವರ ಸಹೋದ್ಯೋಗಿ ಅನಿಲ್ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಅಧ್ಯಕ್ಷ ಸ್ಥಾನ ತೊರೆಯುವುದಾಗಿ ಶರದ್ ಪವಾರ್ ನಿರ್ಧಾರ ವಿರೋಧಿಸಿ ಎನ್‌ಸಿಪಿಯ ಹಿರಿಯ ನಾಯಕ ರಾಜೀನಾಮೆ
ಶರದ್ ಪವಾರ್
Follow us on

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಅವರು ತಮ್ಮ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಣೆ ಮಾಡಿದ್ದು ಪಕ್ಷದ ಕಾರ್ಯಕರ್ತರು ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸುತ್ತಿದ್ದಾರೆ. ಶರದ್ ಪವಾರ್ ನಿರ್ಧಾರದಿಂದ ನೊಂದಿರುವ ಪಕ್ಷದ ಹಿರಿಯ ನಾಯಕ ಜಿತೇಂದ್ರ ಅಹ್ವಾದ್ (Jitendra Ahwad) ಮತ್ತು ಅವರ ಸಹೋದ್ಯೋಗಿ ಅನಿಲ್ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಆದಾಗ್ಯೂ ರಾಜೀನಾಮೆಗಳು ಇನ್ನೂ ಅಂಗೀಕಾರವಾಗಿಲ್ಲ.ಮಾಜಿ ಸಚಿವ ಮತ್ತು ಥಾಣೆ ನಗರದ ಮುಂಬ್ರಾ-ಕಲ್ವಾ ಕ್ಷೇತ್ರದ ಶಾಸಕರಾದ ಅಹ್ವಾದ್ ಅವರು ಪವಾರ್ ಅವರ ಆಪ್ತರು ಮತ್ತು ಮಹಾರಾಷ್ಟ್ರದ ಎನ್‌ಸಿಪಿಯ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

2019 ರಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಮತ್ತು ಶಿವಸೇನೆಯೊಂದಿಗೆ ಮಹಾ ವಿಕಾಸ್ ಅಘಾಡಿ ಮೈತ್ರಿ ಮಾಡಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ನಾವು ಅವರಿಗೆ (ಶರದ್ ಪವಾರ್) ಅವರ ರಾಜ್ಯಸಭಾ ಅಧಿಕಾರಾವಧಿ ಮುಗಿಯುವವರೆಗೆ ಅಥವಾ ಲೋಕಸಭೆ ಚುನಾವಣೆಯವರೆಗೆ ಅಧ್ಯಕ್ಷರಾಗಿ ಮುಂದುವರಿಯಲು ವಿನಂತಿಸುತ್ತಿದ್ದೇವೆ. ಶರದ್ ಪವಾರ್ ಎಲ್ಲರ ಮಾತನ್ನು ಕೇಳುತ್ತಿದ್ದಾರೆ ಆದರೆ ಇನ್ನೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಎನ್‌ಡಿಟಿವಿ ಜತೆ ಮಾತನಾಡಿದ ಪಾಟೀಲ್ ಹೇಳಿದ್ದಾರೆ.

ಎನ್‌ಸಿಪಿ ಮೂಲಗಳ ಪ್ರಕಾರ, ಸೋಲಾಪುರ ಜಿಲ್ಲೆಯ ಭೂಷಣ್ ಬಾಗಲ್ ಎಂಬ ಪಕ್ಷದ ಕಾರ್ಯಕರ್ತರೊಬ್ಬರು ಪವಾರ್ ಅವರ ರಾಜೀನಾಮೆಯನ್ನು ಹಿಂಪಡೆಯುವಂತೆ ರಕ್ತದಲ್ಲಿ ಬರೆದ ಪತ್ರವನ್ನು ಕಳುಹಿಸಿದ್ದಾರೆ.

ಸೋನಿಯಾ ಗಾಂಧಿಯವರ ವಿದೇಶಿ ಮೂಲದ ವಿಚಾರವಾಗಿ ಕಾಂಗ್ರೆಸ್‌ನಿಂದ ಬೇರ್ಪಟ್ಟ ನಂತರ 1999 ರಲ್ಲಿ ಎನ್‌ಸಿಪಿ ಸ್ಥಾಪಿಸಿದ್ದ ಪವಾರ್, ಮಂಗಳವಾರ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದರು. ಅದೇ ವೇಳೆ ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಡಲು ಬಯಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Bajrang Dal: ಹೈದರಾಬಾದ್‌ ಕಾಂಗ್ರೆಸ್​​​ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಬಜರಂಗದಳದ ಕಾರ್ಯಕರ್ತರ ಬಂಧನ 

ನಿರ್ಧಾರ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಪಕ್ಷದ ಸದಸ್ಯರು ಭಾವುಕರಾಗಿ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ ನಂತರ ಅವರು “ಮರುಚಿಂತನೆ” ಮಾಡಲು ಒಪ್ಪಿಕೊಂಡರು. ತಮ್ಮ ನಿರ್ಧಾರ ಬಗ್ಗೆ ಮರು ಚಿಂತನೆ ನಡೆಸಲು ಅವರಿಗೆ  ಎರಡು-ಮೂರು ದಿನಗಳು” ಬೇಕು ಎಂದು ಹೇಳಿರುವುದಾಗಿ ಅವರ ಸೋದರಳಿಯ ಅಜಿತ್ ಪವಾರ್ ಹೇಳಿದ್ದಾರೆ.

82ರ ಹರೆಯದ ಶರದ್ ಪವಾರ್ ಅವರು ಮಂಗಳವಾರ ಮಧ್ಯಾಹ್ನ ತಮ್ಮ ಆತ್ಮಚರಿತ್ರೆಯ ಬಿಡುಗಡೆ ಸಮಾರಂಭದಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