ಉತ್ತರಾಖಂಡ ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಮಂದಿಯ ರಕ್ಷಣೆ: ಪ್ರಧಾನಿ ಮೋದಿ, ಸಚಿವ ನಿತಿನ್ ಗಡ್ಕರಿ ಅಭಿನಂದನೆ

|

Updated on: Nov 28, 2023 | 10:05 PM

ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರ ತಾಳ್ಮೆ, ಧೈರ್ಯವನ್ನು ಕೊಂಡಾಡಿದ ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಸಂದೇಶ ಪ್ರಕಟಿಸಿದ್ದು, ಇದೊಂದು ಭಾವುಕ ಕ್ಷಣ ಎಂದು ಬಣ್ಣಿಸಿದ್ದಾರೆ. ಅಲ್ಲದೆ, 17 ದಿನಗಳ ನಂತರ ತಮ್ಮವರನ್ನು ಕಾಣುತ್ತಿರುವ ಕಾರ್ಮಿಕರಿಗೆ ಶುಭ ಕೋರಿದ್ದಾರೆ.

ಉತ್ತರಾಖಂಡ ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಮಂದಿಯ ರಕ್ಷಣೆ: ಪ್ರಧಾನಿ ಮೋದಿ, ಸಚಿವ ನಿತಿನ್ ಗಡ್ಕರಿ ಅಭಿನಂದನೆ
ನರೇಂದ್ರ ಮೋದಿ & ನಿತಿನ್ ಗಡ್ಕರಿ
Follow us on

ನವದೆಹಲಿ, ನವೆಂಬರ್ 28: ಉತ್ತರಾಖಂಡದ (Uttarakhand tunnel) ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಣೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹರ್ಷ ವ್ಯಕ್ತಪಡಿಸಿದ್ದಾರೆ. ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರ ತಾಳ್ಮೆ, ಧೈರ್ಯವನ್ನು ಕೊಂಡಾಡಿ ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಸಂದೇಶ ಪ್ರಕಟಿಸಿರುವ ಮೋದಿ, ಇದೊಂದು ಭಾವುಕ ಕ್ಷಣ ಎಂದು ಬಣ್ಣಿಸಿದ್ದಾರೆ. ಅಲ್ಲದೆ, 17 ದಿನಗಳ ನಂತರ ತಮ್ಮವರನ್ನು ಕಾಣುತ್ತಿರುವ ಕಾರ್ಮಿಕರಿಗೆ ಶುಭ ಕೋರಿದ್ದಾರೆ.

ಉತ್ತರಕಾಶಿಯ ಸಿಲ್ಕ್ಯಾರಾ-ಬರ್ಕೋಟ್ ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಮಂದಿ ಕಾರ್ಮಿಕರನ್ನು ಎನ್​ಡಿಆರ್​ಎಫ್ ಸಿಬ್ಬಂದಿ 17 ದಿನಗಳ ಕಾರ್ಯಾಚರಣೆ ಬಳಿಕ ಸೋಮವಾರ ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ.


‘ಉತ್ತರಕಾಶಿಯಲ್ಲಿ ನಮ್ಮ ಕಾರ್ಮಿಕ ಬಂಧುಗಳ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿಸುತ್ತಿದೆ. ನಿಮ್ಮ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಸುರಂಗದಲ್ಲಿ ಸಿಕ್ಕಿಬಿದ್ದ ಸ್ನೇಹಿತರಿಗೆ ನಾನು ಹೇಳಲು ಬಯಸುತ್ತೇನೆ. ನಾನು ನಿಮ್ಮೆಲ್ಲರಿಗೂ ಒಳ್ಳೆಯ ಮತ್ತು ಉತ್ತಮ ಆರೋಗ್ಯವನ್ನು ಬಯಸುತ್ತೇನೆ. ದೀರ್ಘಾವಧಿಯ ಕಾಯುವಿಕೆಯ ನಂತರ ನಮ್ಮ ಈ ಸ್ನೇಹಿತರು ಈಗ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತಾರೆ ಎಂಬುದು ತುಂಬಾ ತೃಪ್ತಿಯ ವಿಷಯ. ಈ ಸವಾಲಿನ ಸಮಯದಲ್ಲಿ ಈ ಎಲ್ಲಾ ಕುಟುಂಬಗಳು ತೋರಿದ ತಾಳ್ಮೆ ಮತ್ತು ಧೈರ್ಯವನ್ನು ಪ್ರಶಂಸಿಸಿದಷ್ಟೂ ಸಾಲದು. ಈ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ಜನರಿಗೆ ನಾನು ನಮಸ್ಕರಿಸುತ್ತೇನೆ. ಅವರ ಶೌರ್ಯ ಮತ್ತು ಸ್ಥೈರ್ಯ ನಮ್ಮ ಕಾರ್ಮಿಕ ಬಂಧುಗಳಿಗೆ ಹೊಸ ಬದುಕನ್ನು ನೀಡಿದೆ. ಈ ಕಾರ್ಯಾಚರಣೆಯಲ್ಲಿ ತೊಡಗಿರುವ ಪ್ರತಿಯೊಬ್ಬರೂ ಮಾನವೀಯತೆ ಮತ್ತು ಟೀಮ್​ ವರ್ಕ್​​ನ ಅದ್ಭುತ ಉದಾಹರಣೆಯನ್ನು ನೀಡಿದ್ದಾರೆ’ ಎಂದು ಎಕ್ಸ್​​ ಸಂದೇಶದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: ಉತ್ತರಾಖಂಡದ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ; ಹೇಗೆ ನಡೆದಿತ್ತು ರಕ್ಷಣಾ ಕಾರ್ಯಾಚರಣೆ

