AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಿತ್ ‘ಪಟೇಲ್’ ಶಾ ಆದ GHMC ಚುನಾವಣೆ

ಕರ್ನಾಟಕ ಬಿಟ್ಟರೆ ಬೇರೆ ಯಾವ ರಾಜ್ಯದಲ್ಲೂ ಬಿಜೆಪಿ ಕಾಲಿಡಲು ಸಾಧ್ಯವಿಲ್ಲ ಎಂಬ ರಾಜಕೀಯ ವೀಕ್ಷಕರ ಮಾತನ್ನು ಬಿಜೆಪಿ ಸುಳ್ಳಾಗಿಸಲು ಹೊರಟಂತಿದೆ. ಇದಕ್ಕೆ ಸಾಕ್ಷಿ ತೆಲಂಗಾಣದ ಡುಬಾಕ್ ವಿಧಾನ ಸಭಾ ಉಪ ಚುನಾವಣೆ ಮತ್ತು ಶುಕ್ರವಾರ ಮುಗಿದ GHMC ಚುನಾವಣಾ ಫಲಿತಂಶ. ಮುಂದಿನ ದಿನಗಳಲ್ಲಿ ಈ ರಾಜಕೀಯ ಕಾವನ್ನು ಕಾದಿಟ್ಟುಕೊಂಡು ಬಿಜೆಪಿ ಹೇಗೆ ಹೋರಾಟಕ್ಕೆ ಸಜ್ಜಾಗುತ್ತದೆ ಎಂಬುದರ ಮೇಲೆ ಆ ಪಕ್ಷದ ಭವಿಷ್ಯ ದಕ್ಷಿಣದ ರಾಜ್ಯಗಳಲ್ಲಿ ಅಡಗಿದೆ.

ಅಮಿತ್ ‘ಪಟೇಲ್’ ಶಾ ಆದ GHMC ಚುನಾವಣೆ
ಅಸಾದುದ್ದೀನ್ ಒವೈಸಿ, ಕೆ ಚಂದ್ರಶೇಖರ್ ರಾವ್ ಮತ್ತು ಅಮಿತ್ ಶಾ
ಡಾ. ಭಾಸ್ಕರ ಹೆಗಡೆ
|

Updated on: Dec 05, 2020 | 6:19 PM

Share

ತೆಲಂಗಾಣ ರಾಜ್ಯದಲ್ಲಿ ಈಗ ಗೆಳೆಯರೇ ಚುನಾವಣಾ ಶತ್ರುಗಳಾಗೋದು ನಿಚ್ಚಳವಾಗಿದೆ. ಆಡಳಿತಾರೂಢ ತೆಲಂಗಾಣ ರಾಷ್ಟ್ರ ಪಕ್ಷ ಮತ್ತು ಭಾರತೀಯ ಜನತಾ ಪಕ್ಷ ಇಲ್ಲೀವರೆಗೂ ವಿಷಯಾಧಾರಿತ ಮಿತ್ರತ್ವ ಇಟ್ಟುಕೊಂಡಿರುವ ಪಕ್ಷಗಳಾಗಿದ್ದವು. ಆದರೆ ಈಗ ಹಾಗಿಲ್ಲ.

ಡುಬಾಕ್ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯ ಜಯದೊಂದಿಗೆ ಪ್ರಾರಂಭವಾದ ಭಾರತೀಯ ಜನತಾ ಪಕ್ಷದ ಓಟ ಈಗ ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಶನ್(GHMC)ನ ಚುನಾವಣೆಯಲ್ಲಿ ಮುಂದುವರಿದು ಮುಂದಿನ ದಿನಗಳಲ್ಲಿ ಟಿಆರ್​ಎಸ್​ಗೆ ತಲೆನೋವು ನೀಡುವ ಸಾಧ್ಯತೆ ಕಾಣುತ್ತಿದೆ. ಹಾಗಾಗಿ ಇವರಿಬ್ಬರ ಮಿತ್ರತ್ವ ಇನ್ನು ಮುಂದೆ ಎಷ್ಟು ಗಟ್ಟಿಯಾಗಿರುತ್ತೆ ಎಂಬುದು ಕುತೂಹಲಕಾರಿ ಅಂಶವಾಗಿದೆ.

