174 ಪ್ರಯಾಣಿಕರ ಜೀವ ಉಳಿಸಿದ ವೀರ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ‘ಅಶೋಕ ಚಕ್ರ’ ನೀಡಲು ದೇಶಾದ್ಯಂತ ಆಗ್ರಹ

ಸೆಪ್ಟೆಂಬರ್ 30ರಂದು 'ಫ್ಲೈದುಬೈ' ವಿಮಾನದ ಕಾಕ್‌ಪಿಟ್‌ನಲ್ಲಿ ಕೋ-ಪೈಲಟ್ ಜಿಹಾದಿ ಶೈಲಿಯಲ್ಲಿ ನಡೆಸಿದ ಭೀಕರ ದಾಳಿಯ ವೇಳೆ 174 ಜನರ ಪ್ರಾಣವನ್ನು ರಕ್ಷಿಸಿದ ಸಾಹಸಿ ಕಮಾಂಡರ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ 'ಅಶೋಕ ಚಕ್ರ' ನೀಡಿ ಗೌರವಿಸಬೇಕೆಂಬ ಆಗ್ರಹ ದೇಶಾದ್ಯಂತ ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಬಗ್ಗೆ ಇಂದು ಶಿವಸೇನಾ ರಾಜ್ಯಸಭಾ ಸಂಸದ ಮಿಲಿಂದ್ ಡಿಯೋರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ಪತ್ರ ಬರೆದಿದ್ದು, ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಅತ್ಯುನ್ನತ ಶೌರ್ಯ ಪ್ರಶಸ್ತಿಯನ್ನು ಪ್ರಕಟಿಸಬೇಕೆಂದು ಕೋರಿದ್ದಾರೆ.

174 ಪ್ರಯಾಣಿಕರ ಜೀವ ಉಳಿಸಿದ ವೀರ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ಅಶೋಕ ಚಕ್ರ ನೀಡಲು ದೇಶಾದ್ಯಂತ ಆಗ್ರಹ
Captain Smit Machchhar

Updated on: Oct 02, 2026 | 8:49 PM

ನವದೆಹಲಿ, ಅಕ್ಟೋಬರ್ 2: ಬುಧವಾರ ‘ಫ್ಲೈದುಬೈ’ ವಿಮಾನದ ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತೋರಿದ ಶೌರ್ಯ ಅಪ್ರತಿಮವಾದುದು. ತೀವ್ರವಾಗಿ ಗಾಯಗೊಂಡಿದ್ದರೂ, ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಓಮನ್ ಮೂಲದ ಕೋ-ಪೈಲಟ್ ವಿರುದ್ಧ ಹೋರಾಡಿ ಅವರು 174 ಜನರ ಪ್ರಾಣ ರಕ್ಷಿಸಿದರು. ಅವರ ಈ ಅಸಾಧಾರಣ ಕಾರ್ಯಕ್ಕಾಗಿ, ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ‘ಅಶೋಕ ಚಕ್ರ’ ನೀಡಿ ಗೌರವಿಸಬೇಕೆಂಬ ಒತ್ತಾಯ ದೇಶಾದ್ಯಂತ ಬಲವಾಗಿ ಕೇಳಿಬರುತ್ತಿದೆ. ರಾಜಕಾರಣಿಗಳು, ಮಾಜಿ ಸೈನಿಕರು, ಪೈಲಟ್​​ಗಳು ಸೇರಿದಂತೆ ಅನೇಕರು ಸ್ಮಿತ್ ಅವರ ಸಾಹಸವನ್ನು 1986ರ ಸೆಪ್ಟೆಂಬರ್‌ನಲ್ಲಿ ನಡೆದ ಪಾನ್ ಆಮ್ ಫ್ಲೈಟ್ 73 ಅಪಹರಣದ ವೇಳೆ ಪ್ರಯಾಣಿಕರ ಪ್ರಾಣ ಉಳಿಸಿ ಹುತಾತ್ಮರಾದ ನೀರಜಾ ಭಾನೋಟ್ ಅವರ ತ್ಯಾಗಕ್ಕೆ ಹೋಲಿಸಿದ್ದಾರೆ. ನೀರಜಾ ಭಾನೋಟ್ ಅವರಿಗೂ ಮರಣೋತ್ತರವಾಗಿ ‘ಅಶೋಕ ಚಕ್ರ’ ನೀಡಿ ಗೌರವಿಸಲಾಗಿತ್ತು. ಈ ಪ್ರಶಸ್ತಿಗೆ ಸ್ಮಿತ್ ಮಚ್ಚರ್ ಅವರಿಗಿಂತ ಅರ್ಹರು ಮತ್ತೊಬ್ಬರಿಲ್ಲ ಎಂಬ ಆಗ್ರಹ ಕೇಳಿಬರುತ್ತಿದೆ.

