ದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಹೌರಹ್ನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಲಿದ್ದಾರೆ. ವಾಸ್ತವವಾಗಿ ಇಲ್ಲಿ ಇಂದು ಗೃಹ ಸಚಿವ ಅಮಿತ್ ಶಾ ಪ್ರಚಾರ ಸಭೆ ನಡೆಸಬೇಕಿತ್ತು. ಆದರೆ ಜ.29ರಂದು ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಫೋಟ ಉಂಟಾದ ಬೆನ್ನಲ್ಲೇ ಅವರು ತಮ್ಮ ಎರಡು ದಿನಗಳ(ಜ.30 ಮತ್ತು ಜ.31) ಪಶ್ಚಿಮ ಬಂಗಾಳ ಭೇಟಿಯನ್ನು ರದ್ದುಮಾಡಿದ್ದರು.
ಇಂದು ಹೌರಹ್ನ ಡುಮುರ್ಜಾಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಚಾರ ಸಭೆಯಲ್ಲಿ ಸ್ಮೃತಿ ಇರಾನಿ ಭಾಗವಹಿಸಿ, ಮಾತನಾಡಲಿದ್ದಾರೆ. ಹಾಗೇ ಅಮಿತ್ ಶಾ ವರ್ಚ್ಯುವಲ್ ಆಗಿ ಪಾಲ್ಗೊಳ್ಳಲಿದ್ದಾರೆ.
294 ವಿಧಾನಸಭಾ ಕ್ಷೇತ್ರಗಳುಳ್ಳ ಪಶ್ಚಿಮ ಬಂಗಾಳದಲ್ಲಿ ಎಪ್ರಿಲ್-ಮೇನಲ್ಲಿ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ರಾಜಕೀಯ ಪಕ್ಷಗಳ ಸಿದ್ಧತೆ ಶುರುವಾಗಿದೆ. ಅದರಲ್ಲೂ ಟಿಎಂಸಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ದೀದಿ ಹಿಡಿತದಲ್ಲಿರುವ ಪಶ್ಚಿಮ ಬಂಗಾಳವನ್ನು ಹೇಗಾದರೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ.
ಟಿಎಂಸಿಯಿಂದ ವಲಸೆ
ಈ ಮಧ್ಯೆ ಟಿಎಂಸಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡ ನಾಯಕರು ಬಿಜೆಪಿಗೆ ಹೋಗುತ್ತಿದ್ದಾರೆ. ಟಿಎಂಸಿ ನಾಯಕರಾದ ರಜೀಬ್ ಬ್ಯಾನರ್ಜಿ, ವೈಶಾಲಿ ದಾಲ್ಮಿಯಾ, ಪ್ರಭೀರ್ ಘೋಸಾಲ್, ರತಿನ್ ಚಕ್ರವರ್ತಿ, ಪಾರ್ಥಸಾರಥಿ ಚಟರ್ಜಿ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಳೆದ ತಿಂಗಳು ಟಿಎಂಸಿಯ ಪ್ರಮುಖರಲ್ಲಿ ಒಬ್ಬರಾಗಿದ್ದ ಸುವೇಂದು ಅಧಿಕಾರಿ ಬಿಜೆಪಿಗೆ ಸೇರಿದ್ದರು, ಅವರೊಂದಿಗೆ 35 ಮಂದಿ ಟಿಎಂಸಿ ನಾಯಕರೂ ಹೋಗಿದ್ದರು. ಅಲ್ಲಿಂದಲೂ ಈ ವಲಸೆ ಪರ್ವ ಶುರುವಾಗಿದೆ.
ಹೊಟ್ಟೆನೋವೆಂದು ಹೋದ ಮಹಿಳೆಗೆ 6 ಕೋಟಿ ರೂ. ಬಿಲ್.. ಮಣಿಪಾಲ್ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ..!
Published On - 11:46 am, Sun, 31 January 21