ನಿನ್ನೆ ಶುಕ್ರವಾರ ಮುಗಿದ ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಶನ್(GHMC) ಮತ ಎಣಿಕೆಯಲ್ಲಿ ನಿರೀಕ್ಷೆಯಂತೆ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಪಕ್ಷ ಹೆಚ್ಚಿನ ಸ್ಥಾನ ಗೆದ್ದಿದ್ದರೂ, ವಿಳಾಸಕ್ಕೆ ಇಲ್ಲದ ಪಕ್ಷ ಎಂದೇ ಬಿಂಬಿತವಾಗಿದ್ದ ಭಾರತೀಯ ಜನತಾ ಪಕ್ಷ ಎರಡನೇ ಸ್ಥಾನ ಗಳಿಸುವುದರೊಂದಿಗೆ ರಾಜಕೀಯ ಪಂಡಿತರ ಲೆಕ್ಕಾಚಾರ ಮೇಲೆ ಕೆಳಗೆ ಮಾಡಿದೆ.

150 ಸ್ಥಾನಗಳು ಇರುವ ಕಾರ್ಪೋರೇಶನ್​ನಲ್ಲಿ, ಇಲ್ಲೀವರೆಗೆ 149 ಸ್ಥಾನಗಳ ಫಲಿತಾಂಶ ಪ್ರಕಟಗೊಂಡಿದೆ. ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಒಂದು ಸ್ಥಾನದ ಎಣಿಕೆ ನಿಲ್ಲಿಸಲಾಗಿದೆ. ಟಿಆರ್​ಎಸ್​ ಗಳಿಸಿದ್ದು 55. ಬಿಜೆಪಿಗೆ ಸಿಕ್ಕಿದ್ದು 48. ಮೂರನೇ ಸ್ಥಾನಕ್ಕಿಳಿದ ಎಐಎಮ್​ಐಎಮ್​ 44 ಮತ್ತು ಕಾಂಗ್ರೆಸ್​ ಎರಡು ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು. ಟಿಆರ್​ಎಸ್​ ಮತ್ತು ಎಐಎಮ್​ಐಎಮ್​ ಮಧ್ಯೆ ಚುನಾವಣಾ ಪೂರ್ವ ಒಳ ಒಪ್ಪಂದ ಇರುವ ಕಾರಣ ಅವೆರಡು ಪಕ್ಷಗಳು ಸೇರಿ ಅಲ್ಲಿ ಅಧಿಕಾರ ನಡೆಸುವುದು ಈಗ ನಿಶ್ಚಿತವಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟಿಆರ್​ಎಸ್​ನ ಕೆ.ಟಿ. ರಾಮರಾವ್ ತಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ, 25 ಸ್ಥಾಮ ಕಡಿಮೆ ಬಂತು ಎಂಬ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಎಐಎಮ್​ಐಎಮ್​ನ ಅಸಾದುದ್ದೀನ್ ಒವೈಸಿ, ತಮ್ಮ ಪಕ್ಷ ನಿರೀಕ್ಷೆಯಂತೆ 44 ಸ್ಥಾನ ಗಳಿಸಿದ್ದು ತಮಗೆ ಖುಷಿ ತಂದಿದೆ ಎಂದಿದ್ದಾರೆ. ಬಹಳ ಲೆಕ್ಕಾಚಾರ ಮಾಡಿ ಪ್ರತಿಕ್ರಿಯಿಸಿರುವ ಅವರು, ಮುಂದಿನ ದಿನಗಳಲ್ಲಿ ತೆಲಂಗಾಣದ ಜನ ಬಿಜೆಪಿಯ ಬೆಳವಣಿಗೆಯನ್ನು ತಡೆಯುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನೆಲಕಚ್ಚಿದ ಊರಲ್ಲಿ ಬಿಜೆಪಿ ಈ ಹಿಂದೆ ಟಿಆರ್​ಎಸ್​ ಹುಟ್ಟಿಕೊಂಡಾಗ ಅದಕ್ಕೆ ಕಾಂಗ್ರೆಸ್ ವಿರೋಧ ಪಕ್ಷವಾಗಿತ್ತು. ಆಗ ಕೆ. ಚಂದ್ರಶೇಖರ ರಾವ್ ಅವರು ಬಿಜೆಪಿ ಜೊತೆ ವಿಷಯಾಧಾರಿತ ಸಖ್ಯ ಬೆಳೆಸಿಕೊಂಡು ನಡೆದಿದ್ದರು. ಹಿಂದಿನ 2016ರ GHMC ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನ ಗೆದ್ದಿತ್ತು. ಈ ಬಾರಿ ಅದು 44 ಗೆದ್ದು ತನ್ನ ಬಲ ತೋರಿಸಿತು. ಇನ್ನು ವಿಧಾನ ಸಭಾ ಚುನಾವಣೆಯ ವಿಚಾರಕ್ಕೆ ಬಂದಾಗ 2018 ರ ಚುನಾವಣೆಯಲ್ಲಿ ಬಿಜೆಪಿ 119-ಸ್ಥಾನ ಇರುವ ತೆಲಂಗಾಣ ವಿಧಾನ ಸಭೆಯಲ್ಲಿ ಒಂದೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯ್ತು.