ಪ್ರಧಾನಿ ಮೋದಿಗೆ ಪತ್ರ ಬರೆದ ಮಿಲಿಂದ್ ಡಿಯೋರ:

ಶಿವಸೇನಾ ರಾಜ್ಯಸಭಾ ಸಂಸದ ಮಿಲಿಂದ್ ಡಿಯೋರ ತಮ್ಮ ಪಕ್ಷ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸ್ಮಿತ್ ಅವರಿಗೆ ‘ಅಶೋಕ ಚಕ್ರ’ ನೀಡುವಂತೆ ಮನವಿ ಮಾಡಿದ್ದಾರೆ. “ಕಾಕ್‌ಪಿಟ್‌ನಲ್ಲಿ ಕೋ-ಪೈಲಟ್‌‌ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದರೂ, ಸ್ಮಿತ್ ಅಸಾಧಾರಣ ಧೈರ್ಯ ತೋರಿ 174 ಜನರ ಪ್ರಾಣ ರಕ್ಷಿಸಿದರು. ಅವರು ಮಾಡಿದ್ದು ತಮ್ಮ ವೃತ್ತಿಪರ ಜವಾಬ್ದಾರಿಗಿಂತಲೂ ಮಿಗಿಲಾದುದು. ಅತ್ಯುನ್ನತ ಶೌರ್ಯ ಗೌರವ ‘ಅಶೋಕ ಚಕ್ರ’ ಆಗಿರುವುದರಿಂದ, ಸ್ಮಿತ್ ಅವರಿಗೆ ಇದನ್ನು ನೀಡುವುದು ಸೂಕ್ತ” ಎಂದು ಡಿಯೋರ ಬರೆದಿದ್ದಾರೆ.


ಇದನ್ನೂ ಓದಿ: ಫ್ಲೈದುಬೈ ದಾಳಿಯನ್ನು ‘ಭಯೋತ್ಪಾದನಾ ಕೃತ್ಯ’ ಎಂದು ಘೋಷಿಸಿದ ಯುಎಇ; ಸ್ಮಿತ್ ಮಚ್ಚರ್ ಸಾಹಸಕ್ಕೆ ವಿಶ್ವಾದ್ಯಂತ ಪ್ರಶಂಸೆ

ಹಾಗೇ, ಕಮಾಂಡರ್ ಸ್ಮಿತ್ ಮಚ್ಚರ್ ತೀವ್ರವಾಗಿ ಗಾಯಗೊಂಡಿದ್ದರೂ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ವಿಮಾನದ ನಿಯಂತ್ರಣ ಸಾಧಿಸಿ, ಸೌದಿ ಅರೇಬಿಯಾದ ‘ತಬುಕ್’ ವಿಮಾನ ನಿಲುವಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲು ಕಾರಣರಾಗಿದ್ದಾರೆ. ಆದ್ದರಿಂದ ಅವರಿಗೆ ‘ರಾಷ್ಟ್ರೀಯ ಸಾಹಸ ಪ್ರಶಸ್ತಿ’ ನೀಡಬೇಕು ಎಂದು ಪ್ರಧಾನಿ ಕಚೇರಿ, ನಾಗರಿಕ ವಿಮಾನಯಾನ ಕಾರ್ಯದರ್ಶಿ ಹಾಗೂ ಡಿಸಿಜಿಎಗೆ ಭಾರತೀಯ ಪೈಲಟ್​​ಗಳ ಒಕ್ಕೂಟವು ಅಧಿಕೃತ ಶಿಫಾರಸು ರವಾನಿಸಿದೆ.

 

ಇನ್ನೊಂದೆಡೆ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ರಾಜ್ಯದ ಗೌರವಾನ್ವಿತ ‘ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ’ ಘೋಷಿಸಿದ್ದಾರೆ. ಸ್ಮಿತ್ ಅವರನ್ನು ‘ಗುಜರಾತ್‌ನ ವೀರ ಪುತ್ರ’ ಎಂದು ಕೊಂಡಾಡಿರುವ ಸಿಎಂ, ಇಡೀ ಜಗತ್ತೇ ಅವರ ಧೈರ್ಯಕ್ಕೆ ಸಲಾಂ ಹೇಳುತ್ತಿದೆ ಎಂದಿದ್ದಾರೆ. ಕ್ಯಾಪ್ಟನ್ ಸ್ಮಿತ್ ಮೂಲತಃ ಗುಜರಾತ್‌ನವರಾಗಿದ್ದು, ಬಳಿಕ ಅವರ ಕುಟುಂಬ ಮುಂಬೈಗೆ ವಲಸೆ ಬಂದಿತ್ತು. ಪ್ರಸ್ತುತ ಅವರ ಕುಟುಂಬ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನೆಲೆಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us