‘ಸುರಂಗ ಕುಸಿತದ ನಂತರ ಅದರೊಳಗೆ ಸಿಕ್ಕಿಬಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ ಎಂಬುದು ನನಗೆ ಸಂಪೂರ್ಣವಾಗಿ ಸಮಾಧಾನ ಮತ್ತು ಸಂತೋಷದ ವಿಷಯವಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಮಹತ್ವದ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದೆಂದು ಗುರುತಿಸಬಹುದಾದ ಬಹು ಏಜೆನ್ಸಿಗಳ ಸುಸಂಘಟಿತ ಪ್ರಯತ್ನವಾಗಿದೆ. ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ ವಿವಿಧ ಇಲಾಖೆಗಳು ಮತ್ತು ಏಜೆನ್ಸಿಗಳು ಪರಸ್ಪರ ಪೂರಕವಾಗಿ ಕಾರ್ಯಾಚರಣೆ ನಡೆಸಿವೆ. ಎಲ್ಲರ ದಣಿವರಿಯದ ಮತ್ತು ಪ್ರಾಮಾಣಿಕ ಪ್ರಯತ್ನಗಳು, ಎಲ್ಲರ ಪ್ರಾರ್ಥನೆ ಜತೆಯಾಗಿ ಸೇರಿಕೊಂಡು ಈ ಕಾರ್ಯಾಚರಣೆಯನ್ನು ಸಾಧ್ಯವಾಗಿಸಿದೆ. ರಕ್ಷಣಾ ತಂಡಗಳ ಸಮರ್ಪಿತ ಪ್ರಯತ್ನಗಳು ಅನುಕೂಲಕರ ಫಲಿತಾಂಶಗಳನ್ನು ನೀಡಿವೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಪ್ರತಿ ಸಂಸ್ಥೆ ಮತ್ತು ವ್ಯಕ್ತಿಗಳಿಗೆ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಅವರ ಕ್ಷಿಪ್ರ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಗಾಗಿ ಅಂತರಾಷ್ಟ್ರೀಯ ರಕ್ಷಣಾ ತಜ್ಞರು, ಆಡಳಿತ ಅಧಿಕಾರಿಗಳು ಮತ್ತು ಉತ್ತರಾಖಂಡ ಸರ್ಕಾರವನ್ನು ಶ್ಲಾಘಿಸುತ್ತೇನೆ. ಸಂಪೂರ್ಣ ಕಾರ್ಯಾಚರಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿರುವ ಮತ್ತು ಮಾರ್ಗದರ್ಶನ ನೀಡಿದ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಮತ್ತು ಸಹೋದ್ಯೋಗಿ ಜನರಲ್ ವಿಕೆ ಸಿಂಗ್ ಅವರು ಕಾರ್ಯಾಚರಣೆಯ ಸಮಯದಲ್ಲಿ ಬಹುತೇಕ ಅಲ್ಲಿಯೇ ಬಿಡಾರ ಹೂಡಿದ್ದರು. ಪ್ರಾಮಾಣಿಕ ಪ್ರಯತ್ನಗಳಿಗಾಗಿ ನಾನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಕಾರಿಗಳು, ಎಂಜಿನಿಯರ್‌ಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಸಚಿವ ನಿತಿನ್ ಗಡ್ಕರಿ ಎಕ್ಸ್​ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