ಆದರೆ, ಟಿಆರ್​ಎಸ್​ ಆಗ ಬಿಜೆಪಿಯನ್ನು ಅಷ್ಟೇನೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಒಂದೇ ವರ್ಷದ ಅಂತರದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೆಲಂಗಾಣ ರಾಜ್ಯದಲ್ಲಿ ನಾಲ್ಕು ಸ್ಥಾನ ಗೆದ್ದು ಆಶ್ಚರ್ಯ ಮೂಡಿಸಿತ್ತು. ಅಷ್ಟೇ ಅಲ್ಲ, ತನ್ನ ಮತದ ಪ್ರಮಾಣವನ್ನು ಶೇ. 20 ಕ್ಕೆ ಏರಿಸಿಕೊಂಡಿತು. ಆಗಲೂ ಎಲ್ಲರೂ ಅಂದುಕೊಂಡಿದ್ದು: ಇವೆಲ್ಲ ಬಿಜೆಪಿ ಕ್ಷಣಿಕ ಯಶಸ್ಸು. ತೆಲಂಗಾಣದಲ್ಲಿ ಬಿಜೆಪಿಗೆ ಬೇರೂರಲೂ ಸಾಧ್ಯವೇ ಇಲ್ಲ ಎಂದು. ಆದರೆ ಬಿಜೆಪಿ ಎಲ್ಲರ ಲೆಕ್ಕಾಚಾರವನ್ನೂ ಬುಡಮೇಲು ಮಾಡಿತ್ತು.

ಡುಬಾಕ್ ಉಪಚುನಾವಣೆ ಮತ್ತು ಈಗಷ್ಟೇ ಮುಗಿದ GHMC ಚುನಾವಣೆ ಮೂಲಕ ಟಿಆರ್​ಎಸ್​ಗೆ ಎದುರಾಳಿಯಾಗಿ ಹೊರಹೊಮ್ಮುವುದು ನಿಶ್ಚಯವಾಗಿದೆ. ಇದಕ್ಕೆ ಮೂಲ ಕಾರಣ ಆ ರಾಜ್ಯದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ನೆಲ ಕಚ್ಚಿದ್ದು. ವಿರೋಧ ಪಕ್ಷದ ಜಾಗ ಹೆಚ್ಚು ಕಡಿಮೆ ಖಾಲಿಯಾಗಿದ್ದನ್ನು ಕಂಡ ಬಿಜೆಪಿ ಟಿಆರ್​ಎಸ್​ ತನ್ನ ಮಿತ್ರ ಎಂಬುದನ್ನು ನೋಡದೇ ಮುನ್ನುಗ್ಗಿತು. ಕಾಂಗ್ರೆಸ್ ಹೇಳಹೆಸರಿಲ್ಲದ ಊರಲ್ಲಿ ಈಗ ಟಿಆರ್​ಎಸ್​ಗೆ ಬಿಜೆಪಿಯೇ ಮುಖ್ಯ ವಿರೋಧ ಪಕ್ಷ ಎಂದು ಬಿಂಬಿತವಾಗುವಷ್ಟು ಬಿಜೆಪಿ ಬೆಳೆದಿದ್ದು ನಿಚ್ಚಳ.

