ಚೆನ್ನೈ: ತಮಿಳುನಾಡಿನಲ್ಲಿ ಬುರೇವಿ ಚಂಡಮಾರುತದ ಪ್ರಭಾವಕ್ಕೆ ಸತತ ಎರಡನೇ ದಿನವೂ ವಿಪರೀತ ಮಳೆಯಾಗುತ್ತಿದೆ. ಒಂದೇ ಸಮನೆ ಗಾಳಿ, ಮಳೆ ಆಗುತ್ತಿದ್ದು ಇದುವರೆಗೆ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ಹಳ್ಳಿಗಳು ಪ್ರವಾಹಕ್ಕೆ ತತ್ತರಿಸಿದ್ದು, ಮನೆಗಳೆಲ್ಲ ಮುಳುಗಡೆಯಾಗಿವೆ.
ಕಡಲೂರ್ ಜಿಲ್ಲೆಯಲ್ಲಿಯೇ 300 ಹಳ್ಳಿಗಳು ಪ್ರವಾಹಕ್ಕೆ ಮುಳುಗಿದ್ದು, ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂನ ಬಹುತೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮುಖ್ಯಮಂತ್ರಿ ಇ.ಕೆ.ಪಳಿನಿಸ್ವಾಮಿ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ.ನೆರವು ಘೋಷಿಸಿದ್ದಾರೆ. ಹಾಗೇ ಜಾನುವಾರುಗಳನ್ನು ಕಳೆದುಕೊಂಡವರಿಗೂ ಪರಿಹಾರ ಕೊಡುವುದಾಗಿ ತಿಳಿಸಿದ್ದಾರೆ. ಇನ್ನು ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಚಂಡಮಾರುತದಿಂದ ತೀವ್ರ ಹಾನಿಗೆ ಒಳಗಾದ ಜಿಲ್ಲೆಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಚಿವರೇ ಖುದ್ದಾಗಿ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
ಕಡಲೂರ್ ಜಿಲ್ಲೆಯಲ್ಲಿಯೇ 66000 ಜನರನ್ನು ಪುನವರ್ಸತಿ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಹಾಗೇ ರಾಮನಾಥಪುರಂನಿಂದ 5000 ಮಂದಿಯನ್ನು ಕರೆದುಕೊಂಡುಹೋಗಲಾಗಿದೆ. ಇವರೆಲ್ಲರಿಗೂ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ. ರಾಜ್ಯಾದ್ಯಂತ 75 ಗುಡಿಸಲುಗಳು ಸಂಪೂರ್ಣವಾಗಿ ನಾಶವಾಗಿವೆ. 1,725 ಭಾಗಶಃ ಹಾಳಾಗಿವೆ. ಹಾಗೇ, ಎಂಟು ಹೆಂಚಿನ ಮನೆಗಳೂ ಪೂರ್ತಿಯಾಗಿ ಧ್ವಂಸಗೊಂಡಿದ್ದು, 410 ಹಾನಿಗೀಡಾಗಿವೆ. ಹಾಗೇ ಜಾನುವಾರುಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿವೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
ಚಂಡಮಾರುತದ ವೇಗ ಸ್ವಲ್ಪಮಟ್ಟಿಗೆ ತಗ್ಗಿದ್ದರೂ, ಮಳೆಯ ಪ್ರಮಾಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಹಿಳೆಯರ ಪಾಲಿಗೆ ಚೆನ್ನೈ ಉತ್ತಮ ನಗರ; ಜೀವನ ಗುಣಮಟ್ಟದಲ್ಲಿ ಮುಂಬೈ ಬೆಸ್ಟ್
Published On - 6:36 pm, Sat, 5 December 20