ಸಿಕ್ಕಿಂನಲ್ಲಿ ಭಾರೀ ಪ್ರವಾಹ; ಸಾವಿನ ಸಂಖ್ಯೆ 10ಕ್ಕೆ ಏರಿಕೆ, 80 ಮಂದಿ ನಾಪತ್ತೆ

|

Updated on: Oct 04, 2023 | 10:38 PM

Sikkim Flood Updates: ಮೇಘಸ್ಫೋಟ ಹಾಗೂ ಪ್ರವಾಹದಿಂದ ಸಿಕ್ಕಿಂನಲ್ಲಿ 14 ಸೇತುವೆಗಳು ಕುಸಿದಿವೆ. 3,000ಕ್ಕೂ ಹೆಚ್ಚು ಪ್ರವಾಸಿಗರು ಸಿಕ್ಕಿಂನ ವಿವಿಧ ಭಾಗಗಳಲ್ಲಿ ಸಿಲುಕಿರುವ ಆತಂಕವಿದೆ. ಸಿಕ್ಕಿಂನ ಪ್ರವಾಹ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಿಕ್ಕಿಂ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದಾರೆ.

ಸಿಕ್ಕಿಂನಲ್ಲಿ ಭಾರೀ ಪ್ರವಾಹ; ಸಾವಿನ ಸಂಖ್ಯೆ 10ಕ್ಕೆ ಏರಿಕೆ, 80 ಮಂದಿ ನಾಪತ್ತೆ
ಸಿಕ್ಕಿಂನಲ್ಲಿ ಪ್ರವಾಹ
Image Credit source: PTI
Follow us on

ಸಿಕ್ಕಿಂ: ಇಂದು ಮುಂಜಾನೆ ಉತ್ತರ ಸಿಕ್ಕಿಂನಲ್ಲಿ ಸುರಿದ ಭಾರೀ ಮಳೆ ಹಾಗೂ ದಿಢೀರ್ ಪ್ರವಾಹದಿಂದ 10 ಜನರು ಸಾವನ್ನಪ್ಪಿದ್ದಾರೆ. 22 ಸೇನಾ ಸಿಬ್ಬಂದಿ ಸೇರಿದಂತೆ ಸುಮಾರು 80 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಅವರ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಮೇಘಸ್ಫೋಟ ಹಾಗೂ ಪ್ರವಾಹದಿಂದ ಸಿಕ್ಕಿಂನಲ್ಲಿ 14 ಸೇತುವೆಗಳು ಕುಸಿದಿವೆ. 3,000ಕ್ಕೂ ಹೆಚ್ಚು ಪ್ರವಾಸಿಗರು ಸಿಕ್ಕಿಂನ ವಿವಿಧ ಭಾಗಗಳಲ್ಲಿ ಸಿಲುಕಿರುವ ಆತಂಕವಿದೆ. ಭಾರೀ ಮಳೆಯಿಂದ ಸಿಕ್ಕಿಂನ ಚುಂಗ್ಥಾಂಗ್​ನಲ್ಲಿರುವ ದೊಡ್ಡ ಜಲವಿದ್ಯುತ್ ಘಟಕದ ಡ್ಯಾಂನ ಮೇಲೆ ನೀರು ನುಗ್ಗಿತು. ಇದರಿಂದ ಡ್ಯಾಂನ ಕೆಳಭಾಗದ ಪ್ರದೇಶಗಳಲ್ಲಿ ಪ್ರವಾಹ ಕಾಣಿಸಿಕೊಂಡು, ಜನರನ್ನು ಕೊಚ್ಚಿಕೊಂಡು ಹೋಯಿತು.

ಅಣೆಕಟ್ಟಿನ ನೀರು ನುಗ್ಗಿ ಹಳ್ಳಿಗಳೇ ಮುಳುಗಡೆಯಾಗುವ ಭೀತಿ ಎದುರಾಗಿದೆ. ಎಲ್ಲ ಕಡೆಯೂ ಕೆಸರು ತುಂಬಿಕೊಂಡಿದ್ದು, ಎನ್​ಡಿಆರ್​ಎಫ್​ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಇನ್ನೂ ಈ ಭಾಗದಲ್ಲಿ ಮಳೆಯ ಆರ್ಭಟ ಕಡಿಮೆಯಾಗಿಲ್ಲ. ಉತ್ತರ ಸಿಕ್ಕಿಂನ ಲೊನಾಕ್ ಸರೋವರ ಉಕ್ಕಿ ಹರಿದಿದೆ. ತೀಸ್ತಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ತೀಸ್ತಾ ನದಿಯು ಬಾಂಗ್ಲಾದೇಶವನ್ನು ಪ್ರವೇಶಿಸುವ ಮೊದಲು ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಮೂಲಕ ಹರಿಯುತ್ತದೆ.

ಇದನ್ನೂ ಓದಿ: ಸಿಕ್ಕಿಂನಲ್ಲಿ ಮೇಘಸ್ಫೋಟ, ಪ್ರವಾಹ, 23 ಸೇನಾ ಸಿಬ್ಬಂದಿ ನಾಪತ್ತೆ

ಸಿಕ್ಕಿಂನ ಪ್ರವಾಹ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಿಕ್ಕಿಂ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಸಿಕ್ಕಿಂ ಸಿಎಂಗೆ ಭರವಸೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