ಅದಕ್ಕೆ ಒಂದು ಕಾರಣವಿದೆ. ತೆಲಂಗಾಣದಲ್ಲಿ ಕಾಂಗ್ರೆಸ್​ ಬಳಿ ಯಾವ ಹೊಸ ರಾಜಕೀಯ ನಿರೂಪಣಾ ವಿಷಯ (narrative) ಇರಲಿಲ್ಲ. ಆದರೆ ಬಿಜೆಪಿ ಹಾಗಲ್ಲ. ಈ ಪಕ್ಷದಲ್ಲಿ ಬಿಜೆಪಿ ಬಳಿ ಎರಡು ರಾಜಕೀಯ ನಿರೂಪಣಾ ವಿಷಯ ಇವೆ: ಮೊದಲನೆಯದು, ತೆಲಂಗಾಣದಲ್ಲಿ ಕುಟುಂಬ ರಾಜಕೀಯ ಇದೆ ಎಂಬುದು. ಎರಡನೆಯದು ಮುಸ್ಲಿಮ್ ಇತಿಹಾಸ ಮತ್ತು ಹಿಂದೂ ಭವಿಷ್ಯದ್ದು. ಇವೆರಡನ್ನು ಕಾಂಗ್ರೆಸ್ ಹೇಳೋದಕ್ಕೆ ಆಗುತ್ತಿರಲಿಲ್ಲ. ಇದು ಸರಿಯೋ ತಪ್ಪೋ? ಸತ್ಯವೋ ಅಥವಾ ಸುಳ್ಳೊ? ಬಿಜೆಪಿ ಮಾತ್ರ ಇದನ್ನಿಟ್ಟುಕೊಂಡು ಹೊರಟಂತಿದೆ. ಹಾಗೂ ಭಾಗಶಃ ಯಶಸ್ಸು ಸಿಕ್ಕಂತಿದೆ.

ಗೆಳೆತನ ಹೋಗಿದ್ದು ಹಾನಿಯಲ್ಲವೇ? ರಾಜಕೀಯ ಪಂಡಿತರು ಈಗ ಹೇಳುತ್ತಿರುವುದೇನೆಂದರೆ, ಬಿಜೆಪಿ ಒಳ್ಳೆ ಗೆಳೆಯನನ್ನು ಕಳೆದುಕೊಂಡಿತು ಎಂದು. ಆದರೆ, ಈ ಎರಡೂ ಪಕ್ಷಗಳ ಮಿತ್ರತ್ವದ ಇತಿಹಾಸ ನೋಡಿದರೆ, ಅವರು ಯಾವುದೋ ಒಂದು ಸಿದ್ಧಾಂತಕ್ಕೆ (ideological) ಬದ್ಧರಾದ ಗೆಳೆಯರಲ್ಲ. ಹಾಗಾಗಿ ಅವರ ಮಿತ್ರತ್ವಕ್ಕೆ ಕಾಲದ ಮೊಹರು ಬಿದ್ದಿರಲಿಲ್ಲ. ಇಷ್ಟೇ ಅಲ್ಲ, ತುಂಬಾ ವರ್ಷಗಳಿಂದ ಸಿದ್ಧಾಂತದ ಆಧಾರದ ಮೇಲೆ ಬೆಳೆದಿದ್ದ ಶಿವಸೇನಾ ಮಿತ್ರತ್ವವೇ ಬಿಜೆಪಿಗೆ ಇಂದು ಇಲ್ಲ.

ಹಾಗಾಗಿ ಬಿಜೆಪಿ ಮತ್ತು ಟಿಆರ್​ಎಸ್​ನ ಜೊತೆಗಿನ ಗೆಳೆತನ ಮುರಿದು ಬೀಳುವುದು ದೊಡ್ಡ ವಿಚಾರವೇ ಅಲ್ಲ. ಇನ್ನು ರಾಜ್ಯಸಭೆಯ ವಿಚಾರಕ್ಕೆ ಬಂದಾಗ, ಈ ಹಿಂದೆ ಟಿಆರ್​ಎಸ್​ ತುಂಬಾ ಸಲ ಅನೇಕ ವಿಧೇಯಕಗಳನ್ನು ಪಾಸು ಮಾಡಲು ಬಿಜೆಪಿಗೆ ಸಹಾಯ ಮಾಡಿತ್ತು. ಇನ್ನು ಮುಂದೆ ಈ ವಿಚಾರದಲ್ಲಿ, ಟಿಆರ್​ಎಸ್​ ಹೇಗೆ ಮುಂದುವರಿಯುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.

ಅಷ್ಟೇ ಅಲ್ಲ, ಇನ್ನು ಒಂದುವರೆ ವರ್ಷದ ನಂತರ ಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಇವರಿಬ್ಬರ ಕೆಮೆಸ್ಟ್ರಿ ಹೇಗಿರುತ್ತೆ ಎಂಬುದನ್ನ ಈಗಲೇ ಊಹಿಸಲು ಸಾಧ್ಯವಿಲ್ಲ ಏಕೆಂದರೆ, ಪ್ರಾದೇಶಿಕ ಪಕ್ಷಗಳಿಗೆ ಒಪ್ಪಿಗೆ ಆಗುವಂತಹ ಅಭ್ಯರ್ಥಿಯನ್ನು ಬಿಜೆಪಿ ನಿಲ್ಲಿಸಿದರೆ ಮತ್ತೆ ಟಿಆರ್​ಎಸ್​ ಬಿಜೆಪಿಗೆ ಬೆಂಬಲ ಕೊಟ್ಟರೂ ಆಶ್ಚರ್ಯವಿಲ್ಲ. ಕರ್ನಾಟಕ ಆಯ್ತು, ಇನ್ನು ಒಂದೇ ಬಾರಿ ತೆಲಂಗಾಣ ಮತ್ತು ಆಂಧ್ರದತ್ತ ಲಗ್ಗೆ ಇಡಲು ಹವಣಿಸುತ್ತಿರುವ ಬಿಜೆಪಿ ಹೇಗೆ ತನ್ನ ತಂತ್ರಗಾರಿಕೆ ರೂಪಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಮಿತ್ರತ್ವ ಇಟ್ಟುಕೊಂಡು ಚುನಾವಣಾ ಶತ್ರುತ್ವಕ್ಕೆ ಹೇಗೆ ಸಜ್ಜಾಗುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕೊನೆಯ ಗುಟುಕು ಈ GHMC ಚುನಾವಣೆಯ ಫಲಿತಾಂಶ ನೋಡಿದರೆ, ಅಮಿತ್ ಶಾ ನಿಜವಾಗಿಯೂ ಬಿಜೆಪಿಯ ವಲ್ಲಭ್ ಬಾಯಿ ಪಟೇಲ್ ಆದಂತೆ ಕಾಣುತ್ತಿದೆ. ಸ್ವತಂತ್ರ ಭಾರತದ ಮೊದಲ ಗೃಹ ಮಂತ್ರಿ ವಲ್ಲಭ್ ಬಾಯಿ ಪಟೇಲ್ ಹೈದರಾಬಾದನ್ನು ಇಂದಿನ ಭಾರತಕ್ಕೆ ಸೇರಿಸಿದ್ದರು. ತಮ್ಮನ್ನು ಪಟೇಲ್ ಅವರ ನೆರಳಿನಲ್ಲಿ ನೋಡಿಕೊಳ್ಳಲು ಇಚ್ಛಿಸುವ ಶಾ ಈಗ ಹೈದರಾಬಾದನ್ನು ಬಿಜೆಪಿ ತೆಕ್ಕೆ ತರುವಲ್ಲಿ ಸಂಪೂರ್ಣ ಯಶಸ್ಸು ಗಳಿಸದಿದ್ದರೂ, ಇಡೀ ತೆಲಂಗಾಣದಲ್ಲಿ ಕೇಸರಿ ಬಾವುಟ ಹಾರಿಸಲು ಕೆಲಸ ಮಾಡಿದ್ದು ನೋಡಿದರೆ ಶಾ ಈಗ ಬಿಜೆಪಿ ಪಾಲಿಗೆ ಪಟೇಲ್ ಆಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.